ಮದ್ಯದ ಅಮಲಿನಲ್ಲಿ ಮಹಡಿಯಿಂದ ಬಿದ್ದು, ಇಬ್ಬರು ದುರ್ಮರಣ
Team Udayavani, Jun 23, 2019, 3:07 AM IST
ಬೆಂಗಳೂರು: ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಚರ್ಚ್‌ಸ್ಟ್ರೀಟ್‌ನಲ್ಲಿ ರಾತ್ರಿ ಗಸ್ತಿನಲ್ಲಿರುವಾಗಲೇ ಮದ್ಯದ ಅಮಲಿನಲ್ಲಿ ಮಹಿಳಾ ಸಾಫ್ಟ್ವೇರ್ ಎಂಜಿನಿಯರ್ ಹಾಗೂ ಆಕೆಯ ಸ್ನೇಹಿತ ಪಬ್‌ವೊಂದರ ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಸಂಜಯ್‌ನಗರದ ಆರ್‌ಎಂವಿ ಎಕ್ಸ್‌ಟೆನ್ಷನ್ ನಿವಾಸಿ ಪವನ್ ಅತ್ತಾವರ್(36) ಮತ್ತು ಆರ್.ಟಿ.ನಗರದ ಗಂಗಾನಗರ ನಿವಾಸಿ ವೇದಾ ಯಾದವ್(31)ಮೃತರು.
ಶುಕ್ರವಾರ ರಾತ್ರಿ 11.30ರ ಸುಮಾರಿಗೆ ದುರ್ಘಟನೆ ನಡೆದಿದ್ದು, ಈ ಸಂಬಂಧ ಪಬ್‌ನ ಮಾಲೀಕ ಚಂದನ್, ಕಟ್ಟಡ ಮಾಲೀಕ ಸುಧೀರ್ ಶೆಟ್ಟಿ ಹಾಗೂ ಇತರರ ವಿರುದ್ಧ ಕಬ್ಬನ್‌ಪಾರ್ಕ್ ಠಾಣೆಯಲ್ಲಿ ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಾಗಿದೆ. ಶನಿವಾರ ಅಪರಾಹ್ನ ಬೌರಿಂಗ್ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಶಿವಮೊಗ್ಗ ಮೂಲದ ನಿವೃತ್ತ ಮುಖ್ಯ ಎಂಜಿನಿಯರ್‌ವೊಬ್ಬರ ಪುತ್ರ ಪವನ್ ಅತ್ತಾವರ್‌ಗೆ ಮದುವೆಯಾಗಿದ್ದು, ಪತ್ನಿಯಿಂದ ವಿಚ್ಛೇಧನ ಕೋರಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮಹಿಳಾ ಸಾಫ್ಟ್ವೇರ್ ಎಂಜಿನಿಯರ್ ವೇದಾ ಯಾದವ್ ಸಹ ಪತಿಯಿಂದ ದೂರವಾಗಿದ್ದು, ಐದು ವರ್ಷದ ಮಗಳ ಜತೆ ಗಂಗಾನಗರದಲ್ಲಿ ವಾಸವಾಗಿದ್ದಾರೆ.
ಕೆಲ ತಿಂಗಳಿಂದ ಇಬ್ಬರ ನಡುವೆ ಪರಿಚಯವಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಚರ್ಚ್‌ಸ್ಟ್ರೀಟ್‌ನಲ್ಲಿರುವ ಮೂರು ಅಂತಸ್ತಿನ ಕಟ್ಟಡದ ಎರಡನೇ ಮಹಡಿಯಲ್ಲಿರುವ ಹ್ಯಾಶ್ ಬಿಯರ್ ಪಬ್‌ಗ ಪವನ್ ತಮ್ಮ ಸ್ನೇಹಿತೆ ವೇದಾ ಯಾದವ್, ಸ್ನೇಹಿತ ದೀಪಕ್ ರಾವ್ ಜತೆ ಹೋಗಿದ್ದಾರೆ ಎಂದು ಪೊಲೀಸರು ಹೇಳಿದರು.
ಆಯಾ ತಪ್ಪಿ ಬಿದ್ದು ಸಾವು: ಕಟ್ಟಡದ ಎರಡನೇ ಮಹಡಿಯಲ್ಲಿರುವ ಪಬ್‌ನಲ್ಲಿ ತಡರಾತ್ರಿ 11.30ರವರೆಗೆ ಮೂವರು ಕಂಠಪೂರ್ತಿ ಮದ್ಯ ಸೇವಿಸಿದ್ದು, ನಂತರ ಮೂವರು ಹೊರಬರುತ್ತಿದ್ದರು. ಈ ವೇಳೆ ದೀಪಕ್ ರಾವ್ ಪಬ್‌ನ ಬಿಲ್ ಪಾವತಿಸಿ ಲಿಫ್ಟ್ನಲ್ಲಿ ಹೋಗೋಣ ಎಂದು ಪವನ್ ಮತ್ತು ವೇದಾಗೆ ಹೇಳಿದ್ದಾರೆ. ಆದರೆ, ಇಬ್ಬರು ಸ್ವಲ್ಪ ಕೆಲಸ ಇದೆ ಎಂದು ಮೆಟ್ಟಿಲುಗಳ ಮೂಲಕ ಇಳಿಯುತ್ತಿದ್ದರು.
ನಾಲ್ಕು ಮೆಟ್ಟಿಲು ಇಳಿಯುತ್ತಿದ್ದಂತೆ ಆಯಾ ತಪ್ಪಿ ವೇದಾ ಏಕಾಏಕಿ ಪವನ್ ಮೇಲೆ ಒರಗಿದ್ದು, ಪವನ್ ಕೂಡ ನಿಯಂತ್ರಣ ಕಳೆದುಕೊಂಡಿದ್ದಾರೆ. ಹೀಗಾಗಿ ಇಬ್ಬರು ಎರಡು ಮತ್ತು ಒಂದನೇ ಮಹಡಿಯ ಮೆಟ್ಟಿಲುಗಳ ಮಧ್ಯೆ ಇರುವ ವೆಂಟಿಲೇಶನ್ ಕಿಟಕಿ ಮೇಲೆ ಬಿದ್ದಿದ್ದಾರೆ. ಕಿಟಕಿಗೆ ಡ್ರೀಲ್ ಅಥವಾ ಬೇರೆ ಯಾವುದೇ ಭದ್ರತೆ ಒದಗಿಸದ ಕಾರಣ ಇಬ್ಬರು ಕೆಳಗೆ ಬಿದ್ದಿದ್ದು, ಕೆಳಗಿದ್ದ ಸಿಮೆಂಟ್‌ಕಟ್ಟೆಗೆ ಇಬ್ಬರ ತಲೆಗೆ ತಗುಲಿ ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡಿದ್ದರು.
ಸ್ಥಳದಲ್ಲಿದ್ದ ನಗರ ಪೊಲೀಸ್ ಆಯುಕ್ತರು!: ಅಚ್ಚರಿಯ ವಿಚಾರ ಎಂದರೇ ಘಟನೆಗೂ ಕೆಲ ಹೊತ್ತಿನ ಮೊದಲು ರಾತ್ರಿ ಗಸ್ತಿನಲ್ಲಿದ್ದ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಚರ್ಚ್‌ಸ್ಟ್ರೀಟ್‌ನ ಹ್ಯಾಶ್ ಬಿಯರ್ ಪಬ್ ಎದುರು ಆಗಮಿಸಿದ್ದರು.
ಇಂದಿರಾನಗರದ ಪಬ್ ಮತ್ತು ಬಾರ್‌ಗಳಲ್ಲಿ ಅತ್ಯಧಿಕ ಶಬ್ದ ಮಾಲಿನ್ಯ ಉಂಟಾಗುತ್ತಿದ್ದು, ಸ್ಥಳೀಯರಿಗೆ ತೊಂದರೆ ಆಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಇತ್ತೀಚೆಗೆ ನಗರ ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಆಯಕ್ತ ಅಲೋಕ್ ಕುಮಾರ್ ಶುಕ್ರವಾರ ರಾತ್ರಿ ಚರ್ಚ್‌ಸ್ಟ್ರೀಟ್‌ನಲ್ಲಿರುವ ಹಲವು ಪಬ್‌ಗಳ ಮುಂದೆ ಶಬ್ದ ಮಾಲಿನ್ಯ ಮಾಪನ ಹಿಡಿದು ಪರಿಶೀಲಿಸಲು ಮುಂದಾಗಿದ್ದರು.
ಈ ಕಾರಣದಿಂದ ಕಬ್ಬನ್‌ಪಾರ್ಕ್ ಪೊಲೀಸರು ಹಾಗೂ ಇತರೆ ಪೊಲೀಸ್ ಸಿಬ್ಬಂದಿ ಹಾಶ್ ಬಿಯರ್ ಪಬ್ ಮುಂದೆ ಮೊದಲೇ ನಿಂತಿದ್ದರು. ರಾತ್ರಿ 11.30ರಲ್ಲಿ ಅಲೋಕ್ ಕುಮಾರ್ ಪಬ್ ಮುಂದೆ ಬಂದು ವಾಹನದಿಂದ ಇಳಿಯುತ್ತಿದ್ದಂತೆ, ಕಿರಿಯ ಅಧಿಕಾರಿಗಳು ಅವರಿಗೆ ಸೆಲ್ಯೂಟ್ ಹಾಕುತ್ತಿದ್ದರು. ಈ ವೇಳೆಯೇ ಪವನ್ ಮತ್ತು ವೇದಾ ಮೇಲಿಂದ ಕೆಳಗೆ ಬಿದ್ದಿದ್ದಾರೆ.
ಜೋರು ಬಿದ್ದ ಶಬ್ದ ಕೇಳಿದ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಮತ್ತು ಸಿಬ್ಬಂದಿ ಕೂಡಲೇ ಸ್ಥಳಕ್ಕೆ ತೆರಳಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಹೊಯ್ಸಳ ವಾಹನದಲ್ಲಿ ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.
ಭದ್ರತೆ ಇಲ್ಲ: ಹ್ಯಾಶ್ ಬಿಯರ್ ಪಬ್ ಇದ್ದ ಕಟ್ಟಡ ನಗರದ ಪ್ರತಿಷ್ಠಿತ ಕಂಪನಿಗೆ ಸೇರಿದ್ದಾಗಿದೆ. ಎರಡನೇ ಮಹಡಿಯಿಂದ ಒಂದನೇ ಮಹಡಿವರೆಗೂ ಇರುವ ವೆಂಟಿಲೇಟರ್ ಕಿಟಕಿ ದುರ್ಬಲವಾಗಿತ್ತು. ಕಿಟಕಿಗಳಿಗೆ ಗಟ್ಟಿಯಾದ ಗ್ರೀಲ್ ಅಥವಾ ಕಬ್ಬಿಣ ಯಾವುದೇ ಸರಳುಗಳನ್ನು ಹಾಕಿರಲಿಲ್ಲ. ಕಿಟಕಿಗೆ ಬಾಗಿಲು ಸಹ ಇಲ್ಲ. ಕೇವಲ ಸ್ಟೀಲ್ ಮಾದರಿಯ ಒಂದು ಶೆಟರ್ ಹಾಕಲಾಗಿದೆ. ಹೀಗಾಗಿ ಪವನ್ ಮತ್ತು ವೇದಾ ಬಿದ್ದ ರಭಸಕ್ಕೆ ಶೆಟರ್ ಒಡೆದು ಹೋಗಿದ್ದು, ಕೆಳಗೆ ಬಿದ್ದಿದ್ದಾರೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.