ಹೊಸ ವರ್ಷಕ್ಕೆ ಸಂಭ್ರಮದ ಸ್ವಾಗತ
Team Udayavani, Jan 1, 2019, 6:44 AM IST
ಬೆಂಗಳೂರು: ಬಾನೆತ್ತರದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿದ ಪಟಾಕಿಗಳ ಸದ್ದು, ಕೇಕೆ-ಕುಣಿತ, ಮೋಜು-ಮಸ್ತಿ ಮೂಲಕ ಗತವರ್ಷಕ್ಕೆ ವಿದಾಯ ಹೇಳಿದ ಬೆಂಗಳೂರಿಗರು, 2019ನೇ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದರು.
ಸೋಮವಾರ ಮಧ್ಯರಾತ್ರಿ 12 ಗಂಟೆ ಆಗುತ್ತಿದ್ದಂತೆ ನಗರಕ್ಕೆ ನಗರವೇ ಖುಷಿಯ ಅಲೆಯಲ್ಲಿ ಮಿಂದೆದ್ದಿತ್ತು. ಹಾಡು, ನೃತೃ, ಶಿಳ್ಳೆ ಚಪ್ಪಾಳೆ ಮೂಲಕ ಜನ ಹೊಸ ವರ್ಷ ಬರಮಾಡಿಕೊಂಡರು. ಹೊಸತನವನ್ನು ಸ್ವಾಗತಿಸುವ ಅಪೂರ್ವ ಕ್ಷಣಗಳಲ್ಲಿ ಭಾಗಿಯಾದ ಸ್ನೇಹಿತರು, ವರ್ಷ ಪೂರ್ತಿ ಇದೇ ಹರ್ಷ ಇರಲೆಂದು ಪರಸ್ಪರ ಆತ್ಮೀಯ ಅಪ್ಪುಗೆ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.
ಹೊಸ ಕ್ಯಾಲೆಂಡರ್ ವರ್ಷ ಆರಂಭವಾಗುವ ಕ್ಷಣವನ್ನು ಆಚರಿಸುವ ಸಲುವಾಗಿ ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ಮಲ್ಲೇಶ್ವರ, ಜಯನಗರ, ಇಂದಿರಾನಗರ, ಕೋರಮಂಗಲ, ವೈಟ್‌ಫೀಲ್ಡ್ ಹಾಗೂ ಹೊಸೂರು ರಸ್ತೆಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ರಾತ್ರಿ 12 ಗಂಟೆಗೆ ಎಲ್ಲೆಡೆಯಿಂದ ಪಟಾಕಿ ಶಬ್ದ ಹಾಗೂ “ಹ್ಯಾಪಿ ನ್ಯೂ ಇಯರ್’ ಎಲ್ಲೆಡೆಯಿಂದ ಕೇಳಿಬರುತ್ತಿತ್ತು.
ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ನಾನಾ ವಿವಿಧ ಸಂಗೀತ ವಾದ್ಯಗಳ ಸದ್ದು ಕೇಳಿಬರುತ್ತಿದ್ದರೆ, ಯುವಕ-ಯುವತಿಯರು ವಿಶಿಷ್ಟ ವೇಷಭೂಷಣ, ರಂಗುರಂಗಿನ ಉಡುಗೆ ತೊಡುಗೆಗಳ ಕಂಗೊಳಿಸುತ್ತಿದ್ದರು. ಜತೆಗೆ ರಂಗು ರಂಗಿನ ವಿದ್ಯುತ್ ದೀಪಾಲಂಕಾರದ ಸೌಂದರ್ಯವನ್ನು ಮೊಬೈಲ್‌ಗಳಲ್ಲಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ಹೊಸ ವರ್ಷವನ್ನು ಸ್ವಾಗತಿಸಲು ನಗರದೆಲ್ಲೆಡೆ ಅಂಗಡಿ ಮುಂಗಟ್ಟು, ಮಾಲ್‌ಗಳು, ಬಾರ್ ಆಂಡ್ ರೆಸ್ಟೋರೆಂಟ್‌ಗಳು ಹಾಗೂ ಪಬ್‌ಗಳು ವಿದ್ಯುತ್ ದೀಪಾಲಂಕಾರಗಳಿಂದ ಸಿಂಗಾರಗೊಂಡಿದ್ದವು. ಕೆಲವು ಮಳಿಗೆಗಳ ಮುಂದೆ ಅಳವಡಿಸಿದ್ದ ಧ್ವನಿವರ್ಧಕಗಳಿಂದ ವಿದೇಶಿ ಮಿಶ್ರಿತ ಸಂಗೀತ ಕೇಳಿಬರುತ್ತಿದ್ದರೆ, ವಿವಿಧೆಡೆಯಿಂದ ಬಂದಿದ್ದ ಯುವ ಸಮೂಹ ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಬರಮಾಡಿಕೊಂಡರು.
ಬೆಳಕಲ್ಲೇ ಹೊಸ ವರ್ಷಕ್ಕೆ ಸ್ವಾಗತ: ನಗರದ ಬ್ರಿಗೇಡ್ ರಸ್ತೆಯಲ್ಲಿ 2017ರ ಹೊಸ ವರ್ಷಾಚರಣೆಯ ವೇಳೆ ನೂಕು ನುಗ್ಗಲು ಉಂಟಾಗಿ, ಲೈಂಗಿಕ ದೌರ್ಜನ್ಯದಂತಹ ಘಟನೆಗಳು ವರದಿಯಾಗಿದ್ದವು. ಆ ಹಿನ್ನೆಲೆಯಲ್ಲಿ ಕಳೆದ ಬಾರಿಯದಂತೆ ಈ ವರ್ಷವೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇದರೊಂದಿಗೆ ಈ ವರ್ಷವೂ ಬ್ರಿಗೇಡ್ ರಸ್ತೆಯಲ್ಲಿ 12 ಗಂಟೆಗೆ ವಿದ್ಯುತ್ ದೀಪಗಳನ್ನು ಆರಿಸಲಿಲ್ಲ. ಬದಲಿಗೆ ವಿದ್ಯುತ್ ದೀಪಗಳ ಬೆಳಕಿನ ನಡುವೆಯೇ ಯುವ ಸಮೂಹ ಸಂಭ್ರಮಾಚರಣೆ ನಡೆಸಿತು. ಜತೆಗೆ ಹೆಚ್ಚು ಜನ ಸೇರಿದ್ದರಿಂದ ಬ್ರಿಗೇಡ್ ರಸ್ತೆಯಲ್ಲಿ ಏಕಪಥ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ರಸ್ತೆಯಲ್ಲಿ ಜನಸಂದಣಿಗೆ ಆಸ್ಪದವೇ ಇರಲಿಲ್ಲ.
ಕುಣಿತ… ಅಪ್ಪುಗೆ… ಸಂಭ್ರಮ…: ನಗರದ ಬಾರ್, ಪಬ್ ಹಾಗೂ ಡಿಸ್ಕೋಥೆಕ್‌ಗಳಲ್ಲಿದ್ದ ಗಡಿಯಾರದ ಮುಳ್ಳು 12ಕ್ಕೆ ಬರುತ್ತಿದ್ದಂತೆ ಯುವಕರ ಹರ್ಷೋದ್ಗಾರ ಜೋರಾಗಿತ್ತು. ಕೆಲವರು ಸ್ನೇಹಿತರೊಂದಿಗೆ ಹೆಜ್ಜೆ ಹಾಕಿದರೆ, ಇನ್ನು ಕೆಲವರು ಕುಡಿತ, ಕುಣಿತದ ಜೊತೆಗೆ ಸ್ನೇಹಿತರನ್ನು ಅಪ್ಪಿಕೊಂಡು ಶುಭ ಕೋರಿದರು. ಇನ್ನು ಪಬ್ ಹಾಗೂ ಡಿಸ್ಕೋಥೆಕ್‌ಗಳಿಂದ ಹೊರ ಹೊಮ್ಮುತ್ತಿದ್ದ ಸಂಗೀತದ ಅಬ್ಬರಕ್ಕೆ ಚಳಿ ಕೂಡ ನಡುಗುವಂತಹ ವಾತಾವರಣ ನಿರ್ಮಾಣವಾಗಿತ್ತು.
ಮೆಟ್ರೋ ರೈಲಲ್ಲಿ ಜನಜಂಗುಳಿ: ಹೊಸ ವರ್ಷದ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಹಾಗೂ ಬಿಎಂಟಿಸಿ ಸೇವೆಯನ್ನು ಮಧ್ಯರಾತ್ರಿ 2ರವರೆಗೆ ವಿಸ್ತರಿಸಲಾಗಿತ್ತು. ವರ್ಷಾಚರಣೆ ಮುಗಿಯುತ್ತಿದ್ದರಂತೆ ಮೆಟ್ರೊ ರೈಲುಗಳ ಎಲ್ಲ ಬೋಗಿಗಳು ತುಂಬಿ ತುಳುಕಿದ್ದವು. ಇನ್ನು ಎಂ.ಜಿ.ರಸ್ತೆಯಿಂದ ಇಂದಿರಾ ನಗರವರೆಗೆ ಮೆಟ್ರೋ ಸೇವೆ ಇಲ್ಲದ ಕಾರಣದಿಂದ ಮೆಟ್ರೋ ಪ್ರಯಾಣಿಕರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು. ಯುವಕರು ಬಸ್‌ಗಳು ಹಾಗೂ ಮೆಟ್ರೋ ಬೋಗಿಗಳಲ್ಲಿಯೂ ಕೇಳೆ ಹಾಕಿ ಸಹ ಪ್ರಯಾಣಿಕರಿಗೆ ಶುಭಾಶಯ ಕೋರಿದ್ದು ಕಂಡುಬಂತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.