ನಲ್ಲಿ ನೂರಿದ್ರೇನು ನೀರ್ ಬರ್ಬೇಕಲ್ಲಾ?
Team Udayavani, Apr 13, 2018, 12:08 PM IST
ಬೆಂಗಳೂರು: ಇಲ್ಲಿ ಪ್ರತಿ ಮನೆಗೆ ತಲಾ ಮೂರು “ನಲ್ಲಿ’ ಸಂಪರ್ಕಗಳಿವೆ. ಆದರೂ, ಹನಿ ನೀರಿಗೂ ಹಾಹಾಕಾರ. ನಿತ್ಯ ಬೆಳಗಾದರೆ ನೀರಿಗಾಗಿ ಬಿಂದಿಗೆಗಳನ್ನು ಹಿಡಿದು ನೆರೆಯ ಬಡಾವಣೆಗಳಲ್ಲಿ ಜನ ಕ್ಯು ನಿಲ್ಲಬೇಕು. ಒಂದು ವೇಳೆ ಕರೆಂಟ್ ಕೈಕೊಟ್ಟರೆ, ಅದಕ್ಕೂ ಬ್ರೇಕ್!
ಹೌದು, ಇಲ್ಲಿ “ನಲ್ಲಿ’ ಸಂಪರ್ಕಗಳು ಲೆಕ್ಕಕ್ಕುಂಟು, ನೀರಿಗಿಲ್ಲ. ಬಡಾವಣೆ ಉದ್ದಕ್ಕೂ ಮನೆಗಳ ಮುಂದೆ ತಲಾ ಮೂರು ನಲ್ಲಿಗಳಿವೆ. ಆ ಪೈಕಿ ಯಾವೊಂದರಲ್ಲೂ ನೀರು ಬರುವುದಿಲ್ಲ. ಇದು ದಿನ ಅಥವಾ ವಾರದ ಕತೆ ಅಲ್ಲ; ಕಳೆದ ಒಂದು ತಿಂಗಳಿಂದ ಇರುವ ಗೋಳು. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಫಲಿತಾಂಶ ಶೂನ್ಯ.
ಬಂಗಾರಪ್ಪನಗರದ 8ನೇ ಕ್ರಾಸ್‌ನಲ್ಲಿ ಕಂಡುಬರುವ ಈ ಚಿತ್ರಣ ಬಿಬಿಎಂಪಿಯ ರಾಜರಾಜೇಶ್ವರಿ ನಗರ ವಲಯದ ನೀರು ಸರಬರಾಜು ವ್ಯವಸ್ಥೆಗೆ ಒಂದು ಸ್ಯಾಂಪಲ್. ಹೆಚ್ಚು ಕಡಿಮೆ ಇದೇ ಸ್ಥಿತಿ ಅಥವಾ ಇದಕ್ಕಿಂತ ಸ್ವಲ್ಪ ಭಿನ್ನವಾದ ಚಿತ್ರಣ, ವಲಯದ 15 ವಾರ್ಡ್‌ಗಳಲ್ಲಿ ಕಂಡುಬರುತ್ತದೆ.
ಕಾವೇರಿ ಕನೆಕ್ಷನ್‌ಗೆ ದಶಕ: 1,500ಕ್ಕೂ ಹೆಚ್ಚು ಮನೆಗಳಿರುವ ಬಂಗಾರಪ್ಪನಗರದಲ್ಲಿ “ಕಾವೇರಿ ಕನೆಕ್ಷನ್’ ಕೊಟ್ಟು ದಶಕವೇ ಕಳೆದಿದೆ. ಆದರೆ, ಆ ಪೈಪ್‌ಗ್ಳಲ್ಲಿ ಇದುವರೆಗೆ ನೀರು ಹರಿದಿಲ್ಲ. ಕೊಳವೆಬಾವಿ ಬತ್ತಿದ್ದರಿಂದ ಬಳಸುವ ಉದ್ದೇಶಕ್ಕೆ ಪೂರೈಕೆಯಾಗುವ ನಲ್ಲಿ ನೀರೂ ನಿಂತಿದೆ (8ನೇ ಕ್ರಾಸ್‌ನಲ್ಲಿ ಮಾತ್ರ). ಇದಕ್ಕೆ ಪರ್ಯಾಯವಾಗಿ ಮತ್ತೂಂದು ಕೊಳವೆಬಾವಿ ನೀರು ಒದಗಿಸಲು ಹೊಸ ಸಂಪರ್ಕ ನೀಡಲಾಗಿದೆ. ಅದು ಕೂಡ ಕಳೆದೊಂದು ತಿಂಗಳಿಂದ ಸ್ತಬ್ದಗೊಂಡಿದೆ.
ಹಾಗಾಗಿ, ಇಡೀ ಬಡಾವಣೆಗೆ ಏಕೈಕ ಜೀವಜಲ “ಶುದ್ಧ ಕುಡಿಯುವ ನೀರಿನ ಘಟಕ’. ಮೂರು ನಲ್ಲಿಗಳಿದ್ದರೂ ಬೆಳಗಾದರೆ ಬಿಂದಿಗೆಗಳನ್ನು ಹಿಡಿದು ನೆರೆಯ ಬಡಾವಣೆಗಳಲ್ಲಿ ನೀರಿಗಾಗಿ ಅಲೆಯಬೇಕಾಗಿದೆ. ತಿಂಗಳಿಂದ ನೀರು ಬಂದಿಲ್ಲ. ಇಳಿಜಾರು ಇದ್ದಲ್ಲಿ 8ನೇ ಕ್ರಾಸ್‌ನ ಎರಡೂ ಬದಿಗಳಲ್ಲಿ ದಾರದಂತೆ ಕೊಳವೆಬಾವಿ ನೀರು ಬರುತ್ತದೆ. ಸಾಕಾಗುವಷ್ಟು ನೀರು ಬೇಕೆಂದರೆ, ಪಕ್ಕದ ಬಡಾವಣೆಗಳಿಗೇ ಹೋಗಬೇಕು.
ಇನ್ನು ಕುಡಿಯಲಿಕ್ಕೆ 5 ರೂ. ಕಾಯಿನ್ ಹಾಕಿ ಬಿಂದಿಗೆ ನೀರು ತರಬೇಕು ಎಂದು ಲಕ್ಷ್ಮಮ್ಮ ಅಲವತ್ತುಕೊಳ್ಳುತ್ತದೆ. 8ನೇ ಕ್ರಾಸ್‌ನ ಕತೆ ಹೀಗಾದರೆ, ಇಡೀ ಬಂಗಾರಪ್ಪನಗರದಲ್ಲಿ ಪ್ರತಿ ಮನೆಗಳಿಗೆ ಎರಡು ನೀರಿನ ಸಂಪರ್ಕಗಳಿವೆ. ಆದರೂ, ಅದರಲ್ಲಿ ಕೆಲಸ ಮಾಡುವುದು ಒಂದೇ. ಕರೆಂಟ್ ಇದ್ದರೆ ನೀರು; ಇಲ್ಲದಿದ್ದರೆ ಇಲ್ಲ. ಬೇಸಿಗೆ ಇರುವುದರಿಂದ ನಿತ್ಯ ವಿದ್ಯುತ್ ಕಡಿತ ಬೇರೆ ಶುರುವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಇರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ ಎಂದು ನಿವಾಸಿ ರಾಮಚಂದ್ರ ತಿಳಿಸುತ್ತಾರೆ.
ಸಮಸ್ಯೆ ನೀರಿಂದಲ್ಲ; ನೀರುಗಂಟಿಯದು!: “ಕಳೆದ ಎಂಟು-ಒಂಬತ್ತು ತಿಂಗಳಲ್ಲಿ ಶಾಸಕರು ಸುಮಾರು 9 ಕೊಳವೆಬಾವಿ ಕೊರೆಸಿದ್ದಾರೆ. ಎಲ್ಲದರಲ್ಲೂ ನೀರು ಚಿಮ್ಮಿದೆ. ದಿನದ 24 ಗಂಟೆ ಕರೆಂಟ್ ಇದ್ದರೆ, 24 ಗಂಟೆಯೂ ನೀರು ಲಭ್ಯ. ಆದರೆ, ಸಮಸ್ಯೆ ಇರುವುದು ನೀರುಗಂಟಿಯದ್ದು. ಇಡೀ ನಗರಕ್ಕೆ ಇರುವುದೊಬ್ಬನೇ ನೀರುಗಂಟಿ.
ಅಕಸ್ಮಾತ್ ಆತ ಅನಾರೋಗ್ಯದಿಂದ ರಜೆ ಹಾಕಿದರೆ ಅಥವಾ ಊರಿಗೆ ಹೋದರೆ, ಆತ ವಾಪಸ್ ಬರುವವರೆಗೆ ನೀರಿಗೆ ತತ್ವಾರ ಉಂಟಾಗುತ್ತದೆ,’ ಎಂದು ಚಿಕನ್ ವ್ಯಾಪಾರಿ ಕೆ.ಪಿ. ಲಕ್ಷ್ಮಣ್‌ಗೌಡ ಹೇಳುತ್ತಾರೆ. ಬಂಗಾರಪ್ಪನಗರ ಮಾತ್ರವಲ್ಲ, ಕೃಷ್ಣಪ್ಪ ಲೇಔಟ್, ಮಾರಪ್ಪ ಲೇಔಟ್, ಉಲ್ಲಾಳು ಮತ್ತಿತರ ಕಡೆಗಳಲ್ಲೂ ನೀರಿನ ಸಮಸ್ಯೆ ಇದಕ್ಕಿಂತ ಭಿನ್ನವಾಗಿಲ್ಲ.
ಕಾವೇರಿ ನೀರು ಈ ಭಾಗಕ್ಕೆ ಮರೀಚಿಕೆಯಾಗಿದೆ. ಇಡೀ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 500ಕ್ಕೂ ಅಧಿಕ ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಅದರ ಜತೆಗೇ ವಾರ್ಡಿಗೊಂದು ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲಾಗಿದೆ. ಅಂದರೆ, ಒಂದು ವೇಳೆ ಕೊಳವೆಬಾವಿ ಕೈಕೊಟ್ಟರೆ ಘಟಕಗಳು ಕೊರತೆ ಸರಿದೂಗಿಸುತ್ತವೆ ಎಂದು ವಲಯದ ಎಂಜಿನಿಯರೊಬ್ಬರು ಮಾಹಿತಿ ನೀಡುತ್ತಾರೆ.
ಕುಡಿಯಲು ಶುದ್ಧ ನೀರು: ಕುಡಿಯುವ ನೀರಿಗೆ ಶುದ್ಧ ನೀರಿನ ಘಟಕಗಳೇ ಗತಿ. ಬಳಕೆಗೆ ಮಾತ್ರ ಎರಡು-ಮೂರು ದಿನಕ್ಕೊಮ್ಮೆ ಬರುವ ಕೊಳವೆಬಾವಿ ನೀರು ಪೂರೈಕೆ ಆಗುತ್ತದೆ. ಆದರೆ, ಕರೆಂಟ್ ಕೈಕೊಟ್ಟಿತು ಅಥವಾ ಮೋಟಾರು ಸುಟ್ಟಿದೆ ಎಂಬ ನೆಪದಲ್ಲಿ ನೀರು ಪೂರೈಕೆ ವಾರಕ್ಕೊಮ್ಮೆ ವಿಸ್ತರಣೆ ಆಗುತ್ತದೆ ಎಂದು ಕೃಷ್ಣಪ್ಪ ಲೇಔಟ್ ಮಹೇಶ್ ತಿಳಿಸುತ್ತಾರೆ.
ಎರಡು-ಮೂರು ಕೊಳವೆಬಾವಿಗಳನ್ನು ಒಂದಕ್ಕೊಂದು “ಲಿಂಕ್’ ಮಾಡಿಕೊಂಡು ನೀರನ್ನು ಒಂದೆಡೆ ಸಂಗ್ರಹಿಸಿಡಲಾಗುತ್ತದೆ. ಆದರೆ, ಈ ಪೈಕಿ ಯಾವುದಾದರೂ ಕೊಳವೆಬಾವಿ ಬತ್ತಿದ್ದರೆ, ಗೊತ್ತಾಗುವುದೇ ಇಲ್ಲ. ಆಗ, ಮೋಟಾರು ಸುಟ್ಟುಹೋಗುವ ಸಾಧ್ಯತೆಗಳು ಹೆಚ್ಚು. ಇನ್ನು ಈ ಮಧ್ಯೆ ಬೇಸಿಗೆಯಲ್ಲಿ ಕೊಳವೆಬಾವಿಗಳು ಬತ್ತುವ ಸಂಖ್ಯೆ ಹೆಚ್ಚು. ಇದರಿಂದ ಅಲ್ಲಲ್ಲಿ ಸಮಸ್ಯೆ ಕಾಣಿಸಿಕೊಂಡಿರಬಹುದು ಎಂದು ಆರ್.ಆರ್. ನಗರ ವಲಯದ ಕಾರ್ಯನಿರ್ವಾಹಕ ಎಂಜಿನಿಯರೊಬ್ಬರು ತಿಳಿಸುತ್ತಾರೆ.
* ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್ ಕೃಷಿ
Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!
Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಫರ್ಹಾನ್ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.