ಎರಡು ಬಾರಿ ಗಡುವಿಗೂ ನಡುಗದ ರಸ್ತೆ ಗುಂಡಿಗಳು
Team Udayavani, Nov 7, 2017, 1:27 PM IST
ಬೆಂಗಳೂರು: ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎರಡು ಬಾರಿ ಗಡುವು ನೀಡಿದರೂ ನಗರದ ರಸ್ತೆಗಳಲ್ಲಿನ ಗುಂಡಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಬದಲಿಗೆ ವಾರದಿಂದ ವಾರಕ್ಕೆ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ!
ಮಳೆಯಿಂದಾಗಿ ನಗರದಲ್ಲಿ ಸೃಷ್ಟಿಯಾದ ರಸ್ತೆಗುಂಡಿಗಳನ್ನು ಅಕ್ಟೋಬರ್ 24ರೊಳಗೆ ದುರಸ್ತಿಪಡಿಸುವಂತೆ ಈ ಹಿಂದೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಗಡುವು ನೀಡಿದ್ದರು. ಆದರೆ, ಆ ಅವಧಿಯಲ್ಲಿ ಗುಂಡಿಗಳನ್ನು ಅಧಿಕಾರಿಗಳು ದುರಸ್ತಿಪಡಿಸದ ಹಿನ್ನೆಲೆಯಲ್ಲಿ ಮೇಯರ್ ಆರ್.ಸಂಪತ್‌ರಾಜ್ ಮುಖ್ಯಮಂತ್ರಿಗಳನ್ನು ಬೇಟಿ ಮಾಡಿ 10 ದಿನಗಳ ಕಾಲಾವಕಾಶ ಪಡೆದಿದ್ದರು.
ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ನವೆಂಬರ್ 6ರೊಳಗೆ ನಗರದಲ್ಲಿ ರಸ್ತೆಗಳು ಗುಂಡಿಮುಕ್ತವಾಗಬೇಕು ಎಂದು ಆದೇಶಿಸಿದ್ದರು. ಒಂದೊಮ್ಮೆ ಪರಿಶೀಲನೆಯ ವೇಳೆ ಗುಂಡಿಗಳು ಮುಚ್ಚದಿರುವುದು ಕಂಡುಬಂದರೆ, ಅಂತಹ ಮುಖ್ಯ ಎಂಜಿನಿಯರ್‌ನ್ನು ಅಮಾನತುಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಮುಖ್ಯಮಂತ್ರಿಗಳು ನೀಡಿದ ಗಡುವು ಸೋಮವಾರಕ್ಕೆ ಮುಗಿದರೂ ನಗರದಲ್ಲಿ ಇನ್ನೂ 800ಕ್ಕೂ ಹೆಚ್ಚು ಗುಂಡಿಗಳ ದುರಸ್ತಿ ಕಾರ್ಯ ಬಾಕಿಯಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ಬಿಬಿಎಂಪಿ ಅಧಿಕಾರಿಗಳು ಈ ಹಿಂದೆ ಮಳೆಯಿಂದಾಗಿ 32 ಸಾವಿರ ರಸ್ತೆಗುಂಡಿಗಳು ಸೃಷ್ಟಿಯಾಗಿವೆ ಎಂದು ಮಾಹಿತಿ ನೀಡಿದ್ದರು. ನಂತರದಲ್ಲಿ 16 ಸಾವಿರ ಗುಂಡಿಗಳನ್ನು ದುರಸ್ತಿಪಡಿಸಿದ್ದರು. ಆನಂತರವೂ ನಗರದಲ್ಲಿ ಮಳೆ ಸುರಿದರಿಂದ ಮತ್ತೆ ಹೆಚ್ಚುವರಿಯಾಗಿ 5 ಸಾವಿರ ಗುಂಡಿಗಳು ಸೃಷ್ಟಿಯಾಗಿದ್ದವು. ಇದೀಗ ಮತ್ತೆ ನಗರದಲ್ಲಿ ನಿತ್ಯ 300-400 ಗುಂಡಿಗಳು ಹೊಸದಾಗಿ ಪತ್ತೆಯಾಗುತ್ತಿರುವುದು ತಲೆನೋವಾಗಿ ಪರಿಣಮಿಸಿದೆ ಎಂದು ಮುಖ್ಯ ಎಂಜಿನಿಯರ್ ತಿಳಿಸಿದರು.
ಆಯುಕ್ತರಿಂದ ಪರಿಶೀಲನೆ
ಬಿಬಿಎಂಪಿ ಆಯುಕ್ತರು ಹಾಗೂ ಮೇಯರ್ ಆರ್.ಸಂಪತ್‌ರಾಜ್ ಎರಡು ತಂಡಗಳಲ್ಲಿ ನಗರದ ಎಂಟೂ ವಲಯಗಳಲ್ಲಿ ರಸ್ತೆಗುಂಡಿಗಳ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಅದಕ್ಕಾಗಿಯೇ ವಿಶೇಷ ಆಯುಕ್ತರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಮೇಯರ್, ನಗರದ ಎಂಟೂ ವಲಯಗಳಲ್ಲಿ ಮಂಗಳವಾರ ಮಧ್ಯಾಹ್ನದಿಂದ ಪರಿಶೀಲನಾ ಕಾರ್ಯ ಆರಂಭವಾಗಿದ್ದು, ರಸ್ತೆಗುಂಡಿ ಕಂಡುಬರುವ ವಲಯ ವ್ಯಾಪ್ತಿಯ ಮುಖ್ಯ ಎಂಜಿನಿಯರ್ ಸೇರಿ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸುವುದಾಗಿ ತಿಳಿಸಿದ್ದಾರೆ.
ನಗರದಲ್ಲಿ ಶೇ.98ರಷ್ಟು ರಸ್ತೆಗುಂಡಿಗಳನ್ನು ದುರಸ್ತಿಪಡಿಸಲಾಗಿದ್ದು, ಉಳಿದಿರುವ ಶೇ.2ರಷ್ಟು ಗುಂಡಿಗಳನ್ನು ಎರಡು ದಿನಗಳಲ್ಲಿ ದುರಸ್ತಿಪಡಿಸಲಾಗುವುದು. ಪಾಲಿಕೆಯ ಸಿಬ್ಬಂದಿ ಸೋಮವಾರ ರಾತ್ರಿಯೂ ಕಾರ್ಯನಿರ್ವಹಿಸುತ್ತಿದ್ದು, ಈ ಹಿಂದೆ ತಾತ್ಕಾಲಿಕವಾಗಿ ದುರಸ್ತಿಪಡಿಸಿದ ಭಾಗಗಳಲ್ಲಿ ಗುಂಡಿಗಳು ಸೃಷ್ಟಿಯಾಗುತ್ತಿವೆ.
-ಎಂ.ಆರ್.ವೆಂಕಟೇಶ್, ಮುಖ್ಯ ಎಂಜಿನಿಯರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.