ನೀರಿಲ್ಲದೆ ನಮಗೇನಿದೆ…?
Team Udayavani, Mar 18, 2019, 6:35 AM IST
ಈ ಬಾರಿ ಬೇಸಿಗೆ ಬೇಗ ಪ್ರಾರಂಭವಾಗಿದೆ. ಬಿಸಿಲಿನ ತೀವ್ರತೆಯೂ ಹೆಚ್ಚಿದೆ. ಮತ್ತೊಂದೆಡೆ ಮಳೆ ಪ್ರಮಾಣ ಇಳಿಮುಖವಾಗಿದೆ. ಪರಿಣಾಮ ನೀರಿನ ಸಮಸ್ಯೆ ತಲೆದೋರಿದೆ. ಮುಂದಿನ ದಿನಗಳಲ್ಲಿ ನೀರನ್ನು ಪಡಿತರ ಮಾದರಿಯಲ್ಲಿ ಹಂಚುವಂತಹ ಪರಿಸ್ಥಿತಿ ಬಂದರೂ ಅಚ್ಚರಿ ಇಲ್ಲ. ಕುಸಿಯುತ್ತಿರುವ ನೀರಿನ ಲಭ್ಯತೆಯನ್ನು ಮನಗಂಡು ಕೃಷಿಯಲ್ಲಿ “ಇಸ್ರೇಲ್ ಮಾದರಿ’ ಅನುಸರಿಸಲು ಹೊರಟಿದ್ದೇವೆ. ಆದರೆ, ಅದೇ ಜಾಗೃತಿ ನಗರದ ನೀರಿನ ಬಳಕೆ ವಿಚಾರದಲ್ಲಿ ಯಾಕೆ ಆಗುತ್ತಿಲ್ಲ? ನಾವು ಬಳಸಿದ ನೀರನ್ನು ಸಂಸ್ಕರಿಸಿ ಕೋಲಾರಕ್ಕೆ ಸಾಗಿಸುತ್ತಿದ್ದೇವೆ. ಆದರೆ, ನಾವೇ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಯಾಕೆ? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇದು.
ಬರೀ ನಗರದ ಉದ್ಯಾನಗಳಿಗಾಗಿಯೇ ನಿತ್ಯ ಸುಮಾರು ಹತ್ತು ಕೋಟಿ ಲೀ. ನೀರು ಖರ್ಚಾಗುತ್ತಿದೆ. ಈ ನೀರಿನಲ್ಲಿ ಹತ್ತು ಲಕ್ಷ ಜನರ ನೀರಿನ ದಾಹ ಇಂಗಿಸಬಹುದು! ಹೌದು, ನಗರದಲ್ಲಿ ಒಟ್ಟಾರೆ 1,200 ಉದ್ಯಾನಗಳಿವೆ. ಈ ಪೈಕಿ ಬಹುತೇಕ ಸಸ್ಯಕಾಶಿ ಲಾಲ್‌ಬಾಗ್ ಹಾಗೂ ಕಬ್ಬನ್ ಪಾರ್ಕ್ ಸೇರಿದಂತೆ ಬೆರಳೆಣಿಕೆಯಷ್ಟು ಉದ್ಯಾನಗಳಿಗೆ ಮಾತ್ರ ಸಂಸ್ಕರಿಸಿದ ನೀರು ಪೂರೈಸಲಾಗುತ್ತಿದೆ. ಉಳಿದೆಲ್ಲವುಗಳಿಗೆ ಕೊಳವೆಬಾವಿ ಅಥವಾ ಕಾವೇರಿಯೇ ಹರಿಯುತ್ತಿದೆ. ಅಧಿಕಾರಿಗಳು ಮನಸ್ಸು ಮಾಡಿದರೆ, ಇದರಲ್ಲಿ ಶೇ. 50ರಷ್ಟು ನೀರನ್ನು ಸಂರಕ್ಷಿಸಬಹುದು. ಆದರೆ, ಈ ನಿಟ್ಟಿನಲ್ಲಿ ಚಿಂತನೆಯೂ ನಡೆಯುತ್ತಿಲ್ಲ.
ತಾಪಮಾನ ತಗ್ಗಿಸುವ ವೃಕ್ಷ ಉದ್ಯಾನಗಳನ್ನು ಕೈಬಿಟ್ಟು, ಆಕರ್ಷಣೆಗಾಗಿ ಹುಲ್ಲುಹಾಸು ಬೆಳೆಸುವುದು ಇತ್ತೀಚಿನ ಟ್ರೆಂಡ್ ಆಗಿದೆ. ಆದರೆ, ಈ ಮಾದರಿಯ ಉದ್ಯಾನಗಳು ಅಧಿಕ ನೀರನ್ನು ಬಯಸುತ್ತವೆ. ಪ್ರತಿ ಉದ್ಯಾನದ ನಿರ್ವಹಣೆಗಾಗಿ ಕನಿಷ್ಠ 80 ಸಾವಿರದಿಂದ ಒಂದು ಲಕ್ಷ ಲೀ. ನೀರು ಬೇಕಾಗುತ್ತದೆ. ಇದಕ್ಕಾಗಿ ಬಿಬಿಎಂಪಿಯು ಕೊಳವೆಬಾವಿಗಳು ಹಾಗೂ ಅಲ್ಲಲ್ಲಿ “ಕಾವೇರಿ’ಯನ್ನು ಅವಲಂಬಿಸಿದೆ. ಬಹುತೇಕ ಉದ್ಯಾನಗಳ ಆಸುಪಾಸು ಅಪಾರ್ಟ್‌ಮೆಂಟ್‌ಗಳಿವೆ. ಅವುಗಳಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕಗಳೂ ಇವೆ. ಅದೇ ನೀರನ್ನು ಈ ಉದ್ಯಾನಗಳಿಗೆ ಬಳಸಿದರೆ, ಅರ್ಧಕ್ಕರ್ಧ ನೀರು ಉಳಿತಾಯ ಆಗಲಿದೆ ಎನ್ನುತ್ತಾರೆ ತಜ್ಞರು.
“ಕೆ.ಸಿ. ವ್ಯಾಲಿಯ ಕೊಳಚೆನೀರು ಸಂಸ್ಕರಿಸಿ, ಕೋಲಾರ-ಚಿಕ್ಕಬಳ್ಳಾಪುರಕ್ಕೆ ಹರಿಸುತ್ತಿದ್ದೇವೆ. ಅದರಲ್ಲಿನ ಅಲ್ಪಪ್ರಮಾಣದ ನೀರನ್ನು ನಗರದ ಉದ್ಯಾನಗಳಿಗೇಕೆ ಪೂರೈಸಬಾರದು? ಅಪಾರ್ಟ್‌ಮೆಂಟ್‌ಗಳಿಗೆ ಸಂಸ್ಕರಣಾ ಘಟಕಗಳನ್ನು ಕಡ್ಡಾಯಗೊಳಿಸಲಾಗಿದೆ. ಹತ್ತಿರದ ಪಾರ್ಕ್‌ಗಳಿಗೆ ಹೀಗೆ ಸಂಸ್ಕರಿಸಿದ ನೀರನ್ನು ಬಳಸಬಹುದಲ್ಲಾ?’ ಎಂದು ತೋಟಗಾರಿಕೆ ತಜ್ಞ ಸಂತೆ ನಾರಾಯಣಸ್ವಾಮಿ ಕೇಳುತ್ತಾರೆ. ಇದಕ್ಕೆ ಸೂಕ್ತ ಮಾದರಿಯೂ ನಮ್ಮ ಮುಂದಿದೆ. ಲಾಲ್‌ಬಾಗ್, ಕಬ್ಬನ್ ಉದ್ಯಾನ, ರಾಜಭವನ, ವಿಧಾನಸೌಧ, ಇಂದಿರಾಗಾಂಧಿ ಸಂಗೀತ ಕಾರಂಜಿ, ನೆಹರು ತಾರಾಲಯ, ಗಾಲ್ಫ್ ಕ್ಲಬ್‌ಗ ಇದೇ ಸಂಸ್ಕರಿಸಿದ ನೀರು ಬಳಕೆ ಆಗುತ್ತಿದೆ ಎಂದು ತಿಳಿಸಿದರು.
“240 ಎಕರೆ ವಿಸ್ತೀರ್ಣ ಇರುವ ಲಾಲ್‌ಬಾಗ್‌ನಲ್ಲಿ 30 ಎಕರೆ ಬಂಡೆ ಪ್ರದೇಶ ಹಾಗೂ 30 ಎಕರೆ ಕೆರೆ ಇದೆ. ಉಳಿದ ಪ್ರದೇಶದಲ್ಲಿರುವ ಉದ್ಯಾನಕ್ಕೆ 15 ಲಕ್ಷ ಲೀ. ಸಾಮರ್ಥ್ಯದ ಸಂಸ್ಕರಣಾ ಘಟಕದಿಂದ ನೀರು ಪೂರೈಸಲಾಗುತ್ತಿದೆ. ಜತೆಗೆ ಆರು ಕೊಳವೆಬಾವಿಗಳೂ ಇವುಗಳಿಗೆ ಪೂರಕವಾಗಿವೆ. ಇನ್ನು ಕಬ್ಬನ್ ಉದ್ಯಾನದಲ್ಲಿಯೂ 40 ಲಕ್ಷ ಲೀ. ಸಾಮರ್ಥ್ಯದ ಸಂಸ್ಕರಣಾ ಘಟಕ ನಿರ್ಮಿಸಿದ್ದು, ಸುತ್ತಲಿನ ಪ್ರತಿಷ್ಠಿತ ಸ್ಥಳಗಳಿಗೆ ಆ ನೀರು ಸರಬರಾಜು ಆಗುತ್ತಿದೆ’ ಎಂದು ತೋಟಗಾರಿಕೆ ಜಂಟಿ ನಿರ್ದೇಶಕ (ಉದ್ಯಾನಗಳು) ಡಾ.ಎಂ. ಜಗದೀಶ್ ಮಾಹಿತಿ ನೀಡುತ್ತಾರೆ.
ಕ್ಲಬ್‌ಗಳಿಗಿಲ್ಲ ನೀರಿನ ಕೊರತೆ: ಗಾಲ್ಫ್ ಕ್ಲಬ್, ಟರ್ಫ್ ಕ್ಲಬ್, ಈಜುಕೊಳದಂತಹ ಕ್ಲಬ್‌ಗಳಿಗೆ ನಿತ್ಯ ಖರ್ಚಾಗುತ್ತಿರುವ ನೀರು ಅಂದಾಜು 80 ಲಕ್ಷ ಲೀ. ಬೆಂಗಳೂರು ಟರ್ಫ್ ಕ್ಲಬ್‌ನ ಕುದುರೆಗಳು ಹಾಗೂ ಅಲ್ಲಿನ ಹುಲ್ಲುಗಾವಲಿಗೆ ನಿತ್ಯ ಸುಮಾರು 10 ಲಕ್ಷ ಲೀ.ಗೂ ಅಧಿಕ ನೀರು ಪೂರೈಕೆಯಾಗುತ್ತಿದ್ದರೆ, ನಗರದ ನಾಲ್ಕು ಗಾಲ್ಫ್ ಕ್ಲಬ್‌ನಲ್ಲಿರುವ ಹುಲ್ಲುಗಾವಲು ಹಚ್ಚಹಸಿರಾಗಿರಲು ತಲಾ ಸರಾಸರಿ ಐದು ಲಕ್ಷದಂತೆ 20 ಲಕ್ಷ ಲೀ. ನೀರು ಬೇಕು.
ನಗರದಲ್ಲಿ 50 ಮೀಟರ್ ಉದ್ದದ ಏಳು ಹಾಗೂ 25 ಮೀ. ಉದ್ದದ ಮೂರು ಈಜುಕೊಳಗಳಿದ್ದು, ಅವುಗಳನ್ನು ತುಂಬಿಸಲು ಹಾಗೂ ಶುದ್ಧೀಕರಣ ಘಟಕಗಳನ್ನು ಸ್ವಚ್ಛಗೊಳಿಸಲು ಪ್ರತಿದಿನ ತಲಾ 3-4 ಲಕ್ಷ ಲೀ. ನೀರು ಸರಬರಾಜಾಗುತ್ತಿದೆ. ಆದರೆ, ಇವ್ಯಾವೂ ಮಳೆನೀರು ಕೊಯ್ಲು ಪದ್ಧತಿಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿಲ್ಲ. ಕೊಳವೆಬಾವಿಗಳು, ಖಾಸಗಿ ಟ್ಯಾಂಕರ್‌ಗಳನ್ನು ಅವಲಂಬಿಸಿವೆ. ಕೆಲವೆಡೆ ಸಂಸ್ಕರಿಸಿದ ನೀರು ಉಪಯೋಗವಾಗುತ್ತಿದೆ.
ಸ್ಟಾರ್ ಹೋಟೆಲ್‌ಗಳಿಗೂ ತಲೆಬಿಸಿ!: ಪಂಚತಾರಾ ಸೇರಿದಂತೆ ನಗರದ ಹೋಟೆಲ್ ಉದ್ಯಮಕ್ಕೂ ಈಗ ನೀರಿನ ಬಿಸಿ ತಟ್ಟಿದ್ದು, ಶೇ. 10ರಿಂದ 15ರಷ್ಟು ಹೋಟೆಲ್‌ಗಳ ಕೊಳವೆಬಾವಿಗಳು ಈಗಾಗಲೇ ಬತ್ತಿವೆ. ಉಳಿದವುಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದೆ. ನಗರದಲ್ಲಿ ಸುಮಾರು 200 ಸ್ಟಾರ್ ಹೋಟೆಲ್‌ಗಳಿವೆ. ಈ ಪೈಕಿ 20 ಪಂಚತಾರಾ ಹೋಟೆಲ್‌ಗಳಿದ್ದರೆ, ಉಳಿದವು ಟು ಮತ್ತು ತ್ರಿ ಸ್ಟಾರ್ ಹೋಟೆಲ್‌ಗಳೆಂದು ಗುರುತಿಸಲಾಗಿದೆ. ಇವುಗಳಲ್ಲಿ ಪ್ರತಿಯೊಂದು ಹೋಟೆಲ್‌ಗೆ ನಿತ್ಯ ಅಂದಾಜು ತಲಾ ಒಂದರಿಂದ 1.20 ಲಕ್ಷ ಲೀ. ನೀರು ಬೇಕಾಗುತ್ತದೆ. ಅಂದರೆ ದಿನಕ್ಕೆ ನಗರದ ತಾರಾ ದರ್ಜೆಯ ಹೋಟೆಲ್‌ಗಳಿಗಾಗಿಯೇ ಎರಡೂವರೆ ಕೋಟಿ ಲೀ. ನೀರು ಬೇಕಾಗುತ್ತದೆ.
ಈ ಅಗಾಧ ಪ್ರಮಾಣದ ನೀರಿಗೆ ಕೊಳವೆ ಬಾವಿಗಳಿದ್ದರೂ, ಬೇಸಿಗೆಯಲ್ಲಿ ಟ್ಯಾಂಕರ್‌ಗಳ ಮೇಲಿನ ಅವಲಂಬನೆ ಅನಿವಾರ್ಯ. ಆದರೆ, ಬಿಸಿಲಿನ ತೀವ್ರತೆ ಹೆಚ್ಚಿರುವುದರಿಂದ ಟ್ಯಾಂಕರ್ ನೀರು ಸಮರ್ಪಕವಾಗಿ ಸಿಗುವುದು ಅನುಮಾನ. ಇದು ಹೋಟೆಲ್‌ಗಳ ನೀರು ನಿರ್ವಹಣಾ ವಿಭಾಗಕ್ಕೆ ತಲೆನೋವಾಗಿದೆ. ನಗರದಲ್ಲಿ ಎಲ್ಲ ದರ್ಜೆಯು ಸೇರಿ ಸುಮಾರು 5-6 ಸಾವಿರ ಹೋಟೆಲ್‌ಗಳಿವೆ. ನಿತ್ಯ ಬರುವ ಗ್ರಾಹಕರಿಗೆ ಕುಡಿಯಲು, ಪಾತ್ರೆ ತೊಳೆಯಲು, ಕೆಲಸ ಮಾಡುವ ನೌಕರರ ಬಳಕೆ ಸೇರಿದಂತೆ ಲಕ್ಷ ಲೀ.ಗಟ್ಟಲೆ ನೀರು ಬೇಕಾಗುತ್ತದೆ.
ಹಾಗಾಗಿ, ಕಾವೇರಿಗಿಂತ ಸ್ವಂತ ಕೊಳವೆಬಾವಿಗಳನ್ನೇ ಅವಲಂಬಿಸಿರುತ್ತೇವೆ. ಜತೆಗೆ ಮಳೆ ನೀರು ಕೊಯ್ಲು ಹಾಗೂ ಬಳಕೆಯಾದ ನೀರು ಅಂತರ್ಜಲ ಮರುಪೂರಣಕ್ಕೆ ವಿನಿಯೋಗಿಸಲಾಗುತ್ತದೆ. ಆದರೆ, ಈ ಬಾರಿ ದೀರ್ಘಕಾಲ ಮಳೆ ಕೈಕೊಟ್ಟಿದ್ದರಿಂದ ಅಂತರ್ಜಲವೂ ಕುಸಿದಿದೆ. ಶೇ. 10ರಿಂದ 15ರಷ್ಟು ಹೋಟೆಲ್‌ಗಳ ಕೊಳವೆಬಾವಿಗಳು ಬತ್ತಿರುವ ಸಾಧ್ಯತೆ ಇದೆ ಎಂದು ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ಉಪಾಹಾರ ಮಂದಿರಗಳ ಸಂಘದ ಮಾಜಿ ಅಧ್ಯಕ್ಷ ಬಾಳೇಕುದ್ರು ರಾಮಚಂದ್ರ ಉಪಾಧ್ಯೆ “ಉದಯವಾಣಿ’ಗೆ ತಿಳಿಸಿದರು.
ಕಾಮಗಾರಿಗಳಿಗೂ ಯಥೇಚ್ಛ ನೀರು: ಇದೆಲ್ಲದರ ಮಧ್ಯೆ ನಗರದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳಿಗೂ ನಿತ್ಯ ಲಕ್ಷಾಂತರ ಲೀ. ನೀರು ಬೇಕಾಗುತ್ತದೆ. ಸಾವಿರಾರು ಅಪಾರ್ಟ್‌ಮೆಂಟ್‌ಗಳು, ಒಳಚರಂಡಿ ನಿರ್ಮಾಣ ಸೇರಿದಂತೆ ಸಾಕಷ್ಟು ಕಾಮಗಾರಿಗಳು ನಡೆಯುತ್ತಿವೆ. ಅವುಗಳ ಕ್ಯುರಿಂಗ್‌ಗೆ, ಅಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ನಿತ್ಯದ ಬಳಕೆಗೆ ಸಾಕಷ್ಟು ನೀರು ಬೇಕಾಗುತ್ತದೆ. ಅದನ್ನು ಆಯಾ ಗುತ್ತಿಗೆದಾರರೇ ಸಾಮಾನ್ಯವಾಗಿ ವಹಿಸಿಕೊಂಡಿರುತ್ತಾರೆ. ಕೆಲವರು ಸ್ವಂತ ಕೊಳವೆಬಾವಿಗಳನ್ನು ಹೊಂದಿರುತ್ತಾರೆ ಅಥವಾ ಟ್ಯಾಂಕರ್‌ಗಳ ಮೂಲಕ ಆ ನೀರು ಸರಬರಾಜು ಆಗುತ್ತದೆ ಎಂದು ಬಿಬಿಎಂಪಿ ಯೋಜನೆ ವಿಭಾಗದ ಅಧಿಕಾರಿ ತಿಳಿಸುತ್ತಾರೆ.
ಬರದಲ್ಲೂ ಇದೆ ನೀರು; ಪೂರೈಕೆ ಆಸಾಧ್ಯ: ಬರದಲ್ಲಿಯೂ ಕೆಆರ್‌ಎಸ್‌ನಲ್ಲಿ 20 ಟಿಎಂಸಿ ಹಾಗೂ ಕಬಿನಿಯಲ್ಲಿ 8.5 ಟಿಎಂಸಿ ನೀರು ಇದೆ. ಆದರೆ, ಅದೆಲ್ಲವನ್ನೂ ನಗರಕ್ಕೆ ತರಲು ಸಾಧ್ಯವಿಲ್ಲ. ಯಾಕೆಂದರೆ, ಕಾವೇರಿ 1ರಿಂದ 4 ಹಂತಗಳಲ್ಲಿ ಪೈಪ್‌ನಲ್ಲಿ ನಗರಕ್ಕೆ ನೀರು ಹರಿದುಬರುತ್ತಿದ್ದು, ಅದರಲ್ಲಿ ನಿತ್ಯ 1,420 ದಶಲಕ್ಷ ಲೀ. ನೀರನ್ನು ಮಾತ್ರ ಪೂರೈಸುವ ಸಾಮರ್ಥ್ಯ ಜಲಮಂಡಳಿ ಹೊಂದಿದೆ. 2023ರವರೆಗೆ 5ನೇ ಹಂತದ ಕಾಮಗಾರಿ ಆಗುವವರೆಗೆ ಹೆಚ್ಚುವರಿ ನೀರನ್ನು ತರಲು ಸಾಧ್ಯವಿಲ್ಲ. ಇನ್ನು ಬೇಸಿಗೆ ಹಿನ್ನೆಲೆಯಲ್ಲಿ ಅಂತರ್ಜಲ ಕುಗ್ಗಿ ನಗರದ ಬಹುಪಾಲು ಕೊಳವೆ ಬಾವಿಗಳು ಬತ್ತಿಹೋಗಿವೆ. ಹೀಗಾಗಿ, ಜಲಮಂಡಳಿಯನ್ನು ಅವಲಂಬಿಸುವವರ ಸಂಖ್ಯೆ ಹೆಚ್ಚುತ್ತಿದೆ. ಲಭ್ಯವಿರುವ ನೀರಿನಲ್ಲಿಯೇ ಬೇಸಿಗೆ ನಿರ್ವಹಣೆ ಜವಾಬ್ದಾರಿ ಜಲಮಂಡಳಿ ಮೇಲಿದೆ.
ಅಪಾರ್ಟ್‌ಮೆಂಟ್‌ಗೆ ಆದ್ಯತೆ; ಮಿಕ್ಕವರ ಕಡೆಗಣನೆ: ನಗರದಲ್ಲಿ ಸುಮಾರು 25 ಸಾವಿರ ಅಪಾರ್ಟ್‌ಮೆಂಟ್‌ಗಳಿದ್ದು, ಅವುಗಳಲ್ಲಿ 22,562 ವಸತಿ ಸಮುಚ್ಛಯಗಳಿಗೆ ಜಲಮಂಡಳಿಯು ನೀರು ಪೂರೈಸುತ್ತಿದೆ. ಬಳಕೆಗೆ ಸಂಬಂಧಿಸಿದಂತೆ ಯಾವುದೇ ಮಾನದಂಡವಿಲ್ಲ. ತ್ಯಾಜ್ಯನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಕಡ್ಡಾಯಗೊಳಿಸಲಾಗಿದೆ. ಆದರೆ, ಆ ನೀರಿನ ಬಳಕೆ ಕಡ್ಡಾಯಗೊಳಿಸಿಲ್ಲ. ಹೀಗಾಗಿ ಅಪಾರ್ಟ್‌ಮೆಂಟ್‌ಗಳಿಗೆ ಸೂಕ್ತ ನಿಯಮ ರೂಪಿಸುವ ಜತೆಗೆ ಜಲ ಜಾಗೃತಿ ಅವಶ್ಯಕತೆ ಇದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಅಪಾರ್ಟ್‌ಮೆಂಟ್‌ಗಳಿಗೆ ಜಲಮಂಡಳಿಯು ಹೆಚ್ಚು ಸಂಪರ್ಕ ಶುಲ್ಕ ಪಡೆದು ಬೇಕಾದಷ್ಟು ನೀರು ಪೂರೈಸುತ್ತದೆ. ಮಳೆಗಾಲ, ಚಳಿಗಾಲದಲ್ಲಿ ಸ್ವಂತ ಕೊಳವೆಬಾವಿಗಳನ್ನು ಅವಲಂಬಿಸುವ ಈ ಅಪಾರ್ಟ್‌ಮೆಂಟ್‌ಗಳು, ಬೇಸಿಗೆ ಆರಂಭವಾಗುತ್ತಿದ್ದಂತೆ ಜಲಮಂಡಳಿ ಮೊರೆಹೋಗುತ್ತವೆ. ಪರಿಣಾಮ ಸುತ್ತಮುತ್ತಲಿನ ಜನರಿಗೆ ನೀರಿನ ಕೊರತೆ ಉಂಟಾಗಿ, ಹಾಹಾಕಾರ ಸೃಷ್ಟಿಯಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಶೇ. 30ರಷ್ಟು ನೀರು ಸಗಟು ಗ್ರಾಹಕರಿಗೆ: ನಗರಕ್ಕೆ ಪೂರೈಕೆಯಾಗುವ 1400 ದಶಲಕ್ಷ ಲೀ. ನೀರಿನಲ್ಲಿ ಶೇ. 30ರಷ್ಟು ಸಗಟು ಗ್ರಾಹಕರಿಗೇ ಹೋಗುತ್ತದೆ. ವಿಧಾನಸೌಧ, ಬಹುಮಹಡಿ ಕಟ್ಟಡ ಸೇರಿದಂತೆ ಸರ್ಕಾರಿ ಕಚೇರಿ ಕಟ್ಟಡಗಳು, ರಕ್ಷಣಾ ಪ್ರದೇಶ, ರೈಲ್ವೆ, ವಿಮಾನ ನಿಲ್ದಾಣ, ವಿಮಾನ ನಿಲ್ದಾಣಗಳಂತಹ ಸಗಟು ಗ್ರಾಹಕರಿಗೆ ಹೋಗುತ್ತದೆ. ಈ ಪ್ರದೇಶಗಳಲ್ಲಿ ತ್ಯಾಜ್ಯನೀರು ಸಂಸ್ಕರಣಾ ಘಟಕಗಳಿಂದ ಸಂಸ್ಕರಿಸಿದ ನೀರಿನ ಬಳಕೆ ಪ್ರಮಾಣ ಹೆಚ್ಚಿಸುವ ಮೂಲಕ ಉಳಿತಾಯ ಮಾಡಬಹುದು ಎನ್ನುತ್ತಾರೆ ತಜ್ಞರು.
ಶೇ. 37ರಷ್ಟು ನೀರು ಲೆಕ್ಕಕ್ಕೆ ಸಿಗುತ್ತಿಲ್ಲ: ತೊರೆಕಾಡನಹಳ್ಳಿ ಸಂಸ್ಕರಣಾ ಘಟಕದಿಂದ ಜಲಮಂಡಳಿ 1,400 ದಶಲಕ್ಷ ಲೀ. ನೀರು ಎತ್ತಿದರೂ ನಗರಕ್ಕೆ ಬಂದು ತಲುಪುವುದು 820 ದಶಲಕ್ಷ ಎಂಎಲ್‌ಡಿ ಮಾತ್ರ. ಸುಮಾರು 518 ದಶಲಕ್ಷ ಲೀ. ನೀರು (ಶೇ. 37ರಷ್ಟು) ಲೆಕ್ಕಕ್ಕೆ ಸಿಗುತ್ತಿಲ್ಲ. ಸೋರಿಕೆ, ಕಳ್ಳತನ ಸೇರಿದಂತೆ ವಿವಿಧ ರೂಪಗಳಲ್ಲಿ ಕಳೆದುಹೋಗುತ್ತಿದೆ. 2012ರಲ್ಲಿ ಇದರ ಪ್ರಮಾಣ ಶೇ. 49ರಷ್ಟಿತ್ತು.
45 ಸಾವಿರ ಕಟ್ಟಡಗಳಿಗಿಲ್ಲ ಮಳೆನೀರು ಕೊಯ್ಲು: ನಗರದಲ್ಲಿ ಇನ್ನೂ 45 ಸಾವಿರ ಕಟ್ಟಡಗಳು ಮಳೆನೀರು ಕೊಯ್ಲು ಅಳವಡಿಸಿಕೊಂಡಿಲ್ಲ. ಕಡ್ಡಾಯಗೊಳಿಸಿ ಸಾಕಷ್ಟು ಜಾಗೃತಿ ಮೂಡಿಸಿದ ಹಿನ್ನೆಲೆಯಲ್ಲಿ ಸುಮಾರು 1.40 ಲಕ್ಷ ಕಟ್ಟಡಗಳು ಮಳೆನೀರು ಕೋಯ್ಲು ಅಳವಡಿಸಿಕೊಂಡಿದ್ದು, ಇನ್ನು 45 ಸಾವಿರ ಕಟ್ಟಡಗಳು ನಿಯಮ ಪಾಲಿಸುತ್ತಿಲ್ಲ. ಹಲವು ಕಡೆಗಳಲ್ಲಿ ಇದ್ದರೂ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ.
ಹೆಚ್ಚು ಆದಾಯ ಹರಿದುಬಂತು: ಜಲಮಂಡಳಿಗೆ ಮಾಸಿಕ ನೀರಿನ ಬಿಲ್ ರೂಪದಲ್ಲಿ ಈ ಹಿಂದೆ ಪ್ರತಿ ತಿಂಗಳು ಸರಾಸರಿ ನೂರು ಕೋಟಿ ರೂ. ಸಂಗ್ರಹವಾಗುತ್ತಿತ್ತು. ಕಳೆದೆರಡು ತಿಂಗಳಿಂದ ಹತ್ತು ಕೋಟಿ ರೂ. ಹೆಚ್ಚಳವಾಗಿದ್ದು, ಜನವರಿ ಮತ್ತು ಫೆಬ್ರವರಿಯಲ್ಲಿ ಕ್ರಮವಾಗಿ 110 ಕೋಟಿ ರೂ. ಶುಲ್ಕ ಸಂಗ್ರಹವಾಗಿದೆ. ಇದು ನೀರಿನ ಬಳಕೆ ಹೆಚ್ಚಾಗಿರುವುದರ ಸಂಕೇತ ಎಂದು ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು. ಸಾಮಾನ್ಯವಾಗಿ ಬೇಸಿಗೆಯಲ್ಲಿ ಆದಾಯ ಹೆಚ್ಚಳ ಆಗುತ್ತದೆ. ಆದರೆ, ಇಷ್ಟೊಂದು ಆಗುವುದಿಲ್ಲ. ನಗರದಲ್ಲಿ ಮಳೆ ಕೈಕೊಟ್ಟಿದ್ದರಿಂದ ಕೊಳವೆಬಾವಿಗಳು ಬತ್ತುತ್ತಿವೆ. ಇಳುವರಿ ಕೂಡ ಕುಸಿಯುತ್ತಿದೆ. ಇದರಿಂದ “ಕಾವೇರಿ’ ಮೇಲಿನ ಅವಲಂಬನೆ ಹೆಚ್ಚಾಗಿದೆ ಎಂದರು.
-9.65 ಲಕ್ಷ ನಗರದ ಒಟ್ಟು ಸಂಪರ್ಕಗಳು
-1,415 ದಶಲಕ್ಷ ಲೀ. ನಿತ್ಯ ನೀರು ಪೂರೈಕೆ ಸಾಮರ್ಥ್ಯ
-1,385 ದಶಲಕ್ಷ ಲೀ. ಸದ್ಯ ಪೂರೈಕೆ ಆಗುತ್ತಿರುವುದು
-9,840 ( 600 ಬತ್ತಿವೆ) ಜಲಮಂಡಳಿಯ ಕೊಳವೆಬಾವಿಗಳು
-400 ದಶಲಕ್ಷ ಲೀ. ಕೊಳವೆಬಾವಿಯಿಂದ ಬಳಕೆ ಮಾಡುತ್ತಿರುವ ನೀರಿನ ಪ್ರಮಾಣ
-4 ಕೋಟಿ ರೂ.(ಸುಮಾರು) ಕೊಳವೆಬಾವಿ ವಿದ್ಯುತ್ ಬಿಲ್
* ವಿಜಯಕುಮಾರ್ ಚಂದರಗಿ/ ಜಯಪ್ರಕಾಶ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.