ಟ್ರಾಫಿಕ್ ಜಾಮ್ ಅಂದ್ರೆ ಸಿಲ್ಕ್ ಬೋರ್ಡ್!
ದಾರಿ ಯಾವುದಯ್ಯಾ ಸಂಚಾರಕೆ
Team Udayavani, Jul 20, 2019, 3:10 AM IST
ಚಿತ್ರಗಳು: ಫಕ್ರುದ್ದೀನ್ ಎಚ್.
ಬೆಂಗಳೂರು: ನಗರದ ಅತಿ ಹೆಚ್ಚು ವಾಯು ಮಾಲಿನ್ಯ ಉಂಟುಮಾಡುವ ಮತ್ತು ಸಂಚಾರದಟ್ಟಣೆ ಇರುವ ಪ್ರದೇಶ ಸಿಲ್ಕ್ಬೋರ್ಡ್ ಜಂಕ್ಷನ್. ಬೆಂಗಳೂರಿನ ಇತರೆ ಜಂಕ್ಷನ್‌ಗಳಿಗೆ ಹೊಲಿಸಿದರೆ, ಪ್ರತಿ ಗಂಟೆಗೆ ಇಲ್ಲಿ ಹತ್ತುಪಟ್ಟು ವಾಹನಗಳು ಸಂಚರಿಸುತ್ತವೆ. “ಪೀಕ್ ಅವರ್’ನಲ್ಲಿ ಈ ಸಂಖ್ಯೆ ಇನ್ನಷ್ಟು ಅಧಿಕವಾಗುತ್ತದೆ. ಈ ಜಂಕ್ಷನ್‌ನ ಒಂದು ದಿಕ್ಕಿನಲ್ಲಿ ಸಾಫ್ಟ್ವೇರ್ ಕಂಪನಿಗಳಿದ್ದರೆ, ಅದರಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ಮತ್ತೂಂದು ದಿಕ್ಕಿನಲ್ಲಿ ವಾಸವಾಗಿದ್ದಾರೆ.
ಅವರೆಲ್ಲರೂ ಸಿಲ್ಕ್ಬೋರ್ಡ್ ಮೂಲಕವೇ ಹಾದುಹೋಗುವುದರಿಂದ ಈ ಮಾರ್ಗದ ಸುತ್ತಮುತ್ತ ನಿರೀಕ್ಷೆಗೂ ಮೀರಿದ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದರಿಂದ ರಾಜ್ಯದಲ್ಲೇ ಅತಿ ಹೆಚ್ಚು ವಾಯುಮಾಲಿನ್ಯ ಉಂಟು ಮಾಡುವ ಪ್ರದೇಶ ಎಂಬ ಅಪಖ್ಯಾತಿಗೂ ಈ ಜಂಕ್ಷನ್ ಪಾತ್ರವಾಗಿದೆ. ಅಗರ ವಿಲೇಜ್, ಬೆಳ್ಳಂದೂರು ಕಡೆ ಸಂಪರ್ಕಿಸುವ ರಸ್ತೆಯಾಗಿದ್ದ ಸಿಲ್ಕ್ಬೋರ್ಡ್ ಜಂಕ್ಷನ್‌ನಲ್ಲಿ ವರ್ಷಗಳು ಕಳೆದಂತೆ ನಗರದೊಳಗೆ ಬರುವ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತು.
ಹೀಗಾಗಿ, 2002ರಲ್ಲಿ ಮಾರೇನಹಳ್ಳಿಯಿಂದ ಗೊರಗುಂಟೆಪಾಳ್ಯದವರೆಗೆ ಹೊರವರ್ತುಲ ರಸ್ತೆ ನಿರ್ಮಿಸಲಾಯಿತು. ಅದರ ಬೆನ್ನಲ್ಲೇ ಸಿಲ್ಕ್ಬೋರ್ಡ್‌ನಿಂದ ಹೆಬ್ಟಾಳ (ಬೆಳ್ಳಂದೂರು, ವೈಟ್‌ಫೀಲ್ಡ್, ಕೆ.ಆರ್.ಪುರ, ಎಚ್‌ಎಸ್‌ಆರ್ ಲೇಔಟ್, ಬೊಮ್ಮನಹಳ್ಳಿ)ವರೆಗೆ ಏಕಾಏಕಿ ನೂರಾರು ಐಟಿ-ಬಿಟಿ ಕಂಪನಿಗಳು ಹುಟ್ಟಿಕೊಂಡವು. ಇಲ್ಲಿ ಕೆಲಸ ಮಾಡುವ ಶೇ.90ರಷ್ಟು ಉದ್ಯೋಗಿಗಳು ಕಾರುಗಳನ್ನು ಉಪಯೋಗಿಸುತ್ತಿದ್ದು, ಜಯನಗರ, ಜೆ.ಪಿ.ನಗರ ಸೇರಿ ದಕ್ಷಿಣ, ಆಗ್ನೇಯ, ವೈಟ್‌ಫೀಲ್ಡ್ ವಿಭಾಗಗಳ ಕಡೆ ಹೆಚ್ಚು ವಾಸವಾಗಿದ್ದಾರೆ. ಇದರಿಂದ ನಿತ್ಯ ವಾಹನಗಳ ಓಡಾಟದಲ್ಲಿ ಏರಿಕೆಯಾಯಿತು.
ಹೀಗಾಗಿ ಕೆಲ ಪ್ರತಿಷ್ಠಿತ ಐಟಿ ಕಂಪನಿಗಳು ಎನ್‌ಎಚ್‌ಐಎ (ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ) ಹಾಗೂ ಸರ್ಕಾರದ ಜತೆ ಚರ್ಚಿಸಿದ ಪರಿಣಾಮ 2010ರಲ್ಲಿ ಸಿಲ್ಕ್ಬೋರ್ಡ್ ಜಂಕ್ಷನ್‌ನಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ 9.7 ಕಿ.ಮೀ ಮೇಲ್ಸೇತುವೆ ನಿರ್ಮಿಸಲಾಯಿತು. ಇದರಿಂದ ಆರಂಭದಲ್ಲಿ ಸಂಚಾರ ದಟ್ಟಣೆ ನಿಯಂತ್ರಣವಾದರೂ ದಿನ ಕಳೆದಂತೆ ಈ ಮಾರ್ಗದಲ್ಲೂ ಮತ್ತಷ್ಟು ಐಟಿ ಹಾಗೂ ಸ್ಟಾರ್ಟ್‌ಅಪ್ ಕಂಪನಿಗಳು ತಲೆಯೆತ್ತಿದ್ದವು. ಇದು ಇನ್ನಷ್ಟು ಸಂಚಾರದಟ್ಟಣೆಗೆ ಕಾರಣವಾಯಿತು ಎನ್ನುತ್ತಾರೆ ಸಾರಿಗೆ ತಜ್ಞರು.
ಅತಿ ಹೆಚ್ಚು ಮಾಲಿನ್ಯ: ಸಿಲ್ಕ್ ಬೋರ್ಡ್ ದೇಶದ ಅತೀ ಹೆಚ್ಚು ಸಂಚಾರ ದಟ್ಟಣೆ ಪ್ರದೇಶಗಳ ಪೈಕಿ ಒಂದು. ಇದರೊಂದಿಗೆ ಬೆಂಗಳೂರಿನಲ್ಲೇ ಅತಿ ಹೆಚ್ಚು ವಾಯು ಮಾಲಿನ್ಯ ಉಂಟುಮಾಡುವ ಪ್ರದೇಶವೂ ಹೌದು. ಏಕೆಂದರೆ, ನಗರದ ಇತರೆ ಜಂಕ್ಷನ್‌ಗಳಲ್ಲಿ ಪ್ರತಿ ಗಂಟೆಗೆ ಮೂರರಿಂದ ಐದು ಸಾವಿರ ವಾಹನಗಳು ಸಂಚರಿಸಿದರೆ, ಈ ಜಂಕ್ಷನ್‌ನಲ್ಲಿ 13ರಿಂದ 15 ಸಾವಿರ ವಾಹನ ಓಡಾಡುತ್ತವೆ. ಸಿಲ್ಕ್ಬೋರ್ಡ್ ಜಂಕ್ಷನ್‌ನಿಂದ ಎಲೆಕ್ಟ್ರಾನಿಕ್‌ಸಿಟಿವರೆಗೆ (14 ಕಿ.ಮೀ.), ಬೆಳ್ಳಂದೂರುವರೆಗೆ (7 ಕಿ.ಮೀ.), ಮಡಿವಾಳ ಜಂಕ್ಷನ್ (1.5 ಕಿ.ಮಿ.), ಬಿಟಿಎಂ ಲೇಔಟ್ (6 ಕಿ.ಮೀ.) ಇದೆ. ಆದರೆ, ಈ ಮಾರ್ಗದಲ್ಲಿ ಓಡಾಡುವ ವಾಹನಗಳ ವೇಗ 10-15 ಕಿ.ಮೀ. ಮಾತ್ರ.
ತುಮಕೂರು ರಸ್ತೆ, ಮೆಜೆಸ್ಟಿಕ್, ಕೆ.ಆರ್. ಪುರ, ಐಟಿಪಿಎಲ್, ಗೊರಗುಂಟೆಪಾಳ್ಯ, ಮಡಿವಾಳ, ಬೆಳ್ಳಂದೂರು, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಎಚ್‌ಎಸ್‌ಆರ್ ಲೇಔಟ್ ಸೇರಿ ಇತರೆ ಮಾರ್ಗಗಳಿಂದ ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ ಅಥವಾ ತಮಿಳುನಾಡು ಕಡೆ ಹೋಗಲು ಈ ಮಾರ್ಗದಲ್ಲೇ ಹೋಗಬೇಕು. ಇದರೊಂದಿಗೆ ಐಟಿ-ಬಿಟಿ ಕಂಪನಿ ವಾಹನಗಳ ಓಡಾಟವೂ ಅಧಿಕ. ಸೆಂಟ್‌ಜಾನ್ ಮತ್ತು ಅಯ್ಯಪ್ಪ ಜಂಕ್ಷನ್‌ನಿಂದ ಮಡಿವಾಳ ಪೊಲೀಸ್ ಠಾಣೆವರೆಗೆ ಕಿರಿದಾದ ರಸ್ತೆಗಳಿವೆ.
ಬೇರೆ ಮಾರ್ಗದಿಂದ ಬರುವ ವಾಹನಗಳು ಎಷ್ಟೇ ವೇಗವಾಗಿ ಬಂದರೂ ಈ ಮಾರ್ಗದಲ್ಲಿ ವಾಹನಗಳ ವೇಗ ಮಿತಿ ಕೇವಲ 8-10 ಕಿ.ಮೀಟರ್. “ಪೀಕ್ ಅವರ್’ನಲ್ಲಿ ನಾಲ್ಕೈದು ಕಿ.ಮೀ. ಮಾತ್ರ. ವಾಹನಗಳು ನಿಂತಲ್ಲೇ ನಿಲ್ಲುವುದರಿಂದ ಜಂಕ್ಷನ್‌ನ ಸುಮಾರು ಆರೇಳು ಕಿ.ಮೀ. ವ್ಯಾಪ್ತಿಯಲ್ಲಿ ಹೆಚ್ಚು ವಾಯುಮಾಲಿನ್ಯ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಇಲ್ಲಿಯೇ ವಾಯುಮಾಲಿನ್ಯ ಗುಣಮಟ್ಟ ನಿರ್ವಹಣಾ ಕೇಂದ್ರ ತೆರೆದಿದೆ ಎನ್ನುತ್ತಾರೆ ಸಂಚಾರ ತಜ್ಞರು.
ಪರ್ಯಾಯ ಮಾರ್ಗ?: ಈ ಭಾಗದಲ್ಲಿ ರಸ್ತೆ ವಿಸ್ತರಣೆ ಆಗಬೇಕು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗುವುದಿಲ್ಲ. ಜತೆಗೆ ಮಡಿವಾಳ ಚೆಕ್‌ಪೋಸ್ಟ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಎತ್ತರಿಸಿದ ಮೇಲ್ಸೇತುವೆ ಮಾಡಿದರೆ ಆದಷ್ಟು ಸಂಚಾರ ದಟ್ಟಣೆಗೆ ಬ್ರೇಕ್ ಹಾಕಬಹುದು. ಪಶ್ಚಿಮ ಬೆಂಗಳೂರಿಗೆ ನೈಸ್ ರಸ್ತೆ ಬಂದಿದೆ. ತುಮಕೂರು ರಸ್ತೆಯಿಂದ ನೈಸ್ ರಸ್ತೆ ಮೂಲಕ ನೇರವಾಗಿ ಹೊಸೂರು ರಸ್ತೆವರೆಗೆ ಲಾರಿ, ಟ್ರಕ್‌ಗಳು ಹೋಗುತ್ತವೆ. ಆದರೆ, ಹೊಸೂರು ರಸ್ತೆ ಕಡೆ ಬಂದು ಮಾರತ್‌ಹಳ್ಳಿ, ಹೊಸಕೋಟೆ ಕಡೆ ಹೋಗಲು ಸಿಲ್ಕ್ಬೋರ್ಡ್ ಕಡೆ ಹೋಗಲೇಬೇಕು.
ಹೀಗಾಗಿ ನೈಸ್ ರಸ್ತೆಯನ್ನು ಸಂಪರ್ಕಿಸುವ ಔಟರ್ ಪರಿಫೆರಲ್ ರಿಂಗ್ ರಸ್ತೆ (ಹೊಸೂರು, ಸರ್ಜಾಪುರ, ದೇವನಹಳ್ಳಿ, ಯಲಹಂಕ, ಅಂಚೆಪಾಳ್ಯ(ತುಮಕೂರು ರಸ್ತೆ) ಸಂಪರ್ಕಿಸುವ) ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಮತ್ತೂಂದೆಡೆ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರವರೆಗೆ ನಡೆಯುತ್ತಿರುವ ಮೆಟ್ರೋ ಕಾಮಗಾರಿ ಪೂರ್ಣಗೊಂಡರೆ ಸಿಲ್ಕ್ ಬೋರ್ಡ್ ಜಂಕ್ಷನ್ ಹಾಗೂ ನಗರದಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆಯಾಗಬಹುದು ಎಂದು ಸಂಚಾರ ಪೊಲೀಸರು ಅಭಿಪ್ರಾಯಪಡುತ್ತಾರೆ.
ಎಲ್ಲಕ್ಕೂ ಹೆಬ್ಟಾಗಿಲು “ಸಿಲ್ಕ್ ಬೋರ್ಡ್’: ಸಿಲ್ಕ್ ಬೋರ್ಡ್, ಕೆ.ಆರ್.ಪುರ, ಹೆಬ್ಟಾಳ ಹಾಗೂ ಗೊರಗುಂಟೆಪಾಳ್ಯದ ಮೇಲ್ಸೇತುವೆಗಳು ನಗರದ ಪ್ರಮುಖ ಪ್ರವೇಶ ದ್ವಾರಗಳು. ಸಿಲ್ಕ್ಬೋರ್ಡ್ ಜಂಕ್ಷನ್ ಹೊರತು ಪಡಿಸಿ ಹಳೇ ಮದ್ರಾಸ್ ರಸ್ತೆಯೇ ನೆರೆರಾಜ್ಯಗಳಿಂದ ನಗರ ಸಂಪರ್ಕಿಸುವ ರಸ್ತೆ. ಇತರೆ ಯಾವ ಮಾರ್ಗವಿಲ್ಲ. ಹೀಗಾಗಿ ಉದ್ಯಮಿಗಳು, ಕೈಗಾರಿಕೆಗಳು, ಸ್ಟಾರ್ಟ್‌ಅಪ್‌ಗ್ಳು ಈ ಜಂಕ್ಷನ್‌ನ ಆಸು-ಪಾಸಿನಲ್ಲಿ ಸ್ಥಾಪನೆಗೊಂಡಿದ್ದು, ಅವೆಲ್ಲವುಗಳಿಗೂ ಹೆಬ್ಟಾಗಿಲು ಸಿಲ್ಕ್ಬೋರ್ಡ್ ಜಂಕ್ಷನ್.
ಹೊಸೂರು ಕಡೆಯ ರಾಷ್ಟ್ರೀಯ ಹೆದ್ದಾರಿ ಹಾಗೂ ಸಿಲ್ಕ್ಬೋರ್ಡ್ ಬಳಿಯ ಹೊರವರ್ತುಲ ರಸ್ತೆಯಿಂದ ಐಟಿ-ಬಿಟಿ ಕಂಪನಿಗಳು ಹೆಚ್ಚಾದವು. ಇದರಿಂದ ಕ್ರಮೇಣ ಸಂಚಾರ ದಟ್ಟಣೆ ಅಧಿಕವಾಗಿದ್ದು, ವಾಯು ಮಾಲಿನ್ಯ ಕೂಡ ಹೆಚ್ಚಾಗಿದೆ. ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗಳು ಸಂಚಾರ ತಜ್ಞರು ಹಾಗೂ ತಂತ್ರಜ್ಞರ ಜತೆ ಚರ್ಚಿಸಿದರೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು.
-ಪ್ರೊ.ಎಂ.ಎನ್.ಶ್ರೀಹರಿ, ಸಂಚಾರ ತಜ್ಞ
* ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.