Majestic Underpass: ಅಸಹ್ಯ, ಭಯ ಹುಟ್ಟಿಸುತ್ತೆ ಮೆಜೆಸ್ಟಿಕ್ ಅಂಡರ್‌ಪಾಸ್
Team Udayavani, May 6, 2024, 12:21 PM IST
ಬೆಂಗಳೂರು: ಒಮ್ಮೆ ಅಂಡರ್‌ಪಾಸ್‌ನಲ್ಲಿ ಮೊಬೈಲ್ ಕ್ಯಾಮೆರಾ ಹಿಡಿದು ಒಳಹೊಕ್ಕರೆ ಕಾಣಸಿಗುವುದು ಕೆಂಗಣ್ಣಿನಿಂದ ದುರಗುಟ್ಟಿ ನೋಡುವ ಮುಖಗಳು, ವ್ಯಾಪಾರಿಗಳ ವಾರೆ ನೋಟ, ಸೂಕ್ಷ್ಮವಾಗಿ ಗಮನಿಸುವ ಕಣ್ಣುಗಳು. ಈ ದೃಶ್ಯ ಕಂಡು ಬರುವುದು ಬೇರೆಲ್ಲೂ ಅಲ್ಲ, ಮೆಜೆಸ್ಟಿಕ್‌ನಿಂದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ “ಅಂಡರ್‌ಪಾಸ್’ ಒಳಾಂಗಣದಲ್ಲಿ.
ಮೆಜೆಸ್ಟಿಕ್‌ನ ಬಿಎಂಎಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ರೈಲ್ವೇ ನಿಲ್ದಾಣಕ್ಕೆ ಪ್ರಯಾಣಿಕರು ಶೀಘ್ರವೇ ತೆರಳಲು ನಿರ್ಮಿಸಿರುವ “ಅಂಡರ್‌ಪಾಸ್’ ಬೀದಿ ವ್ಯಾಪಾರಿಗಳ ಅಡ್ಡೆಯಾಗಿದೆ. ಪಡ್ಡೆ ಹುಡುಗರ ತಾಣವಾಗಿದೆ. ಈ ಅಂಡರ್‌ಪಾಸ್‌ನಲ್ಲಿ ತೆರಳಲು ಜನ ಭಯಪಡುತ್ತಾರೆ.
ಹೆಣ್ಮಕ್ಕಳಿಗೆ ಸುರಕ್ಷತೆಯಿಲ್ಲ: ಈ ಅಂಡರ್‌ಪಾಸ್‌ನಲ್ಲಿ ಹಿರಿಯ ನಾಗರಿಕರು, ಹೆಣ್ಣುಮಕ್ಕಳಿಗೆ ಸುರಕ್ಷತೆಯೇ ಇಲ್ಲ. ಭಯ ಭೀತಿಯಿಂದ ಓಡಾಡಬೇಕಿದೆ. ಸಂಜೆಯಾದರೆ ಸಾಕು ಅಂಡರ್‌ಪಾಸ್ ತುಂಬಾ ಕಿಕ್ಕಿರಿದ ಜನಸಂದಣಿ, ರಾತ್ರಿ ಸಂಚಾರ ವಿರಳವಿದ್ದರೂ ಹೆಣ್ಣುಮಕ್ಕಳು ಅಂಡರ್‌ಪಾಸ್ ದಾಟಿ ಹೋಗುವುದು ಸ್ವಲ್ಪ ಕಷ್ಟವೇ ಆಗಿದೆ.
ವಿಡಿಯೋ ಮಾಡಲು ಹೋದರೆ ಬೀಳುತ್ತೆ ಪೆಟ್ಟು:
ಅಂಡರ್‌ಪಾಸ್ ಮೂಲಕ ಮೊಬೈಲ್, ಕ್ಯಾಮೆರಾ ಹಿಡಿದು ಸಂಚರಿಸುವ ಪ್ರತಿಯೊಬ್ಬರ ಮೇಲೆ ವ್ಯಾಪಾರಿಗಳು ಕಣ್ಣು ನೆಟ್ಟಿರುತ್ತಾರೆ. ಫೋಟೋ ತೆಗೆಯಬೇಕೋ ಅಥವಾ ಇನ್ನೇನಾದರೂ ಮಾಹಿತಿ ಬೇಕು ಅಂತ ನೀವು ಅಂಡರ್‌ಪಾಸ್ ಸುತ್ತಿದ್ದರೆ, ನೀವು ಅಂಡರ್‌ಪಾಸ್‌ನಿಂದ ಹೊರಗೆ ಹೋಗುವವರೆಗೆ ಹಿಂಬಾಲಿಸಿಕೊಂಡು ಬರುತ್ತಾರೆ. ಪುರುಷರಾಗಿದ್ದರೆ 2 ಏಟು ಬೀಳುವ ಸಾಧ್ಯಗಳು ಇವೆ. ಆದರಿಂದ ಇಂತಹ ಸ್ಥಳದಲ್ಲಿ ಚಿತ್ರೀಕರಣ ಮಾಡುವ ಮುಂಚೆ ಕೊಂಚ ಎಚ್ಚರ ವಹಿಸುವುದು ಉತ್ತಮ. ಕಳೆದ ನವೆಂಬರ್‌ನಲ್ಲಿ ಯೂ-ಟ್ಯೂಬರ್ ಅಂಡರ್‌ಪಾಸ್ ಒಳಾಂಗಣದ ವಿಡಿಯೋ ಚಿತ್ರಣ ಮಾಡಿದಾಗ ನೀಡಲಾದ ಕಿರುಕುಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಅಕ್ರಮ ವ್ಯವಹಾರ: ಅಂಡರ್‌ಪಾಸ್ ಒಳಗೆ ವ್ಯಾಪಾರಕ್ಕೆ ಅವಕಾಶವಿಲ್ಲ. ಆದರೆ, ಮೆಜೆಸ್ಟಿಕ್ ಅಂಡರ್‌ಪಾಸ್‌ನಲ್ಲಿ ಅಕ್ರಮ ವ್ಯಾಪಾರಿಗಳದ್ದೇ ಕಾರುಬಾರು. ಹೈಕೋರ್ಟ್‌ನಲ್ಲಿ ಆರ್‌ಟಿಐ ಕಾರ್ಯಕರ್ತರೊಬ್ಬರು ಸಾರ್ವಜನಿಕ ಹಿತಾಸಕ್ತಿ ಕೇಸು ಹಾಕಿದ್ದರಿಂದ ಕೆಲ ದಿನ ಕಡಿವಾಣ ಬಿದ್ದಿತ್ತು. ಇದೀಗ ಮತ್ತೆ ಶುರುವಾಗಿದೆ. ಇಲ್ಲಿನ ವ್ಯಾಪಾರಿಗಳ ಬಳಿ ಖರೀದಿಗೆ ಹೋದಾಗ ಕೆಲವರು ಪರ್ಸ್, ಮೊಬೈಲ್, ಮುಂತಾದ ವಸ್ತುಗಳನ್ನು ಕಳೆದುಕೊಂಡಿದ್ದಾರೆ.
ಒಬ್ಬ ವ್ಯಾಪಾರ ಮಾಡುತ್ತಿದ್ದರೆ ಮತ್ತೂಬ್ಬ ದೂರದಲ್ಲೇ ನಿಂತು ಖರೀದಿದಾರನ ಮೇಲೆ ನಿಗಾ ಇಟ್ಟಿರುತ್ತಾನೆ. ಖರೀದಿದಾರ ಬೆಂಗಳೂರಿಗೆ ಹೊಸಬನಾಗಿದ್ದರೆ, ಸ್ವಲ್ಪ ಮೆದು ಎಂದು ಗೊತ್ತಾದರೆ ಆತ ಅವರು ಕೇಳಿದಷ್ಟು ಹಣ ಕೊಟ್ಟು ವಸ್ತು ಖರೀದಿ ಮಾಡುವವರೆಗೂ ಬಿಡುವುದೇ ಇಲ್ಲ. ಖರೀದಿ ಮಾಡದಿದ್ದರೆ ಕೆಲವರು ಹಲ್ಲೆ ಕೂಡ ಮಾಡುತ್ತಾರೆ. ಕೆಲವರು ಅಂಡರ್‌ಪಾಸ್ ಮುಖ್ಯದ್ವಾರದಲ್ಲಿ ನಿಂತು ಅಂಡರ್‌ಪಾಸ್‌ಗೆ ಬರುವವರ ಮೇಲೆ ಕಣ್ಣಿಟ್ಟಿರುತ್ತಾರೆ.
ಗೋಡೆ ಮೇಲೆ ಅಡಕೆ, ಪಾನ್‌ಬೀಡ ಕಲೆ: ಅಂಡರ್‌ಪಾಸ್ ಗೋಡೆ ತುಂಬಾ ಎಲೆ ಅಡಕೆ, ಪಾನ ಮಸಾಲ ತಿಂದು ಉಗಿದಿರುವ ಕಲೆಗಳು ಅಸಹ್ಯ ಉಂಟಿಸುತ್ತವೆ. ನೀರು ಹರಿಯಲು ನಿರ್ಮಿಸಿರುವ ಕಾಲುವೆಗೆ ಹಾಕಿರುವ ಟೈಲ್ಸ್‌ಗಳು ಒಡೆದಿವೆ. ಅದರ ಮೇಲೆಯೇ ಮೂತ್ರ ವಿಸರ್ಜನೆ ಮಾಡಲಾಗಿದೆ. ಗೋಡೆಗಳ ಮೇಲೆ ಚಿತ್ರಿಸಲಾದ ಕರ್ನಾಟಕದ ಪ್ರೇಕ್ಷಣಿಯ ಸ್ಥಳ, ಹೋರಾಟಗಾರರ ಚಿತ್ರಗಳ ಮೇಲೆ ಎಲೆ ಅಡಕೆ ತಿಂದು ಉಗಿಯಲಾಗಿದೆ. ಇದರಿಂದ ದುರ್ನಾತ ಬೀರುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡಬೇಕಾಗುತ್ತದೆ. ಅಂಡರ್‌ಪಾಸ್‌ನಲ್ಲಿ ಇಷ್ಟೆಲ್ಲ ಸಮಸ್ಯೆ ಇರುವ ಕಾರಣ ಕೆಲವರು ಮೇಲ್ಭಾಗದ ರಸ್ತೆಯಲ್ಲಿ ನಡೆದು ಹೋಗುತ್ತಾರೆ.
ಜವಾಬ್ದಾರಿ ಬಿಬಿಎಂಪಿ!: ಅಂಡರ್ ಪಾಸ್ ನಿರ್ವಹಣೆ ಜವಾಬ್ದಾರಿ ಬಿಬಿಎಂಪಿ ಮೇಲಿದ್ದರೂ, ಇದರತ್ತ ಗಮನ ಹರಿಸದಂತೆ ಕಾಣುತ್ತಿಲ್ಲ. ಒಳಾಂಗಣದ 2 ಬದಿಯಲ್ಲಿ ವ್ಯಾಪಾರಿಗಳು ಅಕ್ರಮವಾಗಿ ವ್ಯವಹಾರ ನಡೆಸುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಮೆಜೆಸ್ಟಿಕ್ ಅಂಡರ್‌ಪಾಸ್‌ನಲ್ಲಿ ವ್ಯಾಪಾರ ವಹಿವಾಟು ನಡೆಸಲು ಅವಕಾಶವಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀ ಲನೆ ನಡೆಸಿ ಕ್ರಮ ವಹಿಸಲಾಗುವುದು. –ಶಶಿಕುಮಾರ್, ಎಂಜಿನಿಯರ್, ಬಿಬಿಎಂಪಿ.
ಸಾಮಾನ್ಯವಾಗಿ ಬೆಳಗಿನ ಅವಧಿ ಯಲ್ಲಿ ಅಂಡರ್‌ಪಾಸ್ ಮೂಲಕ ಸಂಚರಿಸುವುದೇ ಕಷ್ಟ. ಸಂಜೆಯಾದರೆ ಸಾಕು ವ್ಯಾಪಾರದ ಹೆಸರಿನಲ್ಲಿ ಜನದಟ್ಟಣೆ ಆಗುತ್ತದೆ. ಮಹಿಳೆಯರಿಗೆ ಇಲ್ಲಿ ಸುರಕ್ಷತೆ ಇಲ್ಲ. ಕೆಲವೊಮ್ಮೆ ಅಲ್ಲಿ ನಡೆಯುವ ಅನೈ ತಿಕ ಚಟುವಟಿಕೆಗಳನ್ನು ನೋಡಲು ಸಾಧ್ಯ ವಾಗದೇ ತಲೆ ತಗ್ಗಿಸಿಕೊಂಡು ಬರಬೇಕಿದೆ.-ಶ್ವೇತಾ ಬಡಿಗೇರ್, ಬೆಂಗಳೂರು.
ಸಾಮಾನ್ಯವಾಗಿ ಹೊಸದಾಗಿ ಬಂದ ವರು ಮಾತ್ರ ಮೆಜೆಸ್ಟಿಕ್ ನಿಲ್ದಾಣ ದಿಂದ ರೈಲ್ವೇ ನಿಲ್ದಾಣಕ್ಕೆ ತೆರಳಲು ಅಂಡ ರ್‌ಪಾಸ್ ಬಳಸುತ್ತಾರೆ. ಒಮ್ಮೆ ಇಲ್ಲಿ ಹೋದ ವರು ಮತ್ತೆ ಆ ಅಂಡರ್‌ಪಾಸ್ ಬಳಸಲು ಹಿಂದೇಟು ಹಾಕುವುದು ಗ್ಯಾರಂಟಿ. -ನಿಖಿಲ್, ಬೆಂಗಳೂರು.
– ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.