ಶಕ್ತಿ ಕೇಂದ್ರಗಳ ಉದ್ಯಾನಗಳಿಗೆ ಸಂಸ್ಕರಿಸಿದ ನೀರು
Team Udayavani, Mar 10, 2017, 12:04 PM IST
ಬೆಂಗಳೂರು: ಕಬ್ಬನ್‌ಪಾರ್ಕ್‌ನಲ್ಲಿರುವ ನೀರು ಸಂಸ್ಕರಣ ಘಟಕದ ಸಾಮರ್ಥ್ಯ ಹೆಚ್ಚಿಸಲು ರಾಜ್ಯ ಸರ್ಕಾರ ಅನುದಾನ ಪೂರೈಸಿದ್ದು, ಈ ಘಟಕದ ಮೂಲಕ ಕಬ್ಬನ್‌ಪಾರ್ಕ್ ಸೇರಿದಂತೆ ಸುತ್ತಮುತ್ತಲ ಉದ್ಯಾನಗಳಿಗೂ ಸಂಸ್ಕರಿಸಿದ ನೀರು ಪೂರೈಕೆ ಮಾಡಲು ಜಲಮಂಡಳಿ ತೀರ್ಮಾನಿಸಿದೆ.
ಕಬ್ಬನ್‌ಪಾರ್ಕ್, ರಾಜಭವನದ ಉದ್ಯಾನ, ವಿಧಾನಸೌಧ, ವಿಕಾಸಸೌಧ ಉದ್ಯಾನವನಗಳು, ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನ ವನ, ಮೆಟ್ರೋ ಗಾರ್ಡನ್, ಗಾಲ್ಪ್ ಕ್ರೀಡಾಂಗ ಣದ ಹುಲ್ಲುಹಾಸಿಗೆ ಕೊಳಚೆ ನೀರನ್ನು ಸಂಗ್ರಹಿಸಿ ಎಸ್‌ಟಿಪಿ ಘಟಕದಲ್ಲಿ ಸಂಸ್ಕರಿಸಿ ಪೂರೈಸುವ ಕುರಿತು ತೋಟಗಾರಿಕೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಎರಡು ದಶಲಕ್ಷ ಲೀಟರ್ ಸಾಮರ್ಥ್ಯದ ಕಬ್ಬನ್‌ಪಾರ್ಕ್‌ನ ಎಸ್‌ಟಿಪಿ ಘಟಕವನ್ನು ನಾಲ್ಕು ದಶಲಕ್ಷ ಲೀಟರ್‌ಗೆ ಮೇಲ್ದರ್ಜೆಗೇರಿಸುವ 28 ಕೋಟಿ ರೂ. ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು ಹಣ ಬಿಡುಗಡೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಎಸ್‌ಟಿಪಿ ಘಟಕ ಅಭಿವೃದ್ಧಿಪಡಿಸುವ ಜವಾಬ್ದಾರಿ ಹೊತ್ತಿರುವ ಜಲಮಂಡಳಿ, ಈಗಾಗಲೇ ಎಸ್‌ಟಿಪಿ ಘಟಕದ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ಅಷ್ಟೇ ಅಲ್ಲದೆ ಕಾಮಗಾರಿ ಆರಂಭಿಸಲು ದೆಹಲಿ ಮೂಲದ ಎಸ್‌ಯುಇಝಡ್ ಕಂಪನಿಗೆ ಅನು ಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಜಲಮಂಡಳಿ, ಕಳೆದ 10-12 ವರ್ಷಗಳ ಹಿಂದೆ ಕಬ್ಬನ್‌ಪಾರ್ಕ್‌ಗೆ ನೀರು ಪೂರೈಕೆ ಮಾಡುವ ಉದ್ದೇಶದಿಂದ 1.5 ದಶಲಕ್ಷ ಲೀಟರ್ ಸಾಮರ್ಥ್ಯದ ಎಸ್‌ಟಿಪಿ ಘಟಕ ಸ್ಥಾಪಿಸಿತ್ತು. ನಂತರ ಆ ಘಟಕದ ಸ್ಯಾಮರ್ಥ 2 ದಶಲಕ್ಷ ಲೀಟರ್‌ಗೆ ವಿಸ್ತರಿಸಲಾಗಿತ್ತು. ಇದರಿಂದ ಕಬ್ಬನ್‌ಪಾರ್ಕಿನ ಸುಮಾರು 150 ಎಕರೆ ಪ್ರದೇಶದ ಮರಗಿಡಗಳಿಗೆ ತುಂತುರು ನೀರಾವರಿ ಮೂಲಕ ಸಂಸ್ಕರಿಸಿದ ನೀರು ಹಾಯಿಸಲಾಗುತ್ತಿದೆ.
ಕೊಳಚೆ ನೀರಿನ ಮೂಲ: ಚಾಲುಕ್ಯ ಹೋಟೆಲ್, ವಿಂಡ್ಸರ್ ಮ್ಯಾನರ್, ದಿ ಕ್ಯಾಪಿಟಲ್ ಹೋಟೆಲ್‌ಗಳು, ವಿಧಾನಸೌಧ, ವಿಕಾಸಸೌಧ ಸೇರಿದಂತೆ ಇತರ ವಸತಿ ಪ್ರದೇಶಗಳು, ವಾಣಿಜ್ಯ ಘಟಕಗಳು, ವಸಂತ ನಗರ ಸೇರಿದಂತೆ ಹೈಗ್ರೌಂಡ್‌ನ ಜಲಮಂಡಳಿ ವಿಭಾಗ ಸೇರಿದಂತೆ ಸುತ್ತಮುತ್ತಲ ಪ್ರದೇಶ, ಸಂಪಂಗಿರಾಮನಗರ, ಕಂಠೀರವ ಕ್ರೀಡಾಂಗಣದಿಂದ ಹರಿದು ಬರುವ ಕೊಳಚೆ ನೀರು ಕಬ್ಬನ್ ಪಾರ್ಕ್ ಎಸ್‌ಟಿಪಿ ಘಟಕದಲ್ಲಿ ಸಂಸ್ಕರಣೆಗೊಳ್ಳಲಿದೆ.
197 ಎಕರೆ ಉದ್ಯಾನಕ್ಕೆ ನೀರು: ಕಬ್ಬನ್ ಪಾರ್ಕ್‌ನ ಎಸ್‌ಟಿಪಿ ಘಟಕದ ಸಾಮರ್ಥ್ಯ 4 ದಶಲಕ್ಷ ಲೀಟರ್‌ಗೆ ಹೆಚ್ಚುತ್ತಿರುವುದರಿಂದ ಕಬ್ಬನ್‌ಪಾರ್ಕ್‌ನ 150 ಎಕರೆ, ವಿಧಾನಸೌಧ 23 ಎಕರೆ, ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನ 17.40 ಎಕರೆ, ರಾಜಭವನದ 11.20 ಎಕರೆ, ಹೈಕೋರ್ಟ್ 4, ಮೆಟ್ರೋ ಗಾರ್ಡನ್ 4 ಹೀಗೆ ಒಟ್ಟು 197ಕ್ಕೂ ಹೆಚ್ಚು ಎಕರೆ ಇರುವ ಉದ್ಯಾನಗಳಿಗೆ ಕೊಳಚೆ ಮತ್ತು ಸೋರಿಕೆ ನೀರನ್ನು ಸಂಸ್ಕರಿಸಿ ಪೂರೈಕೆ ಮಾಡುಲಾಗುವುದು ಎಂದು ಜಲಮಂಡಳಿ ಪ್ರಧಾನ ಎಂಜಿನಿಯರ್ ಕೆಂಪರಾಮಯ್ಯ ತಿಳಿಸುತ್ತಾರೆ.
ಸಂಸ್ಕರಿಸಿದ ನೀರು ಪೂರೈಕೆಯಿಂದ ಶಕ್ತಿ ಕೇಂದ್ರಗಳ ಉದ್ಯಾನವನಕ್ಕೆಂದು ಪ್ರತಿ ವಾರಕ್ಕೆ ಬಳಸುತ್ತಿದ್ದ 6ರಿಂದ 8 ಲಕ್ಷ ಲೀಟರ್ ಬೋರ್‌ವೆಲ್ ಮತ್ತು ಕಾವೇರಿ ನೀರನ್ನು ಇತರ ಉಪಯೋಗಗಳಿಗೆ ಬಳಸಲಾಗುವುದು ಎಂದು ಕಬ್ಬನ್‌ಪಾರ್ಕ್ ಉಪನಿರ್ದೇಶಕ ಮಹಾಂತೇಶ್ ಮುರುಗೋಡು ಮಾಹಿತಿ ನೀಡಿದ್ದಾರೆ.
ಲಾಲ್‌ಬಾಗ್‌ನಲ್ಲೂ ಬಳಕೆ: ಲಾಲ್‌ಬಾಗ್‌ನ ಸುಮಾರು 160 ಎಕರೆ ಪ್ರದೇಶಕ್ಕೆ ತುಂತುರು ನೀರಾವರಿ ಮೂಲಕ ನೀರು ಹಾಯಿಸಲಾಗುತ್ತಿದೆ. 2003-04ರ ಅವಧಿಯಲ್ಲಿ ಅಲ್ಲಿ ಸ್ಥಾಪಿಸಲಾಗಿರುವ ಎಸ್‌ಟಿಪಿ ಮೂಲಕವೇ 1.50 ದಶಲಕ್ಷ ಲೀಟರ್ ಸಂಸ್ಕರಿಸಿದ ನೀರು ಲಭ್ಯವಿದೆ. ಅದನ್ನು ಬೇಸಿಗೆ ಸಂದರ್ಭದಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತಿದೆ.
ಅಲ್ಲದೆ, ಲಾಲ್‌ಬಾಗ್‌ನಲ್ಲಿ ಕೆರೆ, ಬೋರ್‌ವೆಲ್‌ಗಳಿದ್ದು, ಇತರ ಉಪಯೋಗಕ್ಕೆ ಬಳಕೆ ಮಾಡಲಾಗುತ್ತಿದೆ. ಸಿದ್ದಾಪುರ, ಕನಕನಪಾಳ್ಯ, ಅಶೋಕ ಪಿಲ್ಲರ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಂದ ಹರಿದು ಬರುವ ಕೊಳಚೆ ನೀರನ್ನು ಎಸ್‌ಟಿಪಿ ಘಟಕದಲ್ಲಿ ಸಂಗ್ರಹಿಸಿ ಬಳಕೆ ಮಾಡಲಾಗುತ್ತಿದೆ. ಬೇಸಿಗೆಗೆ ಅಗತ್ಯವಾದಷ್ಟು ನೀರಿನ ಲಭ್ಯತೆ ಇದೆ ಎಂದು ಲಾಲ್‌ಬಾಗ್ ಜಂಟಿ ನಿರ್ದೇಶಕ ಎಂ.ಜಗದೀಶ್ ತಿಳಿಸಿದ್ದಾರೆ.
* ಸಂಪತ್ ತರೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.