ಐಪಿಎಸ್ ಅಧಿಕಾರಿ ರೂಪಾರಿಂದ “ಉಡಾಫೆ’ ಕಿರುಚಿತ್ರ ಬಿಡುಗಡೆ
Team Udayavani, Oct 28, 2017, 4:16 PM IST
ಬೆಂಗಳೂರು: ಕಾಕ್‌ಟೇಲ್ ಸ್ಟುಡಿಯೋ ತಂಡ ಸಿದ್ಧಪಡಿಸಿರುವ ಹೆಲ್ಮೆಟ್ ಹಾಗೂ ರಸ್ತೆ ಸುರಕ್ಷೆತೆ ಕುರಿತ “ಉಡಾಫೆ!’ ಕಿರುಚಿತ್ರವನ್ನು ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಹಾಗೂ ಉಪ ಪೊಲೀಸ್ ಮಹಾನಿರೀಕ್ಷಕಿ ಡಿ. ರೂಪಾ ಶುಕ್ರವಾರ ಯುಟ್ಯೂಬ್ ಚಾನಲ್ ಮೂಲಕ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ರೂಪಾ ಅವರು, ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಯಾವುದೇ ಸಂದರ್ಭದಲ್ಲೂ ಉಡಾಫೆ ಮಾಡಬಾರದು. ಹೆಲ್ಮೆಟ್ ಧರಿಸುವುದರಿಂದ ಹೇರ್‌ಸ್ಟೈಲ್ ಹಾಳಾಗುತ್ತದೆ ಎಂದು ನಿರ್ಲಕ್ಷಿಸಬಾರದು.
ಇದು ನಿಮ್ಮ ಜೀವಕ್ಕೆ ತುತ್ತಾಗಬಹುದು. ಇದನ್ನೇ ಕಥಾವಸ್ತುವನ್ನಾಗಿ ಇಟ್ಟುಕೊಂಡು ಕಾಕ್‌ಟೇಲ್ ಸ್ಟುಡಿಯೋ ತಂಡ ಸಿದ್ಧಪಡಿಸಿರುವ ಕಿರುಚಿತ್ರ “ಉಡಾಫೆ!’ ಉತ್ತಮವಾಗಿದೆ. ಪೊಲೀಸ್ ಇಲಾಖೆಯಿಂದಾಗಲಿ, ಸರ್ಕಾರದಿಂದಾಗಲಿ ಯಾವುದೇ ಸೂಚನೆ ಇಲ್ಲದೆಯೇ ಸ್ವಯಂ ಪ್ರೇರಿತವಾಗಿ ರಸ್ತೆ ಸುರಕ್ಷತೆ ಬಗ್ಗೆ ಕಿರುಚಿತ್ರ ನಿರ್ಮಾಣ ಮಾಡಿರುವುದು ಸಂತೋಷಕರ ವಿಚಾರ ಎಂದರು.
ಕಾಕ್‌ಟೇಲ್ ಸ್ಟುಡಿಯೋ ತಂಡ
ವಕೀಲರಾದ ಬಿ.ಆರ್.ಶಿವರಾಮ್ ಕಥೆ, ಚಿತ್ರಕಥೆ ಬರೆದಿದ್ದು, ಪ್ರಶಾಂತ್ ಕೆ. ಎಳ್ಳಂಪಳ್ಳಿ ನಿರ್ದೇಶಿಸಿರುವ “ಉಡಾಫೆ’ಯಲ್ಲಿ ಕಿರುತೆರೆ ನಟ ಸುನೀಲ್, ನಟಿ ಸೃಷ್ಟಿ ಶೃಂಗೇರಿ ಹಾಗೂ ಬೇಬಿ ಆರ್ವಿ ಅಜಿತ್ ನಟಿಸಿದ್ದಾರೆ. ಹಾಗೆಯೇ ಪ್ರಿಯಾ ಶಿವರಾಮ್ ನಿರ್ಮಾಣ ಮಾಡಿದ್ದಾರೆ. ರೋಶನ್ ಕೆಸರೆ ಛಾಯಾಗ್ರಹಣ ಮಾಡಿದ್ದು, ಮಹೇಶ್‌ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಇನ್ನು ಉದಯ್ ಜಗಳೂರು ಸಂಕಲನ ಮಾಡಿದ್ದಾರೆ.