ಸಿಗ್ನಲ್ ಇಲ್ಲದೆ ಸಂಚಾರ ಸಂಕಟ
Team Udayavani, Apr 23, 2018, 12:49 PM IST
ಬೆಂಗಳೂರು: ಟ್ರಾಫಿಕ್ ಸಿಗ್ನಲ್ ಇದ್ದರೆ, ಕೆಂಪು ದೀಪ ಹಸಿರಾಗುವವರೆಗೂ ನಿಂತಲ್ಲೇ ನಿಂತು ಕಾಯಬೇಕು ಎಂಬುದು ಹಲವು ಚಾಲಕರು, ದ್ವಿಚಕ್ರ ವಾಹನ ಸವಾರರ ಅಳಲು. ಆದರೆ ಪ್ರಮುಖ ಜಂಕ್ಷನ್ ಅಥವಾ ವೃತ್ತವೊಂದರಲ್ಲಿ ಟ್ರಾಫಿಕ್ ಸಿಗ್ನಲ್ ಇಲ್ಲದಿದ್ದರೆ “ಛೇ ಇಲ್ಲೊಂದು ಟ್ರಾಫಿಕ್ ಸಿಗ್ನಲ್ ಹಾಕಿಲ್ಲ’ ಎಂದು ಮರುಗುವವರು ಕೂಡ ಇದೇ ಚಾಲಕ, ಸವಾರರು.
ಆದರೆ ಸಿಗ್ನಲ್ ಇದ್ದರೆ ಒಂದೆರಡು ನಿಮಿಷ ನಿಂತು ನಂತರ ಮುಂದೆ ಸಾಗಬಹುದು. ಆದರೆ ಸಿಗ್ನಲ್ ಇಲ್ಲದೆ, ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಜಾಮ್ ಆದರೆ ಗಂಟೆಗಟ್ಟಲೆ ಕಾಯಬೇಕು. ಹೀಗಾಗಿ ಟ್ರಾಫಿಕ್ ಸಿಗ್ನಲ್ ಇದ್ದರೆ ಉತ್ತಮ ಎಂದು ಬಹುತೇಕ ಚಾಲಕರು ಅಭಿಪ್ರಾಯಪಟಡುತ್ತಾರೆ. ಈ ವಿಷಯದ ಪ್ರಸ್ತಾಪ ಈಗೇಕೆ ಎಂದರೆ, ಲಾಲ್‌ಬಾಗ್ ಎರಡನೇ ದ್ವಾರದ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ “ಟ್ರಾಫಿಕ್ ಸಿಗ್ನಲ್’ ಇಲ್ಲದ ಕಾರಣ ವಾಹನ ಸವಾರರು ಪ್ರತಿ ನಿತ್ಯ ಪರದಾಡುತ್ತಿದ್ದಾರೆ.
ಶಾಂತಿನಗರ ಬಸ್ ನಿಲ್ದಾಣ, ಅಶೋಕ ಪಿಲ್ಲರ್, ಮಿನರ್ವ ವೃತ್ತ, ನಿಮ್ಹಾನ್ಸ್, ಕಿದ್ವಾಯಿ ಆಸ್ಪತ್ರೆ ಭಾಗಗಳಿಂದ ಬಂದು ಹೋಗುವ ಸಾವಿರಾರು ವಾಹನಗಳು ಇಡೀ ದಿನ ಇದೇ ವೃತ್ತದ ಮೂಲಕ ಹಾದುಹೋಗಬೇಕು. ಆದರೂ ಟ್ರಾಫಿಕ್ ಸಿಗ್ನಲ್ ಅಳವಡಿಸದ ಕಾರಣ ದಿಢೀರ್ ಸಂಚಾರ ದಟ್ಟಣೆ ಉಂಟಾಗಿ ಗಂಟೆಗಟ್ಟಲೆ ವಾಹನಗಳು ರಸ್ತೆಯಲ್ಲಿ ನಿಲ್ಲುತ್ತಿವೆ.
ವೃತ್ತದಲ್ಲಿ ಸಿಗ್ನಲ್ ಅಳವಡಿಸಲು ಹಾಗೂ ಸಂಚಾರ ನಿಯಂತ್ರಣಕ್ಕೆ ಪೊಲೀಸರನ್ನು ನಿಯೋಜಿಸುವಂತೆ ವಾಹನ ಸವಾರರು ಹಲವಾರು ಬಾರಿ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸುಗಮ ಹಾಗೂ ಸುರಕ್ಷಿತ ಸಂಚಾರದ ದೃಷ್ಟಿಯಿಂದ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಲಾಲ್‌ಬಾಗ್ ಎರಡನೇ ದ್ವಾರದ ಬಳಿ ಸಿಗ್ನಲ್ ಇಲ್ಲ. ಕೆಲ ವರ್ಷಗಳ ಹಿಂದೆ ಅಳವಡಿಸಿರುವ ಟ್ರಾಫಿಕ್ ದೀಪಗಳು ಈಗ ಕಾರ್ಯನಿರ್ವಹಿಸುತ್ತಿಲ್ಲ.
ನಿತ್ಯ ಟ್ರಾಫಿಕ್ ಜಾಮ್: ಬನ್ನೇರುಘಟ್ಟ, ಹೊಸೂರು, ಶಾಂತಿನಗರ ಕಡೆಯಿಂದ ಬರುವ ವಾಹನಗಳು ಕೆಂಗಲ್ ಹನುಮಂತಯ್ಯ ವೃತ್ತದ ಮೂಲಕ ಹಾದು ಹೋಗುವುದರಿಂದ ಬೆಳಗ್ಗೆ 8.30ರಿಂದ ಮಧ್ಯಾಹ್ನ 12 ಹಾಗೂ ಸಂಜೆ 3.30ರಿಂದ 6 ಗಂಟೆವರೆಗೆ ಇಲ್ಲಿ ಸಾಕಷ್ಟು ವಾಹನಗಳು ಸಂಚರಿಸುತ್ತಿದ್ದು ಈ ಸಂದರ್ಭದಲ್ಲಿ ತೀವ್ರ ವಾಹನ ದಟ್ಟಣೆ ಉಂಟಾಗುತ್ತಿದೆ.
ಜತೆಗೆ ಲಾಲ್‌ಬಾಗ್‌ಗೆ ಬರುವ ಪ್ರವಾಸಿಗರ ವಾಹನಗಳ ನಿಲುಗಡೆ ತಾಣದ ಮುಖ್ಯ ದ್ವಾರವೂ ಇಲ್ಲೇ ಇದ್ದು, ಆ ವಾಹನಗಳು ಪ್ರವೇಶ ಟಿಕೆಟ್ ಪಡೆದು ಉದ್ಯಾನವನ ಪ್ರವೇಶಿಸುವವರಗೂ ಇತರ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ.
ರೋಟರಿ ವ್ಯವಸ್ಥೆ: ಈ ವೃತ್ತದಲ್ಲಿ ವಾಹನ ದಟ್ಟಣೆ ಉಂಟಾದಾಗ ಸಾರ್ವಜನಿಕರೇ ಕೆಲವೊಮ್ಮೆ ಸಂಚಾರ ಪೊಲೀಸರ ಕೆಲಸ ನಿರ್ವಹಿಸುತ್ತಾರೆ. ಪೊಲೀಸರು ವಾರದಲ್ಲಿ ಮೂರ್‍ನಾಲ್ಕು ಬಾರಿ ಇದೇ ವೃತ್ತದಲ್ಲಿ ವಾಹನಗಳ ತಪಾಸಣೆ ಮಾಡುತ್ತಾರೆ. ಆದರೆ, ಟ್ರಾಫಿಕ್ ಸಿಗ್ನಲ್ ಇಲ್ಲದ ಬಗ್ಗೆ ಮಾತ್ರ ತಲೆಕಡಿಸಿಕೊಂಡಿಲ್ಲ. ವೃತ್ತದ ತಿರುವಿನಲ್ಲಿ ವಾಹನಗಳು ವೇಗವಾಗಿ ಸಂಚರಿಸುವುದರಿಂದ ಚಿಕ್ಕಪುಟ್ಟ ಅಪಘಾತಗಳೂ ಸಂಭವಿಸುತ್ತಿವೆ. ದಿನದ ಯಾವುದೇ ಅವಧಿಯಲ್ಲೂ ಇಲ್ಲಿ ಟ್ರಾಫಿಕ್ ಜಾಮ್ ಆಗುವುದು ಮಾಮೂಲು ಎಂದು ಆಟೋ ಚಾಲಕರು ದೂರುತ್ತಾರೆ.
ನಿರಂತರವಾಗಿ ವಾಹನಗಳು ಸಂಚರಿಸುವುದರಿಂದ ರಸ್ತೆ ದಾಟಲು ಭಯವಾಗುತ್ತದೆ. ಅನೇಕ ಬಾರಿ ವಾಹನಗಳು ಡಿಕ್ಕಿಗಾಗಿ ಅಪಘಾತಗಳು ಸಂಭವಿಸುತ್ತಿವೆ. ವಾಹನ ದಟ್ಟಣೆ ನಿವಾರಣೆಗೆ ಸಂಚಾರ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು.
-ಸೋಮಶೇಖರ್, ಲಾಲ್‌ಬಾಗ್ ವಾಯುವಿಹಾರಿ
ಎರಡನೇ ದ್ವಾರದ ಬಳಿಯ ವೃತ್ತದಲ್ಲಿ ರೋಟರಿ ಸಂಚಾರ ವ್ಯವಸ್ಥೆಯನ್ನು ಅಳವಡಿಸಿಲಾಗಿದೆ. ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಕಾರಣ ಟ್ರಾಫಿಕ್ ಜಾಮ್ ಸಮಸ್ಯೆಯಾಗುತ್ತಿರಬಹುದು. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಅನುಪಮ್ ಅಗರ್‌ವಾಲ್, ಡಿಸಿಪಿ, ಪೂರ್ವ ಸಂಚಾರ ವಿಭಾಗ
ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಇಲ್ಲದೇ ವಾಹನ ದಟ್ಟಣೆ ಹೆಚ್ಚುವುದು, ಸಂಚಾರ ಸ್ಥಗಿತಗೊಳ್ಳುವ ಜತೆಗೆ ಚಿಕ್ಕಪುಟ್ಟ ಅಪಘಾತಗಳೂ ಸಂಭವಿತ್ತವೆ. ವೃತ್ತದ ಬಳಿ ಕನಿಷ್ಠ ಒಬ್ಬ ಸಂಚಾರ ಪೊಲೀಸ್ ಸಿಬ್ಬಂದಿಯನ್ನಾದರೂ ನಿಯೋಜಿಸಬೇಕು.
-ಲಾಲ್‌ಬಾಗ್ ಕಾವಲು ಸಿಬ್ಬಂದಿ
* ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
Kannada: ಮಾತೃಭಾಷಾ ಹೊಳಪು
Kannada: ಕನ್ನಡ ಎನೆ ಕುಣಿದಾಡುವುದೆನ್ನೆದೆ… ಕನ್ನಡ ಎನೆ ಕಿವಿ ನಿಮಿರುವುದು…
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.