![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
Team Udayavani, Nov 4, 2017, 11:02 AM IST
ಬೆಂಗಳೂರು: “ದೇವರು ವರ ಕೊಟ್ರೂ ಪೂಜಾರಿ ವರ ಕೊಡಲಿಲ್ಲ’ ಅನ್ನೋ ಮಾತು ಆಗಾಗ ನಮ್ಮ ಕಿವಿಗೆ ಬೀಳುವುದು ಕಾಮನ್ನು. ಅದರಲ್ಲೂ ಸರ್ಕಾರಿ ಕಚೇರಿ, ಕೆಲಸಗಳಿಗೆ ಈ ಮಾತು ಹೆಚ್ಚು ಅನ್ವಯವಾಗುತ್ತದೆ. ಈಗ ಈ ಮಾತು ಅನ್ವಯವಾಗಿರುವುದು ಬಿಎಂಟಿಸಿ ಸಿಬ್ಬಂದಿಗೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಂತರ ನಿಗಮಗಳ ವರ್ಗಾವಣೆ ಆಗಿದೆ. ಆದರೆ ವರ್ಗಾವಣೆ ಆದೇಶದ ಬೆನ್ನಲ್ಲೇ ಬಿಎಂಟಿಸಿಗೆ ಸಿಬ್ಬಂದಿ ಕೊರತೆ ಎದುರಾಗಲಿದೆ. ಹೀಗಾಗಿ ಈ ಕೊರತೆ ನೀಗುವವರೆಗೂ ಬಿಎಂಟಿಸಿ ಸಿಬ್ಬಂದಿಗೆ “ಬಿಡುಗಡೆ ಭಾಗ್ಯ’ ಸಿಗುವುದು ಅನುಮಾನ.
ಒಂದೆಡೆ ಅಂತರ ನಿಗಮ ವರ್ಗಾವಣೆ ನೀತಿಯಿಂದ ಅತಿಹೆಚ್ಚು ಜನ ಬಿಎಂಟಿಸಿಯಿಂದ ವರ್ಗವಾಗುತ್ತಿದ್ದಾರೆ. ಮತ್ತೂಂದೆಡೆ ಸಿಬ್ಬಂದಿ ಕೊರತೆ ಬೇರೆ ಕಾಡುತ್ತಿದೆ. ಹಾಗಾಗಿ, ಸಿಬ್ಬಂದಿಗೆ ವರ್ಗಾವಣೆಗೆ ಆದೇಶ ಹೊರಬಂದಿದ್ದರೂ, ತಕ್ಷಣಕ್ಕೆ ಬಿಡುಗಡೆ ಭಾಗ್ಯ ಸಿಗುವುದಿಲ್ಲ. ಇದಕ್ಕಾಗಿ ಕನಿಷ್ಠ ಮೂರು ತಿಂಗಳು ಕಾಯಲೇಬೇಕಾಗುತ್ತದೆ.
ಸಾವಿರ ಸಿಬ್ಬಂದಿ ಕೊರತೆ: ಅಂತರ ನಿಗಮ ವರ್ಗಾವಣೆ ಮೂಲಕ 3,718 ನೌಕರರು ವರ್ಗಾವಣೆ ಹೊಂದುತ್ತಿದ್ದಾರೆ. ಈ ಪೈಕಿ 945 ಚಾಲಕರು ಮತ್ತು ನಿರ್ವಾಹಕರು ಹಾಗೂ 1,080 ತಾಂತ್ರಿಕ ಸಿಬ್ಬಂದಿ ಸೇರಿ 2,298 ಜನ ಬಿಎಂಟಿಸಿ ಸಿಬ್ಬಂದಿ ಇದ್ದಾರೆ. ನಗರ ಸಾರಿಗೆ ಸಂಸ್ಥೆ ಈಗಾಗಲೇ ಸಾವಿರ ಸಿಬ್ಬಂದಿಯ ಕೊರತೆ ಎದುರಿಸುತ್ತಿದೆ.
ಇದರಿಂದ ಬಿಎಂಟಿಸಿ ಕಾರ್ಯಾಚರಣೆ ಮೇಲೆ ಪ್ರಭಾವ ಉಂಟಾಗಲಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ. ಆದ್ದರಿಂದ ಈಗಾಗಲೇ ವರ್ಗಾವಣೆಗೊಂಡವರ ಸ್ಥಳಕ್ಕೆ ಮತ್ತೂಬ್ಬರನ್ನು ನೇಮಕ ಮಾಡುವವರೆಗೂ ವರ್ಗವಾದವರನ್ನು ಸೇವೆಯಿಂದ ಬಿಡುಗಡೆ ಮಾಡದಿರಲು ಸಂಸ್ಥೆ ನಿರ್ಧರಿಸಿದೆ.
ಬಿಎಂಟಿಸಿಯಲ್ಲಿ ಮೂರು ಸಾವಿರ ಹುದ್ದೆಗಳ ಭರ್ತಿಗೆ ಈ ಮೊದಲೇ ಸರ್ಕಾರ ಅನುಮತಿ ನೀಡಿದ್ದು, ಈಗಷ್ಟೇ ನೇಮಕಾತಿ ಪ್ರಕ್ರಿಯೆ ಚುರುಕಾಗಿದ್ದು, ಮೂರು ತಿಂಗಳಲ್ಲಿ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ. ಹೊಸದಾಗಿ ನೇಮಕವಾದವರು ಸೇವೆಗೆ ಬರುತ್ತಿದ್ದಂತೆ ವರ್ಗಾವಣೆಗೊಂಡವರನ್ನು “ರಿಲೀವ್’ ಮಾಡಲಾಗುವುದು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
3,178 ನೌಕರರಲ್ಲಿ 1,956 ಜನ ತಾಂತ್ರಿಕ ಸಿಬ್ಬಂದಿ ಇದ್ದಾರೆ. 1,308 ಚಾಲಕ ಮತ್ತು ನಿರ್ವಾಹಕರಾಗಿದ್ದಾರೆ. ಇನ್ನು ಹೀಗೆ ವರ್ಗಾವಣೆಗೊಂಡವರ ಪೈಕಿ ಅರ್ಧಕ್ಕರ್ಧ ನೌಕರರು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಎಸ್‌ಆರ್‌ಟಿಸಿ)ಗೆ ಹೋಗುತ್ತಿದ್ದಾರೆ.
ಅಂದರೆ, 1,525 ಜನರ ಈ ನಿಗಮಕ್ಕೆ ವರ್ಗಾವಣೆ ಆಗುತ್ತಿದ್ದಾರೆ. ಕೆಎಸ್‌ಆರ್‌ಟಿಸಿಗೆ 1,287 ಸಿಬ್ಬಂದಿ ತೆರಳಲಿದ್ದಾರೆ. ಇದಕ್ಕೆ ಪ್ರತಿಯಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬುಕೆಎಸ್‌ಆರ್‌ಟಿಸಿ)ಗೆ ಕ್ರಮವಾಗಿ 124 ಹಾಗೂ 782 ನೌಕರರು ವರ್ಗಾವಣೆಯಾಗಿ ಬರಲಿದ್ದಾರೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.
ತಗ್ಗಲಿದೆ ಆರ್ಥಿಕ ಹೊರೆ: ಇನ್ನು ಅಂತರ ನಿಗಮಗಳ ವರ್ಗಾವಣೆಯಿಂದ ಬಿಎಂಟಿಸಿಗೆ ಲಾಭವೂ ಆಗಲಿದೆ. ಹೊಸದಾಗಿ ನೇಮಕಗೊಳ್ಳುವ ಚಾಲಕ ಅಥವಾ ನಿರ್ವಾಹಕರಿಗೆ ನಿಗಮಗಳಲ್ಲಿ 10ರಿಂದ 20 ಸಾವಿರ ರೂ. ವೇತನ ನೀಡಲಾಗುತ್ತದೆ.
ಮುಂದಿನ ಎರಡು-ಮೂರು ವರ್ಷಗಳು ಹೊಸದಾಗಿ ನೇಮಕಗೊಂಡವರು ಟ್ರೈನಿ ಆಗಿಯೇ ಕಾರ್ಯನಿರ್ವಹಿಸಲಿದ್ದಾರೆ. ಆದರೆ, ಈಗ ಜೇಷ್ಠತೆ ಆಧಾರದಲ್ಲಿ ವರ್ಗಾವಣೆಗೊಳ್ಳುತ್ತಿರುವ ಸಿಬ್ಬಂದಿಗೆ 35ರಿಂದ 40 ಸಾವಿರ ರೂ. ವೇತನ ಇದೆ. ಎರಡು ಸಾವಿರಕ್ಕೂ ಅಧಿಕ ಜನ ವರ್ಗಾವಣೆ ಆಗುತ್ತಿರುವುದರಿಂದ ಬಿಎಂಟಿಸಿ ಮೇಲೆ ಕೋಟ್ಯಂತರ ರೂ. ಹೊರೆ ಕಡಿಮೆ ಆಗಲಿದೆ.
ಆದರೆ, ಈಗಾಗಲೇ ನಷ್ಟದಲ್ಲಿರುವ ವಾಯವ್ಯ ಮತ್ತು ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಇದು ಹೊರೆಯಾಗಲಿದೆ. ಈಗ ವರ್ಗಾವಣೆಯಾಗಿ ಬರುವ ಸಿಬ್ಬಂದಿಗೆ ಏಕಾಏಕಿ ಅಲ್ಲಿನ ನಿಗಮಗಳು ಮಾಸಿಕ 35ರಿಂದ 40 ಸಾವಿರ ರೂ. ವೇತನ ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
You seem to have an Ad Blocker on.
To continue reading, please turn it off or whitelist Udayavani.