ಬೊಮ್ಮಸಂದ್ರ ಪುರಸಭೆ ಸದಸ್ಯ ವಾಸು ಹತ್ಯೆ
Team Udayavani, Mar 15, 2017, 11:30 AM IST
ಆನೇಕಲ್: ಆನೇಕಲ್ ತಾಲೂಕಿನ ಬೊಮ್ಮಸಂದ್ರ ಪುರಸಭೆಯ ಬಿಜೆಪಿ ಸದಸ್ಯ ಕಿತ್ತಗಾನಹಳ್ಳಿ ವಾಸು ಅಲಿಯಾಸ್ ಶ್ರೀನಿವಾಸ್‌ಪ್ರಸಾದ್ ಅವರನ್ನು ದುಷ್ಕರ್ಮಿಗಳು ಮಂಗಳವಾರ ಮುಂಜಾನೆ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದಾರೆ.
ಬೆಂಗಳೂರು ಹೊರವಲಯದ ಬೊಮ್ಮಸಂದ್ರ ಬಿ ಟಿ ಎಲ್ ಕಾಲೇಜಿನ ಬಳಿ ಅವರ ಶವ ಪತ್ತೆಯಾಗಿದೆ. ಬೆಳಗ್ಗೆ 5.30ರ ಸಮಾರಿನಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮುಂಜಾನೆಯೇ ಹತ್ಯೆ ನಡೆದಿರುವುದರಿಂದ ಹಂತಕರ ಕುರಿತು ಸದ್ಯ ಮಾಹಿತಿ ಲಭ್ಯವಾಗಿಲ್ಲ.
ಮಂಗಳವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯ ಗಸ್ತು ಪಡೆಯ ಸಿಬ್ಬಂದಿ ರಸ್ತೆ ಬದಿಯಲ್ಲಿ ಶವ ಬಿದ್ದಿರುವುದನ್ನು ಗಮನಿಸಿ ಹೆಬ್ಬಗೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೊದಲಿಗೆ ಅಪಘಾತದಿಂದ ವ್ಯಕ್ತಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಪರಿಶೀಲನೆ ನಂತರ ಇದು ಕೊಲೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಅಲ್ಲದೆ, ಮೃತ ವ್ಯಕ್ತಿ ಸ್ಥಳೀಯ ಪುರಸಭೆಯ ಸದಸ್ಯ ಎಂದು ತಿಳಿಯುತ್ತಲೇ ಸ್ಥಳದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು. ವಿಷಯ ಗೊತ್ತಾಗುತ್ತಿಧಿದ್ದಂತೆ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಹೀಗಾಗಿ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸಪಡಬೇಕಾಯಿತು.
ಕಿತ್ತಗಾನಹಳ್ಳಿ ವಾಸು ಮಾಜಿ ಸಚಿವ ನಾರಾಯಣಸ್ವಾಮಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿಧಿದ್ದವರು. ಅವರ ಪತ್ನಿ ಶೈಲಜಾ ಆನೇಕಲ್ ಕ್ಷೇತ್ರದ ಸುರಗಜಕ್ಕನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಬಿಜೆಪಿ ಸದಸ್ಯರಾಗಿ ಆಯ್ಕೆಯಾಗಿದ್ದರು. ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದ ವಾಸು ಅವರ ಹತ್ಯೆ ಹಿಂದಿನ ಕಾರಣ ನಿಖರವಾಗಿಲ್ಲ.
ಘಟನೆ ಆಗಿದ್ದು ಹೇಗೆ?: ಕಿತ್ತಗಾನಹಳ್ಳಿ ವಾಸು ಪ್ರತಿನಿತ್ಯ 7.30ರ ಸುಮಾರಿಗೆ ತಮ್ಮ ಮನೆಯಿಂದ ನಾಲ್ಕು ಕಿ.ಮೀ ದೂರದ ಬೊಮ್ಮಸಂದ್ರದ ಬಿಟಿಎಲ್ ಕಾಲೇಜು ಹತ್ತಿರದ ಬ್ರಾಹ್ಮಣ್ ಕೆಫೆಗೆ ಬಂದು ಕಾಫಿ, ತಿಂಡಿ ಸೇವಿಸುವ ಪರಿಪಾಠ ಹೊಂದಿದ್ದರು. ಮಂಗಳವಾರ ಅದೇ ಸ್ಥಳದಲ್ಲೇ ಹತ್ಯೆಗೀಡಾಗಿದ್ದಾರೆ. ನಿತ್ಯ 7.30ಕ್ಕೆ ಬರುತ್ತಿದ್ದ ವಾಸು ಮಂಗಳವಾರ ಏಕೆ 5.30ಕ್ಕೆ ಆ ಸ್ಥಳಕ್ಕೆ ಬಂದರು ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.
ಕೊಲೆಯಾದ ಸ್ಥಳದಿಂದ ಸ್ವಲ್ಪ ದೂರದ ಲಾರಿಗಳ ನಿಲ್ದಾಣದಲ್ಲಿ ಅವರ ಇನ್ನೋವಾ ವಾಹನವೂ ಪತ್ತೆಯಾಗಿದೆ. “ವಾಸು ವಾಹನದಲ್ಲಿ ಬರುತ್ತಿರುವುದನ್ನು ಗಮನಿಸಿರುವ ಹಂತಕರು, ಕಾರಿನಿಂದ ಇಳಿಯುತ್ತಲೇ ಅವರ ಮೇಲೆ ದಾಳಿ ಮಾಡಿಬಹುದು. ತಪ್ಪಿಸಿಕೊಂಡು ಓಡಿದ ಅವರನ್ನು ಕೊಚ್ಚಿ ಕೊಲ್ಲಲಾಗಿದೆ,” ಎಂದು ಪೊಲೀಸರು ಹೇಳಿದ್ದಾರೆ.
ಶವ ಪತ್ತೆಯಾದ ಸ್ವಲ್ಪ ಸಮಯದ ನಂತರ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ತಂಡ ಸ್ಥಳಕ್ಕೆ ಬಂದರು. ಕೊಲೆ ನಡೆದ ಸ್ಥಳ, ವಾಸು ಬಂದಿದ್ದ ಇನ್ನೊವಾ ಕಾರನ್ನು ಪರಿಶೀಲನೆ ನಡೆಸಲಾಯಿತು. ಕಾರ್‌ನ ಬಾಗಿಲಿನಲ್ಲಿದ್ದ ಬೆರಳಚ್ಚು ಸಂಗ್ರಹಿಸಲಾಯಿತು. ಶ್ವಾನವೂ ಹಂತಕರ ವಾಸನೆ ಹಿಡಿದು ಕೊಂಚದೂರ ಓಡಿತಾದರೂ ಯಾವುದೇ ಸುಳಿವು ಸಿಗಲಿಲ್ಲ. ಕೊನೆಗೆ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಯಿತು.
ಕೊಲೆಯಾಗಿರುವುದು ಸ್ಥಳೀಯ ಮುಖಂಡನಾಧಿದ್ದರಿಂದ ಪರಿಸ್ಥಿತಿ ಹತೋಟಿಗೆ ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಬ್ ಡಿವಿಷನ್ ನ ಡಿವೈಎಸ್ಪಿ$ ಉಮೇಶ್, ಅಡಿಷಿನಲ್ ಎಸ್ಪಿ ಚಂದ್ರಕಾಂತ್, ಎಸ್ಪಿ$ ಅಮಿತ್‌ಸಿಂಗ್ ಆಗಮಿಸಿ ಕೊಲೆ ಕುರಿತು ಮಾಹಿತಿ ಪಡೆದು ಕೊಂಡರು.
ಉದ್ವಿಗ್ನ ಪರಿಸ್ಥಿತಿ: ವಾಸು ಕೊಲೆ ವಿಷಯ ತಿಳಿಯುತ್ತಿದಂತೆ ಆನೇಕಲ್ ತಾಲೂಕಿನ ಬಿಜೆಪಿ ಮುಖಂಡರು, ಕಾರ್ಯಕರ್ತರು ಕೊಲೆಯಾದ ಸ್ಥಳದಲ್ಲಿ ಜಮಾಯಿಸ ತೊಡಗಿದ್ದರು. ಒಂದು ಕಡೆ ಕುಟುಂಬದವರ ರೋಧನ ಹೇಳತೀರದಾಗಿತ್ತು. ಮತ್ತೂಂದೆಡೆ ಬಿಜೆಪಿ ಕಾರ್ಯಕರ್ತರು ಕೊಲೆ ಆರೋಪಿಗಳನ್ನು ಬಂಧಿಸ ಬೇಕೆಂದು ಪ್ರತಿಭಟನೆಗೆ ಮುಂದಾದರು. ಇದೇ ಸಮಯದಲ್ಲಿ ಸ್ಥಳದಲ್ಲಿದ್ದ ಕೇಂದ್ರ ವಲಯದ ಐ ಜಿ ಪಿ ಸೀಮಂತ್ ಕುಮಾರ್ ಸಿಂಗ್ ಪ್ರತಿಭಟನಾಕಾರರನ್ನು ಚದುರಿಸಲು ಮುಂದಾದಾಗ ಮುಖಂಡರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಬಿಜೆಪಿ ಕಾರ್ಯಕರ್ತರು ಬೆಂಗಳೂರು – ಹೊಸೂರು ರಾಷ್ಟ್ರೀಯ ಹೆದ್ದಾರಿಯ ಎರಡು ಕಡೆಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಇಳಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಮನಗಂಡ ಪೊಲೀಸರು ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವುದಾಗಿ ಕುಟುಂಬಸ್ಥರಿಗೆ, ಸ್ಥಳೀಯ ಮುಖಂಡರಿಗೆ ಭರವಸೆ ನೀಡಿದರು. ನಂತರವೇ ಪ್ರತಿಭಟನೆ ಹಿಂಪಡೆಯಲಾಯಿತು.
ಪೊಲೀಸರ ಸರ್ಪಗಾವಲು: ಕೊಲೆಯಾಗಿದ್ದು ಸ್ಥಳೀಯ ಮುಖಂಡನಾಗದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಆವರಿಸಿತ್ತು. ಹೀಗಾಗಿ ಕೇಂದ್ರವಲಯದ ಐಜಿಪಿ ಸೀಮಂತ್‌ಕುಮಾರ್‌ಸಿಂಗ್ ಖುದ್ದು ಮೊಕ್ಕಾಂ ಹೂಡಿ ಪರಿಸ್ಥಿತಿ ಹತೋಟಿ ತರಲು ಪ್ರಯತ್ನಿಸಿದರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಅವರು, ಕೂಡಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ನೆಲಮಂಗಲ, ದೇವಹಳ್ಳಿ,
ಕೋಲಾರ, ರಾಮನಗರ ಸೇರಿದಂತೆ ಐದು ಡಿವೈಎಸ್ಪಿಗಳು, 30 ಕ್ಕೂ ಹೆಚ್ಚು ಸಬ್ ಇನ್ಸ್‌ಪೆಕ್ಟರ್ ಗಳು, 20 ಇನ್ಸ್ ಪೆಕ್ಟರ್‌ಗಳು ನೂರಕ್ಕೂ ಹೆಚ್ಚು ಪೊಲೀಸರು, ಜಿಲ್ಲಾ ಮೀಸಲು ಪೊಲೀಸ್‌ನ ತುಕಡಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ಪರಿಸ್ಥಿತಿ ಹತೋಟಿಗೆ ತಂದರು. ಸ್ಥಳದಲ್ಲಿ ಕಾರ್ಯಕರ್ತರಿಗಿಂತ ಪೊಲೀಸರೇ ಹೆಚ್ಛಿನ ಸಂಖ್ಯೆಯಲ್ಲಿದ್ದರು.
ತಾಲೂಕಿನಲ್ಲಿ ಸ್ವಯಂ ಘೋಷಿತ ಬಂದ್: ಕೊಲೆ ಸುದ್ದಿ ತಿಳಿಯುತ್ತಿದ್ದಂತೆ ಬೊಮ್ಮಸಂದ್ರ, ಕಿತ್ತಗಾನಹಳ್ಳಿ ಗೇಟ್, ನಾರಾಯಣಹೃದ್ರಾಯಲಯ ಆಸ್ಪತ್ರೆ ಮುಂಭಾಗ ಮೃತನ ಗ್ರಾಮದಲ್ಲಿ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಸ್ವಯಂ ಘೋಷಿತ ಬಂದ್ ಆಚರಿಸಿದರು. ಕಿತ್ತಗಾನಹಳ್ಳಿ ಗೇಟ್ ಬಳಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಕೆಲ ಕಾಲ ಪ್ರತಿಭಟನೆ ನಡೆಸಲಾಯಿತು. ಆಸ್ಪತ್ರೆ, ಮೆಡಿಕಲ್ ಸ್ಟೋರ್ ಹೊರತು ಪಡಿಸಿ ಉಳಿದೆಲ್ಲ ಅಂಗಡಿ ಹೋಟೆಲ್‌ಗಳೂ ಮುಚ್ಚಿದ್ದವು.
ಜೊತೆಗಿತ್ತು ಜನ ಸಾಗರ: ಮದ್ಯಾಹ್ನ ಮೂರು ಗಂಟೆ ಸುಮಾರಿಗೆ ವಿಕ್ಟೋರಿಯಾ ಆಸ್ಪತ್ರೆಯಿಂದ ವಾಸು ಅವರ ಶವವನ್ನು ಸ್ವಗ್ರಾಮ ಕಿತ್ತಗಾನಹಳ್ಳಿಗೆ ತರಲಾಯಿತು. ಈ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸಾಗರ ನೆರೆದಿತ್ತು. ಕಿಲೋಮೀಟರ್‌ಗಟ್ಟಲೆ ವಾಹನಗಳು ನಿಂತಿದ್ದವು. ತಾಲೂಕು ಸೇರಿದಂತೆ ಹಲವ ಕಡೆಗಳಿಂದ ಬಿ ಜೆ ಪಿ ಮುಖಂಡರು, ಕಾರ್ಯಕರ್ತರು ಆಗಮಿಸಿದ್ದರು.
ಮಾಜಿ ಸಚಿವ ಎ.ನಾರಾಯಣಸ್ವಾಮಿ ಶವ ಪಕ್ಕದಲ್ಲೇ ನಿಂತು ಕಣ್ಣೀರು ಸುರಿಸುತ್ತಿದ್ದರು. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಕೃಷ್ಣಪ್ಪ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮುನಿರಾಜು ಸೇರಿದಂತೆ ತಾಲೂಕು ಪಂಚಾಯ್ತಿ ಅಧ್ಯಕ್ಷರು, ಜಿ ಪಂ ಸದಸ್ಯರು, ತಾ ಪಂ ಸದಸ್ಯರು ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.
ವಾಸು ನನ್ನ ಮಗನಂತಿದ್ದ ಎಂದ ನಾರಾಯಣಸ್ವಾಮಿ: ಶ್ರೀನಿವಾಸ್‌ಪ್ರಸಾದ್ ಕಿತ್ತಿಗಾನಹಳ್ಳಿ ವಾಸು ಎಂದೇ ಹೆಸರಾಗಿದ್ದ. ಆತ ನನ್ನ ಸ್ವಂತ ಮಗನ ರೀತಿ ಇದ್ದವನು. ರಾಜಕೀಯ ದ್ವೇಷಕ್ಕೆ ಅವನ ಹತ್ಯೆ ನಡೆದಿರುವ ಸಾಧ್ಯತೆಗಳಿವೆ ಎಂದು ಮಾಜಿ ಸಚಿವ ನಾರಾಯಣ ಸ್ವಾಮಿ ಹೇಳಿದ್ದಾರೆ. ವಾಸು ರಿಯಲ್ ಎಸ್ಟೇಟ್ ಮಾಫಿಯಾ ಮಾಡಿದವನಲ್ಲ. ಸಾಧು ಸ್ವಭಾವದ ವ್ಯಕ್ತಿ. ಯಾರೊಂದಿಗೂ ಜಗಳ ಮಾಡಿದವನಲ್ಲ. ಏರು ಧ್ವನಿಯಲ್ಲಿ ಮಾತನಾಡಿದವನಲ್ಲ. ಹಂತಕರನ್ನು ಕೂಡಲೆ ಬಂಧಿಸಬೇಕು ಎಂದು ಪೊಲೀಸರಿಗೆ ಒತ್ತಾಯಿಸಿದರು.
ಡಿವೈಎಸ್ಪಿನೇತೃತ್ವದಲ್ಲಿ ತಂಡ ರಚನೆ
ಕೊಲೆ ಸಂಬಂದ ಪಟ್ಟಂತೆ ತನಿಖೆ ಆರಂಭಿಸಲಾಗಿದೆ, ಈಗಾಲೆ ಸ್ಥಳೀಯ ಡಿ ವೈ ಎಸ್ಪಿ ಉಮೇಶ್ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ ಕೂಡಲೆ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಕೇಂದ್ರವಲಯದ ಐಜಿಪಿ ಸೀಮಂತ್‌ಕುಮಾರ್‌ಸಿಂಗ್ ಹೇಳಿದರು. ಮುಂಜಾನೆ ಐದೂವರೆ ಸುಮಾರಿನಲ್ಲಿ ಹತ್ಯೆ ನಡೆದಿದೆ. ಮಾರಕಾಸ್ತ್ರಗಳಿಂದ ಒಬ್ಬರಿಗಿಂತ ಹೆಚ್ಚು ಮಂದಿ ಕೊಲೆ ಮಾಡಿರಬಹುದು, ಕೊಲೆಗೆ ನಿಕರ ಕಾರಣ ತಿಳಿದು ಬಂದಿಲ್ಲ.
ಅವರ ಕುಟುಂಬಸ್ಥರು ನೀಡಿರುವ ದೂರಿನಲ್ಲಿ ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲ. ವಾಸು ರಾಜಕಾರಣದ ಜತೆಗೇ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಈ ಎರಡು ಹಿನ್ನಲೆಯಲ್ಲಿ ಕೊಲೆಯಾಗಿದೆಯೇ ಅಥವ ಇನ್ನಾವುದೇ ವಿವಾದಕ್ಕೆ ಕೊಲೆಯಾಗಿದೆ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ ಎಂದು ಹೇಳಿದ್ದಾರೆ. ಅಲ್ಲದೆ, ಕುಟುಂಬಸ್ಥರು ಮತ್ತು ನಾಗರಿಕರು ಪೊಲೀಸರ ತನಿಖೆಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಒಂದು ರಾಜಕೀಯ ಸಂಘರ್ಷ
ಕಳೆದ ವರ್ಷದ ಬೊಮ್ಮಸಂದ್ರ ಪುರಸಭೆಗೆ ಚುನಾವಣೆ ನಡೆದಿತ್ತು ಅದರಲ್ಲಿ ಬಿಜೆಪಿ ಬಹುಮತ ಪಡೆದಿತ್ತಾದರೂ, ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿತ್ತು. ಬಿಜೆಪಿಯಲ್ಲಿ ಎಸ್ಸಿ ಮಹಿಳೆ ಇರಲಿಲ್ಲ. ಹೀಗಾಗಿ ಬಹುಮತ ಇಲ್ಲದಿದ್ದರೂ, ಕಾಂಗ್ರೆಸ್‌ನ ಸರೋಜಮ್ಮ ಅಧ್ಯಕ್ಷರಾದರು. ಮೀಸಲಾತಿ ಬದಲಾವಣೆಗಾಗಿ ವಾಸು ನ್ಯಾಯಾಲಯದ ಮೊರೆ ಹೋಗಿದ್ದರು.
ಅಂದಿನಿಂದ ಕಾಂಗ್ರೆಸ್ ಸದಸ್ಯೆ ಸರೋಜಮ್ಮನ ಹಾಗೂ ಅವರ ಪುತ್ರ ಮಂಜು ಜೊತೆಗೆ ವಾಸು ವಾದವಿವಾದಗಳನ್ನು ನಡೆಸಿಕೊಂಡೆ ಬರಲಾಗುತ್ತಿತ್ತು. ಮಂಜು ಶಾಸಕ ಶಿವಣ್ಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವ. ಸದ್ಯ ಕೊಲೆಗೆ ಈ ಕಾರಣ ಮುನ್ನೆಲೆಗೆ ಬಂದಿದೆಯಾದರೂ, ಪೊಲೀಸರು ಈ ಬಗ್ಗೆ ಸ್ಪಷ್ಟಪಡಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.