ಬೆಚ್ಚಗಿರಿ ಬಂದಿದೆ ಚಳಿಗಾಲ
Team Udayavani, Dec 10, 2018, 11:01 AM IST
ಚಳಿಗಾಲ ಬಂದಿದೆ. ಈ ಚಳಿ ತಾನು ಬರುವುದಷ್ಟೇ ಅಲ್ಲದೆ, ತನ್ನೊಂದಿಗೆ ಶೀತ, ಕೆಮ್ಮು, ಗಂಟಲು ಕೆರೆತ, ಜ್ವರದಂತಹ ಅಪಾಯಕಾರಿ ಅತಿಥಿಗಳನ್ನೂ ಕರೆತಂದಿದೆ. ಮೈ ಬಿಸಿಯಾದಾಗ ಅದು ಸಾಮಾನ್ಯ ಜ್ವರ ಎಂದು ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಕಾರಣ ಇದು ವೈರಲ್ ಫಿವರ್ ಹರಡಲು ಸಕಾಲ. ಹಾಗೇ ಶೀತದಿಂದ ಹಿಡಿದು, ಕೆಮ್ಮಿನವರೆಗೆ ಯಾವುದೇ ಸಣ್ಣ ಆರೋಗ್ಯ ತೊಂದರೆಯನ್ನೂ ಕಡೆಗಣಿಸುವಂತಿಲ್ಲ. ಚಳಿಗಾಲ ತರುವ ಆರೋಗ್ಯ ಸಮಸ್ಯೆಗಳು ಮತ್ತು ಮುನ್ನೆಚ್ಚರಿಕೆ ಕುರಿತ ಮಾಹಿತಿ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ…
ಬೆಂಗಳೂರು: ದಟ್ಟ ಮಂಜಿನ ನಡುವೆ ನುಸುಳಿ ಬರುವ ಚಳಿಗಾಳಿಗೆ ಅಲ್ಲಲ್ಲಿ ಬೆಂಕಿ ಹಾಕಿ ಚಳಿ ಕಾಯಿಸುವ ಪೌರಕಾರ್ಮಿಕರು, ಮಂಜಾನೆಯ ಮಬ್ಬುಗತ್ತಲಲ್ಲಿ ಮಫ್ಲರ್, ಟೋಪಿ ಹಾಕಿಕೊಂಡು ವಾಯು ವಿಹಾರದಲ್ಲಿ ತೊಡಗಿರುವ ಹಿರಿಯ ನಾಗರಿಕರು, ಕೊರೆಯುವ ಚಳಿಗೆ ಹಲ್ಲು ಬಿಗಿ ಹಿಡಿದು ತಮ್ಮ ಕಾರ್ಯದಲ್ಲಿ ತೊಡಗಿರುವ ಹಾಲು, ಪೇಪರ್ ಹಾಕುವ ಹುಡುಗರು, ಮಧ್ಯಾಹ್ನದ ವೇಳೆಗೆ ಚುರುಗುಟ್ಟುವ ಬಿಸಿಲು…
ಚಳಿಗಾಲದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಭಾಗಗಳಲ್ಲಿ ಕಂಡುಬರುತ್ತಿರುವ ದೃಶ್ಯಗಳಿವು. ನಗರದ ಹೊರ ವಲಯಗಳಲ್ಲಿ ಮುಂಜಾನೆ ಹಾಗೂ ರಾತ್ರಿ ಚಳಿ ಪ್ರಕೃತಿ ಪ್ರಿಯರಿಗೆ ಆಹ್ಲಾದಕರವೆನಿಸಿದರೆ, ರೋಗಿಗಳ ಪಾಲಿಗೆ ಚಳಿಗಾಲ ಅಜ್ಞಾತ ಶತ್ರುವಾಗಿದೆ. ಜತೆಗೆ ಜನರಲ್ಲಿ ಶೀತ, ಜ್ವರ, ನೆಗಡಿ, ಗಂಟಲು ಕೆರೆತ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಕೈಗೊಳ್ಳಬೇಕಾದ ಮುಂಜಾಗ್ರತೆ ಬಗೆಗಿನ ಮಾಹಿತಿಯನ್ನು “ಸುದ್ದಿ ಸುತ್ತಾಟ’ ಒಳಗೊಂಡಿದೆ.
ಬೇಸಿಗೆ ಹಾಗೂ ಮಳೆಗಾಲಕ್ಕೆ ಹೋಲಿಕೆ ಮಾಡಿದರೆ ವೈರಾಣುಗಳು ಹೆಚ್ಚು ಕ್ರಿಯಾಶೀಲವಾಗಲು ಬೇಕಾದ ಅಗತ್ಯ ವಾತಾವರಣ ಚಳಿಗಾಲದಲ್ಲಿರುತ್ತದೆ. ಹೀಗಾಗಿ, ವೈರಾಣುವಿನಿಂದ ಕಾಣಿಸಿಕೊಳ್ಳುವ ಇನ್‌ಫೂಯೆಂಜಾ ವ್ಯಾಪಕವಾಗಿ ಹರಡಿ, ಜ್ವರ, ನೆಗಡಿ, ಕೆಮ್ಮಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಪ್ರಮುಖವಾಗಿ ರೋಗ ನಿರೋಧಕ ಶಕ್ತಿ ಕಡಿಮೆಯಿರುವ ಮಕ್ಕಳು ಹಾಗೂ ವೃದ್ಧರು ಬಹುಬೇಗ ಈ ವೈರಾಣು ಸೋಂಕಿಗೆ ಒಳಗಾಗುವ ಅಪಾಯವಿದೆ.
ಇದರ ಪರಿಣಾಮ ಚಳಿಗಾಲದಲ್ಲಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ ಹಾಗೂ ಬಡಾವಣೆಗಳಲ್ಲಿನ ಕ್ಲಿನಿಕ್, ನರ್ಸಿಂಗ್ ಹೋಮ್‌ಗಳ ಮುಂದೆ ಚಿಕಿತ್ಸೆ ಪಡೆಯಲು ರೋಗಿಗಳು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಸಾಮಾನ್ಯ. ನಗರದ ಬೌರಿಂಗ್, ವಿಕ್ಟೋರಿಯಾ ಹಾಗೂ ಕೆಸಿ ಜನರಲ್ ಆಸ್ಪತ್ರೆಗಳಲ್ಲಿ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಕಳೆದ ಎರಡು ವಾರದಿಂದ ವೈರಾಣು ಸೋಂಕಿಗೆ ಚಿಕಿತ್ಸೆ ಪಡೆದವರ ಸಂಖ್ಯೆ ಶೇ.20ರಷ್ಟು ಹೆಚ್ಚಾಗಿದೆ. ಇನ್ನು ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಮ್‌ಗಳಲ್ಲೂ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಸಂಖ್ಯೆ ಶೇ.50ರಷ್ಟು ಹೆಚ್ಚಾಗಿದೆ. ಜತೆಗೆ ಶ್ವಾಸಕೋಶ ಸೋಂಕು, ದೇಹದಲ್ಲಿ ಅತಿಯಾದ ನೋವು, ತೀವ್ರ ಗಂಟಲಿನ ಸೋಂಕು ಹೆಚ್ಚಾಗಿರುವುದು ವರದಿಯಾಗಿದೆ.
ರೋಗಿಗಳಿಗೆ ನರಕ ಅಸ್ತಮಾ, ಮಧುಮೇಹ, ಅಲರ್ಜಿ, ಹೃದ್ರೋಗ ಹಾಗೂ ಸಂಧಿವಾತ ಸಮಸ್ಯೆ ಇರುವವರು ಚಳಿಗಾಲದಲ್ಲಿ ಹೆಚ್ಚು ತೊಂದರೆಗೆ ಒಳಗಾಗುತ್ತಾರೆ. ಕಾರಣ ಇವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಈ ರೋಗಿಗಳು ತಮ್ಮ ದಿನಚರಿ ಹಾಗೂ ಆಹಾರ ಪದ್ಧತಿ ಬದಲಿಸಿಕೊಂಡು ವೈದ್ಯರು ಸೂಚಿಸಿದ ಆಹಾರ ಪದ್ಧತಿ ಅನುಸರಿಸುವುದು ಸೂಕ್ತ ಎನ್ನುತ್ತಾರೆ ವೈದ್ಯರು. ಗಂಟಲು ಸೋಂಕು ಹೆಚು ಮೊದಲಿಗೆ ಗಂಟಲು ಒಣಗಿದಂತಾಗಿ ಬಳಿಕ ಕೆರೆತ ಶುರುವಾಗಿ ಧ್ವನಿ ಕುಗ್ಗುತ್ತದೆ. ಗಂಟಲು ನೋವು ಕಾಣಿಸಿಕೊಂಡರೆ ಗಂಟಲು ಸೋಂಕು ಬಂದಿದೆ ಎಂದರ್ಥ. ಇದಕ್ಕೆ ಮುಖ್ಯ ಕಾರಣ ನೀರಿನಲ್ಲಿರುವ ವೈರಾಣುಗಳು. ಆ ಹಿನ್ನೆಲೆಯಲ್ಲಿ ಚಳಿಗಾಲದಲ್ಲಿ ಸಾಧ್ಯವಾದಷ್ಟು ಬಿಸಿ ಹಾಗೂ ದ್ರವಾಹಾರ ಸೇವಿಸಬೇಕು. ಜತೆಗೆ ಬೆಳಗ್ಗೆ ಮತ್ತು ರಾತ್ರಿ ಬಿಸಿ ನೀರು, ಉಪ್ಪಿನೊಂದಿಗೆ ಬಾಯಿ ಮುಕ್ಕಳಿಸಬೇಕು. ಇದರ ಜತೆಗೆ ಮೆಣಸು, ಶುಂಠಿ, ತುಳಸಿ, ಅರಿಶಿನ, ಲವಂಗ ಹಾಕಿದ ಆಹಾರ ಸೇವಿಸಬೇಕು
ತುರಿಕೆ ಅಥವಾ ಕೆರೆತ ಒಣ ಚರ್ಮ ಸಮಸ್ಯೆ ಉಷ್ಣಾಂಶ ಕೊರತೆಯಿಂದ ರಕ್ತ ಚಲನೆ ಕುಗ್ಗಿ ಶೀತ ಗಾಳಿಗೆ ಚರ್ಮ ಒಣಗುತ್ತದೆ. ಜತೆಗೆ ದೇಹದ ಸೂಕ್ಷ್ಮ ಭಾಗಗಳಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ತುರಿಕೆ ಮೊದಲಿಗೆ ದೇಹದ ಒಂದು ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಕೆರೆದುಕೊಳ್ಳುವುದರಿಂದ ಚರ್ಮಕ್ಕೆ ಹಾನಿಯಾಗಲಿದೆ. ಇದರೊಂದಿಗೆ ಚರ್ಮದ ಮೇಲ್ಪದರದಲ್ಲಿ ನೀರಿನ ಅಂಶ ಕಡಿಮೆಯಾದಂತೆ ಚರ್ಮ ಒಣಗುತ್ತದೆ. ಚರ್ಮದಲ್ಲಿ ನಿರ್ಜಲೀಕರಣವಾದಂತೆ ಚರ್ಮದ ಕೋಶಗಳು ಸಾಯಲಾರಂಭಿಸುತ್ತವೆ. ಪರಿಣಾಮ ಚರ್ಮ ಸಂಕುಚಿತಗೊಂಡು ಒಡೆಯಲು ಆರಂಭಿಸುತ್ತದೆ. ಇದು ಚರ್ಮ ಸೋಂಕಿಗೂ ಕಾರಣವಾಗುತ್ತದೆ. ಹೀಗಾಗಿ ಚರ್ಮದ ಆರೈಕೆಗಾಗಿ ಮೈಗೆ ಎಣ್ಣೆ ತಣ್ಣೀರು ಸ್ನಾನ, ಚರ್ಮದಲ್ಲಿನ ತೇವಾಂಶ ಕಾಯ್ದುಕೊಳ್ಳುವ ವರ್ಧಕಗಳ ಬಳಕೆ ಮಾಡಬೇಕು.
ಸರ್ಕಾರಿ ಆಸ್ಪತ್ರೆಗಳ ಕಡೆಗೆ ಮುಖ ಮಾಡದ ಜನ ಚಳಿಗಾಲಕ್ಕೆ ಹೆಚ್ಚಿನ ಕಾಯಿಲೆಗಳು ಕಾಣಿಸಿಕೊಂಡರೂ ಜನ ಮಾತ್ರ ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದು, ತಜ್ಞ ವೈದ್ಯರನ್ನು ಒಳಗೊಂಡು, ಚಳಿಗಾಲದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಿದ್ಧವಾಗಿರುವ ಸರ್ಕಾರಿ ಆಸ್ಪತ್ರೆಗಳ ಕಡೆಗೆ ಮುಖ ಮಾಡುತ್ತಿಲ್ಲ ಎಂಬುದು ಸರ್ಕಾರಿ ಆಸ್ಪತ್ರೆ ವೈದ್ಯರ ಬೇಸರವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿನ ಹೊರರೋಗಿ ವಿಭಾಗಗಳು ಸಂಜೆ 4ರ ಬಳಿಕ ಸೇವೆ ನೀಡುವುದಿಲ್ಲ. ಹೀಗಾಗಿ ಜನರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದು, ಅದನ್ನೇ ಲಾಭವಾಗಿಸಿಕೊಂಡಿರುವ ಖಾಸಗಿ ಆಸ್ಪತ್ರೆಗಳು ರಕ್ತ ಪರೀಕ್ಷೆ ಹೆಸರಿನಲ್ಲಿ ಹಣ ಸುಲಿಯುತ್ತಿವೆ ಎಂಬ ಆರೋಪವಿದೆ.
ಚಳಿಗಾಲದಲ್ಲಿ ವೈರಾಣು ಸೋಂಕಿನ ಪ್ರಮಾಣ ಹೆಚ್ಚಾಗಿರುತ್ತದೆ. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಮಲೇರಿಯಾ, ಡೆಂಘಿ, ಟೆಫ್ಎಡ್ ಪರೀಕ್ಷೆಗಳಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಇನ್ನು ಎಲ್ಲಾ ಪರೀಕ್ಷೆ, ಚಿಕಿತ್ಸೆ ಹಾಗೂ ಔಷಧ ವಿತರಣೆಯು ಉಚಿತವಾಗಿರುವುದರಿಂದ 2- 3 ದಿನ ಜ್ವರ ಕಾಣಿಸಿಕೊಂಡರೆ ತಕ್ಷಣ ಬಂದು ರಕ್ತ ಪರೀಕ್ಷೆ ಮಾಡಿಸಿ ಉಚಿತ ಚಿಕಿತ್ಸೆ ಪಡೆಯಿರಿ. ಅನಗತ್ಯವಾಗಿ ಕ್ಲಿನಿಕ್‌ಗಳಿಗೆ ಹಾಗೂ ಪ್ರಯೋಗಾಲಯಗಳಿಗೆ ಹಣ ವ್ಯಯಿಸಬೇಡಿ.
ಡಾ.ಶಿವರಾಜ್ ಸಜ್ಜನ್ ಶೆಟ್ಟಿ, ಸಾಂಕ್ರಾಮಿಕ ರೋಗ ವಿಭಾಗದ ಜಂಟಿ ನಿರ್ದೇಶಕರು
ಆಸ್ಪತ್ರೆಗಳಲ್ಲಿ ವೈರಾಣು ಸೋಂಕಿತ ಚಿಕಿತ್ಸೆಗೆ ಅಗತ್ಯ ಕ್ರಮ ವಹಿಸಲಾಗಿದೆ. ರೋಗಿಗಳಿಗೆ ನೀಡುವ ಆಹಾರದ ಮೆನುವನ್ನು ಬದಲಿಸಿದ್ದು, ಬೇಳೆ ಕಾಳುಗಳನ್ನು ನೀಡಲಾಗುತ್ತಿದೆ. ಉಣ್ಣೆಯ ಚಾದರವನ್ನು ಕೊಡುತ್ತಿದ್ದೇವೆ. ಇನ್ನು ರೋಗಿಗಳು, ಮಕ್ಕಳು ಹಾಗೂ ವೃದ್ಧರು ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳಬೇಕಿದೆ.
ಡಾ. ಮೋಹನ್, ಕೆಸಿ ಜನರಲ್ ಆಸ್ಪತ್ರೆ
ಕಾಡಲಿದೆ ಅಸ್ತಮಾ ವಾಹನಗಳ ಸಂಚಾರದಿಂದ ಏರ್ಪಡುವ ಧೂಳು ನಿಗದಿತ ಸಮಯದ ನಂತರ ನೆಲದ ಮೇಲೆ ಕೂರುತ್ತದೆ. ಆದರೆ, ಚಳಿಗಾಲದಲ್ಲಿ ಧೂಳು ಮಂಜಿನೊಂದಿಗೆ ಸೇರುವುದರಿಂದ, ಮಂಜು ಮಿಶ್ರಿತ ಗಾಳಿ ಸೇವನೆ ಅಸ್ತಮಾ ತರುವಂತಹ ಅಪಾಯವಿರುತ್ತದೆ. ಈಗಾಗಲೇ ಅಸ್ತಮಾ ತೊಂದರೆಗೆ ಒಳ ಗಾಗಿರುವವರ ಮೇಲೆ ಇದು ಇನ್ನಷ್ಟು ಪರಿಣಾಮ ಬೀರಲಿದ್ದು, ಮಕ್ಕಳಿಗೆ ಅಪಾಯ ಹೆಚ್ಚು.
ಇನ್‌ಫೂಯೆಂಜಾ ತಡೆಗೆ ಮುನ್ನೆಚ್ಚರಿಕೆ ಕ್ರಮ ಮಕ್ಕಳಿಗೆ ವೈರಾಣು ಜ್ವರ ಕಾಣಿಸಿಕೊಂಡರೆ ತಕ್ಷಣ ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಬೇಕು. ಜ್ವರದಿಂದ ಬಳಲುವವರು ಬಳಸುವ ಕರವಸ್ತ್ರ, ಟವಲ್ ಇತರೆ ವಸ್ತ್ರಗಳನ್ನು ಇತರರು ಬಳಸದಂತೆ ಎಚ್ಚರ ವಹಿಸಬೇಕು. ಕೈಗಳನ್ನು ಸ್ವತ್ಛವಾಗಿ ತೊಳೆದುಕೊಂಡು ತಿಂಡಿ, ಊಟ ಸೇವಿಸಬೇಕು. ಕುದಿಸಿ ಆರಿಸಿದ ನೀರು ಸೇವನೆ ಹಾಗೂ ಬಿಸಿ ಆಹಾರ ಪದಾರ್ಥ ಸೇವನೆ ಉತ್ತಮ ಎಂಬುದು ವೈದ್ಯರ ಸಲಹೆಯಾಗಿದೆ.
ಕೈಗೊಳ್ಳಬೇಕಾದ ಕ್ರಮಗಳೇನು?
ಕೈಕಾಲುಗಳನ್ನ ಚೆನ್ನಾಗಿ ತೊಳೆದುಕೊಳ್ಳುವುದು, ವಾತಾವರಣದ ಮಂಜು ಇಳಿದ ನಂತರ ಮನೆಯಿಂದ ಹೊರ ಹೋಗುವುದು, ಬಾಯಿ ಮತ್ತು ಮೂಗಿಗೆ ಮಾಸ್ಕ್ ಧರಿಸುವ ಜತೆಗೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಬೇಕು. ಜತೆಗೆ ಚಳಿಗಾಲದಲ್ಲಿ ದೇಹದ ಶಾಖ ಅಥವಾ ಉಷ್ಣಾಂಶದ ಕೊರತೆ ಉಂಟಾಗಿ ರಕ್ತದ ಪರಿಚಲನೆ ಕುಗ್ಗುವ ಸಾಧ್ಯತೆಯಿರುತ್ತದೆ.
ಇದರಿಂದಾಗಿ ಕೈ ಕಾಲು ಮೂಳೆಗಳಲ್ಲಿನ ರಕ್ತದ ನಾಳಗಳು ಕುಗ್ಗಿ ನೋವು ಶುರುವಾಗುತ್ತದೆ. ಹೀಗಾಗಿ ಹೆಚ್ಚಿನ ವ್ಯಾಯಾಮ, ಯೋಗ ಮತ್ತು ವಾಕಿಂಗ್ ಅಭ್ಯಾಸ ಮಾಡಿಕೊಳ್ಳಬೇಕು. ಇದ ರಿಂದಾಗಿ ದೇಹದಲ್ಲಿ ಶಾಖ ಉತ್ಪತ್ತಿಯಾಗುವುದ ರಿಂದ ಕೈ-ಕಾಲು ನೋವು ಕಾಣಿಸಿಕೊಳ್ಳುವುದಿಲ್ಲ.
ವಾಯು ವಿಹಾರಿಗಳ ಸಂಖ್ಯೆಯಲ್ಲಿ ಇಳಿಮುಖ ಚಳಿಯ ಪರಿಣಾಮ ಉದ್ಯಾನಗಳಿಗೆ ಬರುವ ವಾಯುವಿಹಾರಿಗಳ ಸಂಖ್ಯೆ ಕಡಿಮೆಯಾಗಿದ್ದು, ಬರುವವರೂ ತುಸು ತಡವಾಗಿ ಉದ್ಯಾನಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಸಮಾನ್ಯವಾಗಿ ಬೇರೆ ಸ್ಥಳಗಳಿಗಿಂತಲೂ ಉದ್ಯಾನಗಳಲ್ಲಿ ಕನಿಷ್ಠ ತಾಪಮಾನ 1 ಡಿಗ್ರಿಯಷ್ಟು ಕಡಿಮೆ ಇರುತ್ತದೆ. ಹಾಗಾಗಿ, ಲಾಲ್‌ಬಾಗ್, ಕಬ್ಬನ್ ಉದ್ಯಾನ ಸೇರಿ ನಗರದ ಪ್ರಮುಖ ಉದ್ಯಾನಗಳಿಗೆ ಬರುವ ವಾಯು ವಿಹಾರಿಗಳ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಲಾಲ್‌ಬಾಗ್‌ಗೆ ನಿತ್ಯ ಬೆಳಗ್ಗೆ ವಾಯು ವಿಹಾರಕ್ಕೆ 5ರಿಂದ 6 ಸಾವಿರ ಜನ ಬರುತ್ತಾರೆ. ಆದರೆ ಚಳಿಗಾಲದ ಹಿನ್ನೆಲೆಯಲ್ಲಿ ವಾಯು ವಿಹಾರಿಗಳ ಸಂಖ್ಯೆಯಲ್ಲಿ ಸ್ವಲ್ಪಮಟ್ಟಿಗೆ ಇಳಿಕೆಯಾಗಿದ್ದು, ಹೆಚ್ಚಿನ ಜನರು ಒಂದು ಗಂಟೆ ತಡವಾಗಿ ಬರುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ಮಾಹಿತಿ ನೀಡಿದರು.
ಮಾಂಸಾಹಾರಕ್ಕೆ ಹೆಚ್ಚಿನ ಬೇಡಿಕೆ ಚಳಿ ಹೆಚ್ಚಾಗಿರುವುದರಿಂದ ನಗರದಲ್ಲಿ ಚಿಕನ್ ಹಾಗೂ ಮೊಟ್ಟೆಗಳಿಗೆ ಬೇಡಿಕೆ ಹೆಚ್ಚಾಗಿದೆ. ನಿತ್ಯ ನಗರದಲ್ಲಿ 4.5 ಲಕ್ಷ ಕೆ.ಜಿ ಚಿಕನ್ ಮತ್ತು 40ರಿಂದ 45 ಲಕ್ಷ ಮೊಟ್ಟೆಗಳ ಮಾರಾಟವಾಗುತ್ತದೆ. ಆದರೆ, ಚಳಿಗಾಲದ ಹಿನ್ನೆಲೆಯಲ್ಲಿ ಸದ್ಯ 6 ಲಕ್ಷ ಕೆ.ಜಿ ಚಿಕನ್ ಮತ್ತು 55ರಿಂದ 60 ಲಕ್ಷ ಮೊಟ್ಟೆಗಳು ಮಾರಾಟವಾಗುತ್ತಿವೆ. ಜತೆಗೆ, ತರಕಾರಿ ಹಾಗೂ ಹಣ್ಣು ವ್ಯಾಪಾರಕ್ಕೆ ಹಿನ್ನಡೆಯಾಗಿದೆ ಎನ್ನಲಾಗಿದೆ.
ಹಿಂದಿನ ವರ್ಷಕ್ಕಿಂತ ಚಳಿ ಕಡಿಮೆ
ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ನಗರದಲ್ಲಿ ಚಳಿ ಪ್ರಮಾಣ ತುಸು ಕಡಿಮೆಯಿದೆ. ಪ್ರಸಕ್ತ ಸಾಲಿನಲ್ಲಿ ನಗರದ ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಹೋಗಿಲ್ಲ. ಆದರೆ, ಶುಭ್ರ ವಾತಾವರಣ ಇರುವುದರಿಂದ ಕೊರೆಯುವ ಚಳಿಯ ಅನುಭವ ಆಗುತ್ತಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಹಿಂದೆ 10ರಿಂದ 12 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿರುವ ಉದಾಹರಣೆಗಳಿದ್ದು, ಜಾಗತಿಕ ತಾಪಮಾನದಲ್ಲಿ ಏರಿಕೆ ಹಾಗೂ ಸ್ಥಳೀಯ ಮಟ್ಟದಲ್ಲಿ ಹೆಚ್ಚಾದ ವಾಹನಗಳು ಮತ್ತು ಕಾರ್ಖಾನೆಗಳು ಹೊರಬಿಡುವ ಇಂಗಾಲ ಮತ್ತು ಉಂಟುಮಾಡುವ ಮಾಲಿನ್ಯದಿಂದ ಚಳಿ ಕಡಿಮೆಯಾಗಿ¨
ವೆಂ.ಸುನೀಲ್‌ಕುಮಾರ್/ ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.