ರಾಮಮಂದಿರಕ್ಕಾಗಿ ಸತ್ಯಾಗ್ರಹ?ಸಾಧು-ಸಂತರು ಪ್ರಧಾನಿಯನ್ನು ಭೇಟಿಯಾಗಲಿ
Team Udayavani, Dec 3, 2018, 6:00 AM IST
ಬೆಂಗಳೂರು: ರಾಮಜನ್ಮಭೂಮಿಯಲ್ಲೇ ರಾಮಮಂದಿರ ನಿರ್ಮಾಣಕ್ಕಾಗಿ ಸಾಧು-ಸಂತರು ಉಪವಾಸ ಸತ್ಯಾಗ್ರಹಕ್ಕೂ ಸಜ್ಜಾಗಬೇಕು ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಕರೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸಿ ವಿಶ್ವ ಹಿಂದು ಪರಿಷತ್ ವತಿಯಿಂದ ಭಾನುವಾರ ಇಲ್ಲಿನ ಬಸವನಗುಡಿ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಶ್ರೀಗಳು, ದೇಶಾದ್ಯಂತ ಇರುವ ಸಂತರು ಒಟ್ಟಾಗಿ ಸಮಿತಿ ರಚಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಬೇಕು. ಕೇಂದ್ರ ಸರ್ಕಾರವು ಅಯೋಧ್ಯೆಯಲ್ಲೇ ರಾಮಮಂದಿರ ನಿರ್ಮಾಣ ಮಾಡಲು ಸುಗ್ರಿವಾಜ್ಞೆ ಹೊರಡಿಸಬೇಕು. ಇದಕ್ಕಾಗಿ ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಗೊತ್ತುವಳಿ ಮಂಡಿಸಲು ಮನವಿ ಮಾಡಬೇಕು ಎಂದು ಸಲಹೆ ನೀಡಿದರು.
ಒಂದು ವೇಳೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸದಿದ್ದರೆ ದೇಶಾದ್ಯಂತ ಸಾಧು-ಸಂತರು ಉಪವಾಸ ಸತ್ಯಾಗ್ರಹ ಮಾಡುವ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಸಂತರು, ಸಮಾಜ ಹಾಗೂ ಸರ್ಕಾರ ಒಂದಾದಾಗ ಮಂದಿರ ನಿರ್ಮಾಣವೂ ಸುಲಭವಾಗುತ್ತದೆ. ಸಂತರಿಗೆ ಯಾವುದೇ ಪಕ್ಷ ಇಲ್ಲ. ಸಮಾಜವಂತೂ ರಾಮಮಂದಿರ ನಿರ್ಮಾಣ ಆಗಲೇ ಬೇಕು ಎಂದು ಕಾದುಕುಳಿತಿದೆ. ಸರ್ಕಾರದ ಸಹಕಾರ ಅತಿ ಅಗತ್ಯ ಎಂದು ಪೇಜಾವರ ಶ್ರೀಗಳು ಹೇಳಿದರು.
ನಾವು ಕೋಮುವಾದಿಗಳಲ್ಲ
ನಮ್ಮನ್ನು ಕೋಮುವಾದಿಗಳು ಎಂದು ಆರೋಪಿಸುತ್ತಾರೆ. ಆದರೆ, ನಾವು ಕೋಮುವಾದಿಗಳಲ್ಲ, ಪ್ರೇಮವಾದಿಗಳು. ಶ್ರೀರಾಮನಿಂದ ದೇಶದ ಜನತೆಗೆ ಸ್ಫೂರ್ತಿ, ಜಾಗೃತಿ ಹಾಗೂ ಚೈತನ್ಯ ಬಂದಿದೆ. ಶಾಪಗ್ರಸ್ತಳಾದ ಅಹಲೆÂಯ ಜಾಡ್ಯವೂ ಶ್ರೀರಾಮನ ಪಾದಸ್ಪರ್ಶದಿಂದ ದೂರಾಗಿತ್ತು. ದೇಶದ ಜತೆಯ ಜಾಡ್ಯವು ಶ್ರೀರಾಮನ ಪಾದುಕೆಯಿಂದ ದೂರಾಗಿದೆ ಎಂದು ಶ್ರೀಗಳು ವಿವರಿಸಿದರು.
ನ್ಯಾಯಾಲಯದ ನಡೆ ಬೇಸರ ತಂದಿದೆ
ಮಂದಿರ ನಿರ್ಮಾಣ ಹಿಂದೂಗಳ ಭಾವನೆಗೆ ಸಂಬಂಧಿಸಿದ ವಿಚಾರವಾಗಿದೆ. ನ್ಯಾಯಾಲಯಗಳಲ್ಲಿ ರಾಮ ಜನ್ಮಭೂಮಿಯ ಪ್ರಕರಣಕ್ಕೆ ಆದ್ಯತೆ ನೀಡದೇ ಇರುವುದು ಶ್ರೀರಾಮನಿಗೆ ತೋರಿದ ಅಗೌರವ ಹಾಗೂ ಹಿಂದೂಗಳಿಗೆ ಮಾಡಿದ ಅಪಮಾನ. ನ್ಯಾಯಾಲಯದ ಈ ನಡೆಯಿಂದ ತುಂಬ ಬೇಸರವಾಗಿದೆ. ದೇಶದ ನ್ಯಾಯಾಲಯ ವ್ಯವಸ್ಥೆ ಸುಧಾರಣೆಯಾಗಬೇಕು. ತ್ವರಿತ ನ್ಯಾಯದಾನದ ವ್ಯವಸ್ಥೆ ಜಾರಿಗೆ ಬರಬೇಕು. ನ್ಯಾಯದಾನದಲ್ಲಿ ವಿಳಂಬ ಸಲ್ಲದು ಎಂದು ಹೇಳಿದರು.
ದುಃಖವಾಗುತ್ತಿದೆ
ರಾಮಮಂದಿರ ನಿರ್ಮಾಣಕ್ಕೆ ಹಲವು ಹೋರಾಟಗಳು ನಡೆದಿವೆ. ದೇಶದ ಎಲ್ಲ ಜನ ಮಂದಿರ ನಿರ್ಮಾಣ ಅಯೋಧ್ಯೆಯ ರಾಮಜನ್ಮಸ್ಥಳದಲ್ಲೇ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ನನಗೆ ಈಗ 88 ವರ್ಷ ವಯಸ್ಸು. ಭವ್ಯ ರಾಮಮಂದಿರ ನೋಡುವ ಭಾಗ್ಯ ಸಿಗುತ್ತದೋ ಇಲ್ಲವೋ ಎಂಬ ಚಿಂತೆ ಕಾಡುತ್ತಿದ್ದು ದುಃಖವಾಗುತ್ತಿದೆ. ಶ್ರೀರಾಮ ರಾಷ್ಟ್ರ ಪುರುಷ. ಆದಷ್ಟು ಬೇಗ ರಾಮ ಮಂದಿರ ನಿರ್ಮಾಣವಾಗಬೇಕು. ರಾಷ್ಟ್ರ ಹಾಗೂ ಜನತೆಯ ಸ್ವಾಭಿಮಾನದ ಪ್ರಶ್ನೆ ಇದು ಎಂದು ತಿಳಿಸಿದರು.
ಕ್ರೈಸ್ತರು, ಮುಸ್ಲಿಮರು ಕೈ ಜೋಡಿಸಬೇಕು
ರಾಮಮಂದಿರ ನಿರ್ಮಾಣ ರಾಷ್ಟ್ರಕಾರ್ಯ. ಇದಕ್ಕೆ ಹಿಂದೂಗಳು ಮಾತ್ರವಲ್ಲದೇ ಮುಸ್ಲಿಮರು ಹಾಗೂ ಕ್ರೈಸ್ತರು ಸೇರಿದಂತೆ ಎಲ್ಲರೂ ಸಹಕಾರ ನೀಡಬೇಕು. ಮುಸ್ಲಿಮರು ಬೆಂಬಲ ನೀಡಿದರೆ ದೇಶವೇ ಬದಲಾಗಲಿದೆ. ಇದು ಮುಸ್ಲಿಮರಿಗೂ ಸುವರ್ಣ ಅವಕಾಶದಂತಿದೆ ಎಂದು ಹೇಳಿದರು.
ಜಬಲ್‌ಪುರದ ಅಖೀಲೇಶ್ವರಾನಂದ ಸ್ವಾಮೀಜಿ, ಆರ್‌ಎಸ್‌ಎಸ್ ಅಖೀಲ ಭಾರತೀಯ ಸಹಸರಕಾರ್ಯವಾಹ ಸಿ.ಆರ್.ಮುಕುಂದ್, ವಿಶ್ವಹಿಂದು ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ ಪರಾಂಡೆ, ಕರ್ನಾಟಕ ದಕ್ಷಿಣದ ಅಧ್ಯಕ್ಷೆ ಡಾ. ವಿಜಯಲಕ್ಷ್ಮೀ ದೇಶಮಾನೆ, ಸಂತೋಷ ಗುರೂಜಿ, ಆದಿಚುಂಚನಗಿರಿ ಮಠದ ವಿಜಯನಗರ ಶಾಖಾಮಠದ ಸೌಮ್ಯನಾಥ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ವೇದಿಕೆಯಲ್ಲಿದ್ದರು.
ನ್ಯಾಯಾಲಯ ಆಘಾತ ಮೂಡಿಸಿದೆ
ರಾಮಮಂದಿರ ನಿಮಾರ್ಣಕ್ಕಾಗಿ 490 ವರ್ಷದಿಂದ ಹೋರಾಟ ನಡೆಯುತ್ತಿದ್ದು, ಹಿಂದೂ ಸಮಾಜ ಯಾರ ಬಳಿಯೂ ಬೇಡಿಲ್ಲ. ನ್ಯಾಯಾಲಯದ ತೀರ್ಪಿನ ಮೇಲೆ ಗೌರವ ಹೊಂದಿದೆ. ರಾಜಕಾರಣಿಗಳಿಂದ ಸಮಾಜಕ್ಕೆ ಅನ್ಯಾಯವಾದಾಗ ನ್ಯಾಯಾಲಯ ನ್ಯಾಯ ಒದಗಿಸಿದೆ. ಆದರೆ ರಾಮಮಂದಿರ ವಿಚಾರದಲ್ಲಿ ನ್ಯಾಯಾಲಯದ ನಡೆ ಆಘಾತ ಮೂಡಿಸಿದೆ ಎಂದು ಜಬಲ್‌ಪುರದ ಅಖೀಲೇಶ್ವರಾನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಮಮಂದಿರ ನಿರ್ಮಾಣಕ್ಕೆ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗೋಹತ್ಯೆ ನಿಷೇಧ ಮಾಡಿದ್ದವರು ಮೋದಿ. ರಘುಪತಿ ರಾಘವ ರಾಜಾರಾಂ… ಹಾಡಿದ ಮಹಾತ್ಮ ಗಾಂಧೀಜಿ ಬಂದ ನಾಡಿನಿಂದಲೇ ಬಂದ ಮೋದಿ ಅವರು ರಾಮ ಮಂದಿರ ನಿರ್ಮಿಸುವ ದೃಢ ಸಂಕಲ್ಪ ಮಾಡಬೇಕು. ಪ್ರಕರಣವನ್ನು ಆದ್ಯತೆಯಾಗಿ ಪರಿಗಣಿಸುವಂತೆ ಸಾಲಿಸಿಟರ್ ಜನರಲ್ ಮೂಲಕ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು. ಆಗದಿದ್ದಲ್ಲಿ ಸುಗ್ರೀವಾಜ್ಞೆ ಮೂಲಕ ರಾಮಮಂದಿರಕ್ಕೆ ಹಾದಿ ಸುಗಮಗೊಳಿಸಬೇಕು ಎಂದು ಒತ್ತಾಯಿಸಿದರು.
ಬಾಬರಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡಲ್ಲ
1992ರಲ್ಲೂ ಕೋಟ್ಯಂತರ ಹಿಂದೂಗಳು ನ್ಯಾಯಾಲಯದ ಆದೇಶಕ್ಕೆ ಕಾದು ಕುಳಿತಿದ್ದರು. ಕರಸೇವೆ ಮಾಡಬೇಕೆ ಬೇಡವೇ ಎಂಬ ಕುರಿತು ತೀರ್ಪನ್ನು ನ್ಯಾಯಾಲಯ ಮುಂದೂಡಿದ ನಂತರ ಅವರ ತಾಳ್ಮೆಯ ಕಟ್ಟೆಯೊಡೆದು ನಾಲ್ಕು ಗಂಟೆಯಲ್ಲಿ ಕಟ್ಟಡ ಧ್ವಂಸವಾಗಿತ್ತು ಎಂದು ವಿಶ್ವಹಿಂದೂ ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ ಪರಾಂಡೆ ಹೇಳಿದರು.
ಕೆಲವರು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಿಸುತ್ತೇವೆ ಎನ್ನುತ್ತಿದ್ದಾರೆ. ರಾಮಜನ್ಮಸ್ಥಾನದಲ್ಲಷ್ಟೆ ಅಲ್ಲ, ಇಡೀ ಅಯೋಧ್ಯೆ ಪರಿಸರದಲ್ಲೆ ಹೊಸ ಮಸೀದಿ ನಿರ್ಮಾಣ ಸಾಧ್ಯವಿಲ್ಲ. ಇಡೀ ದೇಶದಲ್ಲಿ ಎಲ್ಲಿಯೂ ಬಾಬರನ ಹೆಸರಿನಲ್ಲಿ ಒಂದೂ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕೋರ್ಟ್‌ನಲ್ಲಿ ನಿದ್ರಾದೇವಿ ನೆಲೆಸಿದ್ದಾಳೆ!
1949ರಿಂದ ರಾಮಜಪ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಅಲಹಾಬಾದ್ ಕೋರ್ಟ್‌ನಿಂದ ಸುಪ್ರೀಂಕೋರ್ಟ್‌ವರೆಗೂ ಪ್ರಕರಣ ಹೋಗಿದೆ. ಆದರೆ, ಇದು ಆದ್ಯತೆಯ ವಿಷಯ ಆಗಲೇ ಇಲ್ಲ. ದೇಶದ ಕೋಟಿ ಕೋಟಿ ಹಿಂದೂಗಳ ಭಾವನೆಯ ವಿಷಯವನ್ನು ಆದ್ಯತೆ ಮೇರೆಗೆ ಇತ್ಯರ್ಥ ಮಾಡಲು ನ್ಯಾಯಾಲಯಕ್ಕೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಜನಾಗ್ರಹ ಸಭೆ ಮಾಡಬೇಕಾಗಿದೆ ಎಂದು ಆರ್‌ಎಸ್‌ಎಸ್ ಅಖೀಲ ಭಾರತೀಯ ಸಹಸರಕಾರ್ಯವಾಹ ಸಿ.ಆರ್.ಮುಕುಂದ್ ಹೇಳಿದರು.
ರಾಮ ಮಂದಿರ ನಿರ್ಮಾಣಕ್ಕೆ 77 ಬಾರಿ ಹೋರಾಟ ನಡೆದಿದೆ. ರಾಮಶಿಲಾಯಾತ್ರೆ, ರಾಮಜ್ಯೋತಿಯಾತ್ರೆ, ರಾಮಪಾದುಕೆ ಯಾತ್ರೆ, ಕೊಠಾರಿ ಸಹೋದರರ ಬಲಿದಾನ, ಮಹಿಳೆಯರ ಹೋರಾಟ ಹೀಗೆ ನಾನಾ ರೀತಿಯ ಯುದ್ಧ ನಡೆದಿದೆ. ಈಗ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲೇಬೇಕು ಎಂದು ಆಗ್ರಹಿಸಿದರು.
ಹರಿದು ಬಂದ ಜನಸಾಗರ
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ ಜಿಲ್ಲೆಗಳ ಸಾವಿರಾರು ಜನರು ಜನಾಗ್ರಹ ಸಭೆಯಲ್ಲಿ ಭಾಗಿಯಾಗಿದ್ದರು. ವೇದಿಕೆ ಮುಂಭಾಗದಲ್ಲಿ ಹಾಕಲಾಗಿದ್ದ ಕುರ್ಚಿಗಳು ಭರ್ತಿಯಾಗಿ, ಮೈದಾನದ ಸುತ್ತಲೂ ಜನ ಜಮಾಯಿಸಿದ್ದರು. ಕೇಸರಿ ಬಾವುಟಗಳಿಂದ ರಾರಾಜಿಸುತ್ತಿದ್ದ ಮೈದಾನದಲ್ಲಿ ಜೈಶ್ರೀರಾಮ ಮತ್ತು ಭಾರತ್ ಮಾತಾಕೀ ಜೈಘೋಷಣೆಗಳು ಮೊಳಗುತ್ತಿದ್ದವು. ರಾಮದರ್ಬಾರ್ ವೇದಿಕೆಯಲ್ಲಿ ರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಂತನ ವೇಷಧಾರಿಗಳು ಗಮನ ಸೆಳೆದರು.
ಸಂಸದರಾದ ಪಿ.ಸಿ.ಮೋಹನ್, ಪ್ರತಾಪ್‌ಸಿಂಹ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ, ಶಾಸಕರಾದ ಅರವಿಂದ ಲಿಂಬಾವಳಿ, ಉದಯ ಗರುಡಾಚಾರ್, ಎಸ್. ಸುರೇಶ್ ಕುಮಾರ್ ಮೊದಲಾದವರು ಪ್ರೇಕ್ಷಕರೊಂದಿಗೆ ಕುಳಿತಿದ್ದರು.
ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತರಬೇಕು ಎಂಬ ಒತ್ತಾಯಕ್ಕೆ ದೊಡ್ಡ ಮಟ್ಟದ ಹೋರಾಟದ ಅಗತ್ಯವಿದೆ. ಹನುಮಂತನ ಜನ್ಮಸ್ಥಳ ಕರ್ನಾಟಕವಾಗಿದ್ದು, ಇಲ್ಲಿನ ಯುವಕರು ಈ ಹೋರಾಟದಲ್ಲಿ ಹುನುಮಂತನಂತೆ ಕಾರ್ಯ ನಿರ್ವಹಿಸಬೇಕು. ರಾಮಮಂದಿರ ನಿರ್ಮಾಣವಾಗುವವರೆಗೂ ನಮಗೆ ವಿರಾಮ ಮತ್ತು ಆರಾಮ ಇಲ್ಲ.
– ವಿಶ್ವೇಶತೀರ್ಥರು, ಪೇಜಾವರ ಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.