ಬಸ್ ಆದ್ಯತಾ ಪಥ ಅಯೋಮಯ
Team Udayavani, Nov 15, 2019, 10:45 AM IST
ಬೆಂಗಳೂರು: ಸಂಚಾರ ದಟ್ಟಣೆ ನಿರ್ವಹಣೆಯೇ ದೊಡ್ಡ ಸವಾಲಾಗಿರುವ ನಗರದಲ್ಲಿ ಸುಗಮ ಸಂಚಾರಕ್ಕೆ ನಾನಾ ಪ್ರಯೋಗಗಳು ನಡೆಯುತ್ತಿವೆ.
ಇದರ ಮುಂದುವರಿದ ಭಾಗವಾಗಿ ಇತ್ತೀಚೆಗೆ ಆರಂಭಗೊಂಡಿರುವ “ಬಸ್ ಆದ್ಯತಾ ಪಥ’ (ಬಸ್‌ಲೇನ್) ಕೂಡ ಒಂದು. ಆದರೆ, ಸದ್ಯದ ಮಟ್ಟಿಗೆ ಇದ ಯಶಸ್ವಿಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಅಲ್ಲದೆ ಲೋಕಾರ್ಪಣೆ ಕೂಡ ಅನುಮಾನವಾಗಿದೆ. ಸಂಚಾರ ಪೊಲೀಸ್ ವಿಭಾಗ, ಬಿಎಂಟಿಸಿ ಮತ್ತು ಬಿಬಿಎಂಪಿ ಸಹಯೋಗದಲ್ಲಿ ನಿರ್ಮಿಸಲಾದ ಈ ಪಥದಲ್ಲಿ ಒಂದೆಡೆ ಸಾರ್ವಜನಿಕರ ಅಸಹಕಾರ. ಮತ್ತೂಂದೆಡೆ ವೈಜ್ಞಾನಿಕವಾಗಿ ನಿರ್ಮಾಣಗೊಳ್ಳದ ಪಥದ ನಿರ್ವಹಣೆ ಹೇಗೆ ಎಂಬುದರ ಗೊಂದಲ. ಈ ಮಧ್ಯೆ ಉಪ ಚುನಾವಣೆ ನೀತಿ ಸಂಹಿತೆ ಬಂದಿದೆ. ಇದರಿಂದ ಯೋಜನೆ ಲೋಕಾರ್ಪಣೆ ಭಾಗ್ಯ ದೊರೆಯುತ್ತಿಲ್ಲ.
ದೂರು; ಬೋಲಾರ್ಡ್ಸ್ ತೆರವು: ಸುಮಾರು 13 ಕಿ.ಮೀ. ಉದ್ದದ ಈ ಮಾರ್ಗದ 12 ಮೀಟರ್ (ಅಗಲ) ರಸ್ತೆಯ ಪೈಕಿ 3.5 ಮೀಟರ್ ರಸ್ತೆಯನ್ನು ಆದ್ಯತಾ ಪಥಕ್ಕೆ ಬಳಸಲಾಗಿದೆ. ಆರಂಭಿಕವಾಗಿ ಆರು-ಏಳು ಕಿ.ಮೀ. ರಸ್ತೆಯಲ್ಲಿ ಕನಿಷ್ಠ ಎರಡೂವರೆ ಅಡಿಗೆ ಒಂದರಂತೆ ನೂರಾರು ಕಬ್ಬಿಣದ ಬೋಲಾರ್ಡ್ಸ್, ಕ್ಯಾಟ್ ಐಸ್‌ಗಳನ್ನು ಅಳವಡಿಸಲಾಗಿತ್ತು. ಆದರೆ, ನಿರಂತರವಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದುದರಿಂದ ಸಾರ್ವಜನಿಕರೇ ನೇರವಾಗಿ ಬಿಬಿಎಂಪಿಗೆ ದೂರು ನೀಡಿದ್ದರು. ಹೀಗಾಗಿ ಕೆಲ ದಿನಗಳ ಹಿಂದೆಷ್ಟೇ ಬೋಲಾರ್ಡ್‌ಗಳನ್ನು ತೆರೆವುಗೊಳಿಸಲಾಗಿದೆ. ಇದೀಗ ಈ ಮಾರ್ಗದುದ್ದಕ್ಕೂ ಹಳದಿ ಬಣ್ಣದಲ್ಲಿ ಎರಡು ಸಾಲುಗಳನ್ನು ಎಳೆಯಲಾಗಿದೆ. ಜತೆಗೆ ಬಸ್ ನಿಲ್ದಾಣಗಳ ಮುಂಭಾಗ (ಬಸ್ ನಿಲ್ಲುವ ಸ್ಥಳ) ಕೆಂಪು ಬಣ್ಣ ಲೇಪನ ಮಾಡಲಾಗುತ್ತಿದೆ.
ಸಹಕಾರ ನೀಡದ ವಾಹನ ಸವಾರರು: ಸರ್ಕಾರದ ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ. ಆದರೆ,ಬಸ್ ಆದ್ಯತಾ ಪಥಕ್ಕೆ ವಾಹನ ಸವಾರರ ಸಹಕಾರ ಇಲ್ಲವಾಗಿದೆ. ಬೋಲಾರ್ಡ್‌ಗಳನ್ನು ಅಳವಡಿಸಿದಾಗ, ಕೆಲ ದ್ವಿಚಕ್ರ ವಾಹನ ಸವಾರರು ಅವುಗಳ ಮಧ್ಯೆಯೇ ನುಸುಳಿಕೊಂಡು ವೇಗವಾಗಿ ಹೋಗತ್ತಾರೆ. ಹೀಗಾಗಿ, ರಸ್ತೆ ಅಪಘಾತಗಳು ಸಂಭವಿಸುತ್ತಿದ್ದವು. ಆದ್ದರಿಂದ ಬೋಲಾರ್ಡ್‌ಗಳನ್ನು ತೆರವುಗೊಳಿಸಿ, ಬ್ಯಾರಿಕೇಡ್ ಗಳನ್ನು ಹಾಕಲಾಗಿತ್ತು. ಅವುಗಳನ್ನು ನೆಲಕ್ಕೆ ಕೆಡವುತ್ತಾರೆ ಎಂದು ಸಂಚಾರ ಪೊಲೀಸರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.
ನಿರ್ವಹಣೆ ಕಷ್ಟ ಸಾಧ್ಯ: ಕೇವಲ ಹಳದಿ ಪಟ್ಟಿ ಬಳಿದು ಈ ಮಾರ್ಗದಲ್ಲಿ ಬೇರೆ ವಾಹನಗಳಿಗೆ ಪ್ರವೇಶ ನೀಡದಂತೆ ನಿರ್ಬಂಧ ವಿಧಿಸಿ, ನಿರ್ವಹಣೆ ಮಾಡಿ ಎಂದರೆ ಕಷ್ಟವಾಗುತ್ತದೆ. ಈ ಹಿಂದೆ ಅಳವಡಿಸಿದ್ದ ಬೋಲಾರ್ಡ್‌ಗಳ ನಡುವೆ ಸರಳುಗಳನ್ನು ಹಾಕಬೇಕಿತ್ತು. ಕೆಲ ವಾಹನ ಸವಾರರು ರಸ್ತೆ ಬದಿಯೇ ವಾಹನ ನಿಲ್ಲಿಸಿ ಹೋಗುತ್ತಾರೆ. ಅಂತಹ ವಾಹನ ಸವಾರರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಬಿಬಿಎಂಪಿ ಹಳದಿ ಬಣ್ಣ ಬಳಿಯುವ ಬದಲು ಪ್ರತ್ಯೇಕ ಪಥಕ್ಕಾಗಿ ಸಿಮೆಂಟ್‌ನ ಬ್ಯಾರಿಕೇಡ್ ಗಳನ್ನು ನಿರ್ಮಿಸಿದರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಸಂಚಾರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ.
-ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು
Puttur: ಅನಾಥ ಸ್ಥಿತಿಯಲ್ಲಿ ಎರಡು ಬೈಕ್; ವಶಕ್ಕೆ ಪಡೆದುಕೊಂಡ ಪೊಲೀಸರು
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.