ಸರ್ಕಾರವನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳುವೆ: ಕುಮಾರಸ್ವಾಮಿ
Team Udayavani, Sep 20, 2018, 6:00 AM IST
ಬೆಂಗಳೂರು: ನಾನು ಈ ಸರ್ಕಾರವನ್ನು ಐದು ವರ್ಷ ಭದ್ರವಾಗಿ ಹಿಡಿದಿಟ್ಟುಕೊಳ್ಳುತ್ತೇನೆ. ನೀವು ಆತಂಕಕ್ಕೆ ಒಳಗಾಗಬೇಡಿ. ನಾನು ಯಾರ ಗರಡಿಯಿಂದ ಬಂದಿದ್ದೇನೆ ಎಂದು ನೆನಪಿರಲಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.
ನಗರದ ಅರಮನೆ ರಸ್ತೆಯಲ್ಲಿರುವ ಶಾಂತಿಗೃಹದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಬುಧವಾರ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ 100ನೇ ರಾಜ್ಯ ಪರಿಷತ್ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಈ ಸರ್ಕಾರಕ್ಕೆ ಏನು ಆಗದು. ಐದು ವರ್ಷ ಸುಭದ್ರವಾಗಿರುವ ವಿಶ್ವಾಸವಿದೆ. ಮೊದಲ ಬಾರಿ ಸಮ್ಮಿಶ್ರ ಸರ್ಕಾರ ನಡೆಸಿದಾಗ ನಮ್ಮ ವೈಯಕ್ತಿಕ ತೀರ್ಮಾನ ಇಲ್ಲದಿದ್ದರೂ ಕೆಲ ಘಟನೆಗಳಾಗಿವೆ. ಎರಡನೇ ಬಾರಿ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದು, ಸರ್ಕಾರವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಬಗ್ಗೆ ನನಗೂ ಸ್ವಲ್ಪ ಗೊತ್ತಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳು ಬರುತ್ತಾರೆ, ಹೋಗುತ್ತಾರೆ. ಹಾಗೆಯೇ ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಯಾರಿಗೂ ಯಾವುದೂ ಶಾಶ್ವತವಲ್ಲ. ನಮ್ಮ ಕುರ್ಚಿ ಹೋಗುತ್ತದೆಯೆಲ್ಲಾ ಎಂದು ಕಾಯುತ್ತಾ ಕುಳಿತರೆ ಸಿಬ್ಬಂದಿಗೆ ಸೂಕ್ತ ಪ್ರೋತ್ಸಾಹ ಧನವಿಲ್ಲ ಎಂದು ಭಾವುಕರಾದ ಪಿ.ಜಿ.ಆರ್.ಸಿಂಧ್ಯಾ ಅಂತಹವರ ಭಾವನೆಗೆ ಸ್ಪಂದಿಸುವುದಾದರೂ ಹೇಗೆ. ಹೀಗೆ ಸ್ಪಂದಿಸಲಾಗದ ಸ್ಥಾನದಲ್ಲಿದ್ದು ಸಾಧಿಸುವುದೇನೂ ಇಲ್ಲ ಎಂದು ತಿಳಿಸಿದರು.
ಇಂದಿನ ರಾಜಕಾರಣವೇ ಬೇರೆಯಾಗಿದೆ. ರಾಜಕೀಯ ಇಂದು ಅಷ್ಟು ಸುಲಭವಲ್ಲ ಎಂಬುದನ್ನು ನಾನೂ ಅರ್ಥ ಮಾಡಿಕೊಂಡಿದ್ದೇನೆ. ಆದರೂ ಈ ಪ್ರವಾಹದಲ್ಲಿ ಎಲ್ಲೋ ಈಜುತ್ತಿದ್ದೇನೆ. ಸದ್ಯ ಸರ್ಕಾರ ಬಚಾವಾಗಿದ್ದು, ಇನ್ನು 15 ದಿನ ಇಲ್ಲವೇ 30 ದಿನದಲ್ಲಿ ಪತನವಾಗಲಿದೆ ಎಂಬ ಮಾಧ್ಯಮ ವರದಿಗಳು ರಾಜ್ಯದ ಅಭಿವೃದ್ಧಿಗೆ ಪೂರಕವೇ. ಮೈತ್ರಿ ಸರ್ಕಾರ ಪತನವಾಗಲಿದೆ ಎಂಬುದಾಗಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ನಾನು ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದವನು. ಇಂತಹ ಸುದ್ದಿಗಳನ್ನು ನೋಡಿದರೆ ನನಗೇನಾಗಬಹುದು ಯೋಚಿಸಿ ನೋಡಿ. ಹಾಗಿದ್ದರೂ ನಿಮ್ಮ ಮುಂದೆ ಗಟ್ಟಿಯಾಗಿ ನಿಂತಿದ್ದೇನೆ. ಕೆಲವರು ಮುಖ್ಯಮಂತ್ರಿಯಾಗಬೇಕೆಂದು ಆಸೆ ಇಟ್ಟುಕೊಂಡಿರುತ್ತಾರೆ. ನಾನೇಕೆ ಬೇಡ ಎನ್ನಲಿ. ಆದರೆ ಸರ್ಕಾರ ರಚಿಸಲು 113 ಶಾಸಕರ ಬೆಂಬಲ ಬೇಕಲ್ಲ ಎಂದು ವ್ಯಂಗ್ಯವಾಡಿದರು.
ಇತ್ತೀಚೆಗೆ ಕಲಬುರಗಿಯ ದತ್ತಾತ್ರೇಯ ದೇವಸ್ಥಾನಕ್ಕೆ ಹೋದಾಗ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿದ್ದೇನೆಯೇ ಹೊರತು ನನ್ನ ಕುರ್ಚಿ ಉಳಿಸಿಕೊಂಡು ಎಂದು ಕೇಳಿಕೊಂಡಿಲ್ಲ. ನಾನು ತಪ್ಪು ಮಾಡಿದರೆ ಮಾಧ್ಯಮಗಳು ಕಠಿಣ ಶಬ್ಧಗಳಲ್ಲಿ ಟೀಕಿಸಲಿ. ಆದರೆ ರಾಜ್ಯದ ಅಭಿವೃದ್ಧಿ ಕುಂಠಿತವಾಗದಂತೆ ಎಚ್ಚರ ವಹಿಸಲಿ ಎಂದು ಮನವಿ ಮಾಡಿದರು.
ನಾಲ್ಕು ದಿನಗಳಿಂದ ಅನಾರೋಗ್ಯವಿದ್ದರೂ ಆ್ಯಂಟಿಬಯೋಟಿಕ್ಸ್ ಮಾತ್ರೆ ತೆಗೆದುಕೊಂಡು ಬೆಳಗಾವಿ, ಕಲಬುರಗಿಗೆ ಹೋಗಿ ಬಂದಿದ್ದೇನೆ. ನನಗೆ ಅನೇಕ ಒತ್ತಡವಿದೆ ಎಂದು ಸಿಂಧ್ಯಾ ಅವರು ಸೂಚ್ಯವಾಗಿ ಹೇಳಿದರು. ಅನೇಕ ಒತ್ತಡವಿರುವುದು ನಿಜ. ಆದರೆ ರಾಜಕೀಯ ಒತ್ತಡ ಇಲ್ಲ ಎಂದು ಹೇಳಿದರು.
ಜನತಾ ದರ್ಶನ ಸುಲಭವಲ್ಲ
ಆರೋಗ್ಯ ಸರಿಯಿಲ್ಲದ ಕಾರಣ ಸುದೀರ್ಘವಾಗಿ ಜನತಾ ದರ್ಶನ ಮಾಡಬೇಡಿ ಎಂದು ವೈದ್ಯರು ಹೇಳುತ್ತಾರೆ. ಜನತಾದರ್ಶನವನ್ನು ಅಷ್ಟು ಸುಲಭವಾಗಿ ನಡೆಸಲು ಸಾಧ್ಯವಿಲ್ಲ. ಬೆಳಗ್ಗೆ ಆರಂಭವಾದರೆ ರಾತ್ರಿ 12ರವರೆಗೂ ನಡೆಯುತ್ತದೆ. ಪ್ರತಿಯೊಬ್ಬರ ಬಳಿ 10 ನಿಮಿಷ ನಿಂತು ಸಮಸ್ಯೆ ಆಲಿಸಿ ತಕ್ಷಣ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ. ಮೂರ್‍ನಾಲ್ಕು ಗಂಟೆ ನಿಂತು ಅಹವಾಲು ಆಲಿಸುವ ಮೂಲಕ ನನ್ನ ದೇಹವನ್ನೇ ದಂಡಿಸಿಕೊಳ್ಳುತ್ತೇನೆ. ಒಟ್ಟಾರೆ ರಾಜ್ಯದ ಅಭಿವೃದ್ಧಿಯಾಗಬೇಕು ಎಂದು ತಿಳಿಸಿದರು.
ಅಧಿಕಾರಿಗಳಿಗೆ ವಾರದ ಗಡುವು
ಕೆಲ ಅಧಿಕಾರಿಗಳು ಸರ್ಕಾರ ಅಸ್ಥಿರವಾಗಿದೆ ಎಂಬ ಭಾವನೆಯಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಜಾರಿಗೊಳಿಸದೆ ಆಟವಾಡುತ್ತಿದ್ದಾರೆ. ಅವರಿಗೆ ವಾರದ ಗಡುವು ನೀಡುತ್ತಿದ್ದೇನೆ. ಅವರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದಿದ್ದರೆ ಚಾಟಿ ಬೀಸುತ್ತೇನೆ. ನನ್ನ ಇನ್ನೊಂದು ಮುಖ ತೋರಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುಡುಗಿದರು.
ಕಳೆದ 10 ವರ್ಷಗಳಲ್ಲಿ ಸರ್ಕಾರದ ಯಜಮಾನರು ಯಾರಿರುತ್ತಾರೋ ಅವರ ಮನೋಭಾವನೆಗೆ ತಕ್ಕಂತೆ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡು ಕಾರ್ಯ ನಿರ್ವಹಿಸಿರುವುದು ಕಂಡುಬಂದಿದೆ. ಇದಕ್ಕೆ ಅಧಿಕಾರಿಗಳನ್ನಷ್ಟೇ ದೂರುವುದಿಲ್ಲ. ಜನಪ್ರತಿನಿಧಿಗಳ ತಪ್ಪೂ ಇರುತ್ತದೆ. ನಾವು ಸರಿದಾರಿಯಲ್ಲಿ ಹೋದರೆ ಅಧಿಕಾರಿಗಳು ಅದೇ ದಾರಿಗೆ ಬರುತ್ತಾರೆ ಎಂದು ಹೇಳಿದರು.
ಸರ್ಕಾರ ಇರುತ್ತದೆಯೋ, ಹೋಗುತ್ತದೆಯೋ ಎಂಬ ಭಾವನೆಯಲ್ಲಿ ಕೆಲ ಅಧಿಕಾರಿಗಳು ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಯಾವ ಮುಖ್ಯಮಂತ್ರಿ, ಯಾವ ಸರ್ಕಾರವಿದ್ದರೆ ಅಧಿಕಾರಿಗಳಿಗೇನು. ಸರ್ಕಾರದ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಅವರಿಗೇನು ಕಷ್ಟ. ಎಷ್ಟು ದಿನ ಎಂದು ಕಾಯಬೇಕು. ಅಧಿಕಾರಿಗಳು ಕರ್ತವ್ಯ ನಿರ್ವಹಿಸದೆ ಆಟವಾಡಿಕೊಂಡಿದ್ದರೆ ನೋಡತ್ತಾ ಸುಮ್ಮನಿರಬೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಗಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೂ ಚರ್ಚಿಸಿದ್ದೇನೆ. ಮಾಧ್ಯಮಗಳ ಮೂಲಕ ಅಧಿಕಾರಿಗಳಿಗೆ ಇದೀಗ ವಾರದ ಗಡುವು ನೀಡುತ್ತಿದ್ದೇನೆ. ನಾನು ಈವರೆಗೆ ಅಧಿಕಾರಿಗಳನ್ನು ಗೌರವದಿಂದ ನಡೆಸಿಕೊಂಡಿದ್ದೇನೆ. ಅವರು ಎಚ್ಚೆತ್ತುಕೊಂಡು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸದಿದ್ದರೆ ಚಾಟಿ ಬೀಸುತ್ತೇನೆ. ಸರ್ಕಾರ ಎಷ್ಟು ಸುಭದ್ರವಾಗಿದೆ ಎಂಬುದನ್ನು ತೋರಿಸಿಕೊಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.