ಅಮಿತ್ ಶಾ ರದ್ದುಪಡಿಸಿದ್ದ ಬಿಜೆಪಿ ಸಭೆಗಳು ಇಂದು
Team Udayavani, Oct 13, 2017, 6:40 AM IST
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಬಗೆಹರಿಯದ ಕಾರಣ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರದ್ದುಪಡಿಸಿದ್ದ ಅ. 4ರ ಕೋರ್ ಕಮಿಟಿ ಸಭೆ, ಬೂತ್ ಸಮಿತಿ ಸಭೆ, ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಪ್ರಚಾರ ಸಮಿತಿ ಸಭೆಗಳು ಬೆಂಗಳೂರಿನಲ್ಲಿ ಶುಕ್ರವಾರ ನಡೆಯಲಿವೆ.
ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ನೇತೃತ್ವದಲ್ಲಿ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ದಿನವಿಡೀ ನಡೆಯಲಿದ್ದು, ನ. 2ರಿಂದ ನಡೆಯಲಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ರಥಯಾತ್ರೆ ಕುರಿತಂತೆ ಪ್ರಮುಖವಾಗಿ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್ ಅವರೂ ಪಾಲ್ಗೊಳ್ಳಲಿದ್ದಾರೆ.
ಅಕ್ಟೋಬರ್ ಆರಂಭದಲ್ಲಿ ಕೇರಳ ಪ್ರವಾಸ ಕೈಗೊಂಡಿದ್ದ ಅಮಿತ್ ಶಾ ಅವರು ದೆಹಲಿಗೆ ಹಿಂತಿರುಗುವ ಮುನ್ನ ಅ. 4ರಂದು ಮಂಗಳೂರಿನಲ್ಲಿ ಬೂತ್ ಸಮಿತಿ ಹಾಗೂ ಎರಡು ಪ್ರಚಾರ ಸಮಿತಿಗಳ ಸಭೆ ಕರೆದಿದ್ದರು. ಆದರೆ, ಮೂರೂ ಸಮಿತಿಗಳ ಸದಸ್ಯರ ಆಯ್ಕೆ ವಿಚಾರ ಮತ್ತು ಯಡಿಯೂರಪ್ಪ ಅವರ ಗಮನಕ್ಕೆ ತಾರದೆ ಸಮಿತಿ ಅಂತಿಮಗೊಳಿಸಿದ ಬಗ್ಗೆ ಪಕ್ಷದಲ್ಲಿ ಅಸಮಾಧಾನ ಉಂಟಾಗಿ ಅದು ಅಮಿತ್ ಶಾ ಅವರ ಗಮನಕ್ಕೂ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನ ಸಭೆ ರದ್ದುಗೊಳಿಸಿದ್ದ ಅವರು ಮೊದಲು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ತಾಕೀತು ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಅಸಮಾಧಾನ ಹೋಗಲಾಡಿಸುವ ನಿಟ್ಟಿನಲ್ಲಿ ಮೂರೂ ಸಮಿತಿಗಳನ್ನು ಪುನಾರಚಿಸಿದ್ದ ಯಡಿಯೂರಪ್ಪ ಅವರು ಅವುಗಳಿಗೆ ತಾವೇ ಅಧ್ಯಕ್ಷರಾಗಿದ್ದರು. ಬೂತ್ ಸಮಿತಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಜಂಟಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಬೆಂಬಲಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆ ಸಮಿತಿಯಲ್ಲಿದ್ದ ಕೆಲವರನ್ನು ಇತರೆ ಸಮಿತಿಗಳಿಗೆ ವರ್ಗಾವಣೆ ಮಾಡಿದ್ದರು. ಇದೀಗ ಸಮಿತಿಗಳ ಕುರಿತಂತೆ ಇದ್ದ ಅಸಮಾಧಾನ ಬಗೆಹರಿದಿದ್ದು, ಎಲ್ಲರೂ ಒಗ್ಗಟ್ಟಾಗಿ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಾತ್ರೆ ಯಶಸ್ಸು ಕುರಿತು ಹೆಚ್ಚಿನ ಚರ್ಚೆ ಸಾಧ್ಯತೆ:
ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ನ. 2ರಿಂದ ನಡೆಯಲಿರುವ ಬಿಜೆಪಿ ನವನಿರ್ಮಾಣ ಪರಿವರ್ತನಾ ರಥಯಾತ್ರೆ ಕುರಿತಂತೆ ಸಭೆಯಲ್ಲಿ ಹೆಚ್ಚಿನ ಚರ್ಚೆ ನಡೆಯುವ ಸಾಧ್ಯತೆ ಇದೆ. ಯಾತ್ರೆ ಯಶಸ್ವಿಯಾಗಬೇಕಾದರೆ ಬೂತ್ ಮಟ್ಟದಿಂದ ಹೆಚ್ಚಿನ ಕಾರ್ಯಕರ್ತರನ್ನು ಕರೆತರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬೂತ್ ಸಮಿತಿ ಸದಸ್ಯರಿಗೆ ಜಾವಡೇಕರ್ ಅವರು ಜವಾಬ್ದಾರಿ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಅದೇ ರೀತಿ ಯಾತ್ರೆಯ ಸಂಘಟನೆ ಸಾಂಪ್ರದಾಯಿಕ ಪ್ರಚಾರ ಸಮಿತಿಯ ಪ್ರಮುಖ ಕಾರ್ಯವಾಗಿದ್ದರೆ, ಅದರ ಕುರಿತಾಗಿ ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರಚಾರ ಮಾಡಿ ಜನರಿಗೆ ತಲುಪಿಸುವ ಜವಾಬ್ದಾರಿ ಅಸಾಂಪ್ರದಾಯಿಕ ಪ್ರಚಾರ ಸಮಿತಿ ಮೇಲಿದೆ. ಯಾತ್ರೆ ಯಶಸ್ವಿಯಾಗಬೇಕಾದರೆ ಈ ಎರಡೂ ಸಮಿತಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕಿದ್ದು, ಆ ಕುರಿತಂತೆಯೂ ಜಾವಡೇಕರ್ ಅವರು ಸಲಹೆಗಳನ್ನು ನೀಡಲಿದ್ದಾರೆ ಎನ್ನಲಾಗಿದೆ.
ರಥಯಾತ್ರೆಯ ಮಾರ್ಗ ಮತ್ತು ವೇಳಾಪಟ್ಟಿ ಅಂತಿಮಗೊಂಡಿದ್ದು, ನ. 2ರಂದು ಬೆಂಗಳೂರಿನಲ್ಲಿ ಆರಂಭವಾಗುವ ಈ ಯಾತ್ರೆ 2018ರ ಜ. 25ರಂದು ಮೈಸೂರಿನಲ್ಲಿ ಅಂತಿಮಗೊಳ್ಳಲಿದೆ. ಜತೆಗೆ ಸಮಾವೇಶದ ಮೂಲಕ ಬೆಂಗಳೂರಿನಲ್ಲಿಯೇ ಜ. 28ರಂದು ಅಧಿಕೃತ ತೆರೆ ಬೀಳಲಿದೆ. ಈ ವೇಳಾಪಟ್ಟಿಯ ಕುರಿತು ಸಭೆಗಳಲ್ಲಿ ಚರ್ಚೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ
Bellary; ಲೂಟಿ ಮಾಡಿದ ರೆಡ್ಡಿಯನ್ನು ಯಾಕೆ ಪಕ್ಷಕ್ಕೆ ಸೇರಿಸಿದಿರಿ: ಮೋದಿಗೆ ಸಿಎಂ ಪ್ರಶ್ನೆ
Renukaswamy Case: ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Waqf Land Issue: ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ಡಿಕೆ ಶಿವಕುಮಾರ್
Sugarcane: ನ.8ರಿಂದ ಕಬ್ಬು ಕಟಾವು ಆರಂಭಿಸಿ: ರೈತರಿಗೆ ಸಚಿವ ಶಿವಾನಂದ ಪಾಟೀಲ ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.