ವಿಸರ್ಜಿಸಿದ ಪಿಒಪಿ ಮೂರ್ತಿ ಏನಾಗುತ್ತೆ?
Team Udayavani, Aug 27, 2019, 3:10 AM IST
ಬೆಂಗಳೂರು: ನೀವು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಪೂಜಿಸಿ, ವಿಸರ್ಜಿಸಲ್ಪಡುವ ಗಣೇಶನ ಗತಿ ಮುಂದೆ ಏನಾಗುತ್ತದೆ ನಿಮಗೆ ಗೊತ್ತಾ? ಇಡೀ ನಗರದ ಕಸ ಎಸೆಯಲ್ಪಡುವ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ, ಒಳಚರಂಡಿ ನೀರು ತುಂಬಿಕೊಂಡಿರುವ ಕೆರೆಗಳಲ್ಲಿ ಆ ಮೂರ್ತಿಗಳು ಲೀನವಾಗುತ್ತವೆ!
ನಗರದಾದ್ಯಂತ ಲಕ್ಷಾಂತರ ಗಣಪತಿ ಮೂರ್ತಿಗಳು ಪ್ರತಿಷ್ಠಾಪನೆಯಾಗುತ್ತವೆ. ಅವುಗಳ ಪೈಕಿ ನಿತ್ಯ ಸಾವಿರಾರು ಗಣಪತಿಗಳು ನಗರದ ಕೆರೆಗಳಲ್ಲಿ ವಿಸರ್ಜನೆಯಾಗುತ್ತವೆ. ಆದರೆ, ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮತ್ತಿತರ ರಾಸಾಯನಿಕ ಅಂಶಗಳಿಂದ ನಿರ್ಮಿಸಲ್ಪಟ್ಟ ಗಣೇಶನ ಮೂರ್ತಿಗಳು ಮಾತ್ರ ನೀರಿನಲ್ಲಿ ಕರಗುವುದೇ ಇಲ್ಲ. ಹಾಗಾಗಿ, ಅವುಗಳ ವಿಲೇವಾರಿ ಕಾರ್ಯವು ಅನಿವಾರ್ಯವಾಗಿ ಅತ್ಯಂತ ನಿಕೃಷ್ಟವಾಗಿ ನಡೆಯುತ್ತದೆ.
ಅದರಲ್ಲೂ ದೊಡ್ಡ ಗಾತ್ರದ ಗಣೇಶನ ಮೂರ್ತಿಗಳನ್ನು ವಿಲೇವಾರಿ ಮಾಡುವ ರೀತಿಯಂತೂ ಆ ಗಜಾನನನಿಗೇ ಪ್ರೀತಿ. ಮೂರ್ತಿ ಮೇಲಿನ ಹಾರ, ಒಳಗಿರುವ ಕಟ್ಟಿಗೆ ಪುಡಿ ಮತ್ತಿತರ ಕಸ ಹಾಗೂ ಪಿಒಪಿಯನ್ನು ಬೇರ್ಪಡಿಸಿ, ಮುದ್ದೆ ಮಾಡಿ, ಕಸ ತುಂಬಿಕೊಂಡು ಹೋಗುವ ಲಾರಿಗಳಲ್ಲಿ ತುಂಬಿ ಸಾಗಿಸಲಾಗುತ್ತದೆ. ಕೆಲವೊಮ್ಮೆ ಕೆರೆಗಳಿಗೆ ಇಳಿದು, ಗಣೇಶನ ಮೂರ್ತಿಗಳನ್ನು ಹೊರತಂದು ದಡಕ್ಕೆ ಹಾಕಲಾಗುತ್ತದೆ. ಇನ್ನು ಕೆಲವು ಗಣೇಶ ಮೂರ್ತಿಗಳನ್ನು ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸಾಗಿಸಲಾಗುತ್ತದೆ.
2016ರಲ್ಲಿ ಪಿಒಪಿ ಗಣೇಶ ಮೂರ್ತಿಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ನಿಷೇಧದ ನಂತರವೂ ಪ್ರತಿ ವರ್ಷ ಸಾವಿರಾರು ಪಿಒಪಿ ಗಣೇಶ ಮೂರ್ತಿಗಳನ್ನು ಬಿಬಿಎಂಪಿಯೇ ನಿರ್ಮಾಣ ಮಾಡಿರುವ ಕಲ್ಯಾಣಿಗಳಲ್ಲಿ ಮತ್ತು ನಗರದ ಜಲಮೂಲಗಳಲ್ಲಿ ವಿಸರ್ಜನೆ ಮಾಡಲಾಗುತ್ತಿದೆ. ಪ್ರತಿ ವರ್ಷ ಪಿಒಪಿ ಗಣೇಶ ಮೂರ್ತಿಗಳಲ್ಲಿರುವ ಲೋಹದ ಮತ್ತು ರಾಸಾಯಿನಿಕ ಅಂಶಗಳು ಜಲಮೂಲ ಸೇರುವುದನ್ನು ತಡೆಯುವ ಉದ್ದೇಶದಿಂದ ಪಾಲಿಕೆಯು ಮೊಬೈಲ್ ಟ್ಯಾಂಕರ್‌ಗಳ ಮೂಲಕ ವಿರ್ಸಜನೆ ವ್ಯವಸ್ಥೆ ಮಾಡಲಾಗುತ್ತದೆ.
ಟ್ಯಾಂಕರ್ ನೀರನು ಕೆರೆಗೆ!: ಕೆರೆ ಮೂಲಗಳನ್ನು ಉಳಿಸಿಕೊಳ್ಳಲು, ಅಂತರ್ಜಲ ಕಲುಷಿತ ಆಗುವುದನ್ನು ತಡೆಯಲು ಬಿಬಿಎಂಪಿ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಇದು ಸಂಪೂರ್ಣವಾಗಿ ಯಶಸ್ವಿಯಾಗುತ್ತಿಲ್ಲ. ಜಲಮೂಲಗಳಿಗೆ ಸೇರದಂತೆ ಸಾರ್ವಜನಿಕರಿಂದ ಪಿಒಪಿ ಗಣೇಶ ಮೂರ್ತಿಗಳನ್ನು ಸಂಗ್ರಹ ಮಾಡಿ ಅದನ್ನು ತಾನೇ ವಿರ್ಸಜನೆ ಮಾಡುವ ಬಿಬಿಎಂಪಿ, ಈ ರೀತಿ ಸಂಗ್ರಹ ಮಾಡಿದ ನೀರನ್ನು ಪುನಃ ಕೆರೆಗಳಿಗೇ ತಂದು ಸುರಿಯುತ್ತಿದೆ ಎಂದು ಪರಿಸರವಾದಿಗಳೂ ಆರೋಪಿಸುತ್ತಾರೆ.
ಹಾಗಿದ್ದರೆ, ಈ ನಿಟ್ಟಿನಲ್ಲಿ ಜಲಮೂಲಗಳನ್ನು ಕಲುಷಿತ ಮಾಡುತ್ತಿರುವವರು ಯಾರು? ಭಕ್ತರೋ ಅಥವಾ ಬಿಬಿಎಂಪಿಯೋ ಎಂದು ಪ್ರಶ್ನಿಸುತ್ತಾರೆ. ಆದರೆ, ಈ ಆರೋಪವನ್ನು ಬಿಬಿಎಂಪಿಯ ಅಧಿಕಾರಿಗಳು ತಳ್ಳಿಹಾಕುತ್ತಾರೆ. ಹಾನಿಯನ್ನು ತಡೆಯುವ ಉದ್ದೇಶದಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಈ ನೀರನ್ನು ಮತ್ತೆ ಕೆರೆಗಳಿಗೆ ಬಿಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎನ್ನುತ್ತಾರೆ.
ವಾಡಿಕೆಗಿಂತ ಕಡಿಮೆ ಮಳೆ: ಈ ವರ್ಷದ ಮುಂಗಾರಿನಲ್ಲಿ ನಗರದಲ್ಲಿ ವಾಡಿಕೆಗಿಂತ ಶೇ. 28ರಷ್ಟು ಕಡಿಮೆ ಮಳೆಯಾಗಿದೆ. ಬೆಂಗಳೂರು ಗ್ರಾಮಂತರ ಪ್ರದೇಶದಲ್ಲೂ ಶೇ. 31 ಕೊರತೆ ಇದೆ. ಹೀಗಾಗಿ, ಈ ಹಿಂದೆಗಿಂತಲೂ ಈ ಬಾರಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಕೆರೆಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಈಗ ಪಿಒಪಿ ಗಣಪತಿ ಮೂರ್ತಿಯನ್ನು ಇಲ್ಲಿ ವಿರ್ಸಜನೆ ಮಾಡಿದರೆ ನೀರಿನ ಅಭಾವ ಮತ್ತಷ್ಟು ಹೆಚ್ಚಾಗಲಿದೆ ಎಂದು ತಜ್ಞರು ಎಚ್ಚರಿಸುತ್ತಾರೆ.
ಸಾಗಣೆ ಸಾಧ್ಯವೇ?: ಬಿಬಿಎಂಪಿ ಗಣೇಶ ಚತುರ್ಥಿ ಸಮಯದಲ್ಲಿ ಬಳಸುವ ಮೊಬೈಲ್ ಟ್ಯಾಂಕರ್ ಮತ್ತು ತಾತ್ಕಾಲಿಕ ಕಲ್ಯಾಣಿಗಳಲ್ಲಿನ ನೀರನ್ನು ಕೊಳಚೆನೀರು ಸಂಸ್ಕರಣಾ ಘಟಕ (ಎಸ್‌ಟಿಪಿ)ಗಳಿಗೆ ಕಳುಹಿಸಿ ಶುದ್ಧೀಕರಣ ಮಾಡುವುದು ಅಸಾಧ್ಯದ ಮಾತು. ನಗರದಲ್ಲಿ ಒಟ್ಟಾರೆ 24 ಘಟಕಗಳಿದ್ದು, ಇವು ನಾನಾ ಭಾಗಗಳಲ್ಲಿವೆ. ಗಣೇಶ ಮೂರ್ತಿಗಳು ಮತ್ತು ನೀರು ತುಂಬಿದ ಟ್ರ್ಯಾಕ್ಟರ್ ತೆಗೆದುಕೊಂಡು ಘಟಕದವರೆಗೆ ಹೋಗಬೇಕು. ಅದಕ್ಕೂ ಮುನ್ನ ಘಟಕಕ್ಕೆ ಕಳುಹಿಸಲು ಸೂಕ್ತವೇ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ. ಅಲ್ಲದೆ, ಟ್ಯಾಂಕರ್ ಚಾಲಕರು ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ.
ಎಸ್‌ಟಿಪಿ ಘಟಕಕ್ಕೂ ಟ್ಯಾಂಕರ್‌ಗಳನ್ನು ನಿಲ್ಲಿಸಿರುವ ಸ್ಥಳಕ್ಕೂ ಹಲವು ಕಿ.ಮೀ ದೂರದಲ್ಲಿರುತ್ತದೆ. ಮೊಬೈಲ್ ಟ್ಯಾಂಕರ್‌ಗಳಲ್ಲಿ ಕೆರೆಯಿಂದಲೇ ನೀರು ತುಂಬಿಕೊಂಡು ಬಂದಿರುತ್ತಾರೆ. ನಂತರ ಬಹುತೇಕರು ಪುನಃ ಅದೇ ಕೆರೆ ಅಥವಾ ಕಲ್ಯಾಣಿಗಳಿಗೆ ಸುರಿಯುತ್ತಾರೆ. ಟ್ಯಾಂಕರ್ ನೀರನ್ನು ಎಸ್‌ಟಿಪಿಗಳಿಗೆ ಸಾಗಿಸಿ ಶುದ್ಧ ಮಾಡಲಾಗುತ್ತದೆ ಎನ್ನುವುದು ಅನುಮಾನ ಎಂದು ಫ್ರೆಂಡ್ ಆಫ್ ಲೇಕ್ ಸಂಘಟನೆ ರಾಮ್‌ಪ್ರಸಾದ್ ದೂರುತ್ತಾರೆ.
ಈ ಬಾರಿ ಬಹುತೇಕ ಮಣ್ಣಿನ ಗಣಪತಿಗಳಿಗೆಮಾತ್ರ ಅವಕಾಶ ಮಾಡಿಕೊಟ್ಟಿರುವುದರಿಂದ ಟ್ಯಾಂಕರ್‌ಗಳಲ್ಲಿ ನೀರು ಕಲುಷಿತವಾಗುವ ಸಾಧ್ಯತೆಕಡಿಮೆ. ಕಲುಷಿತವಾಗುವ ನೀರನ್ನು ಎಸ್‌ಟಿಪಿಗೆ ಕಳುಹಿಸಲಾಗುವುದು.
-ಸರ್ಫರಾಜ್ ಖಾನ್, ಜಂಟಿ ಆಯುಕ್ತ (ಘನತ್ಯಾಜ್ಯ)
ಪಿಒಪಿ ಗಣೇಶ ಮಾರಾಟ ಮತ್ತು ಪ್ರತಿಷ್ಠಾಪನೆಗೆ ಬಿಬಿಎಂಪಿ ಯಾವುದೇ ಕಾರಣಕ್ಕೂ ಉತ್ತೇಜನ ನೀಡುವುದಿಲ್ಲ. ತಾತ್ಕಾಲಿಕ ಕಲ್ಯಾಣಿಗಳಲ್ಲೂ ಪಿಒಪಿ ಗಣೇಶನ ವಿಸರ್ಜನೆಗೆ ಅವಕಾಶ ನೀಡುವುದಿಲ್ಲ. ಇದನ್ನು ಬಿಬಿಎಂಪಿ ಸ್ಪಷ್ಟವಾಗಿ ಹೇಳಿದೆ.
-ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ(ನಿರ್ಗಮಿತ)
* ಹಿತೇಶ್ ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.