ಪರ ರಾಜ್ಯಗಳಿಂದ ಟೊಮೆಟೋ ಪೂರೈಕೆ
Team Udayavani, Jan 12, 2019, 7:09 AM IST
ಬೆಂಗಳೂರು: ಕಳೆದ ಒಂದು ವಾರದಿಂದ ಧಿಡೀರ್ ಏರಿಕೆ ಕಂಡಿದ್ದ ಟೊಮೆಟೋ ದರ ಇನ್ನೆರಡು ದಿನಗಳಲ್ಲಿ ಸಹಜ ಸ್ಥಿತಿಗೆ ಬರುವ ಲಕ್ಷಣಗಳು ಕಂಡುಬರುತ್ತಿವೆ.
ರಾಜ್ಯದಲ್ಲಿ ಟೊಮೆಟೋ ಇಳುವರಿ ಕಡಿಮೆಯಾಗಿದ್ದು ಬೆಂಗಳೂರಿನ ಸುತ್ತಮುತ್ತ ಭಾಗಗಳಿಂದಲೂ ನಗರಕ್ಕೆ ಟೊಮೆಟೋ ಹೆಚ್ಚಿನ ಪ್ರಮಾಣ ಬರುತ್ತಿಲ್ಲ. ಹೀಗಾಗಿ ಬೇಡಿಕೆ ಹೆಚ್ಚಾಗಿ ದರ ಹೆಚ್ಚಳವಾಗಿತ್ತು. ಆದರೆ, ಎರಡು ದಿನಗಳಿಂದ ಮಹಾರಾಷ್ಟ್ರದ ನಾಸಿಕ್ ಹಾಗೂ ಆಂಧ್ರಪ್ರದೇಶದ ಮದನಪಲ್ಲಿಯಿಂದ ಟೊಮೆಟೋ ಪೂರೈಕೆಯಾಗುತ್ತಿರುವುದರಿಂದ ದರ ಇಳಿಯುವ ಸಾಧ್ಯತೆಯಿದೆ.
ದರ ಇಳಿಮುಖ: ನಾಸಿಕ್ ಹಾಗೂ ಮದನಪಲ್ಲಿಯಿಂದ ಟೊಮೆಟೋ ಬರುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರದಿಂದಲೇ ಕೊಂಚ ಮಟ್ಟಿಗೆ ಬೆಲೆ ಇಳಿಕೆಯಾಗಿದ್ದು, ಪ್ರತಿ ಕೆಜಿಗೆ 30 ರಿಂದ 40 ರೂ. ತಲುಪಿದೆ. ಕೆ.ಆರ್.ಮಾರುಕಟ್ಟೆ ಹಾಗೂ ಯಶವಂತಪುರ ಮಾರುಕಟ್ಟೆಗಳಲ್ಲಿ ಶುಕ್ರವಾರ ನಾಟಿ ಟೊಮೆಟೋ 30 ರೂ.ಗಳಿಗೆ ಫಾರಂ ಟೊಮೆಟೋ 40-45 ರೂ.ಗಳಿಗೆ ಮಾರಾಟ ಮಾಡಲಾಗುತ್ತಿತ್ತು.
15 ಕೆ.ಜಿ.ಯ ಒಂದು ಬಾಕ್ಸ್ ಟೊಮೆಟೋ 300 ರಿಂದ 400 ರೂ.ಗಳಿಗೆ ದೊರೆಯುತ್ತಿದೆ. ಎರಡು ದಿನಗಳ ಹಿಂದೆ ಒಂದು ಬಾಕ್ಸ್ ಟೊಮೆಟೋ ಬೆಲೆ 500 -600 ರೂ.ಗಳಾಗಿತ್ತು. ಒಂದು ವಾರದಿಂದ ಏರಿಕೆಯಾಗಿದ್ದ ದರ ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಬಹುದು ಎಂದು ಕಲಾಸಿಪಾಳ್ಯ ಸಗಟು ತರಕಾರಿ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಆರ್.ಮಂಜುನಾಥ್ ತಿಳಿಸಿದ್ದಾರೆ.
ಕೃತಕ ಬೆಲೆ ಸೃಷ್ಟಿ: ಹಿಂದಿನ ವಾರದಲ್ಲಿ ಟೊಮೆಟೋಗೆ ಹೆಚ್ಚು ಬೇಡಿಕೆ ಇದ್ದ ಕಾರಣ ಅದನ್ನೇ ನೆಪವಾಗಿಟ್ಟುಕೊಂಡ ಮಧ್ಯವರ್ತಿಗಳು ಕೃತಕ ಬೇಡಿಕೆ ಸೃಷ್ಟಿಸಿ ಟೊಮೆಟೋ ದರ ಹೆಚ್ಚಿಸಿದ್ದಾರೆ. ಹೀಗಾಗಿ 15 ದಿನಗಳ ಹಿಂದೆ ಟೊಮೆಟೋ ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ 50 ರೂ. ತಲುಪಿತ್ತು. ಆನಂತರ 70 ರೂ.ತಲುಪಿತ್ತು ಎಂದು ಹೇಳಲಾಗಿದೆ.
ಗಾಂಧಿ ಬಜಾರ್, ಬಸವನಗುಡಿ, ಎನ್.ಆರ್.ಕಾಲೋನಿ, ಚಾಮರಾಜಪೇಟೆ, ಕತ್ರಿಗುಪ್ಪೆ ಸೇರಿದಂತೆ ನಗರದ ಕೆಲವು ಭಾಗಗಳಲ್ಲಿ ಶುಕ್ರವಾರ ಬೆಳಗ್ಗೆ ತಳ್ಳುವ ಗಾಡಿಗಳಲ್ಲಿ ಟೊಮೆಟೋ ಬೆಲೆ 50-40 ರೂ.ಗಳಿಗೆ ಇಳಿದಿತ್ತು. ರಾಜಾಜಿನಗರ, ಮಲ್ಲೇಶ್ವರ, ಜಯನಗರ ಸೇರಿದಂತೆ ವಿವಿಧೆಡೆ 70 ರೂ.ಗಳಿಗೆ ಮಾರಾಟ ಮಾಡಲಾಗುತ್ತಿತ್ತು.
ಹಾಪ್‌ಕಾಮ್ಸ್ ದರ: ಹಾಪ್‌ಕಾಮ್ಸ್‌ನಲ್ಲಿ ಸೋಮವಾರದಿಂದ ಟೊಮೊಟೋ ಬೆಲೆ ಏರಿಕೆ ಮಾಡಿದ್ದು, ಮಂಗಳವಾರ ಒಂದು ಕೆ.ಜಿ.ಗೆ 60 ರೂ.ಗಳಿಗೆ ಮಾರಾಟ ಮಾಡಲಾಗಿತ್ತು. ನಂತರ ಶುಕ್ರವಾರ ಒಂದು ಕೆ.ಜಿ.ಗೆ 50 ರೂ.ಗಳಿಗೆ ಮಾರಾಟ ಮಾಡಲಾಗಿದೆ. ಶನಿವಾರ 45 ರೂ.ಗೆ ಇಳಿಯಾಗುವ ಸಾಧ್ಯತೆ ಇದೆ. ಪ್ರತಿದಿನ ಹಾಪ್‌ಕಾಮ್ಸ್‌ನಲ್ಲಿ ಐದಾರು ಟನ್‌ಗಳಷ್ಟು ಟೊಮೆಟೋ ಬೇಡಿಕೆ ಇರಲಿದೆ ಎಂದು ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ಪ್ರಸಾದ್ ತಿಳಿಸಿದ್ದಾರೆ.
ಮಾರುಕಟ್ಟೆಗೆ ಟೊಮೆಟೋ: ಕರ್ನಾಟಕದಲ್ಲಿ ಮೈಸೂರು, ತುಮಕೂರು, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬಳ್ಳಾರಿಯಲ್ಲಿ ಹೆಚ್ಚು ಟೊಮೆಟೋ ಬೆಳೆಯಲಾಗುತ್ತದೆ. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ಭಾಗದಿಂದ ಬೆಂಗಳೂರಿಗೆ ಟೊಮೆಟೋ ಪೂರೈಕೆಯಾಗುತ್ತದೆ. ಚಳಿಗಾಲದಲ್ಲಿ ಟೊಮೆಟೋ ಹೂ ಬಿಟ್ಟು, ಹಣ್ಣಾಗಲು ಬಹಳ ಸಮಯ ಹಿಡಿಯುತ್ತದೆ.
ಅಲ್ಲದೆ ಈ ಬಾರಿ ಕೊಂಚ ಚಳಿ ಹೆಚ್ಚಿರುವ ಕಾರಣ ಫಸಲು ಬರುವುದು ನಿಧಾನವಾಗಲಿದೆ. ಸಂಕ್ರಾಂತಿ ಕಳೆದ ನಂತರ ರಾಜ್ಯದಲ್ಲಿ ಟೊಮೆಟೋ ಇಳುವರಿ ಉತ್ತಮವಾಗಿರಲಿದ್ದು, ನಂತರ ದಿನಗಳಲ್ಲಿ ಮಾರುಕಟ್ಟೆಗೆ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಟೊಮೆಟೋ ಪೂರೈಕೆಯಾಗಲಿದೆ ಹಾಗೂ ದರ ಕಡಿಮೆಯಾಗಲಿದೆ.
ಚೈನಿಸ್ ಟೊಮೆಟೋ: ಚೈನಿಸ್ ಟೊಮೆಟೋ ಎಂದರೆ ಚೀನಾದಿಂದ ಆಮದು ಮಾಡಿಕೊಳ್ಳುವುದಲ್ಲ. ಇಲ್ಲೇ ಬೆಳೆಯುವುದು. ಫಾರಂ ಮತ್ತು ನಾಟಿ ಟೊಮೆಟೋ ಗಿಡಗಳ ಮಧ್ಯೆ ಚೈನಿಸ್ ಟೊಮೆಟೋ ಗಿಡಗಳನ್ನು ರೈತರು ಬೆಳೆಸಲಿದ್ದು ಇದರ ಬೆಲೆ ಕಡಿಮೆ ಇರಲಿದೆ. ಗಾಢ ಕೇಸರಿ ಬಣ್ಣದ ಈ ಟೊಮೆಟೋ ರುಚಿ ಸಪ್ಪೆಯಾಗಿರಲಿದೆ. 12 ಕೆ.ಜಿ.ಯ ಒಂದು ಟ್ರೇ ಚೈನಿಸ್ ಟೊಮೆಟೋ 100 ರೂ.ಗಳಿಗೆ ದೊರೆಯುತ್ತಿದೆ. ಟೊಮೆಟೋ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಹೋಟೆಲ್‌ಗಳು ಈ ಟೊಮೆಟೋ ಖರೀದಿಸುತ್ತಿವೆ.
ನಾಟಿ ಟೊಮೆಟೋ ಹುಳಿ ಮತ್ತು ಬೀಜ ಹೆಚ್ಚು ಹಾಗೂ ಇದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಹೆಚ್ಚಿನ ಮಂದಿ ಅಡುಗೆಗೆ ಬಳಸುವುದಿಲ್ಲ. ಹೀಗಾಗಿ ಇದರ ಬೆಲೆ ಏರಿಕೆಯಾಗುವುದಿಲ್ಲ. ಫಾರಂ ಟೊಮೆಟೋ ಹೆಚ್ಚು ದಿನ ಹಾಳಾಗುವುದಿಲ್ಲ. ಅಲ್ಲದೆ ಹುಳಿ ಮತ್ತು ಬೀಜ ಕಡಿಮೆ ಇರುವುದರಿಂದ ಬಹುತೇಕ ಮಂದಿ ಕೊಳ್ಳುತ್ತಾರೆ ಹೀಗಾಗಿ ಬೆಲೆ ಏರಿದೆ.
-ಕೃಷ್ಣಕುಮಾರಿ, ಕೆ.ಆರ್.ಮಾರುಕಟ್ಟೆ ತರಕಾರಿ ವ್ಯಾಪಾರಿ
* ಶೃತಿ ಮಲೆನಾಡತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Railway; 2 ವರ್ಷದಲ್ಲಿ 50 ಅಮೃತ್ ಭಾರತ ರೈಲು ಉತ್ಪಾದನೆ: ಅಶ್ವಿನಿ ವೈಷ್ಣವ್
Fraud Case: ವೈದ್ಯಕೀಯ ಸೀಟ್ ಕೊಡಿಸುವುದಾಗಿ ನಂಬಿಸಿ ವಂಚನೆ
Cardiac arrest: ಗುಜರಾತ್ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿನಿ ಸಾ*ವು
Chhattisgarh: ನಕ್ಸಲರು ಇಟ್ಟಿದ್ದ ಐಇಡಿ ಸ್ಫೋ*ಟ, ವ್ಯಕ್ತಿ ಸಾ*ವು
Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.