ಹೊಸ ಮಾರ್ಗಗಳಲ್ಲಿ 2 ನಿಮಿಷಕ್ಕೊಂದು ರೈಲು?
Team Udayavani, Nov 21, 2018, 11:50 AM IST
ಬೆಂಗಳೂರು: “ನಮ್ಮ ಮೆಟ್ರೋ’ ಮೊದಲ ಹಂತದಲ್ಲಿ ನಿರೀಕ್ಷೆ ಮೀರಿ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಹೊಸ ಮಾರ್ಗಗಳಲ್ಲಿ ಕಾರ್ಯಾಚರಣೆ ವಿನ್ಯಾಸವನ್ನು ಪರಿಷ್ಕರಿಸಲು ಚಿಂತನೆ ನಡೆಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ), ಪ್ರತಿ ಎರಡು ನಿಮಿಷಕ್ಕೊಂದು ಮೆಟ್ರೋ ರೈಲು ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದೆ.
ಈಗಾಗಲೇ ಕೈಗೆತ್ತಿಕೊಂಡಿರುವ ಯೋಜನೆ ಪ್ರಕಾರ ನಾಲ್ಕು ವಿಸ್ತರಿಸಿದ ಹಾಗೂ ಎರಡು ಹೊಸ ಮಾರ್ಗಗಳೂ ಸೇರಿದಂತೆ ಎರಡನೇ ಹಂತದಲ್ಲಿ ಪ್ರತಿ ಮೂರು ನಿಮಿಷಗಳ ಅಂತರದಲ್ಲಿ ಮೆಟ್ರೋ ಕಾರ್ಯಾಚರಣೆಗೆ ಉದ್ದೇಶಿಸಲಾಗಿತ್ತು. ಇದರ ಜತೆಗೆ ಕೈಗೆತ್ತಿಕೊಂಡ ಹೊಸ ಮಾರ್ಗಗಳಲ್ಲೂ ಹೆಚ್ಚು- ಕಡಿಮೆ ಇದೇ ಅಂತರದಲ್ಲಿ ಯೋಜನೆ ವಿನ್ಯಾಸಗೊಳಿಸಲಾಗಿದೆ.
ಆದರೆ, ಅದನ್ನು ಈಗ ಎರಡು ನಿಮಿಷಕ್ಕೆ ತಗ್ಗಿಸಲು ಗಂಭೀರ ಚಿಂತನೆ ನಡೆದಿದೆ. ಅದಕ್ಕೆ ಅನುಗುಣವಾಗಿ ವಿನ್ಯಾಸ ರೂಪಿಸಲಾಗುತ್ತಿದೆ ಎಂದು ನಿಗಮದ ಉನ್ನತ ಮೂಲಗಳು ತಿಳಿಸಿವೆ. ಈಚೆಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ನೀಡಿದ ಸೂಚನೆ ಮೇರೆಗೆ ಹೊಸ ಮಾರ್ಗಗಳಾದ ಸಿಲ್ಕ್ಬೋರ್ಡ್-ಕೆ.ಆರ್. ಪುರ (17 ಕಿ.ಮೀ.), ಗೊಟ್ಟಿಗೆರೆ-ಐಐಎಂಬಿ-ನಾಗವಾರ (21.25 ಕಿ.ಮೀ.) ಹಾಗೂ ಆರ್.ವಿ. ರಸ್ತೆ-ಬೊಮ್ಮಸಂದ್ರ (18.82 ಕಿ.ಮೀ.),
ಹೆಬ್ಟಾಳ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಪ್ರತಿ ಎರಡು ನಿಮಿಷಗಳ ಅಂತರದಲ್ಲಿ ಮೆಟ್ರೋ ಕಾರ್ಯಾಚರಣೆಗೆ ಪೂರಕವಾದ ವಿನ್ಯಾಸ ರೂಪಿಸಲು ಚಿಂತನೆ ನಡೆದಿದೆ. ವಿಸ್ತರಿಸಿದ ಮಾರ್ಗಗಳಲ್ಲೂ ಇದು ಸಾಧ್ಯವಿದ್ದು, ಈ ನಿಟ್ಟಿನಲ್ಲಿಯೂ ಆಲೋಚನೆ ಮಾಡಲಾಗುತ್ತಿದೆ. ಆದರೆ, ಇದಕ್ಕೆ ಮತ್ತೆ ದೊಡ್ಡ ಪ್ರಮಾಣದ ಹೂಡಿಕೆ ಮಾಡಬೇಕಾಗುತ್ತದೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದರು.
ಒಂದು ವೇಳೆ ವಿನ್ಯಾಸಕ್ಕೆ ಅನುಗುಣವಾಗಿ ಯೋಜನೆ ರೂಪಿಸಿದರೆ, ಸಹಜವಾಗಿಯೇ ವೆಚ್ಚ ಕೂಡ ಏರಿಕೆ ಆಗಲಿದೆ. ಯಾಕೆಂದರೆ, ರೈಲುಗಳ ಸಂಚಾರ ಹೆಚ್ಚುವುದರಿಂದ ಪೂರಕವಾಗಿ ಬೋಗಿಗಳ ಸಂಖ್ಯೆ ಹೆಚ್ಚಿಸಬೇಕಾಗುತ್ತದೆ. ಸಿಗ್ನಲಿಂಗ್, ವಿದ್ಯುತ್ ಪೂರೈಕೆ ಸಾಮರ್ಥ್ಯ, ಆಪರೇಟಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲ ಹಂತದಲ್ಲೂ ಬದಲಾವಣೆ ಆಗಬೇಕಾಗುತ್ತದೆ. ಎರಡನೇ ಹಂತದಲ್ಲಿ ಅಂದಾಜು 240 ಬೋಗಿಗಳ ತಯಾರಿಕೆಗೆ ಆರ್ಡರ್ ನೀಡಲು ಬಿಎಂಆರ್‌ಸಿ ಉದ್ದೇಶಿಸಿದೆ ಅವರು ಹೇಳಿದರು.
ಸದ್ಯ “ನಮ್ಮ ಮೆಟ್ರೋ’ ಮೊದಲ ಹಂತದಲ್ಲಿ ರೈಲು ಸೇವೆಗಳ ಕನಿಷ್ಠ ಅಂತರ 3 ನಿಮಿಷ ಇದ್ದು, “ಪೀಕ್ ಅವರ್’ನಲ್ಲಿ ನೇರಳೆ ಮಾರ್ಗದಲ್ಲಿ ಪ್ರತಿ ಮೂರೂವರೆ ನಿಮಿಷಕ್ಕೊಂದು ರೈಲು ಸಂಚರಿಸುತ್ತಿದೆ. ದೆಹಲಿಯಲ್ಲಿ ಪ್ರಸ್ತುತ ಅತ್ಯಂತ ಕಡಿಮೆ ಒಂದೂವರೆ ನಿಮಿಷ ಅಂತರದಲ್ಲಿ ಮೆಟ್ರೋ ರೈಲು (3ನೇ ಹಂತದಲ್ಲಿ ಮಾತ್ರ)ಕಾರ್ಯಾಚರಣೆ ಮಾಡುತ್ತಿದೆ. ಉಳಿದ ಯಾವ ಮೆಟ್ರೋ ರೈಲುಗಳೂ ಇಷ್ಟು ಅಲ್ಪ ಅಂತರದಲ್ಲಿ ಓಡಾಡುತ್ತಿಲ್ಲ.
ಎಲ್ಲಿ ತಡವಾಗುತ್ತಿದೆ?: ಮೊದಲ ಹಂತದಲ್ಲಿ 3 ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲು ಸೇವೆ ಕಲ್ಪಿಸಲು ಸಾಧ್ಯವಿದೆ. ಆದರೆ, ಇದಕ್ಕೆ ಟರ್ಮಿನಲ್‌ಗಳಲ್ಲಿ ಹಿನ್ನಡೆ ಆಗುತ್ತಿದೆ. ಬೈಯಪ್ಪನಹಳ್ಳಿ, ಮೈಸೂರು ರಸ್ತೆ, ಯಲಚೇನಹಳ್ಳಿ ಮತ್ತು ನಾಗಸಂದ್ರದಲ್ಲಿ ಪ್ರಯಾಣಿಕರೆಲ್ಲಾ ಇಳಿದ ನಂತರ ತುಸು ದೂರ ಹೋಗಿ, ತಿರುಗಿಸಿಕೊಂಡು ಪಕ್ಕದ ಲೈನ್‌ಗೆ ಬರುತ್ತದೆ.
ಇದಕ್ಕೆ ಕನಿಷ್ಠ ಮೂರರಿಂದ ಮೂರೂವರೆ ನಿಮಿಷ ಹಿಡಿಯುತ್ತಿದೆ. ಈ ಸಮಯ ತಗ್ಗಿಸುವ ಅವಶ್ಯಕತೆ ಇದೆ ಎಂದು ಕಾರ್ಯಾಚರಣೆ ವಿಭಾಗದ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ. ಪ್ರಸ್ತುತ ಮ್ಯಾನುವಲ್ ರೈಲನ್ನು ತಿರುಗಿಸಿಕೊಂಡು ಬರಲಾಗುತ್ತಿದೆ. ಆಟೋ ಟರ್ನ್ ಬ್ಯಾಕ್ ವ್ಯವಸ್ಥೆ ಮೂಲಕ ಇದು ಸಾಧ್ಯವಿದೆ ಎಂದೂ ಅವರು ವಿವರಿಸಿದರು.
96 ಬೋಗಿಗಳಿಗೆ ಆರ್ಡರ್: ಈ ಮಧ್ಯೆ ಬಿಇಎಂಎಲ್ (ಭಾರತ್ ಅರ್ಥ್ ಮೂವರ್ ಲಿ.,)ಗೆ ಆರು ಬೋಗಿಗಳನ್ನಾಗಿ ಪರಿವರ್ತಿಸಲು 150 ಬೋಗಿಗಳ ಆರ್ಡರ್ ನೀಡಿದ್ದು, ಈ ಪೈಕಿ 9 ಬೋಗಿಗಳನ್ನು ಪೂರೈಸಲಾಗಿದೆ. ಇದರ ಜತೆಗೆ ಮುಂದಿನ ದಿನಗಳಲ್ಲಿ ಮೊದಲ ಹಂತದಲ್ಲಿ ಕಾರ್ಯಾಚರಣೆ ಅಂತರ ಕಡಿಮೆಯಿಂದ ಬೋಗಿಗಳ ಸಂಖ್ಯೆ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ 96 ಬೋಗಿಗಳಿಗೆ ಆರ್ಡರ್ ನೀಡಲಾಗಿದೆ.
ಡಿಟಿಜಿ ತಂತ್ರಜ್ಞಾನ: “ನಮ್ಮ ಮೆಟ್ರೋ’ ಡಿಟಿಜಿ (ಡಿಸ್ಟನ್ಸ್ ಟು ಗೋ) ತಂತ್ರಜ್ಞಾನ ಅಳವಡಿಸಿಕೊಂಡಿದೆ. ಆಗ ಚಾಲ್ತಿಯಲ್ಲಿದ್ದದ್ದೂ ಇದೇ. ಆದರೆ, ಈಗ ಇದರ ಮುಂದುವರಿದ ಸಿಬಿಟಿಸಿ (ಕಮ್ಯುನಿಕೇಷನ್ ಬೇಸ್ಡ್ ಟ್ರೈನ್ ಕಂಟ್ರೋಲ್) ತಂತ್ರಜ್ಞಾನ. ಡಿಟಿಜಿ ಅಡಿ ಬ್ಲಾಕ್ ಸಿಸ್ಟ್‌ಂ ಇರುತ್ತದೆ. ನಿರ್ದಿಷ್ಟ ಬ್ಲಾಕ್‌ಗಳಲ್ಲಿ ರೈಲಿನ ಪ್ರವೇಶವನ್ನು ಸೂಚಿಸುತ್ತದೆ. ಆದರೆ, ಸಿಬಿಟಿಸಿನಲ್ಲಿ ಪ್ರತಿ ರೈಲಿನ ನಿರ್ದಿಷ್ಟ ಸ್ಥಳವನ್ನು ನಿಖರವಾಗಿ ಹೇಳುತ್ತದೆ.
ಮೆಟ್ರೋ ಹೊಸ ಮಾರ್ಗಗಳಲ್ಲಿ ಎರಡು ನಿಮಿಷಕ್ಕೊಂದು ರೈಲುಗಳ ಸೇವೆ ಕಲ್ಪಿಸುವಂತೆ ಯೋಜನೆಯನ್ನು ವಿನ್ಯಾಸಗೊಳಿಸಲು ಚಿಂತನೆ ನಡೆದಿದ್ದು, ಈ ನಿಟ್ಟಿನಲ್ಲಿ ಸಾಧಕ-ಬಾಧಕಗಳ ಕುರಿತ ಚರ್ಚೆ ನಡೆದಿದೆ. ವಿಸ್ತರಿಸಿದ ಮಾರ್ಗಗಳಲ್ಲೂ ಇದೇ ವಿನ್ಯಾಸ ರೂಪಿಸಲು ಚಿಂತನೆ ನಡೆದಿದೆ. 2030ರ ನಂತರ ಇದರ ಅವಶ್ಯಕತೆ ಇದೆ.
-ಅಜಯ್ ಸೇಠ್, ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿ.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.