ಅತೃಪ್ತರ ಕ್ಷೇತ್ರಗಳಲ್ಲಿ ಮತದಾರ ಅತಂತ್ರ
Team Udayavani, Jul 13, 2019, 3:07 AM IST
ಬೆಂಗಳೂರು: ಒಂದೆಡೆ ಮೈತ್ರಿ ಸರ್ಕಾರ ಅಳಿವು ಉಳಿವಿನ ಸ್ಥಿತಿ ತಲುಪಿದೆ, ಇನ್ನೊಂದೆಡೆ ಅತೃಪ್ತ ಶಾಸಕರು ಐಶಾರಾಮಿ ಹೋಟೆಲ್, ರೆಸಾರ್ಟ್‌ಗಳಲ್ಲಿ ಬೀಡುಬಿಟ್ಟಿದ್ದಾರೆ. ಇವರ ನಡುವೆ ಬೆಂಗಳೂರಿನಲ್ಲಿ ಉಂಟಾಗಿರುವ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿರುವುದು ಮಾತ್ರ ಮತದಾರರು.
ಮೈತ್ರಿ ಸರ್ಕಾರದಿಂದ ಅತೃಪ್ತಗೊಂಡು ಬೆಂಗಳೂರಿನ ಆರು ಶಾಸಕರು ರಾಜೀನಾಮೆ ನೀಡಿದ್ದು, ನಾಲ್ಕು ಶಾಸಕರು ಮುಂಬೈನಲ್ಲಿದ್ದರೆ, ಇಬ್ಬರು ಕ್ಷೇತ್ರದಲ್ಲಿ ಇದ್ದೂ ಇಲ್ಲದಂತಾಗಿದ್ದಾರೆ. ಇದರಿಂದಾಗಿ ಆ ಕ್ಷೇತ್ರದ ಜನರ ಸಮಸ್ಯೆಗಳಿಗೆ ಕಿವಿಗೊಡುವವರಿಲ್ಲದಂತಾಗಿದೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ.
ಸದ್ಯ ಯಶವಂತಪುರ (ಎಸ್.ಟಿ. ಸೋಮಶೇಖರ್), ಮಹಾಲಕ್ಷ್ಮೀ ಬಡಾವಣೆ (ಗೋಪಾಲಯ್ಯ), ಕೆ.ಆರ್.ಪುರ (ಬೈರತಿ ಬಸವರಾಜು), ರಾಜರಾಜೇಶ್ವರಿ ನಗರ (ಮುನಿರತ್ನ), ಶಿವಾಜಿನಗರ (ರೋಷನ್‌ಬೇಗ್), ಬಿಟಿಂಎಂ ಬಡಾವಣೆ (ರಾಮಲಿಂಗಾ ರೆಡ್ಡಿ) ಮತದಾರರು ತಮ್ಮ ಸ್ಥಳೀಯ ಸಮಸ್ಯೆಗಳಿಗೆ ಬಿಬಿಎಂಪಿ ಸದ್ಯರ ಬಳಿ ಹೋಗುತ್ತಿದ್ದಾರೆ.
ಆದರೆ, ಕಾರ್ಪೊರೇಟರ್‌ಗಳು; ಅನುದಾನದ ಕೊರತೆ, ಶಾಸಕರ ಅನುದಾನ ಬರಬೇಕು, ಶಾಸಕರ ಅನುಮೋದನೆ ಬಾಕಿ ಇದೆ ಎಂದು ಸಬೂಬು ಹೇಳುತ್ತಿದ್ದಾರೆ. ಇದರಿಂದ ಆ ಕ್ಷೇತ್ರಗಳಲ್ಲಿನ ಮತದಾರು ನಮ್ಮ ಸಮಸ್ಯೆಯಾರಿಗೇಳಬೇಕು ಎಂದು ಪ್ರಶ್ನಿಸುತ್ತಿದ್ದಾರೆ.
ನೀರಿನ ಬವಣೆ: ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿಕ್ಷೆಯಂತೆ ಮಳೆಯಾಗದ ಹಿನ್ನೆಲೆಯಲ್ಲಿ ನಗರದ ಬಹುತೇಕ ಭಾಗಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ವಾರಕ್ಕೆ ಎರಡು ಮೂರುದಿನ ನೀರು ಬಿಡುತ್ತಿದ್ದ ಜಲಮಂಡಳಿಯು ವಾರಕ್ಕೆ ಒಮ್ಮೆ ನೀರು ಬಿಡಲು ಮುಂದಾಗುತ್ತಿದ್ದು, ನೀರಿ ಸಮಸ್ಯೆ ಹೆಚ್ಚಾಗಿದೆ. ಈ ಕುರಿತು ಪ್ರಶ್ನಿಸುವವರು, ಜನರ ನೀರಿನ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕಾದ ಶಾಸಕರು ಇಲ್ಲದಂತಾಗಿದೆ.
ನಗರದ ಹೊರ ಭಾಗಗಳಾದ ಕೆ.ಆರ್.ಪುರ, ರಾಜರಾಜೇಶ್ವರಿ ನಗರ, ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ 110 ಹಳ್ಳಿಗೆ ಕುಡಿಯುವ ನೀರು ಹರಿಸುವ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಅಗತ್ಯ ಸಹಕಾರ ನೀಡಲು ಹಾಗೂ ಪರಿಶೀಲನೆ ನಡೆಸಲು ಆ ಕ್ಷೇತ್ರದ ಶಾಸಕರಿಲ್ಲ. ಹೀಗಾಗಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿವೆ ಎನ್ನುತ್ತಾರೆ ಕ್ಷೇತ್ರದ ಕಾರ್ಪೋರೇಟರ್‌ಗಳು.
ಎಲ್ಲಾ ಸರಿ ಹೋಗುತ್ತೆ; ಎಲ್ರೂ ಬೇಗ ಬರ್ತಾರೆ: ಶಾಸಕರು ಹಿಂದಿರುಗುತ್ತಾರೋ ಇಲ್ಲವೋ? ಯಾವಾಗ ಬರುತ್ತಾರೆ? ಮತ್ತೆ ಚುನಾವಣೆಯೇ ನಡೆಯುತ್ತಾ? ಯಾರು ನಿಲ್ಲುತ್ತಾರೆ ಚುನಾವಣೆಗೆ? ನಿಮ್ಮ ಪಕ್ಷದ ಹೊಸ ಅಭ್ಯರ್ಥಿ ಯಾರು? ಎಂಬಿತ್ಯಾದಿ ಪ್ರಶ್ನೆಗಳನ್ನು ಕ್ಷೇತ್ರದ ಅತೃಪ್ತ ಶಾಸಕರ ಕ್ಷೇತ್ರದಲ್ಲಿ ಮತದಾರರು ಅಲ್ಲಿನ ಕಾರ್ಪೊರೇಟರ್‌ಗಳಿಗೆ ಕೇಳುತ್ತಿದ್ದಾರೆ.
ಕಾಂಗ್ರೆಸ್ ಕಾರ್ಪೊರೇಟರ್‌ಗಳು “ಎಲ್ಲಾ ಸರಿ ಹೋಗುತ್ತದೆ, ಬೇಗ ಬರುತ್ತಾರೆ’ ಎಂದು ಉತ್ತರಿಸಿ ಮೌನವಾದರೆ, ಕೆಲ ಬಿಜೆಪಿ ಕಾರ್ಪೋರೇಟರ್‌ಗಳು ಶಾಸಕರ ನಡೆಗೆ ಬೇಸರ ವ್ಯಕ್ತಪಡೆಸುತ್ತಿದ್ದಾರೆ. ಸಮಸ್ಯೆ ಬಂದಾಗ ಜನರು ಬಿಬಿಎಂಪಿ ಸದಸ್ಯರನ್ನು ಸಂಪರ್ಕಿಸುತ್ತಾರೆ. ಆದರೆ, ಕೆಲವು ಕಾಮಗಾರಿಗಳು ಶಾಸಕ ಅನುದಾನದಲ್ಲಿ ನಡೆಯುತ್ತಿದ್ದು, ಅವುಗಳಿಗೆ ನುದಾನ ಬಿಡುಗಡೆಯಾಗಲು ಶಾಸಕರ ಅನುಮೋದನೆ ಆಗಬೇಕು ಎಂದು ಪಾಲಿಕೆ ಸದಸ್ಯರು ಹೇಳುತ್ತಿದ್ದಾರೆ.
ಇದರಿಂದ ರಾಜರಾಜೇಶ್ವರಿ ನಗರ, ಯಶವಂತಪುರ, ಕೆ.ಆರ್.ಪುರದಲ್ಲಿ ಆಸ್ಪತ್ರೆ ಕಟ್ಟಡ, ಸುರಂಗ ಮಾರ್ಗ, ಕೆಳ ಸೇತುವೆ ಕಾಮಗಾರಿ ಸೇರಿಂದತೆ ವಿವಿಧ ಕಾಮಗಾರಿಗಳ ಪ್ರಗತಿಗೆ ತೊಡಕಾಗಿದೆ. ಇನ್ನು ಶಾಸಕರ ಅನುದಾನದಲ್ಲಿ ಗುತ್ತಿಗೆ ಪಡೆದವರು ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಅಂಬೇಡ್ಕರ್‌ನಗರ, ಲಕ್ಷ್ಮಣಮೂರ್ತಿ ನಗರ ಕೊಳಚೆ ಪ್ರದೇಶಗಳಲ್ಲಿ ಒಂದಿಷ್ಟು ಮಳೆ ಬಂದರು ಸಾಕಷ್ಟು ಸಮಸ್ಯೆಯಾಗುತ್ತಿದೆ. ಮಳೆಗಾಲ ಹಿನ್ನೆಲೆ ರಾಜಕಾಲವೆ ಸುಸ್ಥಿತಿಗೆ ತರಲು ಟೆಂಡರ್ ಆಗಬೇಕಿತ್ತು. ಆದರೆ, ಶಾಸಕರಿಲ್ಲದೆ ಈ ಕೆಲಸಗಳು ನಿಂತಿವೆ. ಮತದಾರರು ಕ್ಷೇತ್ರದ ಶಾಸಕ ಕುರಿತು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ.
-ಎಸ್.ರಾಜು, ವಿಜಿನಾಪುರ ಬಿಬಿಎಂಪಿ ಸದಸ್ಯ (ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ)
ಮೈತ್ರಿ ಸರ್ಕಾರ ಹಗ್ಗ ಜಗ್ಗಾಟದಲ್ಲಿ ನಮ್ಮ ಸಮಸ್ಯೆ ಕೇಳುವವರಿಲ್ಲ. ಕಾಮಗಾರಿ ಬೇಕಾಬಿಟ್ಟಿಯಲ್ಲಿ ನಡೆಯುತ್ತಿವೆ. ಕ್ಷೇತ್ರದ ಕಾಮಗಾರಿ ಪ್ರಗತಿ ಹಾಗೂ ನೀರಿನ ಸಮಸ್ಯೆ ಕುರಿತು ಕಾರ್ಪೋರೇಟರ್ ಬಳಿ ಪ್ರಶ್ನಿಸಿದರೆ ಅವರು ಶಾಸಕರ ಅನುದಾನದಲ್ಲಿ ಆಗಬೇಕಾದ ಕೆಲಸ ಎಂದು ಹೇಳಿತ್ತಾರೆ. ಅವರನ್ನು ಕೇಳ್ಳೋಣ ಎಂದರೆ ಮುಂಬೈನಲ್ಲಿ ಕುಳಿತು ಮಜಾ ಮಾಡುತ್ತಿದ್ದಾರೆ. ನಮ್ಮ ಸಮಸ್ಯೆ, ಬೇಡಿಕೆ ಕೇಳುವರಿಲ್ಲ
-ಆನಂದ, ರಾಮಮೂರ್ತಿ ನಗರ ನಿವಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.