ಟೂರಿಸಂ ಅಭಿವೃದ್ಧಿಗೊಂಡರೆ ಬಡತನ ನಿರ್ಮೂಲನೆ
Team Udayavani, Jan 9, 2017, 11:58 AM IST
ಬೆಂಗಳೂರು: ದೇಶದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿ ಅಭಿವೃದ್ಧಿ ಪಡಿಸಿದ್ದೇ ಆದರೆ ಬಡತನ ನಿರ್ಮೂಲನೆ ಆಗಲಿದೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಡಾ.ಮಹೇಶ್ ಶರ್ಮಾ ತಿಳಿಸಿದರು.
ಪ್ರವಾಸಿ ಭಾರತೀಯ ದಿವಸ ಸಮಾವೇಶ ಅಂಗವಾಗಿ ನಡೆದ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತದಲ್ಲಿ ಹಲವಾರು ರಾಜ್ಯಗಳು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿವೆ. ಪ್ರವಾಸೋದ್ಯಮದಿಂದಲೇ ಅವು ಪ್ರಸಿದ್ಧಿ ಪಡೆದಿವೆ. ಆದರೆ, ಕೆಲ ರಾಜ್ಯಗಳಲ್ಲಿ ಪ್ರವಾಸೋದ್ಯಮ ತಾಣಗಳು ಬೆಳಕಿಗೆ ಬಂದಿಲ್ಲ ಎಂದು ತಿಳಿಸಿದರು.
ಬುದ್ಧ ಸರ್ಕಿಟ್: ಭಾರತದ ಈಶಾನ್ಯ ರಾಜ್ಯ ಮತ್ತು ದಕ್ಷಿಣ ಏಷ್ಯಾ ದೇಶಗಳಲ್ಲಿ ಬೌದ್ಧ ಧರ್ಮಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಶಾನ್ಯ ರಾಜ್ಯ ಮತ್ತು ದಕ್ಷಿಣ ಏಷ್ಯಾದ ಮ್ಯಾನ್ಮಾರ್, ಥೈಲ್ಯಾಂಡ್ ದೇಶಗಳ ನಡುವೆ ರಸ್ತೆ ಮತ್ತು ವಾಯುಯಾನ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ “ಬುದ್ಧ ಸರ್ಕಿಟ್ ಯೋಜನೆ’ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದರು.
ಕೇರಳದ ಹಿನ್ನೀರಿನಲ್ಲಿ, ಗೋವಾದ ಸಮುದ್ರದಲ್ಲಿ, ರಾಜಸ್ಥಾನದ ರಾಜ ಮನೆತನಗಳ ಕೋಟೆಗಳಲ್ಲಿ, ಮುಂಬೈನಲ್ಲಿ ಸೆಲೆಬ್ರೆಟಿಗಳ ವಿವಾಹಗಳು ನಡೆಯುತ್ತವೆ. ಆ ಸ್ಥಳಗಳನ್ನು ವಿಭಿನ್ನವಾಗಿ ಪ್ರವಾಸಿಗರಿಗೆ ತೋರಿಸುವುದೇ ಉದ್ದಿಮೆಯನ್ನಾಗಿ ಮಾಡುವ ಯೋಜನೆ ಇದೆ. ಈ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಲಾಗುವುದು ಎಂದು ಶರ್ಮಾ ತಿಳಿಸಿದರು.
ಆಯುಷ್‌ಗೆ ಒತ್ತು- ಮಲೇಷಿಯಾ: ಆರೋಗ್ಯ ಕ್ಷೇತ್ರದಲ್ಲಿ ಆಯುಷ್ ವೈದ್ಯಕೀಯ ಪದ್ಧತಿಯು ಪ್ರಮುಖ ಪಾತ್ರವಹಿಸುತ್ತಿದ್ದು, ಅದನ್ನು ಹೆಚ್ಚು ಪ್ರಚಾರ ಪಡಿಸುವ ಮೂಲಕ ವೈದ್ಯಕೀಯ ವೆಚ್ಚವನ್ನು ತಗ್ಗಿಸಬೇಕಾದ ಅಗತ್ಯ ಇದೆ ಎಂದು ಮಲೇಷಿಯಾ ಸಚಿವ ಡಾ.ಎಸ್.ಸುಬ್ರಹ್ಮಣ್ಯಂ ಪ್ರತಿಪಾದಿಸಿದ್ದಾರೆ.
ಪ್ರವಾಸಿ ಭಾರತ್ ದಿವಸ್ ಸಮಾವೇಶದಲ್ಲಿ ಭಾನುವಾರ ನಡೆದ “ಜಾಗತಿಕ ಆರೋಗ್ಯ ಮತ್ತು ವೆಲ್‌ನೆಸ್ ಹಬ್ ಆಗಿ ಭಾರತ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ ಅವರು, ಪಾರಂಪರಿಕ ವೈದ್ಯ ಪದ್ಧತಿಯನ್ನು ಹೆಚ್ಚು ಹೆಚ್ಚಾಗಿ ಪ್ರಚಾರ ಪಡಿಸಬೇಕು. ಇತ್ತೀಚಿನ ದಿನದಲ್ಲಿ ಆರೋಗ್ಯ ವೆಚ್ಚ ದುಬಾರಿಯಾಗಿ ಬಡವರಿಗೆ ಚಿಕಿತ್ಸೆ ವೆಚ್ಚವು ಕೈಗೆಟುಗದಂತೆ ಅಗಿದೆ. ಹೀಗಾಗಿ ಪಾರಂಪರಿಕ ವೈದ್ಯ ಪದ್ಧತಿ ಬಳಸಿ ಬಡವರಿಗೆ ಆರೋಗ್ಯ ಸೌಲಭ್ಯ ದೊರಕಿಸಿಕೊಡಬೇಕು ಎಂದು ಹೇಳಿದರು.
ಮಲೇಷಿಯಾದಲ್ಲಿಯೂ ಭಾರತೀಯ ಅಯುಷ್ ವೈದ್ಯ ಪದ್ಧತಿಯನ್ನು ಅಳವಡಿಸಿ ಕೊಳ್ಳುತ್ತಿದ್ದೇವೆ. ಮಲೇಷಿಯಾದ 10 ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನದ ಮೂಲಕ ಭಾರತಕ್ಕೆ ಆಯುಷ್ ವಿದ್ಯಾಭ್ಯಾಸ ಪಡೆಯಲು ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು. ಪ್ರತಿಧ್ವನಿಸಿದ ಸೌದಿ ಸಮಸ್ಯೆ: ಸೌದಿ ಅರೇಬಿಯಾ ದೇಶದಲ್ಲಿ ಭಾರತೀಯರು ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳು ಭಾನುವಾರ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರವಾಸಿ ಭಾರತೀಯ ದಿವಸ ಸಮಾವೇಶದಲ್ಲಿ ಪ್ರತಿಧ್ವನಿಸಿತು.
ಅನಿವಾಸಿ ಭಾರತೀಯರಿಗೆ ಒದಗಿಸಲಾಗುತ್ತಿರುವ ಸೇವೆಗಳ ಪರಿಣಾಮಕಾರಿ ಅನುಷ್ಠಾನ ಕುರಿತ ವಿಚಾರಗೋಷ್ಠಿಯಲ್ಲಿ ಹಲವರು ಸೌದಿ ಅರೇಬಿಯಾದಲ್ಲಿ ಭಾರತಿಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಂದಿಟ್ಟರು. ಸೌದಿ ಅರೇಬಿಯಾದಲ್ಲಿ ಭಾರತೀಯರು ದಿನೇ ದಿನೇ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಯಾರಾದರೂ ಮೃತಪಟ್ಟರೆ ಅವರ ಶವಗಳನ್ನು ತ್ವರಿತವಾಗಿ ಭಾರತಕ್ಕೆ ರವಾನೆ ಮಾಡಲು ವ್ಯವಸ್ಥೆ ಮಾಡುವುದಿಲ್ಲ, ವಿಸಾ ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ಅವಲತ್ತುಕೊಂಡರು.
ಇದಕ್ಕೆ ಉತ್ತರಿಸಿದ ವಿದೇಶಾಂಗ ಖಾತೆ ರಾಜ್ಯ ಸಚಿವ ಜನರಲ್ ವಿ.ಕೆ.ಸಿಂಗ್, ನಮ್ಮ ದೇಶದಲ್ಲಿ ನಾವು ಕಾನೂನು ಮಾಡಿಕೊಂಡಿರುವಂತೆ ಅವರು ತಮ್ಮ ನೆಲದಲ್ಲಿ ಕಾನೂನು ರೂಪಿಸಿಕೊಂಡಿದ್ದಾರೆ. ಅವರ ಕಾನೂನನ್ನು ಬದಲು ಮಾಡುವಂತೆ ಹೇಳುವ ಅಧಿಕಾರ ನಮಗಿಲ್ಲ. ಆದರೆ ನಿಮ್ಮ ಸಮಸ್ಯೆ ಇತ್ಯರ್ಥಪಡಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳನ್ನು ಮನೆ ಕೆಲಸಕ್ಕೆ ವಿದೇಶಕ್ಕೆ ಕಳುಹಿಸುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಯಾವುದಾದರೂ ಏಜೆನ್ಸಿ ಕಳುಹಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಅಕ್ರಮ ಸಾಗಣೆ ಪ್ರಕರಣ ದಾಖಲಿಸಿ ವಿಚಾರಣೆಗೆ ಗುರಿ ಪಡಿಸಲಾಗುತ್ತದೆ ಎಂದು ಹೇಳಿದರು.
ಮುಖಂಡರೊಂದಿಗೆ ಮೋದಿ ಸಭೆ
ಬೆಂಗಳೂರು: ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಬಿಐಇಸಿ ಕೇಂದ್ರದಲ್ಲಿ ಮೂರು ರಾಷ್ಟ್ರಗಳ ನಾಯಕರ ಜೊತೆ ಮೂರು ಪ್ರತ್ಯೇಕ ಸಭೆಗಳನ್ನು ನಡೆಸಿದರು. ಮೊದಲಿಗೆ ವಿಶೇಷ ಅತಿಥಿಯಾಗಿ ಆಗಮಿಸಿರುವ ಸುರಿನಾಮೆ ಉಪಾಧ್ಯಕ್ಷ ಮಹೇಶ್ ಅಶ್ವಿನ್ ಅಧೀನ್ ಅವರೊಂದಿಗೆ, ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆ ಬಗ್ಗೆ ಚರ್ಚಿಸಿದರು.
ಬಳಿಕ ಮಲೇಶಿಯನ್ ಇಂಡಿಯನ್ ಕಾಂಗ್ರೆಸ್ ಅಧ್ಯಕ್ಷ ಡಿ.ಎಸ್.ಸ್ವಾಮಿ ವೇಲು ಮತ್ತು ಡಾ.ಸುಬ್ರಮಣ್ಯಂ ಅವರೊಂದಿಗೆ ಮೋದಿ ಚರ್ಚಿಸಿದರು. ಫ್ರಾನ್ಸ್‌ನ ವಿದೇಶಾಂಗ ಸಚಿವ ಜೀನ್ ಮಾರ್ಕ್ ಅವರೊಂದಿಗೆ ಸಮಾಲೋಚನೆ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಸೌರ ಒಪ್ಪಂದಕ್ಕೆ ಫ್ರಾನ್ಸ್ ಬೆಂಬಲ ಸೂಚಿಸಿತು ಎಂದು ಸಭೆಯ ನಂತರ ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಸುದ್ದಿಗಾರರಿಗೆ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ನೋಡಲು ಜನವೋ ಜನ
ಬೆಂಗಳೂರು: ಪ್ರವಾಸಿ ಭಾರತೀಯ ದಿವಸ ಸಮಾವೇಶದ ಎರಡನೇ ದಿನವಾದ ಭಾನುವಾರ ಜನವೋ ಜನ. ಇದಕ್ಕೆ ಕಾರಣ “ಮೋದಿ ಮೇನಿಯಾ.’ ಹೌದು. ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶದ ಎರಡನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ದಿಢೀರ್ ವೀಕ್ಷಕರ ಸಂಖ್ಯೆ ಹೆಚ್ಚಾಯಿತು. ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದ ಹೊರಗೂ, ಒಳಗೂ ಮೋದಿಯೇ ಆಕರ್ಷಣೆ.
ಮೋದಿ ಆಗಮನದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಮುಖಂಡರು ಬೃಹತ್ ಸಂಖ್ಯೆಯಲ್ಲಿ ಸಮಾವೇಶ ಕೇಂದ್ರಕ್ಕೆ ಆಗಮಿಸಿದ್ದರು.
ಇದರ ಜತೆಗೆ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಎಫ್ಕೆಸಿಸಿಐ, ಕಾಸಿಯಾ, ಫಿಕ್ಕಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನರೇಂದ್ರ ಮೋದಿಯವರ ಭಾಷಣದ ನಂತರ ಆವರಣದಲ್ಲಿದ್ದ ಮಳಿಗೆಗಳಿಗೆ ಲಗ್ಗೆ ಇಟ್ಟಿದ್ದರು. ಹೀಗಾಗಿ, ಎಲ್ಲೆಲ್ಲೂ ಜನಸಾಗರ ಎಂಬಂತಾಗಿತ್ತು. ಖರೀದಿಯ ಭರಾಟೆಯೂ ಜೋರಾಗಿತ್ತು. ಇನ್ನು ಸಮಾವೇಶ ಕೇಂದ್ರದ ಹೊರಗೆ ನರೇಂದ್ರ ಮೋದಿ ಅವರನ್ನು ಕಾಣಲು ಸುತ್ತಮುತ್ತಲ ಪ್ರದೇಶಗಳ ಜನರು ಜಮಾಯಿಸಿದ್ದರು. ವಿಶೇಷ ಹೆಲಿಕಾಪ್ಟರ್‌ನಲ್ಲಿ ಸಮಾವೇಶ ಸ್ಥಳಕ್ಕೆ ಬಂದ ಮೋದಿ ಆ ನಂತರ ವಿಶೇಷ ಹೆಲಿಕಾಪ್ಟರ್‌ನಲ್ಲೇ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಮರಳಿದರು.
ಆಗ, ಮೋದಿ ಅವರನ್ನು ಕಾಣಲು ಸಹಸ್ರಾರು ಜನರು ಕೇಂದ್ರದ ಸುತ್ತ ನಿಂತಿದ್ದರು. ಮೋದಿ ಅವರು ಕಾರ್ಯಕ್ರಮಕ್ಕೆ ಬಂದು ಹೋಗುವವರೆಗೂ ಮೂರು ತಾಸಿಗೂ ಹೆಚ್ಚು ಕಾಲ ಉರಿ ಬಿಸಿಲಿನಲ್ಲೇ ಕಾದಿದ್ದರು. ಸಮಾವೇಶಕ್ಕೆ ಮೊದಲ ದಿನ 7500 ಪ್ರತಿನಿಧಿಗಳು ನೋಂದಾಯಿಸಿದ್ದರಾದರೂ ಎರಡನೇ ದಿನ 15 ಸಾವಿರಕ್ಕೂ ಹೆಚ್ಚು ಜನರು ಸಮಾವೇಶ ಕೇಂದ್ರದ ಒಳಗಿದ್ದರು. ಅಷ್ಟೇ ಪ್ರಮಾಣದ ಜನ ಸಮಾವೇಶ ಕೇಂದ್ರದ ಹೊರಗೂ ನಿಂತಿದ್ದರು.
ಊಟದ ವ್ಯವಸ್ಥೆಯಲ್ಲಿ ಗೊಂದಲ: ಎರಡನೇ ದಿನ ಹೆಚ್ಚು ಪ್ರತಿನಿಧಿಗಳು ಆಗಮಿಸಿದ್ದರಿಂದ ಊಟದ ವ್ಯವಸ್ಥೆಯಲ್ಲಿ ಸ್ವಲ್ಪ ಗೊಂದಲ ಉಂಟಾಗಿತ್ತು. ಅನಿವಾಸಿ ಭಾರತೀಯ ಪ್ರತಿನಿಧಿಗಳಿಗಾಗಿ ಕಾಯ್ದಿರಿಸಲಾದ ಊಟದ ಸಭಾಂಗಣಕ್ಕೆ ಇತರೆ ಪ್ರತಿನಿಧಿಗಳು ನುಗ್ಗಿದ್ದರಿಂದ ಕೆಲವರಿಗೆ ಊಟ ಸಿಗದಂತಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.