ಹಣಕಾಸು ಖಾತೆಗೆ ತ್ರಿಕೋನ ಪೈಪೋಟಿ
Team Udayavani, May 29, 2018, 6:20 AM IST
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಕಗ್ಗಂಟು ಬಿಚ್ಚಿಕೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸೋಮವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ಮಧ್ಯೆ ಸುದೀರ್ಘ ಮಾತುಕತೆ ನಡೆಯಿತಾದರೂ ಪ್ರಮುಖ ಖಾತೆಗಳಿಗೆ ಎರಡೂ ಪಕ್ಷಗಳು ಪಟ್ಟು ಹಿಡಿದಿರುವುದರಿಂದ ಯಾವುದೇ ನಿರ್ಧಾರಕ್ಕೆ ಬಾರದೆ ಸಭೆ ಅಪೂರ್ಣಗೊಂಡಿದೆ.
ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಧರಿಸಿರುವುದಕ್ಕೆ ಕಾಂಗ್ರೆಸ್‌ನಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಅಲ್ಲದೆ, ಜೆಡಿಎಸ್‌ಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟಿರುವುದರಿಂದ ಕೈಗಾರಿಕೆ, ಕಂದಾಯ, ಅಬಕಾರಿ, ಜಲ ಸಂಪನ್ಮೂಲ ಮುಂತಾದ ಪ್ರಮುಖ ಖಾತೆಗಳು ಬೇಕು ಹಾಗೂ ಎರಡನೇ ಉಪಮುಖ್ಯಮಂತ್ರಿ ಸ್ಥಾನದ ಬೇಡಿಕೆಯನ್ನೂ ಕಾಂಗ್ರೆಸ್‌ನ ಸಚಿವಕಾಂಕ್ಷಿಗಳು ಮುಂದಿಟ್ಟಿದ್ದಾರೆ. ಆದರೆ, ಜೆಡಿಎಸ್ ಇದಕ್ಕೆ ಒಪ್ಪುತ್ತಿಲ್ಲ. ಹೀಗಾಗಿ ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು ವಾಪಸ್ ಆದ ಬಳಿಕವೇ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದಾರೆ.
ಸಂಪುಟ ವಿಸ್ತರಣೆ ಕಗ್ಗಂಟಾಗಿರುವುದನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಮ… ನಬಿ ಆಜಾದ್ ಅವರೊಂದಿಗೆ ಸಚಿವ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಸಂಪುಟ ರಚನೆ ಮತ್ತು ಖಾತೆ ಹಂಚಿಕೆ ಮಾಡಲಾಗುವುದು. ಹಣಕಾಸು ಖಾತೆಗೆ ಎರಡೂ ಪಕ್ಷಗಳಲ್ಲಿ ಬೇಡಿಕೆಇರುವ ಬಗ್ಗೆ ರಾಹುಲ…ಗಾಂಧಿ ಜತೆ ಚರ್ಚಿಸಿ ಇತ್ಯರ್ಥಪಡಿಸಲಾಗುವುದು. ಒಂದೇ ಸರ್ಕಾರವಿ¨ªಾಗಲೂ ಸಂಪುಟ ವಿಸ್ತರಣೆ ಮಾಡುವಾಗ ಸಮಸ್ಯೆಗಳು ಎದುರಾಗುತ್ತವೆ. ಹೀಗಿರುವಾಗ ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟ ವಿಸ್ತರಣೆಗೆ ಪೂರಕವಾಗಿ ಮಾತುಕತೆ ಮತ್ತು ಗೊಂದಲ ಕಂಡುಬರುವುದು ಸಹಜ. ಉಭಯ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಹಣಕಾಸು, ಜಲಸಂಪನ್ಮೂಲ ಜೆಡಿಎಸ್‌ಗೆ ಬೇಕು:
ಈ ಮಧ್ಯೆ ರೈತರ ಕೃಷಿ ಸಾಲ ಮನ್ನಾ ಸೇರಿದಂತೆ ಹಲವು ಯೋಜನೆಗಳನ್ನು ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ. ಅಲ್ಲದೆ, ನೀರಾವರಿ ಯೋಜನೆಗಳಿಗಾಗಿ ಐದು ವರ್ಷದಲ್ಲಿ 1.5 ಲಕ್ಷ ರೂ. ವೆಚ್ಚ ಮಾಡುವ ಬಗ್ಗೆಯೂ ಭರವಸೆ ನೀಡಿದೆ. ಹೀಗಾಗಿ ಈ ಎರಡು ಖಾತೆಗಳು ನಮಗೇ ಬೇಕು ಎಂಬುದು ಜೆಡಿಎಸ್‌ನ ಬೇಡಿಕೆ. ಹಣಕಾಸು ಖಾತೆ ಬಿಟ್ಟುಕೊಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಒಪ್ಪುತ್ತಿಲ್ಲವಾದರೆ, ಜಲ ಸಂಪನ್ಮೂಲ ಇಲಾಖೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಈಗಾಗಲೇ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಲೋಕೋಪಯೋಗಿ ಖಾತೆ ಮುಖ್ಯಮಂತ್ರಿಗಳ ಸಹೋದರ ಎಚ್.ಡಿ.ರೇವಣ್ಣ ಅವರಿಗೆ ಬಿಟ್ಟುಕೊಡಲೇ ಬೇಕಾಗಿದೆ. ಅವರು ಸಂಪುಟ ಸೇರುವುದು ಖಾತರಿಯಾಗಿರುವುದರಿಂದ ಈ ಖಾತೆ ಬಿಟ್ಟು ಬೇರೆ ಖಾತೆ ಒಪ್ಪುವುದಿಲ್ಲ. ಹೀಗಾಗಿ ಜಲ ಸಂಪನ್ಮೂಲ, ಅಬಕಾರಿ, ಕೈಗಾರಿಕೆ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಸಾರಿಗೆ ಖಾತೆಗಳು ನಮಗೆ ಬೇಕು ಎಂಬುದು ಕಾಂಗ್ರೆಸ್‌ನ ಪಟ್ಟು.
ಹಾಗಾಗಿ ಯಾರಿಗೆ ಯಾವ ಖಾತೆ ಎಂಬ ಬಗ್ಗೆ ಒಂದು ಅಂತಿಮ ನಿರ್ಧಾರಕ್ಕೆ ಬರುವ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಗುಲಾಂ ನಬಿ ಆಜಾದ್ ಸಮಾಲೋಚನೆ ನಡೆಸಿದ್ದಾರೆ. ಆದರೆ, ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ವಿಚಾರಗಳನ್ನು ರಾಹುಲ್ ಗಾಂಧಿ ಅವರ ಗಮನಕ್ಕೆ ತಂದು ಸಂಪುಟ ರಚನೆ ಹಾದಿಯನ್ನು ಸುಗಮಗೊಳಿಸುವುದಾಗಿ ಗುಲಾಂ ನಬಿ ಆಜಾದ್ ಭರವಸೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಎರಡು ಡಿಸಿಎಂ ಆದರೆ ನನಗೂ ಬೇಕು: ಡಿಕೆಶಿ
ಸಮ್ಮಿಶ್ರ ಸರ್ಕಾರದಲ್ಲಿ ಎರಡು ಉಪಮುಖ್ಯಮಂತ್ರಿ ಸ್ಥಾನ ಕಲ್ಪಿಸುವ ಬಗ್ಗೆ ಚರ್ಚೆ ತೀವ್ರಗೊಳ್ಳುತ್ತಿದ್ದಂತೆ, ಎರಡನೇ ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸುವುದಾದರೆ ಅದು ತಮಗೆ ಬೇಕು ಎಂದು ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಪಕ್ಷದ ವರಿಷ್ಠರಿಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಇದರೊಂದಿಗೆ ಎರಡನೇ ಉಪಮುಖ್ಯಮಂತ್ರಿ ಸ್ಥಾನ ಸಿಕ್ಕಿದರೆ ಅದನ್ನು ವೀರಶೈವ ಲಿಂಗಾಯತರಿಗೆ ನೀಡಬೇಕು ಎಂಬ ಯೋಚನೆಗೆ ಅಡ್ಡಿಯಾದಂತಾಗಿದೆ.
ಸಮ್ಮಿಶ್ರ ಸರ್ಕಾರ ರಚನೆ ವೇಳೆ ಕಾಂಗ್ರೆಸ್ ಶಾಸಕರನ್ನು ಜತೆಗಿಟ್ಟುಕೊಳ್ಳುವಲ್ಲಿ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರಿಂದ ಹೈಕಮಾಂಡ್ ಸಹಜವಾಗಿಯೇ ಅವರ ಬಗ್ಗೆ ಹೆಚ್ಚು ಕಾಳಜಿ ಹೊಂದಿದೆ. ಹಾಗೆಂದು ಶಿವಕುಮಾರ್‌ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ವೀರಶೈವ ಲಿಂಗಾಯತರು ತಿರುಗಿಬೀಳುವ ಸಾಧ್ಯತೆ ಇದೆ. ಹೀಗಾಗಿ ಇಕ್ಕಟ್ಟಿನಲ್ಲಿ ಸಿಲುಕಿರುವ ಕಾಂಗ್ರೆಸ್ ಎರಡನೇ ಉಪಮುಖ್ಯಮಂತ್ರಿ ವಿಚಾರದಿಂದ ಹಿಂದೆ ಸರಿಯುವ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.
ಸಂಪುಟ ರಚನೆ ವಿಳಂಬ: ಜೆಡಿಎಸ್ ಅಸಮಾಧಾನ
ಈ ಮಧ್ಯೆ ಯಾವುದೇ ಷರತ್ತಿಲ್ಲದೆ ಸರ್ಕಾರ ರಚನೆಗೆ ಬೆಂಬಲ ನೀಡಿ ಇದೀಗ ಎರಡನೇ ಉಪಮುಖ್ಯಮಂತ್ರಿ ಮತ್ತು ಪ್ರಮುಖ ಖಾತೆಗಳು ಬೇಕು ಎಂದು ಹೇಳಿ ಸಂಪುಟ ರಚನೆ ವಿಳಂಬವಾಗಲು ಕಾರಣವಾಗುತ್ತಿರುವ ಕಾಂಗ್ರೆಸ್ ವರಸೆ ಬಗ್ಗೆ ಜೆಡಿಎಸ್‌ನಲ್ಲಿ ಅಸಮಾಧಾನ ತೀವ್ರಗೊಳ್ಳುತ್ತಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸೋಮವಾರ ಸಚಿವ ಸಂಪುಟ ಸದಸ್ಯರು ಪ್ರಮಾಣವಚನ ಸ್ವೀಕರಿಸಬೇಕಿತ್ತು. ಆದರೆ, ಪ್ರಮುಖ ಖಾತೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಟ್ಟುಹಿಡಿರುವುದರಿಂದ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಹೀಗಾಗಿ ಸಚಿವರಾಗಲು ತುದಿಗಾಲಲ್ಲಿ ನಿಂತಿರುವ ಜೆಡಿಎಸ್ ಶಾಸಕರಲ್ಲಿ ಅಸಮಾಧಾನ ತೀವ್ರಗೊಂಡಿದ್ದು, ಷರತ್ತುಗಳಿಲ್ಲದೆ ಸರ್ಕಾರ ರಚಿಸಲು ಬೆಂಬಲ ನೀಡಿ ಈಗ ಪ್ರಮುಖ ಖಾತೆಗಳಿಗೆ ಪಟ್ಟು ಹಿಡಿದಿರುವುದು ಎಷ್ಟು ಸರಿ ಎಂದು ಪಕ್ಷದ ನಾಯಕರ ಬಳಿ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿಲ್ಲ.
ಈಗಾಗಲೇ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಎಂಬುದು ಈಗಾಗಲೇ ನಿರ್ಧಾರವಾಗಿದೆ. ಹೀಗಾಗಿ ಖಾತೆಗಳ ಹಂಚಿಕೆ ವಿಚಾರವನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಬಿಟ್ಟುಕೊಡಬೇಕು. ಬೇರೆಯವರು ಮಧ್ಯಪ್ರವೇಶಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಯಾವುದೇ ಗೊಂದಲವಿಲ್ಲದೆ ಸುಗಮವಾಗಿ ಸಂಪುಟ ವಿಸ್ತರಣೆ ಮಾಡಲಾಗುವುದು. ಇಂದು ಅಥವಾ ನಾಳೆಯೊಳಗೆ ಎಲ್ಲವೂ ಇತ್ಯರ್ಥವಾಗಲಿದೆ. ವಿದೇಶ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೆಹಲಿಗೆ ಮರಳಿದ ನಂತರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ದಿನಾಂಕ ನಿಗದಿಪಡಿಸಲಾಗುವುದು.
– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.