Team Udayavani, Apr 5, 2019, 12:28 PM IST
ಬೆಂಗಳೂರು : ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದು ಕೇಂದ್ರ ಚುನಾವಣಾ ಆಯೋಗದ ವರ್ಗಾವಣೆ ಮಾರ್ಗಸೂಚಿಗಳು ಅನ್ವಯ ಆಗುವ ಮೊದಲೇ ರಾಜ್ಯ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಮಟ್ಟದ ವರ್ಗಾವಣೆ ನಡೆದಿದ್ದು, ಇದರಲ್ಲಿ “ಆಯಕಟ್ಟಿನ ಜಾಗ’ ಹುಡುಕಿಕೊಂಡಿರುವ ವಾಸನೆ ಬಡಿಯುತ್ತಿದೆ. ಮತ್ತೂಂದೆಡೆ ಈ ವರ್ಗಾವಣೆ ಹಿಂದೆ ಚುನಾಯಿತ ಜನಪ್ರತಿನಿಧಿಗಳ “ಸ್ವಹಿತಾಸಕ್ತಿ’ಯೂ ಇದೆ ಎಂಬ ಬಲವಾದ ಅನುಮಾನ ಕೂಡ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ, ಇದೊಂದು ಪೂರ್ವ ನಿಯೋಜಿತ “ತಂತ್ರಗಾರಿಕೆ’ ಎಂದೂ ಹೇಳಲಾಗಿದೆ.
ಪೊಲೀಸ್ ಇಲಾಖೆ ಅಥವಾ ಸರ್ಕಾರದ ಪ್ರಕಾರ, ಐಜಿಪಿ ಹಂತದಿಂದ ಕಾನ್‌ಸ್ಟೆಬಲ್‌ವರೆಗಿನ ಎಲ್ಲ ಹಂತದ ಅಧಿಕಾರಿಗಳು ಕನಿಷ್ಠ ಒಂದರಿಂದ ಎರಡು ವರ್ಷಗಳ ಕಾಲ ಒಂದೇ ಕಡೆ ಕರ್ತವ್ಯನಿರ್ವಹಿಸಬೇಕು. ನಂತರ ಮೂರು ವರ್ಷದೊಳಗೆ ಬೇರೆಡೆ ವರ್ಗಾವಣೆ ಮಾಡಬಹುದು. ಇನ್ನು ಪಾರದರ್ಶಕ ಚುನಾವಣೆ ನಡೆಸಲು ಐಜಿಪಿ, ಎಸ್ಪಿ, ಡಿವೈಎಸ್ಪಿ, ಇನ್‌ಸ್ಪೆಕ್ಟರ್, ಸಬ್‌ಇನ್‌ಸ್ಪೆಕ್ಟರ್ ಹಾಗೂ ಕಾನ್‌ಸ್ಟೆಬಲ್‌ವರೆಗಿನ ಅಧಿಕಾರಿಗಳು, ಒಂದೇ ಸ್ಥಳದಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ್ದರೆ ಅಥವಾ ಸ್ವಂತ ಜಿಲ್ಲೆಯಲ್ಲಿ ಅಥವಾ ಈ ಹಿಂದಿನ ಚುನಾವಣೆ ಸಮಯದಲ್ಲಿ ಅವರ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿದ್ದರೆ, ಅಂತಹ ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಬೇಕು ಎಂಬುದು ಚುನಾವಣಾ ಆಯೋಗದ ನಿಯಮ.
ಇದನ್ನೇ “ಅಸ್ತ್ರ’ವನ್ನಾಗಿ ಬಳಸಿಕೊಳ್ಳುವ ಜನಪ್ರತಿನಿಧಿಗಳು, ಚುನಾವಣಾ ಪೂರ್ವದಲ್ಲಿಯೇ ತಮ್ಮೊಡನೆ ವಿಶ್ವಾಸ ಹೊಂದಿರುವ ಅಧಿಕಾರಿಗಳನ್ನು ತಮ್ಮ ಕ್ಷೇತ್ರ ವ್ಯಾಪ್ತಿಯ ಆಯಕಟ್ಟಿನ ಸ್ಥಳಗಳಿಗೆ ನಿಯೋಜಿಸಿಕೊಳ್ಳುತ್ತಾರೆ. ಚುನಾವಣೆ ಸಂದರ್ಭದಲ್ಲೂ ತಮ್ಮ ಪರ ಕೆಲಸ ಮಾಡಿಸಿಕೊಳ್ಳುವ ಪರಿಪಾಠ ಮುಂದುವರಿಸುತ್ತಾರೆ. ಈ ಮೂಲಕ ಮಾರ್ಗಸೂಚಿಗಳನ್ನು ಪಾಲನೆ ಮಾಡುವ ನೆಪದಲ್ಲಿ ಚುನಾವಣಾ ಆಯೋಗದ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಪೊಲೀಸ್ ಇಲಾಖೆಯಲ್ಲಿ ಚುನಾವಣಾ ಪೂರ್ವ ಅಥವಾ ನಂತರದಲ್ಲಿ ನಡೆಯುವ ಬಹುತೇಕ ವರ್ಗಾವಣೆಗಳೂ ಸ್ಥಳೀಯ ಜನಪ್ರತಿನಿಧಿಗಳ ಸ್ವಹಿತಾಸಕ್ತಿಯಿಂದ ಕೂಡಿರುತ್ತದೆ. ಇದಕ್ಕೆ ಅಚ್ಚರಿ ಪಡುವ ಅಗತ್ಯವಿಲ್ಲ. ಅಲ್ಲದೆ, ವರ್ಗಾವಣೆ ಒಂದು ದೊಡ್ಡ ದಂಧೆ. ಇದರಿಂದ ಇಡೀ ಆಡಳಿತ ವ್ಯವಸ್ಥೆಯೇ ಹಾಳುಗುತ್ತಿದೆ. ಇದು ಎಲ್ಲ ಇಲಾಖೆಯಲ್ಲೂ ಹಣ ಮಾಡುವ ದಂಧೆಯಾಗಿ ಮಾರ್ಪಟ್ಟಿದೆ. ತಮ್ಮೊಡನೆ ವಿಶ್ವಾಸದಿಂದ ಇರುವ ಪೊಲೀಸ್ ಅಧಿಕಾರಿ ಬೇರೆಡೆ ವರ್ಗಾವಣೆ ಆಗಲು ಸ್ಥಳೀಯ ಜನಪ್ರತಿನಿಧಿ ಎಂದಿಗೂ ಅವಕಾಶ ಕೊಡುವುದಿಲ್ಲ. ಪ್ರಮುಖವಾಗಿ ಚುನಾವಣೆ ಸಂದರ್ಭದಲ್ಲಿ ಅದು ಸಾಧ್ಯವೇ ಇಲ್ಲ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕರೊಬ್ಬರು ಅಭಿಪ್ರಾಯಪಡುತ್ತಾರೆ.
ಫೆಬ್ರವರಿವರೆಗಿನ ವರ್ಗಾವಣೆಗಳು ಡಿಸೆಂಬರ್ 2018ರಿಂದ 2019 ಫೆಬ್ರವರಿ ಅಂತ್ಯದವರೆಗೆ ಅಂದಾಜು (ಚುನಾವಣೆ ಪೂರ್ವ) 45 ಮಂದಿ ಐಪಿಎಸ್, ಐದು ಮಂದಿ ಎಸ್ಪಿ (ನಾನ್ ಐಪಿಎಸ್), 44 ಡಿವೈಎಸ್ಪಿ, 439 ಇನ್‌ಸ್ಪೆಕ್ಟರ್, ಆರು ಪಿಎಸ್‌ಐ ಹಂತದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
● ಮೋಹನ್ ಭದ್ರಾವತಿ