ಬೇಸಿಗೆ ಜತೆ ಕಾವೇರಿ ನೀರೂ ಬಿಸಿ
Team Udayavani, Feb 7, 2020, 11:00 AM IST
ಬೆಂಗಳೂರು: ಜಲಮಂಡಳಿಯು ಕಾವೇರಿ ನೀರಿನ ದರ ಏರಿಕೆಗೆ ಮುಂದಾಗಿದ್ದು, ಮೂರು ಪ್ರಸ್ತಾವಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರ ಒಂದು ಪ್ರಸ್ತಾವಕ್ಕೆ ಅನುಮೋದನೆ ನೀಡುವ ಸಾಧ್ಯತೆಗಳಿದ್ದು, ಬೆಂಗಳೂರು ಜನರಿಗೆ ಬೇಸಿಗೆ ನೀರಿನ ಸಮಸ್ಯೆ ಜತೆಗೆ ದರ ಏರಿಕೆ ಬಿಸಿಯೂ ತಾಗಲಿದೆ.
ಈ ಹಿಂದೆ 2014ರಲ್ಲಿ ಜಲಮಂಡಳಿಯು ದರ ಪರಿಷ್ಕರಣೆ ಮಾಡಿತ್ತು. ಆರು ವರ್ಷಗಳ ಬಳಿಕಮಾಡುತ್ತಿರುವ ದರ ಪರಿಷ್ಕಣೆಯು ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶ ಹೊಂದಿದೆ. ಹೀಗಾಗಿಯೇ, ಕೆಲ ತಿಂಗಳ ಹಿಂದೆ ಸಿದ್ಧಪಡೆಸಿದ್ದ ಶೇ.10 ರಿಂದ 20ರಷ್ಟು ದರ ಏರಿಸುವ ಪ್ರಸ್ತಾವನೆ ಕೈಬಿಟ್ಟು, ಜಲಮಂಡಳಿ ಹಾಗೂ ಸಾರ್ವಜನಿಕರಿಬ್ಬರಿಗೂ ಹೊರೆಯಾಗದಂತೆ ಮೂರು ಮಾದರಿ ಪ್ರಸ್ತಾವನೆ ಸಿದ್ಧಪಡಿಸಿದೆ.
ಮೊದಲ ಪ್ರಸ್ತಾವನೆಯು, ಜಲಮಂಡಳಿಯ ವಿವಿಧ ಯೋಜನೆಗಳಿಗಾಗಿ ಮಾಡಿರುವ ಎಲ್ಲ ಬಗೆಯ ಸಾಲ ತೀರಿಸುವ ಹಾಗೂ ನಿರ್ವಹಣೆ ವೆಚ್ಚ ಭರಿಸುವಂತಹ ದರ ಪರಿಷ್ಕರಣೆಯನ್ನು ಹೊಂದಿದೆ. ಎರಡನೇ ಪ್ರಸ್ತಾವನೆಯು ಹಣಕಾಸು ಸಂಸ್ಥೆಗಳಿಂದಮಾತ್ರ ಪಡೆದ ಸಾಲಗಳನ್ನು ತೀರಿಸುವಂತಹ ದರ ಪರಿಷ್ಕರಣೆ ಹಾಗೂ ಮೂರನೇ ಪ್ರಸ್ತಾವನೆಯು ನಿರ್ವಹಣೆ ವೆಚ್ಚ ಮಾತ್ರ ಭರಿಸುವಂತಹ ದರ ಪರಿಷ್ಕರಣೆ ಹೊಂದಿದೆ.
ಸದ್ಯ ಸರ್ಕಾರ ಈ ಮೂರು ಪ್ರಸ್ತಾವನೆ ಪರಿಶೀಲಿಸಿ, ಸೂಕ್ತವಾದುದನ್ನು ಆಯ್ಕೆ ಮಾಡಿ ಸಚಿವ ಸಂಪುಟ ಒಪ್ಪಿಗೆ ಪಡೆದು ದರ ಪರಿಷ್ಕರಣೆಗೆ ಸೂಚನೆ ನೀಡಲಿದೆ.
ಮೂರು ಬಗೆಯ ಪ್ರಸ್ತಾವಗಳನ್ನು ಸಿದ್ಧಪಡಿಸಿ ನಾಲ್ಕು ದಿನಗಳ ಹಿಂದೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರವು ಶೀಘ್ರದಲ್ಲೇ ಜಲಮಂಡಳಿ ಅಧಿಕಾರಿಗಳೊಂದಿಗೆ ದರ ಪರಿಷ್ಕರಣೆಗೆ ಕಾರಣ ಕುರಿತು ಚರ್ಚಿಸಲಿದೆ. ಸಲ್ಲಿಸಿರುವ ಮೂರು ಪ್ರಸ್ತಾವನೆಗಳ ಪೈಕಿ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಗಳನ್ನು ತೀರಿಸುವಂತಹ ದರ ಪರಿಷ್ಕರಣೆ ಆದ್ಯತೆ ನೀಡಬೇಕೆಂದು ಕೋರಲಾಗಿದೆ. ಸಾರ್ವಜನಿಕ ಹಿತದೃಷ್ಟಿಯನ್ನು ಜಲಮಂಡಳಿ ಹೊಂದಿದ್ದು, ದರ ಪರಿಷ್ಕರಣೆ ಹೊರೆಯಾಗುವ ಆತಂಕ ಬೇಡ. –ತುಷಾರ್ ಗಿರಿನಾಥ್, ಜಲಮಂಡಳಿ ಅಧ್ಯಕ್ಷ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.