ಮಿಟಗಾನಹಳ್ಳಿಗೆ ಸ್ವಾಗತ!
ಪಾಲಿಕೆಯ ತ್ಯಾಜ್ಯದ ತೊಟ್ಟಿ
Team Udayavani, Jul 29, 2019, 7:31 AM IST
ಚಿತ್ರಗಳು: ಫಕ್ರುದ್ದೀನ್ ಎಚ್
ಮಾವಳ್ಳಿಪುರ, ಮಂಡೂರು, ಬಾಗಲೂರು, ಬಿಂಗೀಪುರ ಆಯ್ತು. ಬೆಳ್ಳಳ್ಳಿ ಕ್ವಾರಿ ಕೂಡ ಕಸದಿಂದ ಭರ್ತಿಯಾಗಿದ್ದಾಯ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೀಗ ಮಿಟಗಾನಹಳ್ಳಿಯತ್ತ ಮುಖಮಾಡಿದೆ.
ಈ ಹಿಂದೆಯೂ ಮಿಟಗಾನಹಳ್ಳಿಯಲ್ಲಿ ಮಿಶ್ರ ತ್ಯಾಜ್ಯ ಸುರಿಯಲಾಗಿದೆ. ಈ ರೀತಿ ನಗರದ ಹೊರವಲಯದ ಒಂದೊಂದೇ ಪ್ರದೇಶಗಳಲ್ಲಿ ಮಿಶ್ರ ತ್ಯಾಜ್ಯ ಸುರಿಯುತ್ತಿರುವುದು ಆಯಾ ಪ್ರದೇಶಗಳಲ್ಲಿ ನಾನಾ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಬೆಂಗಳೂರಿನ ಮಿಶ್ರ ತ್ಯಾಜ್ಯಕ್ಕೆ ಸೊರಗಿರುವ ಪ್ರದೇಶಗಳಲ್ಲಿ ಬೆಳ್ಳಳ್ಳಿಯೂ ಒಂದು. ಇಷ್ಟು ದಿನ ಮಿಶ್ರ ತ್ಯಾಜ್ಯಕ್ಕೆ ತನ್ನ ಒಡಲು ನೀಡಿದ್ದ ಈ ಪ್ರದೇಶದಲ್ಲಿ ಈಗ ಬೆಟ್ಟದೆತ್ತರ ತ್ಯಾಜ್ಯ ತುಂಬಿಕೊಂಡಿದೆ. ಬೆಳ್ಳಳ್ಳಿಯ ಕ್ವಾರಿಯಲ್ಲಿ 2016ರ ಏಪ್ರಿಲ್ನಿಂದ ತ್ಯಾಜ್ಯ ಸುರಿಯುತ್ತಿದ್ದು, ಮಿಶ್ರ ತ್ಯಾಜ್ಯ ಸುರಿಯುವುದಕ್ಕೆ ಇಲ್ಲಿನ 22 ಎಕರೆ ಪ್ರದೇಶ ಬಳಸಿಕೊಳ್ಳಲಾಗಿದೆ. ಇಲ್ಲಿ ಪ್ರತಿ ದಿನ 300ಕ್ಕೂ ಹೆಚ್ಚು ಲಾರಿಗಳಲ್ಲಿ 2000-2500 ಟನ್ ಮಿಶ್ರ ತ್ಯಾಜ್ಯ ಸುರಿಯಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ 17 ಲಕ್ಷ ಟನ್ ಕಸ ಇಲ್ಲಿ ಬಂದುಬಿದ್ದಿದೆ.
ಈ ಪ್ರಮಾಣದಲ್ಲಿ ತ್ಯಾಜ್ಯ ಸುರಿಯುವುದಕ್ಕೆ ಬೇಕಾದ ವೈಜ್ಞಾನಿಕ ಕ್ರಮಗಳನ್ನು ಬಿಬಿಎಂಪಿ ಅಳವಡಿಸಿಕೊಂಡಿದೆ. ಬೆಳ್ಳಳ್ಳಿ ಕ್ವಾರಿಯಲ್ಲಿ 1.2 ಲಕ್ಷ ಲೀಟರ್ ಸಂಗ್ರಹ ಸಾಮಾರ್ಥ್ಯದ ಲಿಚೆಟ್ (ತ್ಯಾಜ್ಯದಿಂದ ಉತ್ಪತ್ತಿಯಾಗುವ ರಸ) ಸಂಸ್ಕರಣಾ ಘಟಕ ಸಹ ಇದೆ. ಆದರೂ ಮಳೆಯಿಂದ ಲಿಚೆಟ್ ಹೊರಗೆ ಹರಿಯುವುದು ಮತ್ತು ಅಂತರ್ಜಲ ಸೇರುವುದು ತಪ್ಪಿಲ್ಲ. ಈಗ ಮಿಟಗಾನಹಳ್ಳಿಯಲ್ಲಿ ಮಿಶ್ರತ್ಯಾಜ್ಯ ಹಾಕುವುದಕ್ಕೆ ಬಿಬಿಎಂಪಿ ಟೆಂಡರ್ ಕರೆದಿದೆ.
ವಿಲೇವಾರಿ ಕ್ರಮಗಳೇನು?
ಮಿಶ್ರ ತ್ಯಾಜ್ಯ ವಿಲೇವಾರಿ ಮಾಡಿದ ಮೇಲೆ ಮತ್ತು ಮಾಡುವ ಮುನ್ನ ಹಲವು ರೀತಿಯ ವೈಜ್ಞಾನಿಕ ಕ್ರಮ ಅನುಸರಿಸಬೇಕಾಗುತ್ತಿದೆ. ವಿಲೇವಾರಿ ಮಾಡುವ ಪ್ರದೇಶದಲ್ಲಿ ಸಿಮೆಂಟ್ನಿಂದ ತೇಪೆ ಹಾಕಲಾಗುತ್ತದೆ ಮತ್ತು ಈ ಭಾಗದಲ್ಲಿ ಕೊಳೆತ ತ್ಯಾಜ್ಯದಿಂದ ಉತ್ಪತ್ತಿಯಾಗುವ ಲಿಚೆಟ್, ಅಂತರ್ಜಲ ಕಲುಷಿತ ಮಾಡುವುದನ್ನು ತಡೆಯುವುದಕ್ಕೆ ಪಾಲಿಥಿನ್ ಶೀಟ್ ಹಾಕಬೇಕಾಗುತ್ತದೆ. ತ್ಯಾಜ್ಯದ ಮೇಲೆ ಎರ್ನಾಕುಲಂ ಎಂಬ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತದೆ. ಜತೆಗೆ ಈ ಪ್ರದೇಶದಲ್ಲಿ ಲಿಚೆಟ್ ಟ್ರೀಟ್ಮೆಂಟ್ ಪ್ಲಾಂಟ್ ವ್ಯವಸ್ಥೆ ಹಾಗೂ ಮಿಥೇನ್ ಅನಿಲ ತೆಗೆಯುವುದಕ್ಕೂ ಕೊಳವೆ ಮಾರ್ಗ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಈ ವೆಜ್ಞಾನಿಕ ವಿಧಾನಗಳು ಹಲವು ಡಂಪಿಂಗ್ ಯಾರ್ಡ್‌ನಲ್ಲಿ ಪಾಲನೆಯಾಗಿಲ್ಲ. ವ್ಯವಸ್ಥೆ ಮಾಡಿಕೊಂಡ ಮೇಲೂ ಮಳೆ ಬಂದರೆ ಲಿಚೆಟ್ ನೀರು ಅಂತರ್ಜಲವನ್ನು ಸೇರುವುದು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಬೆಳ್ಳಳ್ಳಿ, ಮಿಟಗಾನಹಳ್ಳಿ ಮತ್ತು ಬಾಗಲೂರಿನಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಕೋಟ್ಯಂತರ ರೂ. ಖರ್ಚು ಮಾಡಲಾಗಿದೆ.
ಬಿಂಗೀಪುರ ಮತ್ತು ಮಂಡೂರು ಸೇರಿದಂತೆ ಹಲವು ಭಾಗಗಳಲ್ಲಿ ಲಿಚೆಟ್ ತೆಗೆಯುವ ಟ್ರೀಟ್ಮೆಂಟ್ ಪ್ಲಾಂಟ್‌ಗಳೇ ಇಲ್ಲ. ಬಿಂಗೀಪುರದ ಡಂಪಿಂಗ್ ಯಾರ್ಡ್‌ನ ಲಿಚೆಟ್ ಇಂದಿಗೂ ಕೆರೆಗಳನ್ನು ಸೇರುತ್ತಿದೆ.
ಆ ಬೆಟ್ಟದ ಸುದ್ದಿ ತೆಗೀಬೇಡಿ ಸರ್…
ಆ ಬೆಟ್ಟದ ಸುದ್ದಿ ತೆಗೀಬೇಡಿ ಸರ್. ನಮ್ಮ ಊರಿನ ನೆಮ್ಮದಿಯನ್ನೇ ಕದಡಿದ್ದ ಬೆಟ್ಟ ಅದು. ನಾನಂತೂ ಕೋಮಾಗೆ ಹೋಗಿ ವಾಪಸ್ ಬಂದಿದ್ದೇನೆ. ಅಲ್ಲಿಂದ ಹಾರಿಬರುವ ನೊಣಗಳು, ಮನೆಯಲ್ಲಿನ ದನಗಳ ಕಣ್ಣುಗಳನ್ನು ಮುತ್ತಿಕ್ಕಿದ್ದರಿಂದ ಕಣ್ಣುಗಳೆಲ್ಲಾ ಹುಳು ತುಂಬಿಕೊಂಡು ಒದ್ದಾಡಿದ್ದು ನೆನಪಿಸಿಕೊಂಡರೆ ಈಗಲೂ ಭಯ ಆಗುತ್ತದೆ…!
-ಗುಂಡೂರಿನ ವಿನೋದಮ್ಮ ಹೀಗೆ ಹೇಳುವಾಗ ಅವರ ಬೆನ್ನ ಹಿಂದೆ ಅದೇ ಬೆಟ್ಟ ನಿಂತಿತ್ತು.
ಗುಂಡೂರು ಈ ಹಿಂದೆ ದೇಶಾದ್ಯಂತ ಸುದ್ದಿಯಾಗಿದ್ದ ಮಂಡೂರಿನ ಪಕ್ಕದಲ್ಲೇ ಇದೆ. ಇವೆರಡೂ ಗ್ರಾಮಗಳ ನಡುವೆ ಬೆಟ್ಟವೊಂದು ಉದ್ಭವಿಸಿದೆ. ಅದೇ ಮಿಶ್ರ ಕಸ ವಿಲೇವಾರಿ ಘಟಕ. ಈಗ ಮಂಡೂರಿನಲ್ಲಿ ಕಸ ಸುರಿಯುವುದು ಸ್ಥಗಿತಗೊಂಡಿದೆ. ಆದರೆ, ಅದರ ಕುರುಹುಗಳು ಹಾಗೇ ಉಳಿದಿವೆ. ಇಲ್ಲಿಗೆ ಸಮೀಪದ ಮತ್ತೂಂದು ತ್ಯಾಜ್ಯ ವಿಲೇವಾರಿ ಘಟಕ ಬೆಳ್ಳಳ್ಳಿ ಕೂಡ ಕಸದಿಂದ ತುಂಬಿತುಳುಕುತ್ತಿದೆ. ಪರ್ಯಾಯ ಜಾಗಗಳ ಹುಡುಕಾಟ ನಡೆದಿದೆ. ಈ ಸಂದರ್ಭದಲ್ಲಿ ಮಂಡೂರಿನ ಈಗಿನ ಸ್ಥಿತಿಗತಿಯ ಒಂದು ಮೆಲುಕು ಇಲ್ಲಿದೆ.
ಸುಮಾರು ಎರಡು ವರ್ಷಗಳ ಹಿಂದಿನ ಮಾತು. ಇಡೀ ಬೆಂಗಳೂರಿನ ತ್ಯಾಜ್ಯ ಮಂಡೂರಿಗೆ ಬಂದು ಬೀಳುತ್ತಿತ್ತು. ಅದರ ಹಿಂದೆಯೇ ಊರಲ್ಲಿನ ನಾಯಿಗಳು, ಸೊಳ್ಳೆ-ನೊಣಗಳೆಲ್ಲಾ ಧಾವಿಸುತ್ತಿದ್ದವು. ಇದರಿಂದ ಅಲ್ಲಿ ಜನ ನೆಮ್ಮದಿಯಿಂದ ರಾತ್ರಿ ನಿದ್ದೆ ಮಾಡುವಂತಿರಲಿಲ್ಲ. ಹತ್ತಾರು ಹಸುಗಳು, ಕುರಿಗಳು ಬಲಿಯಾಗಿದ್ದವು. ಕಸದ ದುರ್ವಾಸನೆ ಮೂಗಿಗೆ ಅಡರುತ್ತಿತ್ತು. ಅದನ್ನು ಹೋಗಲಾಡಿಸಲು ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿತ್ತು. ಆದರೆ, ಅದರ ಘಾಟು ಸುತ್ತಲಿನ ಕೃಷಿ ಬೆಳೆಗಳ ಮೇಲೆ ಹಬುತ್ತಿತ್ತು. ಇದರಿಂದ ಬೆಳೆಗಳಿಗೂ ಇಲ್ಲದ ರೋಗಗಳು ಕಾಣಿಸಿಕೊಳ್ಳುತ್ತಿದ್ದವು. ಈಗ ಸ್ವಲ್ಪ ಚಿತ್ರಣ ಬದಲಾಗಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಸೊಳ್ಳೆ, ನೊಣಗಳು, ನಾಯಿಗಳ ಹಾವಳಿ ಕಡಿಮೆ ಆಗಿದೆ. ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಈ ಮಧ್ಯೆ ರಿಯಲ್ ಎಸ್ಟೇಟ್ ವ್ಯವಹಾರ ಗೂಡ ಗರಿಗೆದರಿದೆ. ಇದೆಲ್ಲದರ ನಡುವೆ ಕಸದ ಸುದ್ದಿ ತೆಗೆದರೆ, ಈಗಲೂ ಅಲ್ಲಿನ ಜನ ಭಯ ಬೀಳುತ್ತಾರೆ. ಏಕೆಂದರೆ, ಕ್ವಾರಿಗಳನ್ನು ವೈಜ್ಞಾನಿಕವಾಗಿ ಮುಚ್ಚಿಲ್ಲ. ತ್ಯಾಜ್ಯದ ಬೃಹದಾಕಾರದ ಗುಡ್ಡೆಯ ಮೇಲೆ ಸುಮ್ಮನೇ ಮಣ್ಣು ಹಾಕಲಾಗಿದೆ. ಅದರ ಮೇಲೆ ಕಾಲಿಟ್ಟರೆ ಈಗಲೂ ಅಲ್ಲಲ್ಲಿ ಕಾಲು ಒಳಗಡೆ ಕುಸಿಯುತ್ತದೆ. ಒಂದು ವೇಳೆ ಅಲ್ಲಿ ಜೋರು ಮಳೆ ಸುರಿದರೆ, ಮಣ್ಣು ಕೊಚ್ಚಿಹೋಗಿ ಕಸ ಹೊರಬರಲಿದೆ. ಸೊಳ್ಳೆಗಳ ಉತ್ಪತ್ತಿ, ವಾಸನೆಗೆ ನಾಯಿಗಳು ಮತ್ತೆ ಆ ಗುಡ್ಡೆಯತ್ತ ಧಾವಿಸುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.