“ನಾದಿನಿ ಮೋಹ’ ತಂದ ದುರಂತ!
Team Udayavani, Feb 20, 2020, 3:10 AM IST
ಬೆಂಗಳೂರು: ಆಂಧ್ರಪ್ರದೇಶ ಮೂಲದ ಸಾಫ್ಟ್ವೇರ್ ಎಂಜಿನಿಯರ್ ಲಕ್ಷ್ಮಣ್‌ಕುಮಾರ್ (33) ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಮಹದೇವಪುರ ಠಾಣೆ ಪೊಲೀಸರು, 9 ಆರೋಪಿಗಳನ್ನು ಬಂಧಿಸಿದ್ದಾರೆ.
ಮಹದೇವಪುರ ರಿಂಗ್ ರಸ್ತೆಯ ಬ್ರಿಡ್ಜ್ ಬಳಿ ಫೆ.3ರಂದು ನಡೆದಿದ್ದ ಲಕ್ಷ್ಮಣ್‌ಕುಮಾರ್ ಕೊಲೆ ಪ್ರಕರಣದ ಬೆನ್ನತ್ತಿದ್ದ ವಿಶೇಷ ತನಿಖಾ ತಂಡ, ಹೈದರಾಬಾದ್‌ನ ಸತ್ಯಪ್ರಸಾದ್ (41), ಹೊಸಕೋಟೆಯ ಗಿಡ್ಡಪ್ಪನಹಳ್ಳಿಯ ದಿನೇಶ್ (26), ಆತನ ಪತ್ನಿ ಸಯಿದಾ ಅಲಿಯಾಸ್ ಸವಿತಾ (25), ಹಳೆ ಬೈಯಪ್ಪನಹಳ್ಳಿ ಪ್ರಶಾಂತ್ ಜಿ ಅಲಿಯಾಸ್ ಪಪ್ಪಿ (20), ಕಗ್ಗದಾಸಪುರ ಪ್ರೇಮ್ (31), ಕುಶಾಂತ್, ಸಂತೋಷ್ (37), ಮಲ್ಲೇಶಪ್ಪನ ಪಾಳ್ಯದ ರವಿ (37), ಶಿಡ್ಲಘಟ್ಟದ ಲೋಕೇಶ್ ಅಲಿಯಾಸ್ ಲೋಕಿ (28) ಎಂಬವರನ್ನು ಬಂಧಿಸಿದೆ.
ತಲೆಮರೆಸಿಕೊಂಡಿರುವ ಆರೋಪಿ ಭರತ್ ಬಾಬು ಎಂಬಾತನ ಬಂಧನಕ್ಕೂ ಬಲೆ ಬಲೆ ಬೀಸಿದೆ. ಮೃತ ಲಕ್ಷ್ಮಣ್‌ಕುಮಾರ್ ಪತ್ನಿಯ ಮೇಲಿನ ಮೋಹದಿಂದ ಆಕೆಯ ಅಕ್ಕನ ಗಂಡ ಸತ್ಯಪ್ರಸಾದ್, ಲಕ್ಷ್ಮಣ್‌ಕುಮಾರ್‌ನನ್ನು ಸುಪಾರಿ ನೀಡಿ ಕೊಲೆ ಮಾಡಿಸಿದ್ದ ಎಂಬ ಆಘಾತಕಾರಿ ಅಂಶ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಹೈದ್ರಾಬಾದ್‌ನಲ್ಲಿ ನೆಲೆಸಿರುವ ಸತ್ಯಪ್ರಸಾದ್ ಹಾಗೂ ಆತನ ಪತ್ನಿ ಇಬ್ಬರು ಸಾಫ್ಟ್ವೇರ್ ಎಂಜಿನಿಯರ್‌ಗಳು. ಸತ್ಯಪ್ರಸಾದ್ ಪತ್ನಿಯ ಸಹೋದರಿ ಟೆಕ್ಕಿ ಶ್ರೀಜಾಳನ್ನು ಲಕ್ಷ್ಮಣ್‌ಕುಮಾರ್ 2016ರಲ್ಲಿ ಮದುವೆ ಆಗಿದ್ದರು. ದಂಪತಿ ನಗರದ ಹೊರಮಾವಿನಲ್ಲಿ ನೆಲೆಸಿದ್ದು, ಲಕ್ಷ್ಮಣ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ದಂಪತಿಗೆ ಆರು ತಿಂಗಳ ಗಂಡು ಮಗುವಿದೆ.
ನಾದಿನಿ ಶ್ರೀಜಾಳ ಮೇಲೆ ಮೊದಲಿನಿಂದಲೂ ವ್ಯಾಮೋಹ ಬೆಳೆಸಿಕೊಂಡಿದ್ದ ಸತ್ಯಪ್ರಸಾದ್, ಪರೋಕ್ಷವಾಗಿ ಆಕೆಯ ಸ್ನೇಹ ಬಯಸುತ್ತಿದ್ದ. ಆಕೆಯ ಗಂಡ ಲಕ್ಷ್ಮಣ್‌ನನ್ನು ಕೊಲೆ ಮಾಡಿಸಿದರೆ ಆಕೆ ವಿಧಿಯಿಲ್ಲದೆ ತನ್ನ ಮನೆ ಸೇರುತ್ತಾಳೆ ಎಂದು ಲೆಕ್ಕಾಚಾರ ಹಾಕಿ ಲಕ್ಷ್ಮಣ್‌ನನ್ನು ಕೊಲೆ ಮಾಡಲು ನಿರ್ಧರಿಸಿದ್ದ.
ಅದರಂತೆ ಹೈದ್ರಾಬಾದ್‌ನಲ್ಲಿ ಪರಿಚಯವಾದ ಗಿಡ್ಡಪನಹಳ್ಳಿಯ ದಿನೇಶ್‌ಗೆ ಈ ಮಾಹಿತಿ ನೀಡಿ ಲಕ್ಷ್ಮಣ್‌ನನ್ನು ಕೊಲೆ ಮಾಡಿದರೆ ಮುಂದೆ ತಾನು ಆರಂಭಿಸಲಿರುವ ಕಂಪನಿಯಲ್ಲಿ ಕೆಲಸ ಕೊಡುತ್ತೇನೆ ಎಂಬ ಆಮಿಷ ಒಡ್ಡಿದ್ದ. ಜತೆಗೆ ಈ ಕೃತ್ಯಕ್ಕೆ 15 ಲಕ್ಷ ರೂ. ಸುಪಾರಿ ನೀಡಿದ್ದ. ಸುಪಾರಿ ಹತ್ಯೆಗೆ ದಿನೇಶ್ ಒಪ್ಪಿದ್ದು ಆತನ ಪತ್ನಿ ಸಯೀದಾ ಕೂಡ ಒಪ್ಪಿಗೆ ನೀಡಿ ಸಹಕರಿಸಿದ್ದಳು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಬಾರಿ ಯತ್ನ, ಮೂರನೇ ಬಾರಿಗೆ ಕೊಲೆ: ಎಂಟು ತಿಂಗಳ ಹಿಂದೆಯೇ ದಿನೇಶ್‌ಗೆ ಸುಫಾರಿ ನೀಡಿದ್ದ ಸತ್ಯಪ್ರಸಾದ್, ಲಕ್ಷ್ಮಣ್‌ಕುಮಾರ್ ಫೇಸ್‌ಬುಕ್ ಅಕೌಂಟ್‌ನಿಂದ ಅವರ ಫೋಟೋ ಡೌನ್‌ಲೋಡ್ ಮಾಡಿಕೊಟ್ಟಿದ್ದ. ಮೊದಲ ಬಾರಿ ಮೂರು ಲಕ್ಷ ರೂ. ಅಡ್ವಾನ್ಸ್ ನೀಡಿದ್ದ. ಹಣ ಪಡೆದು ನಗರಕ್ಕೆ ಬಂದಿದ್ದ ದಿನೇಶ್, ಕೊಲೆ ಮಾಡಲು ಇಬ್ಬರು ಹುಡುಗರಿಗೆ ಹಣ ನೀಡಿದ್ದ. ಆದರೆ ಹಣ ಪಡೆದ ಹುಡುಗರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಇದರಿಂದ ಸಿಟ್ಟಿಗೆದ್ದ ದಿನೇಶ್, 2019ರ ಜು.16ರಂದು ಲಕ್ಷ್ಮಣ್ ಕುಮಾರ್ ವಾಸವಿದ್ದ ಅಪಾರ್ಟ್‌ಮೆಂಟ್ ಸಮೀಪ ತೆರಳಿ ಅಲ್ಲಿಯೇ ಚಾಕುವಿನಿಂದ ಕುತ್ತಿಗೆ ಕುಯ್ದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಲಕ್ಷ್ಮಣ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇದಾದ ಬಳಿಕ ದಿನೇಶ್ ದಂಪತಿ ಲಕ್ಷ್ಮಣ್‌ಕುಮಾರ್‌ನನ್ನು ಕೊಲೆ ಮಾಡಲೇಬೇಕು ಎಂದು ನಿರ್ಧರಿಸಿ ಸತ್ಯಪ್ರಸಾದ್‌ನಿಂದ 1.5 ಲಕ್ಷ ರೂ. ಹಣ ಪಡೆದು ಜ.1ರಂದು ಹೈದರಾಬಾದ್‌ನಿಂದ ನಗರಕ್ಕೆ ಆಗಮಿಸಿದ್ದರು. ಬಳಿಕ ಆರೋಪಿ ಪ್ರಶಾಂತ್ ಮತ್ತಿತರರನ್ನು ಸಂಪರ್ಕಿಸಿ ಕೃತ್ಯಕ್ಕೆ ಒಪ್ಪಿಸಿದ್ದರು.
ಆರೋಪಿಗಳ ತಂಡ ಜ.30ರಂದು ಬೆಳಗ್ಗೆಯಿಂದ ರಾತ್ರಿ 11ರವರೆಗೂ ಇಡೀ ದಿನ ಕೆ.ಆರ್.ಪುರ ಬಸ್ ಡಿಪೋ ಬಳಿ ಲಕ್ಷ್ಮಣ್ ಕುಮಾರ್ ಬೈಕ್‌ನಲ್ಲಿ ಬರಲಿದ್ದಾರೆ ಎಂದು ಕಾದಿದ್ದರು, ಆದರೆ ಅವರು ಬಂದಿರಲಿಲ್ಲ. ಮಾರನೇ ದಿನ ಮಧ್ಯಾಹ್ನ 12ಗಂಟೆವರೆಗೂ ಕಾದರೂ ಪ್ರಯೋಜನವಾಗಿರಲಿಲ್ಲ.
ಅಂತಿಮವಾಗಿ ಫೆ.3ರಂದು ಎರಡು ಕಾರು ಬೈಕ್‌ಗಳಲ್ಲಿ ಲಕ್ಷ್ಮಣ್‌ಕುಮಾರ್‌ಗಾಗಿ ಅಪಾರ್ಟ್‌ಮೆಂಟ್ ಬಳಿ ಆರೋಪಿಗಳ ತಂಡ ಕಾದಿತ್ತು. ಲಕ್ಷ್ಮಣ್ ಅವರು ಬೈಕ್‌ನಲ್ಲಿ ಹೊರಬರುತ್ತಿದ್ದಂತೆ ಅವರನ್ನು ಬೈಕ್‌ನಲ್ಲಿ ಹಿಂಭಾಲಿಸಿದ ಪ್ರಶಾಂತ್ ಹಾಗೂ ಪ್ರೇಮ್, ಬ್ರಿಡ್ಜ್ ಬಳಿ ಬೈಕ್ ಅಡ್ಡಗಟ್ಟಿ ಚಾಕುವಿನಿಂದ ಇರಿದು ಇಡೀ ತಂಡ ಪರಾರಿಯಾಗಿತ್ತು. ಅವರನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.
ಈ ಕುರಿತು ದಾಖಲಾದ ದೂರಿನ ಅನ್ವಯ ತನಿಖೆ ನಡೆಸಿದ ಎಸಿಪಿ ಮನೋಜ್ ಕುಮಾರ್ ಎ.ಇ, ಇನ್ಸ್‌ಪೆಕ್ಟರ್ ಬಿ.ಎನ್ ಅಶ್ವತ್ಥ ನಾರಾಯಣ ಸ್ವಾಮಿ ನೇತೃತ್ವದ ತಂಡ, ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಮೂರು ಕಾರು, ಒಂದು ಬೈಕ್, ಎರಡು ಚಾಕು, ಲ್ಯಾಪ್‌ಟಾಪ್ ಸೇರಿದಂತೆ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದೆ.
ಠಾಣೆಗೆ ಆಗಮಿಸಿದ್ದ ಮಾಸ್ಟರ್ ಮೈಂಡ್: ಲಕ್ಷ್ಮಣ್ ಕುಮಾರ್ ಕೊಲೆಗೆ ಸುಪಾರಿ ನೀಡಿ ಕೊಲ್ಲಿಸಿದ್ದ ಸೂತ್ರಧಾರ ಸತ್ಯಪ್ರಸಾದ್ ತನಗೆ ಏನು ಗೊತ್ತಿಲ್ಲದವನಂತೆ ನಟಿಸಿದ್ದ. ವಿಷಯ ತಿಳಿದ ಕೂಡಲೆ ಗುಂಟೂರಿನಲ್ಲಿರುವ ತನ್ನ ಅತ್ತೆಯನ್ನು ವಿಮಾನದ ಮೂಲಕ ನಗರಕ್ಕೆ ಕರೆತಂದಿದ್ದ. ಜತೆಗೆ, ಲಕ್ಷ್ಮಣ್‌ಕುಮಾರ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸುವ ತನಕ ಇಲ್ಲಿಯೇ ಇದ್ದ.
ಅಷ್ಟೇ ಅಲ್ಲದೆ ಪೊಲೀಸ್ ಠಾಣೆಗೂ ಬಂದು ಪ್ರಕರಣ ಸಂಬಂಧ ದಾಖಲಾಗಿದ್ದ ಎಫ್ಐಆರ್ ಸಹ ಪಡೆದುಕೊಂಡು ಹೋಗಿದ್ದ. ಲಕ್ಷ್ಮಣ್ ಕುಮಾರ್ ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡು ಸಂಬಂಧಿಕರಿಗೆ ಸ್ವಲ್ಪವೂ ಅನುಮಾನ ಬರದಂತೆ ನಡೆದುಕೊಂಡಿದ್ದ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಟೆಕ್ಕಿ ಲಕ್ಷ್ಮಣ್‌ಕುಮಾರ್ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದು ತನಿಖೆ ಮುಂದುವರಿಸಲಾಗಿದೆ. ಆರೋಪಿಗಳ ಪೂರ್ವಾಪರ ಹಾಗೂ ಈ ಹಿಂದೆ ಯಾವುದಾದರೂ ಕೃತ್ಯಗಳಲ್ಲಿ ಭಾಗಿಯಾಗಿದ್ದರೇ ಎಂಬುದರ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ.
-ಎಂ.ಎನ್ ಅನುಚೇತ್, ವೈಟ್‌ಫೀಲ್ಡ್ ವಿಭಾಗದ ಡಿಸಿಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.