ಗ್ರಾಮಾಂತರದಲ್ಲಿ ಉತ್ಸಾಹದ ಮತದಾನ
Team Udayavani, May 13, 2018, 11:39 AM IST
ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು.
ಎಲ್ಲ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ಬಹುತೆಕ ಮತಗಟ್ಟೆಗಳಲ್ಲಿ ಜನ ಬೆಳಗ್ಗೆಯಿಂದಲೇ ಮತ ಹಾಕಲು ಸಾಕಷ್ಟು ಸಂಖ್ಯೆಯಲ್ಲಿ ಮತಗಟ್ಟೆಗಳ ಕಡೆ ಧಾವಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೆಳಗ್ಗೆಯಿಂದಲೇ ಮತದಾನ ಬಿರುಸಿನಿಂದ ಸಾಗಿತ್ತು.
ಮಹಿಳೆಯರು, ಹಿರಿಯ ನಾಗರಿಕರು, ಅಂಗವೀಕಲರು ಬಹಳ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು. ಹೊಸಕೋಟೆಯಲ್ಲಿ ಬೆಳಗ್ಗೆ 10 ಗಂಟೆ ವೇಳೆಗೆ ಶೇ.16ರಷ್ಟು ಮತದಾನವಾಗಿದ್ದರೆ, ಇದೇ ಪರಿಸ್ಥಿತಿ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಂಡು ಬಂತು. ಮಧ್ಯಾಹ್ನ 1 ಗಂಟೆ ವೇಳೆಗೆ ಇಡೀ ಜಿಲ್ಲೆಯಲ್ಲಿ ಶೇ.57ರಷ್ಟು ಮತದಾನವಾಗಿತ್ತು.
ಇದೇ ಮೊದಲ ಬಾರಿಗೆ ಇವಿಎಂಗಳ ಜತೆಗೆ ವಿವಿಪ್ಯಾಟ್ ಬಳಸಲಾಗಿದ್ದು, ಈ ಬಗ್ಗೆ ಮತದಾರರಲ್ಲಿ ಕುತೂಹಲ ಕಂಡು ಬಂತು. ತಾವು ಹಾಕಿದ ಮತ ತಮ್ಮ ಆಯ್ಕೆಯ ಅಭ್ಯರ್ಥಿಗೇ ಹೋಗಿರುವ ಬಗ್ಗೆ ಖಾತರಿಪಡಿಸಿಕೊಳ್ಳುವ ವ್ಯವಸ್ಥೆ ತಂದಿರುವ ಬಗ್ಗೆ ಮತದಾರಿಂದ ಮೆಚ್ಚುಗೆ ವ್ಯಕ್ತವಾಯಿತು.
ಇದೇ ವೇಳೆ ಪಿಂಕ್ ಮತಗಟ್ಟೆಗಳು ಉತ್ಸಾಹದ ಕೇಂದ್ರಗಳಾಗಿದ್ದವು. ಮೊದಲ ಬಾರಿಗೆ ಹಕ್ಕು ಚಲಾಯಿಸಿದ ಯುವ ಮತದಾರರು ದೇಶದ ಭವಿಷ್ಯ ರೂಪಿಸುವುದರಲ್ಲಿ ತಾವೂ ಸಹ ಅಧಿಕೃತ ಪಾಲುದಾರರಾದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರೆ, ಕಳೆದ 50-60 ವರ್ಷಗಳಿಂದ ಓಟು ಹಾಕುತ್ತಿರುವ ಹಿರಿಯ ಜೀವಗಳು “ಒಳ್ಳೆಯದಾಗಲಿ’ ಎಂದು ಹರಸುತ್ತಿದ್ದರು.
ಈ ಮಧ್ಯೆ ವಿವಿಪ್ಯಾಟ್‌ಗಳ ಬಗ್ಗೆ ಮಾಹಿತಿ ಇಲ್ಲದಿರುವುದು, ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ, ಮತಗಟ್ಟೆ ಬದಲಾಗಿದೆ ಇತ್ಯಾದಿ ಸಮಸ್ಯೆಗಳು ಅಲ್ಲಲ್ಲಿ ಕೇಳಿ ಬಂದವು. ಭದ್ರತಾ ವ್ಯವಸ್ಥೆ ಬಗ್ಗೆ ಬಹುತೇಕ ಕಡೆ ಸಮಾಧಾನದ ಮಾತುಗಳು ಕೇಳಿ ಬಂದವು.
ಒಳ್ಳೆಯ ಕಾನ್ಸೆಪ್ಟ್: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಸೂಲಿಬೆಲೆಯ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಪಿಂಕ್ ಮತಗಟ್ಟೆ ಸ್ಥಾಪಿಸಲಾಗಿತ್ತು. ಈ ಬಗ್ಗೆ ಮತಗಟ್ಟೆ ಅಧಿಕಾರಿ ಎಚ್.ಎನ್ ಗೀತಾ ಅವರಿಗೆ ಮಾತನಾಡಿಸಿದಾಗ “ಒಳ್ಳೆಯ ಕಾನ್ಸೆಪ್ಟ್ ಸರ್, ಬಹಳ ಖುಷಿ ಮತ್ತು ಹೆಮ್ಮೆ ಅನಿಸುತ್ತಿದೆ’ ಎಂದರು. ಈ ಮತಗಟ್ಟೆಯಲ್ಲಿ 473 ಪುರುಷರು, 446 ಮಹಿಳೆಯರು ಸೇರಿ 921 ಮತದಾರರಿದ್ದು, ಮಧ್ಯಾಹ್ನ 12 ಗಂಟೆ ವೇಳೆಗೆ 400 ಮಂದಿ ಮತ ಚಲಾಯಿಸಿದ್ದರು.
ಯಾವುದೇ ಸಮಸ್ಯೆ ಇಲ್ವಾ ಎಂದು ಭದ್ರತೆಗೆ ನಿಯೋಜಿಸಲಾಗಿದ್ದ ಮಹಿಳಾ ಪೇದೆಯನ್ನು ಕೇಳಿದಾಗ “ನಾàವಿರುವಾಗ ಏನ್ ಸಮಸ್ಯೆ ಸರ್’ ಎಂದರು. ಬರೀ ಮಹಿಳೆಯರಿಗೆಂದೇ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಿದರೆ ಇನ್ನೂ ಒಳ್ಳೆಯದು ಸರ್ ಎಂದು ಮತ ಹಾಕಲು ಬಂದಿದ್ದ ಸರಸ್ವತಿ ಹೇಳಿದರು.
ಕಣ್ಣಾರೆ ಖಾತರಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಚನ್ನರಾಯಪಟ್ಟಣದ ಮತಗಟ್ಟೆ 179ರಲ್ಲಿ ಮತ ಹಾಕಿದ ರಾಮಚಂದ್ರ ವಿವಿಪ್ಯಾಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ವ್ಯವಸ್ಥೆ ಜಾರಿಗೆ ತಂದಿರುವುದು ಇವಿಎಂಗಳ ಬಗೆಗಿನ ಗೊಂದಲಗಳಿಗೆ ತೆರೆ ಎಳೆದಂತಾಗಿದೆ. ನಾನು ಹಾಕಿದ ಓಟಿನ ಬಗ್ಗೆ ಸ್ವತಃ ನಾನೇ ಕಣ್ಣಾರೆ ಖಾತರಿಪಡಿಸಿಕೊಂಡ ನಂತರ ಇನ್ನೇನು ಬೇಕು ಎಂದರು.
ಓಟಿಗೆ ಬೆಲೆ ಕೊಡಿ: ಕಳೆದ 50 ವರ್ಷಗಳಿಂದ ಮತದಾನ ಮಾಡುತ್ತಿರುವ ಸರೋಜಮ್ಮ (91), ಫಾತಿಮುನ್ನಿಸಾ (83) “ನಾವು ನಮ್ಮ ಓಟು ಹಾಕಿದ್ದೇವೆ, ಆದಕ್ಕೆ ಬೆಲೆ ತಂದು ಕೊಡುವ ಕೆಲಸ ಆಯ್ಕೆಯಾದವರು ಮಾಡಬೇಕು’ ಎಂದು ಕಿವಿ ಮಾತು ಹೇಳಿದರು. ಗಾಲಿ ಕುರ್ಚಿಯಲ್ಲಿ ಓಟು ಹಾಕಲು ಬಂದ ಸಲ್ಲಪ್ಪ ನನ್ನನ್ನು ನೋಡಿ ಯುವಕರು ಕಲಿತುಕೊಳ್ಳಲಿ ಎಂದು ಕಿವಿಮಾತು ಹೇಳಿದರು.
ಓಟರ್ ಸ್ಲಿಪ್ ಒಕೆ, ಎಪಿಕ್ ಕಾರ್ಡ್ ಯಾಕೆ: “ಮತದಾನಕ್ಕೆ “ಫೋಟೋ ಓಟರ್ ಸ್ಲಿಪ್ ಇರುವಾಗ ಚುನಾವಣಾ ಗುರುತಿನ ಚೀಟಿ (ಎಪಿಕ್ ಕಾರ್ಡ್) ಯಾಕೆ ಅನ್ನುವ ಪ್ರಶ್ನೆ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ಬಹುತೇಕ ಮತಗಟ್ಟೆಗಳಲ್ಲಿ ಕಂಡು ಬಂತು.
ಮತಗಟ್ಟೆಗೆ ಬರುತ್ತಿದ್ದವರು, ಸರತಿ ಸಾಲಿನಲ್ಲಿ ನಿಂತ ಬಹುತೇಕರ ಬಳಿ ಎಪಿಕ್ ಕಾರ್ಡ್‌ಗಿಂತ ಹೆಚ್ಚಾಗಿ ಚುನಾವಣಾ ಆಯೋಗ ವಿತರಿಸಿದ “ಫೋಟೋ ಓಟರ್ ಸ್ಲಿಪ್’ ಇತ್ತು. ಚುನಾವಣಾ ಗುರುತು ಚೀಟಿ ಇಲ್ಲದಿದ್ದರೆ ಚುನಾವಣಾ ಆಯೋಗ ನಿಗದಿಪಡಿಸಿದ 12 ಪರ್ಯಾಯ ದಾಖಲೆಗಳ ಪೈಕಿ “ಫೋಟೋ ಓಟರ್ ಸ್ಲಿಪ್’ ಸಹ ಒಂದು. ಈ ಹಿಂದೆ ಓಟರ್ ಸ್ಲಿಪ್ ಕೊಡಲಾಗುತ್ತಿತ್ತು.
ಆದರೆ, ಇದೇ ಮೊದಲ ಬಾರಿಗೆ ಮತದಾರರ ಭಾವಚಿತ್ರ ಇರುವ ಓಟರ್ ಸ್ಲಿಪ್ ಹಂಚಲಾಗಿದೆ. “ಸ್ವಾಮಿ ಇದೂ ಸಹ ಎಲೆಕ್ಷನ್ ಐಡಿ ಕಾರ್ಡ್ ತರಾನೇ ಅಂದಿದ್ದರು, ಅದಕ್ಕೆ ಇದನ್ನೇ ತೆಗೆದುಕೊಂಡು ಬಂದು ಓಟ್ ಹಾಕಿದೆ. ಓಟರ್ ಐಡಿ ಕಾರ್ಡ್ ಮನೆಯಲ್ಲಿದೆ,’ ಎಂದು ದೊಡ್ಡಬಳ್ಳಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಎದುರು ಸಿಕ್ಕ ಮಂಜೇಗೌಡ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.