![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Dec 23, 2021, 9:46 AM IST
ಬೆಂಗಳೂರು: ಮನೆಯಲ್ಲಿ ಸಜೀವ ಗುಂಡುಗಳು ಇರುವುದರಿಂದ ಪುತ್ರನ ಕೌಟುಂಬಿಕ ಸಮಸ್ಯೆ ಉಂಟಾಗಿದೆ ಎಂದು ಭಾವಿಸಿದ ಏರ್ ಫೋರ್ಸ್‌ನ ನಿವೃತ್ತ ಗ್ರೂಪ್ ಕ್ಯಾಪ್ಟನ್ ಪತ್ನಿ ಎರಡು ಜೀವಂತ ಗುಂಡುಗಳನ್ನು ಖಾಸಗಿ ಹೋಟೆಲ್‌ನ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಹೂತಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಜಕ್ಕೂರು ವಾಯುನೆಲೆ ಬಳಿಯಿರುವ ಖಾಸಗಿ ಹೋಟೆಲ್‌ನ ವ್ಯವಸ್ಥಾಪಕ ಶ್ರೀನಿವಾಸ ಎಂಬುವರು ದೂರು ನೀಡಿದ ಮೇರೆಗೆ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೋಟೆಲ್‌ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುವ ಫಯಾಜ್ ಅಹಮದ್ ಎಂಬುವರು ಡಿ.17 ರಂದು ಮಧ್ಯಾಹ್ನ ಕಾರು ಪಾರ್ಕಿಂಗ್ ಸ್ಥಳದಲ್ಲಿ ಸ್ವತ್ಛಗೊಳಿಸುವಾಗ ರೈಫಲ್ ಗೆ ಬಳಸುವ ಸಜೀವ ಗುಂಡು ಸಿಕ್ಕಿದ್ದು, ಅದನ್ನು ಮಾಲೀಕರಿಗೆ ತಿಳಿಸಿದ್ದರು.
ನಂತರ ಮಾಲೀಕ ಶ್ರೀನಿವಾಸ್ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತಪಾಸಣೆ ನಡೆಸಿ ಪರಿಶೀಲಿಸಿದಾಗ ಸಿಂಗಲ್ ಬ್ಯಾರಲ್ ಗನ್‌ಗೆ ಬಳಸುವ ಸಜೀವ ಗುಂಡು ಎಂಬುದು ಗೊತ್ತಾಗಿದೆ. ಅನುಮಾನಾಸ್ಪದವಾಗಿ ಗುಂಡು ದೊರೆತಿರುವ ಬಗ್ಗೆ ಬಾಂಬ್ ನಿಷ್ಕ್ರಿಯ ತಂಡ ಹಾಗೂ ಶ್ವಾನದಳ ಬಂದು ತಪಾಸಣೆ ನಡೆಸಿದಾಗ ಮತ್ತೂಂದು ಗುಂಡು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೋಟೆಲ್ ಪರಿಶೀಲನೆ ನಡೆಸಿದ ಅಧಿಕಾರಿಗಳು ಗುಂಡುಗಳನ್ನು ಹೂತಿಟ್ಟಿರುವ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಹೋಟೆಲ್ ಬಳಿ ಮಹಿಳೆ ಕಾರಿನಲ್ಲಿ ಬಂದಿರುವ ಬಗ್ಗೆ ಮಾಹಿತಿ ಪಡೆದು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಕಾರಿನ ನೋಂದಣಿ ಸಂಖ್ಯೆ ಮೂಲಕ ಜಾಡು ಹಿಡಿದು ಹೊರಟ ಪೊಲೀಸರಿಗೆ ಮಹಿಳೆಯ ಮನೆ ಯಲಹಂಕ ದಲ್ಲಿರುವುದು ಗೊತ್ತಾಗಿದೆ.
ಇದನ್ನೂ ಓದಿ: ಕನ್ನಡಿಗನಿಗೆ ನಾಯಕತ್ವ ನೀಡಲು ಮುಂದಾಗಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಅಲ್ಲಿಗೆ ಹೋದಾಗ ಮನೆ ಖಾಲಿ ಮಾಡಿರುವುದನ್ನು ಖಚಿತಪಡಿಸಿಕೊಂಡು, ಸಿಡಿಆರ್ ಹಾಗೂ ಮೊಬೈಲ್ ನೆಟ್‌ವರ್ಕ್ ಮೂಲಕ ಶೋಧಿಸಿದಾಗ ಆಕೆ ಕೊಡಿಗೇಹಳ್ಳಿಯಲ್ಲಿ ವಾಸ್ತವ್ಯ ಹೂಡಿರು ವುದು ತಿಳಿದುಬಂದಿದೆ. ನಂತರ ಮಹಿಳೆ ಮನೆಗೆ ಹೋಗಿ ವಿಚಾರಿಸಿದಾಗ ಮತ್ತೂಂದು ವಿಚಾರ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ನಿವೃತ್ತ ಗ್ರೂಪ್ ಕ್ಯಾಪ್ಟನ್ ಪತ್ನಿಯ ಕೃತ್ಯ: ಭಾರತೀಯ ವಾಯುನೆಲೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿರುವ ಗ್ರೂಪ್ ಕ್ಯಾಪ್ಟನ್‌ವೊಬ್ಬರು ಕೆಲ ವರ್ಷಗಳ ಹಿಂದೆ ಗುಂಡುಗಳ ಸಮೇತ ರೈಫಲ್ ಖರೀದಿಸಿದ್ದರು. ಕಳೆದ ವರ್ಷ ಕಾನೂನು ಪ್ರಕಾರವಾಗಿ ಮತ್ತೂಬ್ಬರಿಗೆ ರೈಫಲ್ ಮಾರಾಟ ಮಾಡಿದ್ದರು. 15 ಗುಂಡುಗಳನ್ನು ಮಾತ್ರ ಮಾರಾಟ ಮಾಡದೆ ಮನೆಯಲ್ಲಿ ಉಳಿಸಿಕೊಂಡಿದ್ದರು. ಮತ್ತೂಂದೆಡೆ, ನಗರದ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪುತ್ರನ ಕೌಟುಂಬಿಕ ಜೀವನ ಸರಿ ಇರಲಿಲ್ಲ.
ಹೀಗಾಗಿ ಆತನ ತಾಯಿ, ಮನೆಯಲ್ಲಿ ಜೀವಂತ ಗುಂಡುಗಳು ಇರುವುದರಿಂದಲೇ ಈ ರೀತಿಯ ಘಟನೆಗಳು ನಡೆಯುತ್ತಿವೆ ಎಂದು ಭಾವಿಸಿದ ಆಕೆ, ಜೀವಂತ ಗುಂಡುಗಳನ್ನು ಮನೆಯಿಂದ ಹೊರ ಹಾಕಿದರೆ ಮಗನಿಗೆ ಒಳ್ಳೆಯದಾಗಲಿದೆ ಎಂದು ಭಾವಿಸಿ ಮನೆಯಲ್ಲಿದ್ದ 15 ಗುಂಡುಗಳ ಪೈಕಿ ಎರಡು ಗುಂಡುಗಳನ್ನು ಖಾಸಗಿ ಹೋಟೆಲ್‌ನ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಹೂತಿಟ್ಟಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಮಹಿಳೆ ಮಾನಸಿಕ ಖನ್ನತೆಗೊಳಗಾಗಿದ್ದರು ಎಂಬುದು ಗೊತ್ತಾಗಿದೆ ಎಂದು ಅಧಿಕಾರಿ ವಿವರಿಸಿದರು.
You seem to have an Ad Blocker on.
To continue reading, please turn it off or whitelist Udayavani.