ಪರಿಹಾರ ಸೂಚಿಸದ ಸಚಿವರೇಕೆ ಬೇಕು?
Team Udayavani, Nov 26, 2018, 12:29 PM IST
ಬೆಂಗಳೂರು: ಸ್ವಾಧೀನಪಡಿಸಿಕೊಂಡ ಸ್ವತ್ತಿಗೆ ಪರಿಹಾರ ಕೊಡಿಸಲು ಆಗದಿದ್ದರೆ, ಉಪ ಮುಖ್ಯಮಂತ್ರಿಯಾಗಿ ನೀವು ಯಾಕಿರಬೇಕು, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ನಿಮ್ಮ ಕೈಯಲ್ಲಿ ಆಗುತ್ತೋ, ಇಲ್ಲವೋ?, ಸ್ಕೈವಾಕ್ ನಿರ್ಮಾಣ ನಿಮ್ಮಿಂದ ಆಗದಿದ್ದರೆ, ನಮಗೆ ಅನುಮತಿ ಕೊಡಿ ನಾವೇ ನಿರ್ಮಿಸುತ್ತೇವೆ, ದಿನಗೂಲಿ ಕಾರ್ಮಿಕರಾದ ನಮಗೆ ಹಕ್ಕುಪತ್ರ ಕೊಟ್ಟು, ಸುಂದರ ಬದುಕು ಕಟ್ಟಿಕೊಳ್ಳಲು ಅವಕಾಶ ಕೊಡಿ…
ಬಿಬಿಎಂಪಿ ವತಿಯಿಂದ ಶನಿವಾರ ಟೌನ್‌ಹಾಲ್‌ನಲ್ಲಿ ಆಯೋಜಿಸಿದ್ದ “ಜನಸ್ಪಂದನ’ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು, ನಾ ಗರಿಕ ಕ್ಷೇಮಾಭಿವೃದ್ಧಿ ಸಂಘದ ಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ.. ಪೂರ್ವ ವಲಯದ ಶಾಂತಿನಗರ, ಶಿವಾಜಿನಗರ, ಸರ್ವಜ್ಞನಗರ, ಸಿ.ವಿ.ರಾಮನ್‌ನಗರ, ಹೆಬ್ಟಾಳ ಮತ್ತು ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಿ, ಸೂಕ್ತ ಪರಿಹಾರ ಕಂಡುಕೊಳ್ಳಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜನರು ಸಮಸ್ಯೆಗಳನ್ನು ಹೇಳಿಕೊಂಡರು.
“ಪಾಲಿಕೆಯಿಂದ ಸ್ವಾಧೀನಪಡಿಸಿಕೊಂಡ ಆಸ್ತಿಗೆ ಈವರೆಗೆ ಪರಿಹಾರ ಕೂಡದೆ ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ್ದಾರೆ. ನಿಮ್ಮಿಂದ ಪರಿಹಾರ ಕೊಡಿಸಲು ಸಾಧ್ಯವಾಗದಿದ್ದರೆ, ಆ ಜಾಗದಲ್ಲಿ (ಡಿಸಿಎಂ) ಇರಬಾರದು ಎಂದು ಲಕ್ಷ್ಮೀಪತಿ ಎಂಬುವರು ಆಕ್ರೋಶ ವ್ಯಕ್ತಪಡಿಸಿದರು. ಸತೀಶ್‌ಕುಮಾರ್ ಎಂಬುವರು, ಶಾಂತಿನಗರದ ಪಿಕೆ ಕಾಲೋನಿಯಲ್ಲಿ 33 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದೇವೆ. ಆದರೆ, ಈವರೆಗೆ ಹಕ್ಕುಪತ್ರ ಕೊಟ್ಟಿಲ್ಲ. ಮನೆಗಳು ಶಿಥಿಲಗೊಂಡಿದ್ದು, ಬೀಳುವ ಸ್ಥಿತಿಯಲ್ಲಿವೆ. ಹಕ್ಕುಪತ್ರ ನೀಡಿದರೆ ಸಾಲ ಪಡೆದು ಮನೆ ಕಟ್ಟಿಕೊಳ್ಳುತ್ತೇವೆ ಎಂದರು.
ಉದ್ಯೋಗ ಕೊಡಿಸ್ತೀರಾ?: ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳು ಇವೆ ಎಂದು ಇಂದಿರಾ ನಗರದಲ್ಲಿ ನೋಟಿಸ್ ನೀಡಿ ಖಾಲಿ ಮಾಡುವಂತೆ ತಿಳಿಸಿದ್ದು, ಇದರಿಂದ ಹೆಚ್ಚಿನ ಜನರು ಬೀದಿ ಬೀಳುವಂತಾಗಿದೆ. ಅಂಗಡಿಗಳನ್ನು ಮುಚ್ಚಿದ್ರೆ ನಾವು ಬದುಕುವುದೇಗೆ, ನಮಗೆ ಸರ್ಕಾರಿ ಉದ್ಯೋಗ ಕೊಡಿಸುತ್ತೀರಾ? ಎಂದು ಎಸ್.ಜಿ.ಆದಿತ್ಯ ಎಂಬುವರು ಪ್ರಶ್ನಿಸಿದರು. ಇದಕ್ಕೆ ಶೇಖರ್ ದನಿಗೂಡಿಸಿದರು.
ಅನಮತಿ ಕೊಡಿ ನಾವೇ ಸ್ಕೈವಾಕ್ ಕಟಿವಿ: ಮಾರತಹಳ್ಳಿ ಹೊರವರ್ತುಲ ರಸ್ತೆಯ ಜೆ.ಪಿ.ಮಾರ್ಗನ್ ಬಳಿ ಸ್ಕೈವಾಕ್ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿ ಸಾಕಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ನಾವೇ ಹಣ ಹೂಡಿಕೆ ಮಾಡಿ ಸ್ಕೈವಾಕ್ ನಿರ್ಮಿಸಿಕೊಳ್ಳುತ್ತೇವೆ. ಅನುಮತಿ ಕೊಡಿ ಎಂದು ಸಾಫ್ಟ್ವೇರ್ ಎಂಜಿನಿಯರ್ ನವೀನ್ ಕೃಷ್ಣ ಮನವಿ ಮಾಡಿದರು.
ಸ್ಮಶಾನ ಜಾಗ ಒತ್ತುವರಿ: ನಾಗವಾರ ಬಳಿಯ ಸ್ಮಶಾನದ 32 ಗುಂಟೆ ಭೂಮಿಯನ್ನು ಒತ್ತುವರಿ ಮಾಡಲಾಗಿದ್ದು, ಕೂಡಲೇ ತೆರವುಗೊಳಿಸಲು ಕ್ರಮಕೈಗೊಳ್ಳಬೇಕೆಂದು ಅಮೀನ್ ಎಂಬುವರು ಮನವಿ ಮಾಡಿದರು. ಎಚ್‌ಬಿಆರ್ ಬಡಾವಣೆಗೆ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಕೊಳಚೆ ನೀರು ಶುದ್ಧೀಕರಣ ಘಟಕದಿಂದ ರಾಸಾಯನಿಕ ತ್ಯಾಜ್ಯವನ್ನು ರಾಜಕಾಲುವೆಗೆ ಹರಿಬಿಡಲಾಗುತ್ತಿದೆ. ಹಳೆಯ ವಾಹನಗಳನ್ನು ರಸ್ತೆಬದಿ, ಪಾದಚಾರಿ ಮಾರ್ಗದಲ್ಲಿ ನಿಲುಗಡೆ ಮಾಡಿರುವುದರಿಂದ ಓಡಾಡಲು ಜಾಗವಿಲ್ಲ ಎಂದು ಎಚ್‌ಬಿಆರ್ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಾರ್ಜ್ ತಿಳಿಸಿದರು.
ಕೋರ್ಟ್ ಹೇಳಿದರೂ ಒತ್ತುವರಿ ತೆರವುಗೊಳಿಸಿಲ್ಲ: ಹೆಬ್ಟಾಳ ಮೇಲ್ಸೇತುವೆ ಸಮೀಪ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, 14 ವರ್ಷಗಳು ಹೋರಾಟ ನಡೆಸಿದ್ದೇವೆ. ಈ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲು ನ್ಯಾಯಾಲಯ ಸಹ ಆದೇಶಿಸಿದೆ. ಆದರೂ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳುತ್ತಿಲ್ಲ ಎಂದು ಸಿವಿಲ್ ಎಂಜಿನಿಯರ್ ಶಿವಕುಮಾರ್ ಆರೋಪಿಸಿದರು.
ಟ್ರಾಫಿಕ್ ಪೊಲೀಸ್ ಅಲ್ಲ, ಕಲೆಕ್ಷನ್ ಪೊಲೀಸ್: ಟ್ರಾಫಿಕ್ ಪೊಲೀಸರು ಜನರು ರಸ್ತೆ ದಾಟಲು ಸಹಾಯ ಮಾಡುವುದಿಲ್ಲ. ಬದಲಿಗೆ ತಪಾಸಣೆ ಹೆಸರಿನಲ್ಲಿ ಸವಾರರಿಗೆ ಕಿರುಕುಳ ನೀಡುತ್ತಿದ್ದು, ಇವರು ಟ್ರಾಫಿಕ್ ಪೊಲೀಸರಲ್ಲ, ಕಲೆಕ್ಷನ್ ಪೊಲೀಸರಾಗಿದ್ದಾರೆ ಎಂದು ಸಂಪಂಗಿರಾಮನಗರದ ಶ್ರೀನಿವಾಸನ್ ಎಂಬುವರು ಟೀಕಿಸಿದರು. ಕಾರ್ಯಕ್ರಮದಲ್ಲಿ ಮೇಯರ್ ಗಂಗಾಂಬಿಕೆ, ಶಾಸಕ ಬೈರತಿ ಸುರೇಶ್, ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ, ಆಡಳಿತ ಪಕ್ಷ ನಾಯಕ ಎಂ.ಶಿವರಾಜು, ಆಯುಕ್ತ ಎನ್.ಮಂಜುನಾಥ ಪ್ರಸಾದ್, ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್, ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಸೇರಿ ಪ್ರಮುಖರು ಹಾಜರಿದ್ದರು.
ಬೆಂಜ್ ಕಾರಿನಲ್ಲಿ ಹೋಗುವವರು ಕಸ ಎಸೆದರೆ, ನಾವೇನು ಮಾಡಲು ಸಾಧ್ಯ – ಡಾ.ಜಿ.ಪರಮೇಶ್ವರ್: ಕಾರು, ಬೈಕ್‌ನಲ್ಲಿ ಹೋಗುವವರು ಕಸ ಬಿಸಾಡಿ ಹೋಗುತ್ತಾರೆ. ಜನರ ಸಹಕಾರವಿಲ್ಲದೆ ನಗರದಲ್ಲಿ ತ್ಯಾಜ್ಯ ಸಮಸ್ಯೆಯನ್ನು ಹೇಗೆ ನಿಯಂತ್ರಿಸುವುದು ಎಂದು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.
ತ್ಯಾಜ್ಯ ವಿಲೇವಾರಿ ಹಾಗೂ ವಿಂಗಡಣೆ ಕುರಿತು ಜಾಗೃತಿ ಮೂಡಿಸಿದರೂ ಜನರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಕೆಲ ರಸ್ತೆಗಳಲ್ಲಿ ಕಸ ಗುಡಿಸಲು 17 ಸ್ವಯಂಚಾಲಿತ ಯಂತ್ರಗಳ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಬೀದಿ ದೀಪಗಳನ್ನು ಎಲ್‌ಇಡಿ ದೀಪಗಳನ್ನಾಗಿ ಪರಿವರ್ತಿಸಲು ಯೋಜನೆಗೆ ಸಂಪುಟ ಸಭೆ ಒಪ್ಪಿಗೆ ಪಡೆಯಲಾಗುತ್ತಿದೆ ಎಂದು ಹೇಳಿದರು.
ನಗರ ಅಭಿವೃದ್ಧಿ ಮಹಾನಕ್ಷೆ 2031ಕ್ಕೆ 14 ಸಾವಿರ ಆಕ್ಷೇಪಣೆಗಳು ವ್ಯಕ್ತವಾಗಿದ್ದು, 110 ಹಳ್ಳಿಗಳನ್ನು ಸೇರಿಸಿಕೊಂಡು ಮಹಾನಕ್ಷೆ ಸಿದ್ಧಪಡಿಸಬೇಕಿದೆ. ಜತೆಗೆ ಆಕ್ಷೇಪಣೆಗಳನ್ನು ಪರಿಶೀಲಿಸಬೇಕಿದ್ದು, ಶೀಘ್ರದಲ್ಲಿಯೇ ಜಾರಿಗೊಳಿಸಲಾಗುವುದು. ಇನ್ನು ವಸತಿ ಪ್ರದೇಶಗಳಲ್ಲಿ ಪರವಾನಗಿ ಇಲ್ಲದೆ ವಾಣಿಜ್ಯ ವಹಿವಾಟು ನಡೆಸುವವರ ವಿರುದ್ಧ ತಕ್ಷಣವೇ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ವಾಹನ ನಿಲುಗಡೆ ಜಾಗವನ್ನು ಅನ್ಯ ಉದ್ದೇಶಗಳಿಗೆ ಬಳಸುವ ಕಟ್ಟಡಗಳನ್ನು ಗುರುತಿಸಿ, ಪರವಾನಗಿ ರದ್ದುಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ನಗರಕ್ಕೆ ಎರಡೂವರೆ ಟಿಎಂಸಿ ನೀರು: ಕಾವೇರಿ 5ನೇ ಹಂತದ ಯೋಜನೆಯಡಿ ನಗರಕ್ಕೆ ನೀರು ತರಲಾಗುತ್ತಿದ್ದು, ಆನಂತರದಲ್ಲಿ ಕಾವೇರಿಯಿಂದ ನೀರು ಸಿಗುವುದಿಲ್ಲ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದ್ದು, ಎತ್ತಿನಹೊಳೆಯಿಂದ ಕೋಲಾರ, ಚಿಕ್ಕಬಳ್ಳಾಪುರಕ್ಕೆ 24 ಟಿಎಂಸಿ ನೀರು ಒದಗಿಸುತ್ತಿದ್ದು, ಅದರಲ್ಲಿ 2.5 ಟಿಎಂಟಿ ನೀರು ನಗರಕ್ಕೆ ದೊರೆಯಲಿದೆ.
ಅದಕ್ಕಾಗಿಯೇ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಪುನಶ್ಚೇತನಗೊಳಿಸಲು 280 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಹೇಳಿದರು. ಒಟ್ಟಾರೆಯಾಗಿ ನಗರದ ಅಭಿವೃದ್ಧಿಗೆ ಮೂರು ವರ್ಷಗಳ ಅವಧಿಗೆ 21 ಸಾವಿರ ಕೋಟಿ ರೂ. ವ್ಯಯಿಸಲು ತೀರ್ಮಾನಿಸಿದ್ದು, ನಗರದ 167 ಜಂಕ್ಷನ್‌ಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು.
ಶಾಸಕರಿಂದ ಭೂಮಿ ಕಬಳಿಕೆ: ಶಾಸಕ ಬೈರತಿ ಬಸವರಾಜು ಅವರು ನನ್ನ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, 2500 ಕೋಟಿ ರೂ. ಮೌಲ್ಯದ ಜಮೀನು ಕಬಳಿಸಿದ್ದಾರೆ. ನಾನು ಅಕ್ಷರಸ್ಥನಲ್ಲ, ನ್ಯಾಯಕ್ಕಾಗಿ ಪೋಲಿಸರ ಬಳಿಗೆ ಹೋದರೂ ನೆರವು ನೀಡದೆ, ಶಾಸಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ಏನು ತಪ್ಪು ಮಾಡದ ತನ್ನ ಮೇಲೆಯೇ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆಂದು ವ್ಯಕ್ತಿಯೊಬ್ಬರು ಆರೋಪಿಸಿದರು.
ಶಾಸಕ ಬೈರತಿ ಬಸವರಾಜು ಅವರು ನನ್ನ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, 2500 ಕೋಟಿ ರೂ. ಮೌಲ್ಯದ ಜಮೀನು ಕಬಳಿಸಿದ್ದಾರೆ. ನಾನು ಅಕ್ಷರಸ್ಥನಲ್ಲ, ನ್ಯಾಯಕ್ಕಾಗಿ ಪೋಲಿಸರ ಬಳಿಗೆ ಹೋದರೂ ನೆರವು ನೀಡದೆ, ಶಾಸಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ಏನು ತಪ್ಪು ಮಾಡದ ತನ್ನ ಮೇಲೆಯೇ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆಂದು ವ್ಯಕ್ತಿಯೊಬ್ಬರು ಆರೋಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.