ಸುನಾಮಿ ಕಿಟ್ಟಿ, ಸಹಚರರ ಸೆರೆ
Team Udayavani, Mar 4, 2018, 11:57 AM IST
ಬೆಂಗಳೂರು: ಅಪಹರಣ ಹಾಗೂ ಕೊಲೆ ಯತ್ನ ಪ್ರಕರಣದಲ್ಲಿ “ರಿಯಾಲಿಟಿ ಸ್ಟಾರ್’ ಖ್ಯಾತಿಯ ನಟ ಸುನಾಮಿ ಕಿಟ್ಟಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುನಾಮಿ ಕಿಟ್ಟಿ, ಯೋಗೇಶ್, ಸಂತೋಷ್ ಹಾಗೂ ಅರ್ಜುನ್ ಅಲಿಯಾಸ್ ಮುತ್ತಪ್ಪ ಬಂಧಿತರು.
ಬಾರ್ ಸಪ್ಲೆಯರ್ ಗಿರೀಶ್ ನೀಡಿದ ದೂರನ್ನಾಧರಿಸಿ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು, ಸುನಾಮಿ ಕಿಟ್ಟಿ ಮತ್ತವರ ಸ್ನೇಹಿತರನ್ನು ಬಂಧಿಸಿ ಅಪಹರಣ ಮತ್ತು ಕೊಲೆಯತ್ನ ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದಾರೆ. ಕಿಟ್ಟಿಯ ಸ್ನೇಹಿತ ಸುನೀಲ್‌ನ ಪತ್ನಿ ದೀಪಾ ಜತೆ ಅನೈತಿಕ ಸಂಬಂಧ ಹೊಂದಿದ್ದ ನ್ನಲಾದ ತೌಶಿತ್ ಮತ್ತು ಬಾರ್ ಸಪ್ಲೆಯರ್ ಗಿರೀಶ್‌ನನ್ನು ಸುನಾಮಿ ಕಿಟ್ಟಿ, ಸಹಚರರು ಅಪಹರಿಸಿ ಹಲ್ಲೆ ನಡೆಸಿದ್ದರು.
ನಡೆದಿರುವುದೇನು?: ಪತ್ನಿ ದೀಪಾಗೆ ಬಾರ್ ಸಪ್ಲೆಯರ್ ಗಿರೀಶ್ ಜತೆ ಸ್ನೇಹವಿದೆ ಎಂದು ಫೆ.28ರಂದು ಸುನೀಲ್, ಸುನಾಮಿ ಕಿಟ್ಟಿ ಬಳಿ ಹೇಳಿದ್ದ. ಗಿರೀಶ್‌ಗೆ ಬುದ್ಧಿ ಕಲಿಸಲು ನಿರ್ಧರಿಸಿದ ಸುನಾಮಿ ಕಿಟ್ಟಿ, ಗೆಳೆಯರ ಜತೆ ಮರಿಯಪ್ಪನಪಾಳ್ಯದ ಕುಟೀರ ಪಾರ್ಕ್ ಲ್ಯಾಂಡ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ಸಪ್ಲೆಯರ್ ಗಿರೀಶ್‌ನನ್ನು ಅಪಹರಿಸಿ ಹಲ್ಲೆ ನಡೆಸಿದ್ದರು.
ಈ ವೇಳೆ “ನನ್ನ ಹಾಗೂ ದೀಪಾ ನಡುವೆ ಯಾವುದೇ ಸಂಬಂಧಿವಿಲ್ಲ. ನಮ್ಮ ಬಾರ್‌ಗೆ ದೀಪಾ ತನ್ನ ಸ್ನೇಹಿತ ತೌಶಿತ್ ಜತೆ ಬರುತ್ತಿದ್ದರು. ಬರುವ ಮುನ್ನ ಟೇಬಲ್ ಕಾಯ್ದಿಡಲು ನನಗೆ ಫೋನ್ ಮಾಡುತ್ತಿದ್ದರು,’ ಎಂದು ಗಿರೀಶ್ ತಿಳಿಸಿದ್ದಾನೆ.
ನಂತರ ಗಿರೀಶ್ ಮೂಲಕವೇ ತಾವಿದ್ದ ಸ್ಥಳಕ್ಕೆ ತೌಶಿತ್‌ನನ್ನು ಕರೆಸಿಕೊಂಡ ಆರೋಪಿಗಳು, ಆತನನ್ನು ಹೊರಮಾವು ಬಳಿಯ ತೋಟದ ಮನೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಪಿಸ್ತೂಲ್ ತೋರಿಸಿ ಪ್ರಾಣ ಬೆದರಿಕೆ ಹಾಕಿ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ಪರಸ್ಪರ ಪ್ರೀತಿಸುತ್ತಿದ್ದ ದೀಪಾ ಮತ್ತು ತೌಶಿತ್, ಕುಟೀರ ಪಾರ್ಕ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಭೇಟಿಯಾಗುತ್ತಿದ್ದರು. ಬಾರ್ ಸಪ್ಲೆಯರ್ ಗಿರೀಶ್‌ನ ನಂಬರ್ ಪಡೆದಿದ್ದ ದೀಪಾ, ರೆಸ್ಟೋರೆಂಟ್‌ಗೆ ಬರುವ ಮೊದಲು ಗಿರೀಶ್‌ಗೆ ಕರೆ ಮಾಡಿ ಟೇಬಲ್ ರಿಸರ್ವ್ ಮಾಡುತ್ತಿದ್ದರು.
ಫೆ.25ರಂದು ಸಂಜೆ 6 ಗಂಟೆಗೆ ದೀಪಾ, ತೌಶಿತ್ ಜತೆ ಬಾರ್‌ಗೆ ಬಂದಿದ್ದು, ಬಿಯರ್ ಮತ್ತು ವೈನ್ ಆರ್ಡ್‌ರ್ ಮಾಡಿದ್ದಾರೆ. ಕೆಲ ಹೊತ್ತಿನ ಬಳಿಕ ಇದ್ದಕ್ಕಿದ್ದಂತೆ ಇಬ್ಬರು ಗಾಬರಿಯಿಂದ ಎದ್ದು, “ಸಮಸ್ಯೆಯಾಗಿದೆ ಒಂದು ಗಂಟೆ ಬಳಿಕ ಬಂದು ಬಿಲ್ ಕೊಡುತ್ತೇವೆ’ ಎಂದು ಗಿರೀಸ್‌ಗೆ ಹೇಳಿ ಹೋಗಿದ್ದರು.
ಎರಡು ಗಂಟೆ ಬಳಿಕ ಗಿರೀಶ್‌ಗೆ ಕರೆ ಮಾಡಿದ ತೌಶಿತ್, “ದೀಪಾ ಜತೆ ಊಟಕ್ಕೆ ಬಂದ ವಿಚಾರ ಆಕೆಯ ಪತಿ ಸುನಿಲ್‌ಗೆ ಗೊತ್ತಾಗಿದೆ. ಒಂದು ವೇಳೆ ಆತ ನಿನ್ನ ನಂಬರ್‌ಗೆ ಕರೆ ಮಾಡಿದರೆ ರಿಸಿವ್ ಮಾಡಬೇಡ’ ಎಂದು ಹೇಳಿ ಸುನಿಲ್ ಮೊಬೈಲ್ ನಂಬರ್ ಕೂಡ ನೀಡಿದ್ದ. ಹೀಗಾಗಿ ಗಿರೀಶ್ ಆ ನಂಬರ್‌ನಿಂದ ಬಂದ ಯಾವುದೇ ಕಾಲ್ ರಿಸಿವ್ ಮಾಡಿಲ್ಲ.
ಆದರೆ, ಗಿರೀಶ್, ದೀಪಾ ಜತೆ ಸ್ನೇಹ ಹೊಂದಿದ್ದಾನೆ ಎಂದು ಭಾವಿಸಿದ್ದ ಪತಿ ಸುನಿಲ್, ಕಿಟ್ಟಿ ಮೂಲಕ ಅಪಹರಣಕ್ಕೆ ಸಂಚು ರೂಪಿಸಿದ್ದ. ದೀಪಾ ಜತೆ ತನಗೆ ಯಾವುದೇ ಸಂಬಂಧವಿಲ್ಲ ಎಂದು ಗಿರೀಶ್ ತಿಳಿಸಿದ ನಂತರ, ಆತನಿಗೆ ದೀಪಾರ ಫೋಟೋ ತೋರಿಸಲಾಗಿತ್ತು. ಆಗ, “ಈಕೆ ನಮ್ಮ ಹೋಟೆಲ್‌ಗೆ ತೌಶಿತ್ ಎಂಬಾತನ ಜತೆ ಬರುತ್ತಿದ್ದರು’ ಎಂದು ಹೇಳಿದ್ದ. ಈ ವೇಳೆ ಆರೋಪಿಗಳು ಗಿರೀಶ್ ಬಳಿಯಿದ್ದ ಹತ್ತು ಸಾವಿರ ರೂ. ನಗದು, ಮೊಬೈಲ್, ಡಿಎಲ್ ಕಿತ್ತುಕೊಂಡಿದ್ದರು.
ರಾತ್ರಿ 11 ಗಂಟೆ ಸುಮಾರಿಗೆ ಗೊರಗುಂಟೆ ಪಾಳ್ಯದ ಸಿಗ್ನಲ್ ಬಳಿ ಬಂದ ತೌಶಿತ್‌ನನ್ನು ದುಷ್ಕರ್ಮಿಗಳು ಅಪಹರಿಸಿ ತೋಟದ ಮನೆಗೆ ಕರೆದೊಯ್ದು ಹಲ್ಲೆ ನಡೆಸಿದ್ದರು. ಬಳಿಕ ತೌಶಿತ್‌ನ ಮೊಬೈಲ್ ಕಸಿದುಕೊಂಡು ನೋಡಿದ ಸುನಿಲ್, ಪತ್ನಿ ದೀಪಾ ಜತೆ ನಡೆಸಿದ ವಾಟ್ಸ್‌ಆ್ಯಪ್ ಸಂದೇಶಗಳನ್ನು ಕಂಡು ತೌಶಿತ್‌ನ ತಲೆಗೆ ಪಿಸ್ತೂಲ್ ಇಟ್ಟು ಬೆದರಿಸಿದ್ದ.
ಆಗ “ನಾನು, ದೀಪಾ ಮೊದಲಿನಿಂದಲೂ ಪ್ರೀತಿಸುತ್ತಿದ್ದೆವು. ಆದರೆ, ನಮ್ಮಿಬ್ಬರ ನಡುವೆ ಯಾವುದೇ ಸಂಬಂಧವಿಲ್ಲ ಎಂದಿದ್ದ. ಬಳಿಕ ದುಷ್ಕರ್ಮಿಗಳು ಇಬ್ಬರಿಗೂ ಎಚ್ಚರಿಕೆ ನೀಡಿ 100 ರೂ. ಹಾಗೂ ಇತರೆ ವಸ್ತುಗಳನ್ನು ಕೊಟ್ಟು ಕಳುಹಿಸಿದ್ದರು. ಈ ಸಂಬಂಧ ಮಾ.2ರಂದು ಗಿರೀಶ್ ಜ್ಞಾನಭಾರತಿ ಠಾಣೆಯಲ್ಲಿ ದೂರು ನೀಡಿದ್ದ.
ಪತ್ತೆಯಾಗಿದ್ದು ಹೇಗೆ?: ಸುನಾಮಿ ಕಿಟ್ಟಿ ಮತ್ತು ಅರ್ಜುನ್ ಅಲಿಯಾಸ್ ಮುತ್ತಪ್ಪ ಎಂಬಾತನನ್ನು ಬೆನ್ನತ್ತಿದ ಪೊಲೀಸರು, ಆರೋಪಿಗಳ ಮೊಬೈಲ್ ನೆಟವರ್ಕ್ ಪತ್ತೆ ಹಚ್ಚಿದ್ದರು. ಗುರುವಾರ ನಿರ್ಮಾಪಕ ಪಿ.ಮೂರ್ತಿ ಹುಟ್ಟುಹಬ್ಬ ಇದ್ದಿದ್ದರಿಂದ ಅನ್ನಪೂರ್ಣೇಶ್ವರಿ ನಗರದ ಮಾಳಗಾಳದಲ್ಲಿರುವ ಮೂರ್ತಿ ಕಚೇರಿಗೆ ಆರೋಪಿಗಳು ಬಂದಾಗ ಪೊಲೀಸರು ಬಂಧಿಸಿದ್ದರು. ಬಳಿಕ ಇವರು ನೀಡಿದ ಮಾಹಿತಿ ಆಧರಿಸಿ ಇತರ ಆರೋಪಿಗಳನ್ನು ಬಂಧಿಸಲಾಗಿದೆ. ಪಿ.ಮೂರ್ತಿ ರೌಡಿಶೀಟರ್ ಮುಲಾನ ಶಿಷ್ಯ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುನಾಮಿ ಕಿಟ್ಟಿ ಯಾರು?: ಮೈಸೂರಿನ ಎಚ್.ಡಿ.ಕೋಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ಪ್ರದೀಪ್ ಅಲಿಯಾಸ್ ಸುನಾಮಿ ಕಿಟ್ಟಿ, ಸಾಹಸ ಪ್ರದರ್ಶನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ. ಈ ಹಿನ್ನೆಲೆಯಲ್ಲಿ 2013ರಲ್ಲಿ ಖಾಸಗಿ ವಾಹಿನಿವೊಂದರಲ್ಲಿ ಆರಂಭವಾದ “ಇಂಡಿಯನ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, 90 ದಿನಗಳ ರಿಯಾಲಿಟಿ ಶೋನಲ್ಲಿ ಉತ್ತಮಪ್ರದರ್ಶನ ನೀಡಿ ವಿಜೇತನಾಗಿ, 10 ಲಕ್ಷ ರೂ. ಬಹುಮಾನ ಕೂಡ ಗಳಿಸಿದ್ದ.
ಬಳಿಕ “ಡ್ಯಾನ್ಸಿಂಗ್ ಸ್ಟಾರ್’ ರಿಯಾಲಿಟಿ ಶೋನಲ್ಲಿಯೂ ವಿಜೇತನಾಗಿದ್ದ. “ಬಿಗ್‌ಬಾಸ್’ ಸೀಸನ್3ರಲ್ಲೂ ಪ್ರಬಲ ಸ್ಪರ್ಧಿಯಾಗಿದ್ದ. ಅಷ್ಟೇ ಅಲ್ಲದೇ, ಡ್ಯಾನ್ಸ್ ಶೋ ಒಂದಲ್ಲಿ ತೀರ್ಪುಗಾರನಾಗಿದ್ದ. ಇದೇ ವೇಳೆ ಆಲ್ಬಂವೊಂದರಲ್ಲಿ “ಒಂದು ಕ್ವಾಟ್ರಾ ಹೊಡ್ದಂಗೈತೆ ಮನ್ಸು’ ಎಂಬ ಹಾಡು ಹಾಡಿ ಗಾಯನ ಕ್ಷೇತ್ರಕ್ಕೂ ಕಾಲಿರಿಸಿದ್ದ. ಪ್ರಸ್ತುತ ಪಿ.ಮೂರ್ತಿ ನಿರ್ಮಾಣದ “ಆದಿವಾಸಿ’ ಸಿನಿಮಾದಲ್ಲಿ ಸುನಾಮಿ ಕಿಟ್ಟಿ ಅಭಿನಯಿಸುತ್ತಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.