ತಾಯಿಗೆ ಮಗ ಥಳಿಸಿದ “ವೈರಲ್ ವಿಡಿಯೋ’ ತಂದಿಟ್ಟ ಪಜೀತಿ!
Team Udayavani, Dec 9, 2018, 12:21 PM IST
ಬೆಂಗಳೂರು: ಈಗಿನ್ನೂ 9ನೇ ತರಗತಿ ವಿಧ್ಯಾಭ್ಯಾಸ ಮಾಡುತ್ತಿರುವ ಬಾಲಕನೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನ ತಾಯಿ ಮೇಲೆ ಹಲ್ಲೆ ನಡೆಸಿದ ವಿಡಿಯೋದಿಂದಾಗಿ ಇಡೀ ಕುಟುಂಬ ಮುಜುಗರ ಅನುಭವಿಸುವಂತಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ ಆಧರಿಸಿ ಜೆ.ಪಿ.ನಗರ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ಮಗ ಪೊಲೀಸರ ವಶಕ್ಕೆ ಸೇರುತ್ತಿದ್ದಂತೆ ತಾಯಿ, ತಂದೆ, ಸಹೋದರಿ ಕಣ್ಣೀರು ಹಾಕುತ್ತಿದ್ದಾರೆ.
ವಿಡಿಯೋ ಆಧರಿಸಿ ಐಪಿಸಿ ಕಲಂ 509, 354, ಕೋಟಾ³ ಕಾಯಿದೆ (ಧೂಮಪಾನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. “ಸ್ನೇಹಿತರ ಮುಂದೆ ನನ್ನನ್ನು ಬೈದಿದ್ದಕ್ಕೆ ಹಲ್ಲೆ ನಡೆಸಿದೆ. ತಾಯಿಯೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ನಾವೆಲ್ಲರೂ ಚೆನ್ನಾಗಿದ್ದೇವೆ’ ಎಂದು ಬಾಲಕ ಹೇಳಿಕೆ ನೀಡಿದ್ದಾನೆ.
ಬಾಲಕನನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸುತ್ತೇವೆ. ಅಲ್ಲಿ, ತಾಯಿ ಹಾಗೂ ಮಗ ಹೇಳಿಕೆ ನೀಡಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಮಗನ ವರ್ತನೆ ಈ ಮಟ್ಟಕ್ಕೆ ಹೋಗುತ್ತದೆ ಎಂದು ಊಹಿಸಿರಲಿಲ್ಲ ಎಂದು ತಾಯಿ, ನೋವು ತೋಡಿಕೊಳ್ಳುತ್ತಿದ್ದಾರೆ.
ಹಲ್ಲೆಗೆ ಕಾರಣ ಏನು? : ಶಿವಮೊಗ್ಗ ಮೂಲದ ಮಹಿಳೆ, ಸರ್ಕಾರಿ ಉದ್ಯೋಗಿಯಾಗಿದ್ದು, ಪುತ್ರ ಹಾಗೂ ಮಗಳ ಜತೆ ಜೆ.ಪಿ.ನಗರದಲ್ಲಿ ವಾಸವಿದ್ದಾರೆ. ಅವರ ಪತಿ ಊರಿನಲ್ಲಿ ಕೃಷಿ ಮಾಡಿಕೊಂಡಿದ್ದು ಆಗಾಗ ನಗರಕ್ಕೆ ಬಂದು ಹೋಗುತ್ತಾರೆ.
ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಬಾಲಕ, ಸ್ನೇಹಿತರ ಜತೆ ಸುತ್ತಾಡಿ, ಸಿಗರೇಟು ಸೇದುತ್ತಿದ್ದ. ಜತೆಗೆ, ವಿಪರೀತ ಹಣ ಖರ್ಚು ಮಾಡುತ್ತಿದ್ದ. ಇದಕ್ಕಾಗಿ ತಾಯಿಯನ್ನು ಪೀಡಿಸಿ ಹಣ ಪಡೆದುಕೊಳ್ಳುತ್ತಿದ್ದ. ಇದೇ ವಿಚಾರಕ್ಕೆ ತಾಯಿ ಬುದ್ಧಿವಾದ ಹೇಳಿ ಬೈಯುತ್ತಿದ್ದರು.
ಇತ್ತೀಚೆಗೆ ಆತನ ಸ್ನೇಹಿತರು ಮನೆಗೆ ಬಂದಿದ್ದಾಗ, “ನನ್ನ ಮಗನ ಜತೆ ಸೇರಿ ಯಾಕೆ ದುಡ್ಡು ಖರ್ಚು ಮಾಡಿಸುತ್ತೀರಾ? ಓದುವ ವಯಸ್ಸಲ್ಲಿ ಹೀಗೆಲ್ಲ ಮಾಡುವುದು ಸರಿಯಲ್ಲ. ನಿಮ್ಮೊಂದಿಗೆ ಇವನೂ ಹಾಳಾಗುತ್ತಿದ್ದಾನೆ’ ಎಂದು ಬೈದಿದ್ದಾರೆ.
ಈ ವಿಚಾರಕ್ಕೆ ಕೋಕಗೊಂಡ ಪುತ್ರ, ಸ್ನೇಹಿತರು ಮನೆಯಿಂದ ತೆರಳುತ್ತಿದ್ದಂತೆ, ಸೋಫಾದಲ್ಲಿ ಕುಳಿತಿದ್ದ ತಾಯಿಗೆ ಬೈದಿದ್ದಾನೆ. ನನ್ನ ವಿಚಾರ ನಿನಗೇಕೆ ಬೇಕು. ಎಂದು ಅಸಭ್ಯ ಭಾಷೆ ಬಳಸಿ ನಿಂದಿಸಿದ್ದಾನೆ. ಜತೆಗೆ ಎರಡು ಬಾರಿ ಪೊರಕೆಯಿಂದ ಹೊಡೆದಿದ್ದಾನೆ. “ನನ್ನ ಬಗ್ಗೆ ಮಾತನಾಡಿದರೆ ಬೀಳ್ತಾವೆ ಎಂದು ಗೊತ್ತು ತಾನೆ. ನಾನು ನಿನ್ನ ತಂಟೆಗೆ ಬರಲ್ಲ, ನೀನ್ಯಾಕೆ ನನ್ನ ತಂಟೆಗೆ ಬರ್ತೀಯ?
ತಪ್ಪು ನಿಂದೇ ಇಟ್ಟುಕೊಂಡು ನನ್ನ ಮೇಲೆ ಹೇಳ್ತಿಯಾ’ ಎಂದು ಬೈದಿದ್ದಾನೆ. ಕುಟುಂಬ ಸದಸಯರೊಬ್ಬರು ಘಟನೆಯನ್ನು ವಿಡಿಯೋ ಮಾಡಿದ್ದು, ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಾಯಿ ಹಾಗೂ ಮಗನ ನಡುವೆ ಈ ರೀತಿ ಹಲವು ಬಾರಿ ಜಗಳ ನಡೆದಿದ್ದು, ತಾಯಿ ಈ ವಿಚಾರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.