ಪುಂಡರ ವೀಲಿಂಗ್ ಹುಚ್ಚಾಟ: ವಾಹನ ಸವಾರರಿಗೆ ಪ್ರಾಣ ಸಂಕಟ!
Team Udayavani, Apr 24, 2023, 12:56 PM IST
ರಾತ್ರಿಯಾಗುತ್ತಿದ್ದಂತೆ ಮುಸ್ಸಂಜೆಯಾಗುತ್ತಿದ್ದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ರ್ರೂ.. ರ್ರೂ …. ಶಬ್ದ. ಶರವೇಗದಲ್ಲಿ ಬಂದು ಸ್ಕೂಟರ್‌ನ ಮುಂದಿನ ಚಕ್ರ ಮೇಲೆತ್ತಿ ಹಿಂದಿನ ಚಕ್ರದ ಮೇಲೆ ಬ್ಯಾಲೆನ್ಸ್ ಮಾಡಿ ಅಕ್ಕ ಪಕ್ಕದ ಸವಾರರು ಹಾಗೂ ಸಾರ್ವಜನಿಕರಲ್ಲಿ ಎದೆ ಝಲ್ ಎನಿಸುವಂತೆ ಮಾಡುವ ಪುಂಡರು. ರೀಲ್ಸ್ ಮಾಡುವ ಹುಚ್ಚಿಗೆ ಬಿದ್ದು ಪುಂಡರನ್ನು ಹಿಂಬಾಲಿಸಿ ಕೊಂಡು ಈ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿಯುವ ಸಹಚರರು…..
ಇದು ಸಿಲಿಕಾನ್ ಸಿಟಿ, ಉದ್ಯಾನ ನಗರಿ ಎಂದೇ ಖ್ಯಾತಿ ಪಡೆದಿರುವ ರಾಜ್ಯ ರಾಜಧಾನಿಯಲ್ಲಿ ಜನರ ಜೀವಕ್ಕೆ ಸಂಚಕಾರ ತಂದೊಡ್ಡುತ್ತಿರುವ “ವೀಲಿಂಗ್’ ಹುಚ್ಚಾಟದ ದೃಶ್ಯಗಳು.
ರಾಜಧಾನಿ ಬೆಂಗಳೂರಿನ ಹೊರವಲಯದ ಮೈಸೂರು ರಸ್ತೆ, ತುಮಕೂರು ರಸ್ತೆ, ಹಳೇ ಮದರಾಸು ರಸ್ತೆಗಳಲ್ಲಿ ರಾತ್ರಿ ವೇಳೆ ವೀಲಿಂಗ್ ಪುಂಡರ ಹಾವಳಿಗೆ ವಾಹನ ಸವಾರರು ಜೀವ ಭಯದಲ್ಲಿ ಓಡಾಡುವಂತಾಗಿದೆ.
ಪೊಲೀಸರ ಭಯವಿಲ್ಲದೆ ಮುಖ್ಯ ರಸ್ತೆಗಳಲ್ಲೇ ವೀಲಿಂಗ್ ಹುಚ್ಚಾಟಕ್ಕೆ ಇತರೆ ವಾಹನ ಸವಾರರು ಸಂಕಷ್ಟ ಕಿರಿಕಿರಿ ಅನುಭವಿಸುವಂತಾಗಿದೆ. ಆದರೆ, ಪೊಲೀಸರಿಗೆ ಸಿಕ್ಕಿ ಬಿದ್ದು, ಪ್ರಕರಣ ದಾಖಲಾಗುತ್ತಿರುವ ಸಂಖ್ಯೆ ವಿರಳವಾಗಿವೆ. ಬೇಸಿಗೆ ಶುರುವಾಗುತ್ತಿದ್ದಂತೆ ರಾತ್ರಿ 8 ಗಂಟೆಯಿಂದ ಮುಂಜಾನೆ 3ರ ವರೆಗೂ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ವೀಲಿಂಗ್ ಸವಾರರ ಸಂಖ್ಯೆ ಮಿತಿ-ಮೀರಿ ಹೋಗಿದೆ. ವೀಲಿಂಗ್‌ಗೆ ಬ್ರೇಕ್ ಹಾಕುವುದೂ ದೊಡ್ಡ ಸವಾಲಾಗಿದೆ.
ಸಂಚಾರ ವಿಭಾಗ ಪೊಲೀಸರಿಗೆ ತಲೆನೋವು: ಬೆಂಗಳೂರಿನಲ್ಲಿ ಪ್ರತಿ ನಿತ್ಯ ಸುಮಾರು 85 ಲಕ್ಷ ವಾಹನಗಳು ರಸ್ತೆಗಿಳಿಯುತ್ತಿದ್ದು, ಸಂಚಾರ ದಟ್ಟಣೆ ನಿರ್ವಹಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಈ ನಡುವೆ ವೀಲಿಂಗ್ ಹಾವಳಿ ಮಿತಿ ಮೀರಿದ್ದು, ಸಂಚಾರ ದಟ್ಟಣೆ ಜತೆಗೆ ವೀಲಿಂಗ್ ನಿಯಂತ್ರಿಸುವುದೂ ಸಂಚಾರ ವಿಭಾಗದ ಪೊಲೀಸರಿಗೆ ತಲೆನೋವಾಗಿದೆ. ಬೆಂಗಳೂರಿನಲ್ಲಿ ಪದೇ-ಪದೇ ಸಂಚಾರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ವೀಲಿಂಗ್ ಮಾಡುವ ಪುಂಡರನ್ನು ಪತ್ತೆ ಹಚ್ಚಿ ಜೈಲಿಗಟ್ಟಿದರೂ ಪ್ರಮುಖ ರಸ್ತೆಗಳು, ಮೇಲ್ಸೇತುವೆಗಳಲ್ಲಿ ವೀಲಿಂಗ್ ನಿರಂತರವಾಗಿದೆ.
ಅಪ್ರಾಪ್ತ ವಯಸ್ಕರಲ್ಲೇ ಹುಚ್ಚು ಹೆಚ್ಚು: 13-24 ವಯೋಮಿತಿಯೊಳಗಿನವರೇ ಅಧಿಕ ಪ್ರಮಾಣದಲ್ಲಿ ವೀಲಿಂಗ್ ಹುಚ್ಚಾಟ ಪ್ರದರ್ಶಿಸುವ ಹುಂಬುತನದಲ್ಲಿ ಪುಂಡಾಟ ಮೆರೆಯುತ್ತಿದ್ದು, ವೀಲಿಂಗ್ ಪ್ರವೃತ್ತಿಯು ಯುವ ಸಮೂಹದಲ್ಲಿ ಅತೀ ಹೆಚ್ಚಾಗಿ ಕಂಡು ಬರುತ್ತಿದ್ದು, ಅದರಲ್ಲೂ ಅಪ್ರಾಪ್ತರೇ ಹೆಚ್ಚೆಚ್ಚು ವೀಲಿಂಗ್ ಕ್ರೇಜಿಗೆ ಬಲಿಯಾಗುತ್ತಿರುವುದು ವಿಪರ್ಯಾಸ.
ನೋಡುವವರ ಕಣ್ಣಿಗೆ ಹೀರೋ ಆಗಬೇಕೆಂಬ ಭ್ರಮೆಯಿಂದ ಬಹುತೇಕ ಬಾಲಕರು ವೀಲಿಂಗ್ ಮಾಡುತ್ತಾರೆ. ಇವರ ಹುಚ್ಚಾಟವು ಕೆಲವರ ಪ್ರಾಣಕ್ಕೆ ಹಾಗೂ ಸ್ವತಃ ಅವರ ಪ್ರಾಣಕ್ಕೆ ಕುತ್ತು ತಂದ ಹಲವು ಉದಾಹರಣೆಗಳಿವೆ. 80 -100 ಕಿ.ಮೀ ವೇಗದಲ್ಲಿ ಸಾಗಿ ಏಕಾಏಕಿ ದ್ವಿಚಕ್ರ ವಾಹನದ ಮುಂಭಾಗ ಮೇಲೆತ್ತಿ ಸಾಗಲು ಹಗುರವಿರುವ ಬೈಕ್, ಸ್ಕೂಟರ್ ಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವ ಪುಂಡರು, ಹೋಂಡಾ ಡಿಯೋ ವೀಲಿಂಗ್ ಸವಾರರ ಹಾಟ್ ಫೇವರಿಟ್ ವಾಹನವಾಗಿದೆ. ಈ ವಾಹನ ಹಗುರವಾಗಿದ್ದು, ವೀಲಿಂಗ್ ಮಾಡಲು ಅನುಕೂಲವಾಗುತ್ತದೆ. ಜತೆಗೆ ಆಕ್ಟಿವಾ, ಆ್ಯಕ್ಸಸ್‌ನಂತಹ ಗೇರ್‌ಲೆಸ್ ದ್ವಿಚಕ್ರವಾಹನಗಳನ್ನೇ ಹೆಚ್ಚಾಗಿ ವೀಲಿಂಗ್‌ಗೆ ಬಳಸುತ್ತಾರೆ. 2 ಸ್ಟೋಕ್ ಯಮಹಾ ಆರ್‌ಎಕ್ಸ್ 100 ಸಹ ವೀಲಿಂಗ್ ಪುಂಡರಿಗೆ ಅಚ್ಚು-ಮೆಚ್ಚಿನ ದ್ವಿಚಕ್ರವಾಹನವಾಗಿದೆ.
ಸದ್ಯ ಆರ್‌ಎಕ್ಸ್ 100 ದ್ವಿಚಕ್ರವಾಹನದ ಉತ್ಪಾದನೆ ನಿಂತಿದೆ. ಆದರೆ, ಸೆಕೆಂಡ್ ಹ್ಯಾಂಡ್ ಯಮಹಾ ಆರ್‌ಎಕ್ಸ್ 100ಗೆ ಎಲ್ಲಿಲ್ಲದ ಬೇಡಿಕೆಯಿದೆ. ಮಾರುಕಟ್ಟೆ ದರಕ್ಕಿಂತ ಹೆಚ್ಚು ಬೆಲೆಗೆ ಖರೀದಿಸುವವರಿದ್ದಾರೆ.
ದ್ವಿಚಕ್ರ ವಾಹನಕ್ಕೆ ಆಲ್ಟ್ರನೇಷನ್: ಕೆಲ ವೀಲಿಂಗ್ ಸವಾರರು ತಮ್ಮ ದ್ವಿಚಕ್ರ ವಾಹನಗಳನ್ನು ತಮ್ಮಿಷ್ಟದ ರೀತಿಯಲ್ಲಿ ಮಾರ್ಪಾಡು ಮಾಡಿಸಿಕೊಳ್ಳುತ್ತಾರೆ. ಬಹತೇಕ ವೀಲಿಂಗ್ ಪುಂಡರು ಸೈಲೆನ್ಸರ್‌ಗಳ ಮಾರ್ಪಾಡು ಮಾಡುತ್ತಾರೆ. ದೊಡ್ಡ ಗಾತ್ರದ ವೀಲ್‌ಗಳ ಅಳವಡಿಕೆ, ಹ್ಯಾಂಡಲ್‌ಗಳನ್ನು ತಮಗೆ ಬೇಕಾದ ರೀತಿ ಬದಲಾಯಿಸುತ್ತಾರೆ. ಸ್ಕೂಟರ್‌ಗಳಿಗೆ ವಿವಿಧ ಬಗೆಯ ಲೈಟಿಂಗ್ ಸಿಸ್ಟಮ್, ಬಣ್ಣ-ಬಣ್ಣದ ಸ್ಟಿಕ್ಕರ್ ಅಂಟಿಸಲಾಗುತ್ತದೆ. ಇನ್ನು ಕೆಲವರು ಮಡ್‌ಗಾರ್ಡ್‌ಗಳನ್ನು ತೆಗೆದು ಹಾಕಿ ಬೇರೆ ಮಾದರಿಯ ಮಡ್‌ಗಾರ್ಡ್ ಗಳನ್ನು ಅಳವಡಿಸುತ್ತಾರೆ. ಕಾನೂನು ಪ್ರಕಾರ ತಪ್ಪಾದರೂ ಹುಚ್ಚಾಟಕ್ಕೆ ಕೊನೆಯೇ ಇಲ್ಲ ಎಂಬ ಆರೋಪವಿದೆ. ಅಲ್ಲದೆ. ಕರ್ಕಶವಾಗಿ ಕೇಳುವ ಸೈಲೆನ್ಸರ್ ಶಬ್ದ ಅಳವಡಿಸಿ ಜೋರಾಗಿ ಎಕ್ಸಿಲೇಟರ್ ಬೇರೆಯವ ಗಮನ ಸೆಳೆಯಬಹುದೆಂಬ ಭ್ರಮೆ ಪ್ರಸ್ತುತ ಚಾಲ್ತಿಯಲ್ಲಿದೆ.
ವೀಲಿಂಗ್ ಹಾಟ್-ಸ್ಪಾಟ್ ಯಾವುದು ?: ವೀಲಿಂಗ್ ಪ್ರಿಯರು ಗುಂಡಿಗಳಿಲ್ಲದ ನೈಸ್ ರಸ್ತೆಯಂತಹ ನೇರವಾಗಿರುವ ಉಬ್ಬು-ತಗ್ಗಿಲ್ಲದ ರಸ್ತೆಗಳನ್ನು ಆಯ್ಕೆಮಾಡಿಕೊಳ್ಳುತ್ತಾರೆ. ನೈಸ್ ರಸ್ತೆ, ಔಟರ್ ರಿಂಗ್ ರಸ್ತೆ, ನಾಗವಾರ, ಮಾನ್ಯತಾ ಟೆಕ್ ಪಾರ್ಕ್ ರಸ್ತೆ, ಮೈಸೂರು ರಸ್ತೆ ಮೇಲ್ಸೇತುವೆ, ಬಸವನಗುಡಿ, ಸಿಲ್ಕ್ಬೋರ್ಡ್, ಏರ್‌ಪೋರ್ಟ್ ರಸ್ತೆ ಮೇಲ್ಸೇತುವೆಗಳು, ಜೆ.ಪಿನಗರ, ಚಿಕ್ಕಜಾಲ, ತುಮಕೂರು ರಸ್ತೆ, ಬಿಇಎಲ್ ರಸ್ತೆ, ಸುಮನಹಳ್ಳಿ ರಿಂಗ್ ರಸ್ತೆ, ಕೆ.ಜಿಹಳ್ಳಿ, ಬಳ್ಳಾರಿ ರಸ್ತೆ, ಕೋರಮಂಗಲ, ಯಲಹಂಕ, ಬೆಂಗಳೂರು ಹೊರ ವಲಯದ ರಾಷ್ಟ್ರೀಯ ಹೆದ್ದಾರಿಗಳು ವೀಲಿಂಗ್ ಪುಂಡರ ನೆಚ್ಚಿನ ಸ್ಥಳಗಳು.
ಗ್ಯಾರೇಜ್ ಸಿಬ್ಬಂದಿ ಸಹಕಾರ: ಬೆಂಗಳೂರಿನಲ್ಲಿ ವೀಲಿಂಗ್ ಹುಚ್ಚಾಟಕ್ಕೆ ತಕ್ಕಂತೆ ಗ್ಯಾರೇಜ್ ಗಳಲ್ಲಿ ಆಲ್ಟ್ರನೇಷನ್ ಮಾಡಲಾಗುತ್ತದೆ. ಇದಕ್ಕಾಗಿಯೇ ಕೆಲವು ಗ್ಯಾರೇಜ್‌ಗಳಿವೆ. ಶಿವಾಜಿನಗರ, ಪುಲಿಕೇಶಿನಗರ, ಯಶವಂತಪುರ, ಚಾಮರಾಜಪೇಟೆ, ಮೈಸೂರು ರಸ್ತೆ, ಜಯನಗರ, ಜೆಪಿನಗರ, ತಿಲಕ್‌ನಗರ, ಹಲಸೂರು, ಡಿಜೆಹಳ್ಳಿ, ಯಲಹಂಕ ಸೇರಿದಂತೆ ನಗರದ ಸುತ್ತ-ಮುತ್ತಲು ಸುಮಾರು 350ಕ್ಕೂ ಹೆಚ್ಚಿನ ಗ್ಯಾರೇಜ್ ಗಳಲ್ಲಿ ಈ ವ್ಯವಸ್ಥೆಯಿದೆ.
ಇದು ಕಾನೂನು ಬಾಹಿರ ಎಂದು ಗೊತ್ತಿದ್ದರೂ ತರೆ-ಮೆರೆಯಲ್ಲಿ ಸದ್ದಿಲ್ಲದೇ ದುಡ್ಡಿಗಾಗಿ ಗ್ಯಾರೇಜ್ ಸಿಬ್ಬಂದಿ ಪುಂಡರಿಗೆ ಬೇಕಾದ ಮಾದರಿಯಲ್ಲಿ ಆಲ್ಟ್ರಷನ್ ಮಾಡಿಸಿಕೊಡುತ್ತಾರೆ. ಸದ್ಯ ಪೊಲೀಸರು ವೀಲಿಂಗ್ ಜತೆಗೆ ಆ ವಾಹನಗಳನ್ನು ಮಾರ್ಪಾಡು ಮಾಡುವ ಗ್ಯಾರೇಜ್ ಮೆಕ್ಯಾನಿಕ್‌ಗಳ ಮೇಲೂ ಕ್ರಮವಹಿಸಲು ಮುಂದಾಗಿದ್ದಾರೆ. ಗ್ಯಾರೇಜ್ ಪರವಾನಗಿ ಸಹ ರದ್ದು ಮಾಡಲು ಶಿಫಾರಸು ಮಾಡಲಾಗುತ್ತದೆ.
ಲೈಕ್, ವ್ಯೂವ್ಸ್ ವ್ಯಾಮೋಹ: ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚೆಚ್ಚು ವಿವರ್ಸ್ ಪಡೆಯುವ ಉದ್ದೇಶದಿಂದ ಪುಂಡರು ವೀಲಿಂಗ್ ಮಾಡುವುದಿದೆ. ಮತ್ತೂಂದು ದ್ವಿಚಕ್ರವಾಹನದಲ್ಲಿ ಅವರ ಸಹಚರರು ಹಿಂಬಾಲಿಸಿಕೊಂಡು ಹೋಗಿ ಮೊಬೈಲ್‌ನಲ್ಲಿ ಆ ದೃಶ್ಯ ಸೆರೆ ಹಿಡಿಯುತ್ತಾರೆ. ಬಳಿಕ ವೀಲಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಅಪ್‌ಲೋಡ್ ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಹೆಚ್ಚೆಚ್ಚು ಜನರಿಂದ ಪ್ರಚಾರ ಗಿಟ್ಟಿಸಿಕೊಳ್ಳಬಹುದು ಎಂಬುದು ಅವರ ನಂಬಿಕೆ, ಇನ್ನು ಹೆಚ್ಚೆಚ್ಚು ಫಾಲೋವರ್ಸ್ ಲೈಕ್ ಮಾಡಲು ವಿವಿಧ ಮಾದರಿಯಲ್ಲಿ ಡೆಡ್ಲಿ ವ್ಹೀಲಿಂಗ್ ನಡೆಸುತ್ತಾರೆ. ಕೆಲವೊಮ್ಮೆ ಹಿಂಬದಿ ಸ್ನೇಹಿತರನ್ನು ಕೂರಿಸಿಕೊಂಡು ಹಾರಾಟ ನಡೆಸುವ ದೃಶ್ಯ ಜನರನ್ನು ಭಯಭೀತರನ್ನಾಗಿಸುತ್ತವೆ. ಇತ್ತೀಚೆಗೆ ಹೀರೋಯಿಸಂ ಭ್ರಮೆಯಲ್ಲಿ ವಾಹನದಟ್ಟಣೆ ಇರುವ ಪ್ರದೇಶದಲ್ಲೂ ವೀಲಿಂಗ್ ಮಾಡುತ್ತಿದ್ದು,ಪೊಲೀಸ್ ಇಲಾಖೆ ತಾಂತ್ರಿಕ ವಿಭಾಗವು ವೀಲಿಂಗ್ ಅಪ್‌ಲೋಡ್ ಮಾಡುವ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಟ್ಟಿದೆ.
ಬದಲಿ ನಂಬರ್ ಪ್ಲೇಟ್ ಅಳವಡಿಕೆ: ವೀಲಿಂಗ್ ಪುಂಡರು ಅಸಲಿ ನಂಬರ್ ಪ್ಲೇಟ್ ಮರೆ ಮಾಚಿ ನಕಲಿ ನಂಬರ್‌ಗಳನ್ನು ಅಳವಡಿಸುತ್ತಾರೆ. ಇದರಿಂದ ಪೊಲೀಸರಿಗೆ ಅವರನ್ನು ಪತ್ತೆ ಹಚ್ಚುವುದು ಕಷ್ಟಸಾಧ್ಯವಾಗಿದೆ. ಇನ್ನು ಕೆಲ ದ್ವಿಚಕ್ರವಾಹನಗಳು ನಂಬರ್ ಪ್ಲೇಟ್ ಅಳವಡಿಸದೇ ಎಲ್ಲೆಡೆ ಸುತ್ತಾಡುತ್ತಾರೆ. ವೀಲಿಂಗ್‌ಗೆ ಕದ್ದ ದ್ವಿಚಕ್ರವಾಹನಗಳೇ ಹೆಚ್ಚಾಗಿ ಬಳಕೆಯಾಗುತ್ತಿದೆ. ವೀಲಿಂಗ್ ಹುಚ್ಚಾಟ ನಡೆಸುವವರನ್ನು ಕಂಡರೆ ಕೂಡಲೇ ಸ್ಥಳೀಯ ಪೊಲೀಸರಿಗೆ ತಿಳಿಸಲು ಪೊಲೀಸ್ ಇಲಾಖೆ
ಮನವಿ ಮಾಡಿದೆ. ಪುಂಡರಿಗೆ ಶಿಕ್ಷೆ ಏನು ?: ವೀಲಿಂಗ್ ಮಾಡಿದವರಿಗೆ ಐಪಿಸಿ ಸೆಕ್ಷನ್ 279ರ ಅಡಿಯಲ್ಲಿ ಸಾವಿರ ರೂ. ದಂಡ, 6 ತಿಂಗಳು ಜೈಲು ಶಿಕ್ಷೆ ವಿಧಿಸಲು ಅವಕಾಶಗಳಿವೆ. ಇನ್ನು ಕೆಲ ಪ್ರಕರಣಗಳಲ್ಲಿ ವೀಲಿಂಗ್ ಮಾಡಿದವರನ್ನು ಠಾಣೆಗೆ ಕರೆಸಿ ಅವರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಎಚ್ಚರಿಕೆ ಕೊಟ್ಟು ಕಳಿಸಲಾಗುತ್ತದೆ. ದ್ವಿಚಕ್ರವಾಹನ ಜಪ್ತಿ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಪ್ರಾಪ್ತರಾಗಿದ್ದರೆ ಅವರ ಪಾಲಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಮಕ್ಕಳಿಗೆ ವಾಹನಗಳನ್ನು ಕೊಡಿಸಿದ ಮೇಲೆ ಅವರ ಚಲನವಲನಗಳ ಮೇಲೆ ನಿಗಾ ವಹಿಸಬೇಕು ಎಂದು ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ.
ಪೊಲೀಸರ ಕಾರ್ಯಾಚರಣೆ: ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ “ಉದಯವಾಣಿ’ ಜತೆಗೆ ಈ ಕುರಿತು ಮಾತನಾಡಿ, ಸಂಚಾರ ವಿಭಾಗದ ಪೊಲೀಸರು ವೀಲಿಂಗ್ ಸವಾರರನ್ನು ಪತ್ತೆ ಹಚ್ಚಲು ರಾತ್ರಿ ವೇಳೆ ಕಾರ್ಯಾಚರಣೆ ಮಾಡುತ್ತಿದ್ದಾರೆ. ವೀಲಿಂಗ್ ಮಾಡುವುದು ಕಂಡು ಬಂದರೆ ಅಂತಹ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅವರ ವಾಹನ ಜಪ್ತಿ ಮಾಡಿ ಕೋರ್ಟ್ ಸುಪರ್ದಿಗೆ ನೀಡುತ್ತೇವೆ. ಕೋರ್ಟ್ ಸೂಚನೆ ಮೇರೆಗೆ ಮುಂದಿನ ಕ್ರಮಕೈಗೊಳ್ಳುತ್ತೇವೆ. ಈ ರೀತಿ ಮಾಡದಂತೆ ವೀಲಿಂಗ್ ಸವಾರರಿಗೆ ಎಚ್ಚರಿಕೆ ಕೊಟ್ಟು ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿಕೊಡಲಾಗುತ್ತದೆ. ವೀಲಿಂಗ್ ಪ್ರಕರಣವನ್ನು ಗಂಭೀರವಾಗಿ ಪರಿಣಗಣಿಸಲಾಗಿದ್ದು, ಹೆಚ್ಚಿನ ಕಾರ್ಯಾಚರಣೆ ಒತ್ತುನೀಡಲಾಗಿದೆ ಎಂದು ತಿಳಿಸಿದರು.
ಪೊಲೀಸರ ಕಣ್ಣು ತಪ್ಪಿಸಿ ವೀಲಿಂಗ್ ಮಾಡಬಹುದು. ಆದರೆ ಅಪಘಾತದ ಕಣ್ಣು ತಪ್ಪಿಸಲು ಸಾಧ್ಯವಿಲ್ಲ ಎಂಬುದನ್ನು ವೀಲಿಂಗ್ ಮಾಡುವವರು ಗಮನದಲ್ಲಿಟ್ಟುಕೊಳ್ಳಬೇಕು. ವೀಲಿಂಗ್ ಮಾಡಿ ತಮ್ಮ ಪ್ರಾಣಕ್ಕೆ ಸಂಚಕಾರ ತರುವ ಜತೆಗೆ ಅಮಾಯಕ ವಾಹನ ಸವಾರರ ಪ್ರಾಣಕ್ಕೂ ಎರವಾಗಲಿದೆ. – ಡಾ.ಎಂ.ಎ.ಸಲೀಂ, ಬೆಂಗಳೂರು ಸಂಚಾರ ವಿಭಾಗ ವಿಶೇಷ ಆಯುಕ್ತ
– ಅವಿನಾಶ್ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.