ಹವಾಮಾನ ಬದಲಾವಣೆಯಿಂದ ಹೆಚ್ಚಿದ ವೈರಾಣು ಜ್ವರ
Team Udayavani, Mar 14, 2018, 12:08 PM IST
ಬೆಂಗಳೂರು: ಮುಂಜಾನೆ ಚಳಿ, ಮಧ್ಯಾಹ್ನ ಚುರುಗುಟ್ಟುವ ಬಿಸಿಲಿರುವ ವಾತಾವರಣದಿಂದಾಗಿ ನಗರದಲ್ಲಿ ವೈರಾಣು ಜ್ವರ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದ್ದು, ಮಕ್ಕಳು ಸೇರಿದಂತೆ ಸಾಕಷ್ಟು ಮಂದಿ ಅಸ್ವಸ್ಥಗೊಳ್ಳುತ್ತಿರುವುದು ಆತಂಕ ಮೂಡಿಸಿದೆ.
ಮುಖ್ಯವಾಗಿ ಐದು ವರ್ಷದೊಳಗಿನ ಮಕ್ಕಳು ಬಹುಬೇಗ ವೈರಾಣು ಜ್ವರಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ವೈರಾಣು ಜ್ವರ ಒಬ್ಬರಿಂದೊಬ್ಬರಿಗೆ ಹರಡುವುದರಿಂದ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪರೀಕ್ಷಾ ಸಮಯದಲ್ಲೇ ಮಕ್ಕಳು ಜ್ವರದಿಂದ ಬಳಲುತ್ತಿರುವುದು ಪೋಷಕರಲ್ಲೂ ಆತಂಕ ಮೂಡಿಸಿದೆ.
ಈ ಬಾರಿ ವಾತಾವರಣದಲ್ಲಿ ಭಾರಿ ಏರುಪೇರು ಉಂಟಾಗಿದ್ದು, ಮುಂಜಾನೆ ಚಳಿಯಿದ್ದರೆ ಹೊತ್ತು ಕಳೆದಂತೆ ಬಿಸಿಲಿನ ತಾಪ ಏರುತ್ತಾ ಹೋಗುತ್ತದೆ. ಇದು ವೈರಾಣುಗಳು ಕ್ರಿಯಾಶೀಲವಾಗಿರಲು ಪೂರಕ ವಾತಾವರಣವಾಗಿದ್ದು, ವ್ಯಾಪಕವಾಗಿ ಜ್ವರ ಕಾಣಿಸಿಕೊಳ್ಳಲು ಕಾರಣವಾಗಿದೆ ಎನ್ನುತ್ತಾರೆ ವೈದ್ಯರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಜೆ 4 ಗಂಟೆ ನಂತರ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಸಿಗದ ಕಾರಣ ಸಂಜೆ ಹಾಗೂ ರಾತ್ರಿ ಹೊತ್ತಿನಲ್ಲಿ ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಮ್‌ಗಳನ್ನು ರೋಗಿಗಳು ಆಶ್ರಯಿಸುವಂತಾಗಿದೆ. ನಗರದ ಬಹುತೇಕ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆಗೆ ಕಾದು ಕುಳಿತ ದೃಶ್ಯ ಸಾಮಾನ್ಯವಾಗಿದೆ.
ಮಕ್ಕಳಿಗೆ ಬೇಗ ಜ್ವರ: ಕಳೆದ 15 ದಿನಗಳಲ್ಲಿ ವೈರಾಣು ಜ್ವರ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಮಕ್ಕಳಲ್ಲಿ ಅದರಲ್ಲೂ ಐದು ವರ್ಷದೊಳಗಿನ ಸಾಕಷ್ಟು ಮಕ್ಕಳಲ್ಲಿ ಜ್ವರ ಕಾಣಿಸಿಕೊಳ್ಳುತ್ತಿದೆ. ಸದ್ಯದ ವಾತಾವರಣವು ವೈರಾಣುಗಳು ಕ್ರಿಯಾಶೀಲವಾಗಿರಲು ಪೂರಕವಾಗಿರುವುದರಿಂದ ಹೆಚ್ಚು ಮಕ್ಕಳು, ವಯಸ್ಕರಲ್ಲಿ ಜ್ವರ ಕಾಣಿಸಿಕೊಳ್ಳುತ್ತಿರುವ ಸಾಧ್ಯತೆ ಇದೆ ಎಂದು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಡಾ.ಚಿಕ್ಕನರಸರೆಡ್ಡಿ ತಿಳಿಸಿದರು.
ಬೌರಿಂಗ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆದವರ ಸಂಖ್ಯೆ ಶೇ.30ರಷ್ಟು ಹೆಚ್ಚಾಗಿದೆ. ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಮ್‌ಗಳಲ್ಲೂ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಸಂಖ್ಯೆ ಶೇ.50ರಷ್ಟು ಹೆಚ್ಚಾಗಿದೆ ಎಂಬ ಮಾಹಿತಿ ಇದೆ. ವೈರಾಣು ಜ್ವರಕ್ಕೆ ನಿರ್ದಿಷ್ಟ ಔಷಧವಿರುವುದಿಲ್ಲ. ಆರಂಭದಲ್ಲೇ ಜ್ವರ ಪತ್ತೆಯಾದರೆ ಸಾಧಾರಣ ಜ್ವರದ ಮಾತ್ರೆ ನೀಡಿ ಗುಣಪಡಿಸಬಹುದು. ಜ್ವರ ಉಲ್ಪಣಿಸಿದರೆ ಗುಣವಾಗುವಾಗುವುದು ತಡವಾಗುತ್ತದೆ.
ಜ್ವರದ ತೀವ್ರತೆ
* ಉಸಿರಾಟದ ತೊಂದರೆ ನೆಗಡಿ, ಕೆಮ್ಮು, ಮೈಕೈ ನೋವು, 2-3 ದಿನ ವಿಪರೀತ ಜ್ವರ
* ಅಜೀರ್ಣದಿಂದಾಗಿ ವಾಂತಿ, ಭೇದಿ, ಹೊಟ್ಟೆ ನೋವು
* ವಿಪರೀತ ಜ್ವರ, ಮೈಮೇಲೆಲ್ಲಾ ಗುಳ್ಳೆಗಳು ಮೂಡುವುದು
ಮುನ್ನಚ್ಚರಿಕೆ ಕ್ರಮ: ಮಕ್ಕಳಿಗೆ ವೈರಾಣು ಜ್ವರ ಕಾಣಿಸಿಕೊಂಡರೆ ತಕ್ಷಣ ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಬೇಕು. ಜ್ವರದಿಂದ ಬಳಲುವವರು ಬಳಸುವ ಕರವಸ್ತ್ರ, ಟವಲ್ ಇತರೆ ವಸ್ತ್ರಗಳನ್ನು ಇತರರು ಬಳಸದಂತೆ ಎಚ್ಚರ ವಹಿಸಬೇಕು. ಕೈಗಳನ್ನು ಸ್ವತ್ಛವಾಗಿ ತೊಳೆದುಕೊಂಡು ತಿಂಡಿ, ಊಟ ಸೇವಿಸಬೇಕು. ಕುದಿಸಿ ಆರಿಸಿದ ನೀರು ಸೇವನೆ ಸೂಕ್ತ. ಬಿಸಿ ಆಹಾರ ಪದಾರ್ಥ ಸೇವನೆ ಒಲಿತು.
ಹವಾಮಾನ ಬದಲಾವಣೆಯಾದಾಗ ಸಹಜವಾಗಿ ವೈರಾಣು ಜ್ವರ ಕಾಣಿಸಿಕೊಳ್ಳುತ್ತದೆ. ಸದ್ಯ ದಿನದ ವಾತಾವರಣದಲ್ಲಿ ಚಳಿ, ತೀವ್ರ ಬಿಸಿಲಿನಿಂದಾಗಿ ಜ್ವರ ಕಾಣಿಸಿಕೊಳ್ಳಬಹುದು. ಬಿಸಿಲಿನ ತೀವ್ರತೆಯಿಂದ ದಾಹವಾದಾಗ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಎಚ್ಚರ ವಹಿಸುವುದು ಮುಖ್ಯ. ಹಣ್ಣಿನ ರಸ, ಐಸ್‌ಕ್ರೀಮ್ ಸೇವಿಸುವಾಗಲೂ ಎಚ್ಚರಿಕೆ ಮುಖ್ಯ.
-ಡಾ. ಬಿ.ಜಿ.ಪ್ರಕಾಶ್ ಕುಮಾರ್, ಉಪನಿರ್ದೇಶಕರು, ಆರೋಗ್ಯ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.