ಲಸಿಕೆ ಅಭಿಯಾನಕ್ಕೆ ಸಹಕರಿಸದ ಶಾಲೆಗಳ ವಿರುದ್ಧ ಕ್ರಮ
Team Udayavani, Feb 8, 2017, 12:16 PM IST
ಬೆಂಗಳೂರು: “ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಸಹಕರಿಸದ ಖಾಸಗಿ ಶಾಲೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು,” ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಸಹಯೋಗದಲ್ಲಿ ನಗರದ ಕುಮಾರಕೃಪಾ ರಸ್ತೆಯ ಮತ್ತು ಡಾ.ಎನ್.ಎಸ್.ಹರ್ಡಿಕರ್ ಭಾರತ್ ಸೇವಾ ದಳ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಅವರು, “ಕೆಲ ಖಾಸಗಿ ಶಾಲೆಗಳು ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಪೂರ್ವ ಸಿದ್ಧತೆ ಕೈಗೊಳ್ಳಲು ಬಂದ ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಸಹಕಾರ ನೀಡದಿರುವುದು ಕಂಡುಬಂದಿದೆ.
ಈ ಸಂಬಂಧ ಈಗಾಗಲೇ ಕೋರಮಂಗಲ ಮತ್ತು ಕೆ.ಜಿ. ಹಳ್ಳಿಯ ಒಟ್ಟು ಮೂರು ಶಾಲೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ,” ಎಂದರು. “ಶಾಲಾ ಆಡಳಿತ ಮಂಡಳಿಗಳು ಸರ್ಕಾರದ ಕಾರ್ಯಕ್ರಮಗಳಿಗೆ ಸೂಕ್ತ ಸಹಕಾರ ನೀಡಬೇಕು. ನೋಟಿಸ್ ನೀಡಿರುವ ಶಾಲೆಗಳು ಸಹಕಾರ ನೀಡುವುದಾಗಿ ತಿಳಿಸಿವೆ. ಹಾಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಯಾವುದೇ ಶಾಲೆಗಳು ಇಂತಹ ಅಸಹಕಾರ ತೋರಿದರೆ ಶಿಸ್ತು ಕ್ರಮ ಖಂಡಿತ,” ಎಂದರು.
“ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಜ.7ರಿಂದ ಫೆ.28ರವರೆಗೆ ವೈದ್ಯರು ದಡಾರ ಮತ್ತು ರುಬ್ಬೆಲ್ಲಾ ಲಸಿಕೆ ಹಾಕುತ್ತಾರೆ. ಒಟ್ಟು 1.64 ಕೋಟಿ ಮಕ್ಕಳಿಗೆ ಲಸಿಕೆ ಹಾಕಲಾಗುವುದು. 9 ತಿಂಗಳಿಂದ 15ವರ್ಷದ ವರೆಗಿನ ಎಲ್ಲಾ ಮಕ್ಕಳಿಗೂ ನಿತ್ಯ ಬೆಳಗ್ಗೆ 8ರಿಂದ ಮಧ್ಯಾಹ್ನ 2 ಗಂಟೆವರೆಗೆ ಲಸಿಕೆ ಹಾಕಲಾಗುತ್ತದೆ. ದಡಾರ ಮತ್ತು ರುಬೆಲ್ಲಾ ತಡೆಗಾಗಿ ಪೋಷಕರು ತಮ್ಮ ಮಕ್ಕಳಿಗೆ ಈ ಲಸಿಕೆ ಹಾಕಿಸಬೇಕು,” ಎಂದು ತಿಳಿಸಿದರು.
“ಲಸಿಕೆ ಹಾಕಿಸದಿದ್ದರೆ ಕಾಂಜಿನೇಟಲ್ ರುಬೆಲ್ಲಾ ಸಿಂಡ್ರೋಮ್ ಎಂಬ ತೊಂದರೆ ಬರಬಹುದು. ಹೆಣ್ಣುಮಕ್ಕಳಲ್ಲಿ ಇದು ಹೆಚ್ಚು. ಹಾಗಾಗಿ ಮಕ್ಕಳಿಗೆ ಈ ಲಸಿಕೆ ಹಾಕಿಸುವುದು ಉಪಕಾರಿ. ಲಸಿಕೆ ವೇಳೆ ಟ್ರ್ಯಾಕ್ ಕಾರ್ಡ್‌ಗಳನ್ನು ನೀಡಲಾಗುವುದು. ಯಾವ್ಯಾವ ಸಮಯದಲ್ಲಿ ಮಕ್ಕಳಿಗೆ ಯಾವ್ಯಾವ ಲಸಿಕೆ ಹಾಕಿಸಬೇಕೆಂಬ ಮಾಹಿತಿ ಅದರಲ್ಲಿರುತ್ತದೆ,” ಎಂದು ಹೇಳಿದರು. ಸೇವಾದಳದ ರಾಜ್ಯ ಕಾರ್ಯದರ್ಶಿ ದೇವಿ ಪ್ರಸಾದ್, ಅಧ್ಯಕ್ಷ ಗುರುಸಿದ್ಧಸ್ವಾಮಿ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.
ಅಪಪ್ರಚಾರಕ್ಕೆ ಕಿವಿಗೊಡದಿರಿ: ಲಸಿಕೆ ಬಗ್ಗೆ ಕೆಲವೆಡೆ ಅಪಪ್ರಚಾರ ನಡೆಯುತ್ತಿದೆ. ಇದಕ್ಕೆಲ್ಲ ಪೋಷಕರು ಆತಂಕ ಪಡಬಾರದು. ಈ ಲಸಿಕೆ ಹಾಕಿಸುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಲ್ಲಿ ಜ್ವರ ಅಥವಾ ವಾಂತಿಯಂತಹ ಸಣ್ಣ ಪುಟ್ಟ ವ್ಯತ್ಯಾಸ ಕಾಣಿಸಿಕೊಳ್ಳಬಹುದು. ಇದಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಶಾಲೆಗಳ ಬಳಿ ಆಂಬ್ಯುಲೆನ್ಸ್, ಮಕ್ಕಳ ತಜ್ಞರು, ತರಬೇತಿ ಪಡೆದ ನರ್ಸ್‌ಗಳು ಇರುತ್ತಾರೆ. ಆತಂಕ ಬೇಡ ಎಂದು ತನ್ವೀರ್ ಸೇಟ್ ತಿಳಿಸಿದರು.
ನಗರದಲ್ಲಿ 67 ಸಾವಿರ ಮಕ್ಕಳಿಗೆ ಲಸಿಕೆ
ಬೆಂಗಳೂರು: ನಗರದಲ್ಲಿ ಮಂಗಳವಾರ ಆರಂಭವಾದ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನದಲ್ಲಿ ಮೊದಲ ದಿನ 67 ಸಾವಿರ ಮಕ್ಕಳಿಗೆ ಲಸಿಕೆ ಹಾಕಲಾಗಿದೆ.
ಫೆ. 28ರವರೆಗೆ ನಡೆಯಲಿರುವ ಈ ಅಭಿಯಾನದಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ 12 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಇದೆ. ಮೊದಲ ದಿನ 135 ವಾರ್ಡ್‌ಗಳಲ್ಲಿ 66,910 ಮಕ್ಕಳಿಗೆ ಲಸಿಕೆ ಹಾಕಲಾಗಿದೆ.
ಈ ಪೈಕಿ 32,393 ಗಂಡು ಮತ್ತು 34,517 ಹೆಣ್ಣುಮಕ್ಕಳಿಗೆ ಚುಚ್ಚುಮದ್ದು ಹಾಕಲಾಗಿದೆ. ಇದರಲ್ಲಿ 5 ವರ್ಷದ ಒಳಗಿನ 12,448 ಮಕ್ಕಳು ಲಸಿಕೆ ಹಾಕಿಸಿಕೊಂಡಿದ್ದರೆ, 5ರಿಂದ 10 ವರ್ಷದೊಳಗಿನ 25,710 ಹಾಗೂ 10ರಿಂದ 15 ವರ್ಷದೊಳಗಿನ 28,752 ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.