ವಾಯುಪಡೆ ಪ್ರತಿದಾಳಿಗೆ ಸ್ವಾಗತ, ಸಂಭ್ರಮಾಚರಣೆ
Team Udayavani, Feb 27, 2019, 6:00 AM IST
ಬೆಂಗಳೂರು: ಪಾಕ್ ಆಕ್ರಮಿತ ಕಾಶ್ಮೀರದ ಬಾಲಕೋಟ್‌ನಲ್ಲಿನ ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಗೆ ರಾಜ್ಯಾದ್ಯಂತ ವ್ಯಾಪಕ ಸ್ವಾಗತ, ಅಭಿನಂದನೆ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರ ಹಾಗೂ ವಾಯುಪಡೆಯ ಪರಿಣಾಮಕಾರಿ ದಾಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಬಿಜೆಪಿ ನಾಯಕರು, ಕಾರ್ಯಕರ್ತರು ಹಲವೆಡೆ ಸಂಭ್ರಮಾಚಣೆ ನಡೆಸಿದರು.
ಮಲ್ಲೇಶ್ವರದ ಬಿಜೆಪಿ ಕಚೇರಿ ಎದುರು ನಡೆದ ಸಂಭ್ರಮಾಚರಣೆಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷ ಪಿ.ಎನ್.ಸದಾಶಿವ, ರಾಜ್ಯ ಬಿಜೆಪಿ ಸಹ ವಕ್ತಾರರಾದ ಅನ್ವರ್ ಮಾಣಿಪ್ಪಾಡಿ, ಎಸ್.ಪ್ರಕಾಶ್ ಇತರರು ಪಾಲ್ಗೊಂಡಿದ್ದರು. ಕಾರ್ಯಕರ್ತರು ಪಟಾಕಿ ಸಿಡಿಸಿ, ಜೈಕಾರ, ಘೋಷಣೆ ಕೂಗಿ ಸೇನೆ ಹಾಗೂ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ, ಭಾರತೀಯ ಯೋಧರನ್ನು ಹತ್ಯೆ ಮಾಡಿದಾಗ ಇಡೀ ವಿಶ್ವವೇ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತು. ಭಾರತೀಯ ಸೇನೆ ಉಗ್ರರನ್ನು ದಮನ ಮಾಡಿರುವುದು ಹೆಮ್ಮೆಯ ವಿಚಾರ. ಇದು ಅಂತ್ಯವಲ್ಲ. ಬದಲಿಗೆ ಆರಂಭ. ಪಾಕಿಸ್ತಾನಕ್ಕೆ ಇದು ಎಚ್ಚರಿಕೆ ಸಂದೇಶ ಎಂದು ಹೇಳಿದರು.
ಎನ್.ರವಿಕುಮಾರ್, ಯೋಧರಿದ್ದ ಬಸ್ ಮೇಲೆ ಜೈಶ್ ಉಗ್ರ ಸಂಘಟನೆ ದಾಳಿ ನಡೆಸಿದ 12 ದಿನಗಳ ನಂತರ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿರುವುದು ನಮ್ಮ ಸೈನ್ಯದ ಶಕ್ತಿಯನ್ನು ತೋರಿಸುತ್ತದೆ ಎಂದರು.
ಪಾಕಿಸ್ತಾನಕ್ಕೆ ಎಚ್ಚರಿಕೆ ಗಂಟೆ!: ಹುತಾತ್ಮ ಯೋಧರ ನೆತ್ತರ ಒಂದೊಂದು ಹನಿಗೂ ನ್ಯಾಯ ಒದಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅದರಂತೆ ಏನು ಮಾಡಬೇಕಿತ್ತೋ ಅದನ್ನು ಭಾರತೀಯ ಸೇನೆ ಮಾಡಿದೆ. ಇದು ಪಾಕಿಸ್ತಾನಕ್ಕೆ ಎಚ್ಚರಿಕೆ ಗಂಟೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ವಿವಿ ಗೋಪುರದಲ್ಲಿರುವ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದ ಬಳಿಕ ಪ್ರತಿಕ್ರಿಯಿಸಿದ ಅವರು, ಭಾರತೀಯ ಸೇನೆಯ ದಾಳಿಗೆ ಉಗ್ರರ ತರಬೇತಿ ಕೇಂದ್ರಗಳು ಸಂಪೂರ್ಣ ಧ್ವಂಸವಾಗಿವೆ. ಭಾರತ ಎಲ್ಲದಕ್ಕೂ ತಯಾರಾಗಿದೆ. ಆದರೆ ಭಯೋತ್ಪಾದನೆಯನ್ನು ಹತ್ತಿಕ್ಕುವ ಕೆಲಸವನ್ನಷ್ಟೇ ಮಾಡಲಾಗುತ್ತಿದೆ ಎಂಬ ಸಂದೇಶವನ್ನು ಪ್ರಧಾನಿ ಮೋದಿಯವರು ರವಾನಿಸಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ನುಡಿದಂತೆ ನಡೆದಿದ್ದಾರೆ. ಇದನ್ನು ರಾಜಕೀಯಗೊಳಿಸುವುದು ಸೂಕ್ತವಲ್ಲ. ಹಿಂದೆ ಯಾರು ಏನೇ ಪ್ರಯತ್ನ ಮಾಡಿದ್ದರೂ ಪಾಕಿಸ್ತಾನದ ಹೆಡೆಮುರಿ ಕಟ್ಟುವ ಕೆಲಸ ಆಗಿರಲಿಲ್ಲ. ಕಾಂಗ್ರೆಸ್ ನಾಯಕರಿಗೂ ಪಾಕಿಸ್ತಾನಕ್ಕೂ ಏನು ಸಂಬಂಧವಿದೆಯೋ ಗೊತ್ತಿಲ್ಲ. ಇದರಲ್ಲೂ ರಾಜಕಾರಣ ಮಾಡುತ್ತಾರೆ ಎಂದರೆ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸುತ್ತೇನೆ. ಈ ದಾಳಿಯಿಂದ ಪಾಕಿಸ್ತಾನ ಬುದ್ಧಿ ಕಲಿಯದಿದ್ದರೆ ಯುದ್ಧದ ಹಂತಕ್ಕೆ ಹೋಗಬೇಕಾಗುತ್ತದೆ ಎಂದರು.
ಟ್ವಿಟರ್‌ನಲ್ಲಿ ಅಭಿನಂದನೆ ಸುರಿಮಳೆ: ಭಾರತೀಯ ವಾಯುಪಡೆಯ ಪ್ರತಿದಾಳಿ ವಿಚಾರ ತಿಳಿಯುತ್ತಿದ್ದಂತೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ವಾಯುಪಡೆಗೆ ಫೇಸ್‌ಬುಕ್, ಟ್ವಿಟರ್‌ನಲ್ಲಿ ಅಭಿನಂದನೆಯ ಮಹಾಪೂರವೇ ಹರಿದುಬಂತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, “ಈ ದಿನ ನಮ್ಮ ವೀರರಿಗೆ ದೊಡ್ಡ ಸಲಾಂ. ಬಾಲಕೋಟ್‌ನಲ್ಲಿರುವ ಜೈಷ್ ಉಗ್ರ ಸಂಘಟನೆ ಶಿಬಿರದ ಮೇಲೆ ಭಾರತ ದಾಳಿ ನಡೆಸಿದೆ. ಇದು ಹೊಸ ಭಾರತ. ಹೇಗಿದೆ ಜೋಷ್?’ ಎಂದು ಟ್ವೀಟ್ ಮಾಡಿದ್ದಾರೆ.
ನಟ ಜಗ್ಗೇಶ್, ಯಾಕೆ ನರೇಂದ್ರ ಮೋದಿ ಮತ್ತೂಮ್ಮೆ ಎಂದು ಹೇಳಿದಾಗ ಉದ್ರೇಕಗೊಂಡದ್ದು (ಕೆಲವರು ಸಹೋದರರು) ಮಾತ್ರ! ಅವರಿಗೆ ಇಂದು ಅರಿವಾಗಿದ್ದರೆ ಮೋದಿಯವರ ದೇಶ ಮೆಚ್ಚುವ ಕಾಯಕ! ಸಾರ್ಥಕ ನನ್ನ ಅನಿಸಿಕೆ! ನುಡಿದದ್ದು ನಾನಲ್ಲಾ ನನ್ನ ಕಾಲಭೈರವ. ನಿನ್ನೆ ಮೋದಿ ಕಪ್ಪು ಬಟ್ಟೆ ಹಾಕಿ ಕುಂಭಸ್ನಾನ ಮಾಡಿದ್ದು ನಾಥ ಸಂಪ್ರದಾಯ ಅಂದರೆ ಕಾಲಭೈರವನಿಗೆ ಶತ್ರು ಸಂಹಾರಕ್ಕೆ! ಎಂಬುದಾಗಿ ಟ್ವೀಟ್ ಮಾಡಿದ್ದಾರೆ.
ಕಾಲೆಳೆದ ಬಿಜೆಪಿ: ಭಾರತೀಯ ವಾಯುಪಡೆಯ ಪೈಲಟ್‌ಗಳಿಗೆ ನನ್ನ ಸಲಾಂ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿರುವ ಟ್ವೀಟ್‌ಗೆ ಬಿಜೆಪಿ ಕರ್ನಾಟಕ ಪ್ರತಿ ಟ್ವೀಟ್ ಮಾಡಿದ್ದು, “ರಕ್ಷಣಾ ಇಲಾಖೆಯ ಬಹಳಷ್ಟು ಕಿಕ್‌ಬ್ಯಾಕ್ ಡೀಲ್‌ಗಳಲ್ಲಿ ಭಾಗಿಯಾದ ಕುಟುಂಬದ ಸದಸ್ಯರೊಬ್ಬರು ನಮ್ಮ ಸೇನಾಪಡೆಗಳಿಗೆ ಗೌರವ ತೋರಿಸುವುದನ್ನು ಕಂಡು ಸಂತಸವಾಗಿದೆ.
ಒಂದೊಮ್ಮೆ ಇದು ಅಚ್ಛೆ ದಿನ್ ಅಲ್ಲದಿದ್ದರೆ, ಅಚ್ಛೆ ದಿನ್ ಎಂದರೆ ಯಾವುದು? ಎಂಬುದಾಗಿ ಟ್ವೀಟ್ ಮಾಡಿದೆ. ಪಾಕಿಸ್ತಾನದ ರಕ್ಷಣಾ ಇಲಾಖೆಯು “ನೆಮ್ಮದಿಯಾಗಿ ಮಲಗಿ ಪಾಕಿಸ್ತಾನದ ವಾಯುಪಡೆ ಎಚ್ಚರವಾಗಿದೆ (ಸ್ಲಿಪ್ ಟೈಟ್ ಬಿಕಾಸ್ ಪಿಎಎಫ್ ಇಸ್ ಅವೇಕ್) ಪಾಕಿಸ್ತಾನ್ ಜಿಂದಾಬಾದ್’ ಎಂಬುದಾಗಿ ಮಾಡಿದ ಟ್ವೀಟ್ ಉಲ್ಲೇಖೀಸಿರುವ ಸಂಸದೆ ಶೋಭಾ ಕರಂದ್ಲಾಜೆ, ಅವರು ಟ್ವೀಟ್ ಮಾಡಿ ನಂತರ ಮಲಗಿದರು.
ನಮ್ಮ ವೀರಹೃದಯಿಗಳು ಉಳಿದದ್ದನ್ನು ಮಾಡಿ ಮುಗಿಸಿದರು! ಅವರು ಎಷ್ಟು ಗಾಢ ನಿದ್ರೆಯಲ್ಲಿದ್ದರು ಎಂದರೆ ಅವರ ಕನಸಿನಲ್ಲಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅಪ್ಪಿತಪ್ಪಿಯೂ ಚಿಂತಿಸಿರಲಿಲ್ಲ. ಅವರು ಸರ್ಜಿಕಲ್-2ಗೆ ಸಿದ್ಧರಾಗಿದ್ದರು. ಆದರೆ ನಮ್ಮ ಹೆಮ್ಮೆಯ ಭಾರತೀಯ ವಾಯುಪಡೆ ಏರ್ ಸ್ಟ್ರೈಕ್ ನಡೆಸಿದೆ.
ಭಾರತ ಮರು ದಾಳಿ ನಡೆಸಿದೆ’ ಎಂದು ಟ್ವೀಟ್‌ನಲ್ಲಿ ಟಾಂಗ್ ನೀಡಿದ್ದಾರೆ. ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್, “ನಿನ್ನೆ ವಾರ್ ಮೆಮೋರಿಯಲ್ ಲೋಕಾರ್ಪಣೆ ಇಂದು ಸ್ಟ್ರೈಕ್ ಮೆಮೋರಬಲ್ ಅನಾವರಣ’ ಎಂದು ಟ್ವೀಟ್‌ನಲ್ಲಿ ವಿಶ್ಲೇಷಿಸಿದ್ದಾರೆ.
ಪಾಕಿಸ್ತಾನದ ಮೇಲೆ ಭಾರತ ಪ್ರತೀಕಾರ ತೆಗೆದುಕೊಂಡ ಬಗೆ ಭಾರತೀಯರಲ್ಲಿ ಸಮಾಧಾನ ತಂದಿದೆ. ಉಗ್ರರ ಸದೆಬಡೆದಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದೆ.
-ಅತೀಕ್, ವಿದ್ಯಾರ್ಥಿ
ಉಗ್ರರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನಕ್ಕೆ ಭಾರತ ಈಗಾಗಲೇ ರಫ್ತು, ಆಮದು ನಿಲ್ಲಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ ಹಾಕಿದೆ. ಈಗ ರಕ್ತಕ್ಕೆ ರಕ್ತದ ಮೂಲಕ ಉತ್ತರ ನೀಡಿ ತಕ್ಕ ಪಾಠ ಕಲಿಸಿದೆ.
-ವಿಕಾಸ್, ವಿದ್ಯಾರ್ಥಿ
ಪಾಕ್ ನೆಲದಲ್ಲೇ ಉಗ್ರರ ಹುಟ್ಟಗಿಸಿದ ದೇಶದ ಸೈನಿಕರ ಬಗ್ಗೆ ಹೆಮ್ಮೆಯಾಗುತ್ತಿದೆ. ನಿಜವಾದ ಮಾದರಿ ವ್ಯಕ್ತಿಗಳು ಎಂದರೆ ಸೈನಿಕರು.
-ಅಕ್ರಮ್ ಹುಸೇನ್, ಖಾಸಗಿ ಸಂಸ್ಥೆ ಉದ್ಯೋಗಿ
ಪುಲ್ವಾಮ ದಾಳಿಯಲ್ಲಿ ವೀರಮರಣವನ್ನಪ್ಪಿದ ಸೈನಿಕರಿಗೆ ಭಾರತೀಯ ಸೇನೆ ನಿಜವಾದ ಶ್ರದ್ಧಾಂಜಲಿ ಅರ್ಪಿಸಿದೆ.
-ಮನೀಷಾ, ವಿದ್ಯಾರ್ಥಿನಿ
ಭಾರತೀಯರಿಗೆ ಜ.26 ರಿಪಬ್ಲಿಕ್ ಡೇ, ಫೆ.26 ರಿವೇಂಜ್ ಡೇ. ಸೈನಿಕರ ಕೊಂದವರಿಗೆ ವಾಯು ಸೇನೆ ದಿಟ್ಟ ಉತ್ತರ ನೀಡಿದೆ.
-ಪ್ರಿಯದರ್ಶಿನಿ, ವಿದ್ಯಾರ್ಥಿನಿ
ಭಾರತ ಮತ್ತು ಭಾರತೀಯರ ತಂಟೆಗೆ ಬಂದರೆ ಪಾಕಿಸ್ತಾನವನ್ನು ಹೆಡೆಮುರಿ ಕಟ್ಟಲಿದ್ದೇವೆ ಎಂಬ ದಿಟ್ಟ ಉತ್ತರವನ್ನು ಪ್ರಧಾನಿ ನೀಡಿದ್ದಾರೆ.
-ಶೋಭಾ.ಕೆ, ವಿದ್ಯಾರ್ಥಿನಿ
ಗಡಿ ನಿಯಂತ್ರಣ ರೇಖೆ ದಾಟಿ ದಾಳಿ ನಡೆಸಿರುವುದು ಉಗ್ರರ ಮೇಲೇ ಹೊರತು ಪಾಕ್ ಸೇನೆ ಅಥವಾ ಜನರ ಮೇಲಲ್ಲ. ಇದನ್ನು ಪಾಕ್ ಅರ್ಥ ಮಾಡಿಕೊಳ್ಳಲಿ.
-ಶಾಲಿನಿ, ವಿದ್ಯಾರ್ಥಿನಿ
ಉಗ್ರರ ಹತ್ಯೆ ಮೂಲಕ ನಮ್ಮ 40 ಹುತಾತ್ಮರಿಗೆ ಭಾರತೀಯ ವಾಯುಪಡೆ ಗೌರವ ಸೂಚಿಸಿದೆ. ಪ್ರತಿಯೊಬ್ಬ ಭಾರತೀಯನಿಗೂ ಈ ಬಗ್ಗೆ ಹೆಮ್ಮೆ ಇದೆ.
-ಸುಮಿತ್, ವಿದ್ಯಾರ್ಥಿ
21 ನಿಮಿಷದಲ್ಲಿ 300 ಉಗ್ರರ ಹತ್ಯೆ ಮಾಡಿದ ಭಾರತೀಯ ವಾಯುಪಡೆಗೆ ಸೆಲ್ಯೂಟ್. ಸೇನೆಗೆ ಭಾರತೀಯರೆಲ್ಲರು ಕೃತಜ್ಞರಾಗಿರುತ್ತಾರೆ.
-ನಿಖೀತಾ, ವಿದ್ಯಾರ್ಥಿನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.