ಈ ವರ್ಷ 7 ಲಕ್ಷಕುಟುಂಬಕ್ಕೆ “ವಸತಿ ಭಾಗ್ಯ’ ನೀಡುವ ಗುರಿ
Team Udayavani, May 21, 2017, 12:21 PM IST
ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾದ ವಿಜಯನಗರ ಪ್ರತಿನಿಧಿಸುವ ಎಂ.ಕೃಷ್ಣಪ್ಪ ಅವರು ಸಂಪುಟ ಪುನಾರಚನೆ ಸಂದರ್ಭದಲ್ಲಿ ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿ ಅವಕಾಶ ಪಡೆದು ಮಹತ್ವದ ವಸತಿ ಖಾತೆ ನಿಭಾಯಿಸುತ್ತಿದ್ದಾರೆ.
ವಸತಿ ಇಲಾಖೆಯಲ್ಲಿ ಆಗಿರುವ ಸಾಧನೆಗಳೇನು ?
ಐದು ವರ್ಷದಲ್ಲಿ 15 ಲಕ್ಷ ಮನೆ ನೀಡುವ ಗುರಿ ಹೊಂದಿದ್ದೇವೆ. ಈವರೆಗೆ ನಾಲ್ಕು ವರ್ಷದಲ್ಲಿ 11 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. 45,457 ನಿವೇಶನಗಳನ್ನು ಹಂಚಿಕೆ ಮಾಡಿದ್ದೇವೆ. ಕಳೆದ ವರ್ಷದ ಗುರಿ ತಲುಪುವಲ್ಲಿ ಸ್ವಲ್ಪ ವಿಳಂಬವಾಗಿದೆ. ಈ ವರ್ಷ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ 7 ಲಕ್ಷ ಮನೆ ನಿರ್ಮಾಣದ ಗುರಿ ಇಟ್ಟುಕೊಂಡಿದ್ದೇವೆ. ಅದಕ್ಕಾಗಿ ಬಜೆಟ್‌ನಲ್ಲಿ 4233 ಕೋಟಿ ರೂ. ಮೀಸಲಿಡಲಾಗಿದೆ.
ರಾಜ್ಯದಲ್ಲಿ ಎಷ್ಟು ಕುಟುಂಬಗಳಿಗೆ ಇನ್ನೂ ನೆತ್ತಿ ಮೇಲೊಂದು ಸೂರಿಲ್ಲ?
2011 ರ ಜನಗಣತಿ ಪ್ರಕಾರ ರಾಜ್ಯದಲ್ಲಿ 26 ಲಕ್ಷ ಕುಟುಂಬಳಿಗೆ ಸೂರಿಲ್ಲ. ಈಗಿನ ಜನ ಸಂಖ್ಯೆಗೆ 40 ಲಕ್ಷ ಕುಟುಂಬಗಳಾಗಿವೆ. ಎಲ್ಲರಿಗೂ ಮನೆ ಕೊಡಬೇಕೆಂಬುವುದು ನಮ್ಮ ಗುರಿ. ನಮ್ಮ ಸರ್ಕಾರದ ಅವಧಿಯಲ್ಲಿ ಎಲ್ಲರಿಗೂ ಒಮ್ಮೆಲೆ ಸೂರು ಕೊಡಲು ಆಗುವುದಿಲ್ಲ. ಇದು ನಿರಂತರ ಪ್ರಕ್ರಿಯೆ, ಪ್ರತಿ ವರ್ಷವೂ ಮದುವೆ ಆದವರ ಸಂಖ್ಯೆ ಸೇರುವುದರಿಂದ ಹೊಸ ಕುಟುಂಬಗಳು ಹೆಚ್ಚಾಗುತ್ತವೆ. ಎಲ್ಲರಿಗೂ ಹಂತಹಂತವಾಗಿ ಮನೆಗಳನ್ನು ನೀಡಲಾಗುತ್ತದೆ.
ಗುಡಿಸಲು ಮುಕ್ತ ಕರ್ನಾಟಕ ಮಾಡುವ ಗುರಿ ಎಲ್ಲಿಗೆ ಬಂತು ?
ಗುಡಿಸಲು ಮುಕ್ತ ಕರ್ನಾಟಕ ನಮ್ಮ ಗುರಿಯಿದೆ. ಈಗಾಗಲೇ ಆ ನಿಟ್ಟಿನಲ್ಲಿ ಸಾಗಿದ್ದೇವೆ. ಕೊಳಗೇರಿಗಳಲ್ಲೂ ಗುಣಮಟ್ಟದ ವಸತಿ ಸಂಕೀರ್ಣ ನಿರ್ಮಿಸಿಕೊಡುವ ಯೋಜನೆ ರೂಪಿಸಿದ್ದೇವೆ. ಕೊಳಚೆ ನಿರ್ಮೂಲನಾ ಮಂಡಳಿ ಜತೆಗೂಡಿ ಆ ನಿಟ್ಟಿನಲ್ಲಿ ಕಾರ್ಯಕ್ರಮ ಅನುಷ್ಟಾನಗೊಳಿಸುತ್ತಿದ್ದೇವೆ. ಕೊಳಗೇರಿ ನಿವಾಸಿಗಳ ಜೀವನ ಮಟ್ಟ ಸುಧಾರಿಸಿ, ಎಲ್ಲರ ರೀತಿ ಅವರೂ ಗುಣಮಟ್ಟದ ಜೀವನ ನಡೆಸಲು ಅನುಕೂಲ ಕಲ್ಪಿಸಲು 2016 ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ನೀತಿ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ 21 ನಗರ ಪ್ರದೇಶಗಳಲ್ಲಿ ಈ ವರ್ಷ 50 ಸಾವಿರ ಮನೆ ನಿರ್ಮಾಣ ಮಾಡಲು ಗುರಿ ಹೊಂದಲಾಗಿದೆ. ಈಗಾಗಲೇ ವರ್ತೂರು, ಮೈಸೂರು, ಕಲಬುರಗಿ, ತುಮಕೂರಿನಲ್ಲಿ ಕೊಳಗೇರಿ ನಿವಾಸಿಗಳಿಗೆ 9859 ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡಲಾಗಿದೆ.
ಬಡವರಿಗೆ ಮನೆ ಕೊಡಿಸುವಲ್ಲಿ ಮಧ್ಯವರ್ತಿಗಳ ಹಾವಳಿ ಇದೆ ಎಂಬ ಆರೋಪ ಇದೆಯಲ್ಲಾ ?
ಇದುವರೆಗೂ ಆ ರೀತಿಯ ವ್ಯವಸ್ಥೆ ಜಾರಿಯಲ್ಲಿತ್ತು. ಈಗ ಸರ್ಕಾರ ಬಿಡುಗಡೆ ಮಾಡಿದ ಹಣ ಆನ್‌ಲೈನ್ ಮೂಲಕ ನೇರವಾಗಿ ಫಲಾನುಭವಿ ಖಾತೆಗೆ ಜಮೆಯಾಗುತ್ತದೆ. ಫಲಾನುಭವಿಯೇ ತನ್ನ ಮನೆ ನಿರ್ಮಾಣದ ವಿವಿಧ ಹಂತದ ಕಾಮಗಾರಿಯ ಬೆಳವಣಿಗೆಯ ಬಗ್ಗೆ ಆಪ್ ಮೂಲಕ ಅಪ್‌ಲೋಡ್ ಮಾಡಲು ‘ಇಂದಿರಾ ಮನೆ’ ಅಂತ ಹೊಸ ಆ್ಯಪ್ ಬಿಡುಗಡೆ ಮಾಡಿದ್ದೇವೆ. ಅದರ ಮೂಲಕ ಫಲಾನುಭವಿ ತನ್ನ ಮನೆಯ ಫೋಟೊ ತೆಗೆದು ನೇರವಾಗಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಿದರೆ, ಅಲ್ಲಿಂದ ಫಲಾನುಭವಿ ಖಾತೆಗೆ ಆನ್‌ಲೈನ್ ಮೂಲಕ ನೇರವಾಗಿ ಹಣ ವರ್ಗಾವಣೆಯಾಗುತ್ತದೆ. ಇದರಲ್ಲಿ ಯಾವುದೇ ಮಧ್ಯವರ್ತಿಗೆ ಅವಕಾಶ ಇಲ್ಲ. ಕೇಂದ್ರ ಸರ್ಕಾರದಿಂದ ಜಿಪಿಎಸ್ ತಂತ್ರಜ್ಞಾನದ ಅಳವಡಿಕೆ ಮತ್ತು ಫಲಾನುಭವಿಗೆ ನೇರ ಹಣ ವರ್ಗಾವಣೆಗಾಗಿ ಚಿನ್ನದ ಪ್ರಶಸ್ತಿ ಪುರಸ್ಕಾರ ದೊರೆತಿದೆ. ಹುಡ್ಕೊ ಸಂಸ್ಥೆಯಿಂದ ವಸತಿ ಯೊಜನೆಗಳ ಅನುಷ್ಠಾನಕ್ಕೆ ಉತ್ತಮ ಸಾಧನೆ ಪುರಸ್ಕಾರ ದೊರೆತಿದೆ.
ಸರ್ಕಾರದಿಂದ ನೀವು ಕೊಡುವ ಹಣ ಮನೆ ಕಟ್ಟಲಿಕ್ಕೆ ಸಾಕಾಗುತ್ತಾ ?
ನಮ್ಮ ಸರ್ಕಾರ ಬಂದ ಮೇಲೆ ಫಲಾನುಭವಿಗಳಿಗೆ ನೀಡುವ ಹಣದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 1.50 ಲಕ್ಷದಿಂದ 1.75 ಲಕ್ಷ ರೂ., ನಗರ ಪ್ರದೇಶದವರಿಗೆ 1.80 ಲಕ್ಷ ರೂ.ನಿಂದ 2 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ.ಎಲ್ಲ ಭಾಗಗಳಲ್ಲು ಸಾಮಾನ್ಯ ವರ್ಗದವರಿಗೆ 75 ಸಾವಿರದಿಂದ 1.20 ಲಕ್ಷ ರೂ. ನೀಡಲಾಗುತ್ತಿದೆ. ಈ ವರ್ಷ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮೂರು ಸಾವಿರ ಮನೆ ನಿರ್ಮಿಸಿ ಕೊಡಬೇಕೆಂಬ ಆಲೋಚನೆ ಇದೆ.
ನಿವೇಶನ ಇಲ್ಲದ ಬಡವರಿಗೆ ಮನೆ ಕಟ್ಟಿಕೊಳ್ಳಲು ಏನು ಕ್ರಮ ಕೈಗೊಂಡಿದ್ದೀರಿ ?
ನಿವೇಶನ ರಹಿತ ಬಡವರಿಗೂ ಸೂರು ಕಲ್ಪಿಸಲು ಯೋಜನೆ ರೂಪಿಸಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಎಕರೆಗೆ 9 ಲಕ್ಷ ರೂ.ಗೆ ಜಮೀನು ಖರೀದಿಸಲು ಅವಕಾಶವಿದ್ದು, ಇತರ ನಗರಗಳಲ್ಲಿ ಜಮೀನು ಖರೀದಿಗೆ 22 ಲಕ್ಷ ರೂ. ನೀಡಲಾಗುತ್ತದೆ. ಬೆಂಗಳೂರಿನಲ್ಲಿಯೂ ಜಮೀನು ಖರೀದಿ ಮಾಡಿ ಹಂಚಿಕೆ ಮಾಡಲು ಪ್ರತಿ ಎಕರೆಗೆ 75 ಲಕ್ಷ ರೂ. ವರೆಗೆ ರಾಜೀವ್ ಗಾಂಧಿ ನಿಗಮದಿಂದ ಹಣ ನೀಡಲಾಗುತ್ತದೆ. ನಿವೇಶನ ಇಲ್ಲದವರಿಗೆ ನಿವೇಶನ ನೀಡಿ ನಂತರ ಅವರಿಗೆ ಮನೆಗಳನ್ನು ವಿತರಿಸಲಾಗುವುದು. ಗ್ರಾಮೀಣ ನಿವೇಶನ ಯೋಜನೆಯನ್ನು ಮಾರ್ಪಡಿಸಿ ‘ಇಂದಿರಾ ಗ್ರಾಮೀಣ ವಸತಿ ನಿವೇಶನಗಳ ಯೋಜನೆ ಹೆಸರಿನಲ್ಲಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಈ ಯೋಜನೆಯಲ್ಲಿ ಜಮೀನಿನ ಭೂ ಮಾಲಿಕರಿಗೆ 60ಃ40 ರ ಅನುಪಾತದಲ್ಲಿ ಅಭಿವೃದ್ಧಿ ಪಡಿಸಿದ ನಿವೇಶನ ನೀಡಲು ತೀರ್ಮಾನಿಸಲಾಗಿದೆ.
ಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಇಲ್ಲದೇ ರಾಜಕೀಯ ಪ್ರಭಾವ ನಡೆಯುತ್ತದೆ ಎಂಬ ಆರೋಪವಿದೆಯಲ್ಲಾ ?
ವಸತಿ ಯೋಜನೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಲು ನಿರ್ಧಿಷ್ಠ ಮಾನದಂಡ ಇಟ್ಟುಕೊಳ್ಳಲಾಗಿದೆ. ಪಂಚಾಯತಿ ಮಟ್ಟದಲ್ಲಿ ಗ್ರಾಮ ಸಭೆಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಲ್ಲಿಂದ ಶಾಸಕರ ನೇತೃತ್ವದ ಜಾಗೃತ ಸಮಿತಿಯ ಮುಂದೆ ಕಳುಹಿಸಲಾಗುತ್ತದೆ. ನಂತರ ಅದನ್ನು ತಾಲೂಕು ಇಒ ಮೂಲಕ ನೇರವಾಗಿ ರಾಜೀವ್‌ಗಾಂಧಿ ನಿಗಮಕ್ಕೆ ಕಳುಹಿಸಿಕೊಡುತ್ತಾರೆ. ಇದರಲ್ಲಿ ಯಾವುದೇ ರಾಜಕೀಯ ಪ್ರಭಾವ ನಡೆಯುವುದಿಲ್ಲ.
ರಾಜ್ಯದಲ್ಲಿ ಮನೆ ಇಲ್ಲದವರು ಪರಿಶಿಷ್ಟ ಜಾತಿ ಮತ್ತು ಪಂಗಡದವರೇ ಹೆಚ್ಚಿದ್ದಾರೆ.ಆ ಸಮುದಾಯಕ್ಕಾಗಿ ವಿಶೇಷ ಯೋಜನೆ ಇದೆಯಾ ?
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಎಲ್ಲ ವಸತಿ ಯೋಜನೆಗಳಲ್ಲಿಯೂ ಮೀಸಲಾತಿ ಆಧಾರದಲ್ಲಿ ಮನೆಗಳನ್ನು ನೀಡುತ್ತಿದ್ದೇವೆ. ಈ ವರ್ಷ ಅಂಬೇಡ್ಕರ್ ಯೋಜನೆ ಅಡಿ 1.5 ಲಕ್ಷ ಮನೆ ನೀಡಲು ತೀರ್ಮಾನಿಸಿದ್ದೇವೆ. ಎಸ್‌ಸಿ-ಎಸ್‌ಟಿ ಸಮುದಾಯದಿಂದ ಮನೆಗಾಗಿ ಎಷ್ಟೇ ಬೇಡಿಕೆ ಬಂದರೂ ಕೊಡಲಾಗುವುದು.
ಬೆಂಗಳೂರಿನಲ್ಲಿ ಬಡವರಿಗೆ ಮನೆ ಕೊಡಲಿಕ್ಕೆ ಜಮೀನು ಇದೆಯಾ?
ಬೆಂಗಳೂರಿನಲ್ಲಿಯೂ ಸಾಕಷ್ಟು ಜನ ಬಡವರು ಸೂರಿಲ್ಲದೇ ಇದ್ದಾರೆ. ಈ ವರ್ಷ ಒಂದು ಲಕ್ಷ ಬಡವರಿಗೆ ಸರ್ಕಾರವೇ ಮನೆ ಕಟ್ಟಿಸಿ ಕೊಡುವ ಯೋಜನೆ ಹಾಕಿಕೊಂಡಿದೆ. ಮುಖ್ಯಮಂತ್ರಿ ಬೆಂಗಳೂರು ವಸತಿ ಯೋಜನೆ ಅಡಿಯಲ್ಲಿ 1 ಲಕ್ಷ ಮನೆ ನಿರ್ಮಾಣ ಮಾಡಲಾಗುವುದು. ಈಗಾಗಲೇ ಒತ್ತುವರಿಯಿಂದ ತೆರವುಗೊಳಿಸಿರುವ ಸುಮಾರು ಒಂದು ಸಾವಿರ ಎಕರೆ ಜಮೀನನ್ನು ವಸತಿ ಇಲಾಖೆಗೆ ನೀಡುವಂತೆ ಮನವಿ ಮಾಡಿಕೊಂಡಿದ್ದೇವೆ. ಖಾಸಗಿಯವರ ಸಹಭಾಗಿತ್ವದಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ, 20 ವರ್ಷಗಳ ಕಾಲ ನಿರ್ವಹಣೆಯ ಜವಾಬ್ದಾರಿಯನ್ನೂ ಅವರಿಗೆ ನೀಡುವುದು. ಆ ಪ್ರದೇಶದಲ್ಲಿ ನಗರ ಬಿಪಿಎಲ್ ಕುಟುಂಬದವರಿಗೆ ಮನೆಗಳನ್ನು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿ ಕೈಗೆಟಕುವ ದರದಲ್ಲಿ ಹಂಚಿಕೆ ಮಾಡಲಾಗುವುದು. ಫಲಾನುಭವಿಗಳಿಗೆ 20 ವರ್ಷಗಳವರೆಗೂ ಕಂತುಗಳಲ್ಲಿ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗುವುದು.
ಗೃಹ ಮಂಡಳಿಯಿಂದ ನಿರ್ಮಿಸಿರುವ ವಸತಿ ಸಮುತ್ಛಯದ ಫ್ಲ್ಯಾಟ್‌ಗಳು ಖರೀದಿಯಾಗಿಲ್ಲ ಎಂಬ ಮಾತಿದೆಯಲ್ಲಾ ?
ಕೇಂದ್ರ ಸರ್ಕಾರ 1 ಸಾವಿರ ಮತ್ತು ಐನೂರರ ನೋಟು ನಿಷೇಧ ಮಾಡಿದ್ದರಿಂದ ಫ್ಲ್ಯಾಟ್‌ಗಳನ್ನು ಖರೀದಿ ಮಾಡುವವರ ಸಂಖ್ಯೆ ಕಡಿಮೆಯಾಯಿತು. ಈಗ ಶೇಕಡಾ 10 ರಿಯಾಯ್ತಿ ನೀಡಲಾಗಿದೆ. ಅಲ್ಲದೇ ನಾಲ್ಕು ಕಂತುಗಳಲ್ಲಿ ಹಣ ನೀಡಲು ನಿಯಮಗಳನ್ನು ಸಡಿಲಗೊಳಿಸಲಾಗಿದೆ. ನಮ್ಮದು ಲಾಭ ನಷ್ಟ ಇಲ್ಲದೆ ನಡೆಯುವ ಸಂಸ್ಥೆ. ಜಮೀನಿನ ದರ ಮತ್ತು ನಿರ್ಮಾಣದ ವೆಚ್ಚವನ್ನಷ್ಟೆ ಪಡೆಯುತ್ತೇವೆ. ಹೆಚ್ಚಿನ ಲಾಭಕ್ಕಾಗಿ ಮನೆಗಳನ್ನು ಮಾರಾಟ ಮಾಡುವುದಿಲ್ಲ.
ನಿಮ್ಮ ಮೇಲೆ ಖಾಸಗಿ ಬಡಾವಣೆ ನಿರ್ಮಾಣ ಮಾಡುವ ಯೋಜನೆಯಲ್ಲಿ ಅಕ್ರಮ ಮಾಡಿರುವ ಆರೋಪ ಬಂದಿದೆಯಲ್ಲಾ ?
ನಾನು ಯಾವುದೇ ಖಾಸಗಿ ಬಡಾವಣೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಅಕ್ರಮ ಮಾಡಿಲ್ಲ. ಯಾವುದೇ ಪ್ರಕರಣದಲ್ಲಿ ಭಾಗಿಯಾಗದಿದ್ದರೂ ನ್ಯಾಯಾಲಯ ವ್ಯತಿರಿಕ್ತ ತೀರ್ಪು ನೀಡಿದೆ. ಆದರೆ, ಆ ಪ್ರಕರಣದಲ್ಲಿ ನನ್ನದು ಯಾವುದೇ ಪಾತ್ರ ಇಲ್ಲ. ನ್ಯಾಯಾಲಯ ತೀರ್ಪಿನ ಬಗ್ಗೆ ವಕೀಲರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.
ರಾಜಕೀಯದ ಹೊರತಾಗಿ ಬೇರೆ ಹವ್ಯಾಸ ಏನಿದೆ ನಿಮಗೆ ?
ರಾಜಕೀಯ ಬಿಟ್ಟು ಬೇರೇನು ಮಾಡಲಿ, ಕಥೆ ಕಾದಂಬರಿಗಳನ್ನು ಓದುವ ಹವ್ಯಾಸ ಇದೆ. ಅಪರೂಪಕ್ಕೊಮ್ಮೆ ಸಿನೆಮಾ ನೋಡುತ್ತೇನೆ. ಇತ್ತೀಚೆಗೆ ರಾಜಕುಮಾರ ಸಿನೆಮಾ ನೋಡಿದೆ. ನಾಲ್ಕು ವರ್ಷದ ಹಿಂದೆ ಒಂದು ಸಿನೆಮಾ ನೋಡಿದ್ದೆ.
ರಾಜಕೀಯದಲ್ಲಿ ನಾವಿಬ್ಬರೇ ನಾನು ನನ್ನ ಹಿರಿ ಮಗ ಪ್ರಿಯಾ ಕೃಷ್ಣ ಈಗಾಗಲೇ ರಾಜಕೀಯದಲ್ಲಿದ್ದೇವೆ. ಇನ್ನೊಬ್ಬ ಮಗ ರಾಜಕೀಯಕ್ಕೆ ಬರೋದು ಬೇಡಾ ಅಂತ. ಅವನೂ ರಾಜಕೀಯಕ್ಕೆ ಬಂದರೆ ಜೀವನಕ್ಕೆ ಸಂಪಾದನೆ ಮಾಡುವವರು ಬೇಕಲ್ಲಾ. ರಾಜಕೀಯದಲ್ಲಿ ನಾವಿಬ್ಬರೂ ಖರ್ಚು ಮಾಡುವುದಾಗಿದೆ. ಪತ್ನಿ ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಾರೆ.
– ಎಂ.ಕೃಷ್ಣಪ್ಪ. ವಸತಿ ಸಚಿವರು
-ಸಂದರ್ಶನ: ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.