ಕೊಳಗೇರಿಯಲ್ಲಿ ಬಿಎಸ್‌ವೈ ಸಂಚಾರ
Team Udayavani, Feb 12, 2018, 6:00 AM IST
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪಾಲಿಗೆ ಭಾನುವಾರ ಪ್ರತಿನಿತ್ಯದಂತೆ ಇರಲಿಲ್ಲ. ಸಿಲಿಕಾನ್ ಸಿಟಿಯ ಗಾಂಧಿನಗರದ ಲಕ್ಷ್ಮಣಪುರಿ ಕೊಳಗೇರಿಯಲ್ಲಿ ಶನಿವಾರ ರಾತ್ರಿ ವಾಸ್ತವ್ಯ ಹೂಡಿದ್ದ ಅವರು ಬೆಳಗ್ಗೆ ಏಳುತ್ತಿದ್ದಂತೆ ಅವರಿಗೆ ಕೊಳಗೇರಿ ನಿವಾಸಿಗಳ ಸಂಕಷ್ಟದ ಅರಿವಾಯಿತು.
ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಅಂದಿನ ಪತ್ರಿಕೆಗಳ ಬಗ್ಗೆ ಕಣ್ಣಾಡಿಸುತ್ತಿದ್ದ ಯಡಿಯೂರಪ್ಪ ಅವರು ಎಂದಿನಂತೆ ಬೆಳಗ್ಗೆ 5.30ಕ್ಕೆ ಎದ್ದ ತಕ್ಷಣ ಅವರ ಮುಂದೆ ಪತ್ರಿಕೆಗಳು ಇರಲಿಲ್ಲ. ಬದಲಾಗಿ ಕೊಳಗೇರಿ ನಿವಾಸಿಗಳು ಅವರು ನಿದ್ದೆಯಿಂದ ಏಳುವುದಕ್ಕಾಗಿ ಕಾಯುತ್ತಿದ್ದರು.
ಹೀಗಾಗಿ ಬೆಳಗ್ಗೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ, ಸ್ನಾನ ಮಾಡಿ ತಾವು ವಾಸ್ತವ್ಯ ಇದ್ದ ಕೊಳಗೇರಿ ನಿವಾಸಿ, ಆಟೋ ಚಾಲಕ ಮುನಿರತ್ನಂ ಮನೆಯಲ್ಲೇ ದೇವರಿಗೆ ಕೈಮುಗಿದರು. 7 ಗಂಟೆ ಸುಮಾರಿಗೆ ಮನೆಯಿಂದ ಹೊರಟು ಲಕ್ಷ್ಮಣಪುರಿ ಕೊಳಗೇರಿ ವ್ಯಾಪ್ತಿಯಲ್ಲಿ ಮುಖಂಡರು, ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮಾಡಿದರು. ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ವಿಳಂಬ, ಕುಡಿಯುವ ನೀರು, ವಸತಿ, ಶೌಚಾಲಯ, ಚರಂಡಿ ವ್ಯವಸ್ಥೆ ಸರಿ ಇಲ್ಲದಿರುವುದು, ರಸ್ತೆಗಳ ದುಸ್ಥಿತಿ ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಹತ್ತಿರದಿಂದ ಪರಿಶೀಲಿಸಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ನಿಮ್ಮೆಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸಿದ್ದರಾಮಯ್ಯ ವಿರುದ್ಧ ಕೆಂಡಾಮಂಡಲ:
8.15ರ ವೇಳೆಗೆ ಮತ್ತೆ ಮುನಿರತ್ನಂ ನಿವಾಸಕ್ಕೆ ಬಂದು ಬೆಳಗ್ಗಿನ ತಿಂಡಿ ಸೇವಿಸಿದ ಬಳಿಕ ಕೊಳಗೆರಿ ನಿವಾಸಿಗಳೊಂದಿಗೆ ಸಂವಾದ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಯೋಗ್ಯತೆಗೆ ಯಾವತ್ತಾದರೂ ಕೊಳಗೇರಿಗೆ ಹೋಗಿ ವಾಸ್ತವ್ಯ ಮಾಡಿದ್ದಾರೆಯೇ? ತಿಂಡಿ ತಿಂದಿದ್ದಾರೆಯೇ ಎಂದು ಪ್ರಶ್ನಿಸಿದರು.
ತಮ್ಮ ಕೊಳಗೇರಿ ವಾಸ್ತವ್ಯವನ್ನು ಟೀಕಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ ಅವರು, ಕೊಳಗೇರಿ ಜನರ ಸಮಸ್ಯೆಯನ್ನು ಹತ್ತಿರದಿಂದ ನೋಡುವ ಉದ್ದೇಶದಿಂದ ವಾಸ್ತವ್ಯ ಹೂಡಿದ್ದೇವೆ. ಈಗ ಪಕ್ಷದ ಪ್ರಮುಖರು ಮಾತ್ರ ವಾಸ್ತವ್ಯ ಮಾಡಿದ್ದಾರೆ. ಬಿಜೆಪಿಗರು ಯಾವಾಗ ಏನು ಮಾಡಬೇಕೆಂಬುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅಪ್ಪಣೆ ಪಡೆಯಬೇಕಾಗಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಹೇಳುತ್ತಾರೋ, ಬಿಡುತ್ತಾರೋ? ಗೊತ್ತಿಲ್ಲ. ಆದರೆ, ಅವರ ಸರ್ಕಾರದಿಂದ ಒಳ್ಳೆಯದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ರಾಜ್ಯದ ಜನತೆ ಬೇಸತ್ತು ಹೋಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಕೊಳಗೇರಿ ವಾಸ್ತವ್ಯಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನೀಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ದಿನೇಶ್ ಗುಂಡೂರಾವ್ ಉಪಯೋಗವಿಲ್ಲದ ವ್ಯಕ್ತಿ ಎಂದು ಅವರನ್ನು ಮಂತ್ರಿ ಸ್ಥಾನದಿಂದ ಕಿತ್ತುಹಾಕಿದ್ದು, ಅಂಥವರ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ ಎಂದರು.
ಯಡಿಯೂರಪ್ಪ ಅವರು ಈ ಹಿಂದೆ ಕೊಳಗೇರಿಯ ಹುಡುಗನೊಬ್ಬನನ್ನು ದತ್ತು ತೆಗೆದುಕೊಂಡಿರುವ ಬಗ್ಗೆ ಗೃಹಸಚಿವ ರಾಮಲಿಂಗಾರೆಡ್ಡಿ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ದತ್ತು ತೆಗೆದುಕೊಂಡ ಹುಡುಗನನ್ನು ಮೈಸೂರಿನಲ್ಲಿ ಶಿಕ್ಷಣಕ್ಕೆ ಸೇರಿಸಿದ್ದೆ. ಅವನಿಗೆ ಕಲಿಯಲು ಇಷ್ಟ ಇಲ್ಲ, ಅಲ್ಲಿ ಹೊಂದಾಣಿಕೆ ಆಗುತ್ತಿಲ್ಲ ಎಂದು ವಾಪಸ್ ಹೋಗಿದ್ದಾನೆ. ಇದಕ್ಕೆ ನಾನು ಜವಾಬ್ದಾರನಲ್ಲ. ಗೃಹಮಂತ್ರಿಯಾಗಿದ್ದವರು ಇಷ್ಟೊಂದು ಹಗುರವಾಗಿ ಮಾತನಾಡುತ್ತಾರೆ ಎಂಬುದನ್ನು ನಾನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು.
ಇದಾದ ಬಳಿಕ ಬೆಳಗ್ಗೆ 9 ಗಂಟೆಗೆ ಕೊಳಗೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಲಂ ದುರ್ಭಾಗ್ಯ ಎಂಬ ಕೊಳಗೇರಿಗಳ ಪರಿಸ್ಥಿತಿ ಕುರಿತು ಬಿಜೆಪಿ ಸ್ಲಂ ಮೋರ್ಚಾ ಮಾಡಿದ್ದ ಅಧ್ಯಯನ ವರದಿ ಬಿಡುಗಡೆ ಮಾಡಿ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಸಂಸದ ಪಿ.ಸಿ.ಮೋಹನ್, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೊಕ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಬಿಜೆಪಿ ಮುಖಂಡ ನೆ.ಲ.ನರೇಂದ್ರಬಾಬು ಮೊದಲಾದವರು ಇದ್ದರು.
ಉಪಚಾರ ಸ್ಮರಿಸಿದ ಬಿಎಸ್‌ವೈ:
ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆಯ ತನಕ ಕೊಳಗೇರಿ ನಿವಾಸಿ ಮುನಿರತ್ನಂ ಕುಟುಂಬ ಸೇರಿದಂತೆ ಲಕ್ಷ್ಮಣಪುರಿ ಕೊಳಗೇರಿ ನಿವಾಸಿಗಳ ಸಂಕಷ್ಟವನ್ನು ಹತ್ತಿರದಿಂದ ಕಂಡ ಬಿ.ಎಸ್.ಯಡಿಯೂರಪ್ಪ ಅವರು, ರಾತ್ರಿ ಊಟ, ಬೆಳಗ್ಗೆ ಇಡ್ಲಿ, ವಡೆ ಜತೆಗೆ ಚಟ್ನಿ-ಸಾಂಬರ್, ಉಪ್ಪಿಟ್ಟು ಸೇವನೆಯನ್ನು ಮುನಿರತ್ನಂ ಅವರ ಮನೆಯಲ್ಲೇ ಮಾಡಿದರು. ನಂತರ ತಮ್ಮ ಮನೆಯವನಂತೆ ತಮ್ಮನ್ನು ಉಪಚರಿಸಿದ್ದಕ್ಕೆ ಮುನ್ನಿರತಂ ಕುಟುಂಬಕ್ಕೆ ಧನ್ಯವಾದ ಹೇಳಿದರು.
ಸ್ಲಂ ದುರ್ಭಾಗ್ಯ: ವರದಿ ಬಿಡುಗಡೆ
ಬೆಂಗಳೂರು: ರಾಜ್ಯದ ಕೊಳಗೇರಿ ನಿವಾಸಿಗಳ ಸ್ಥಿತಿಗತಿ, ಅವರ ಜೀವನ ಶೈಲಿ ಮುಂತಾದ ವಿಚಾರಗಳ ಬಗ್ಗೆ ಬಿಜೆಪಿ ಸ್ಲಂ ಮೋರ್ಚಾ ಅಧ್ಯಯನ ನಡೆಸಿ “ಸ್ಲಂ ದುರ್ಭಾಗ್ಯ’ ಎಂಬ ವರದಿ ಸಿದ್ಧಪಡಿಸಿದ್ದು, ವರದಿಯಲ್ಲಿ ಅಲ್ಲಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಾಗಿದೆ.
ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯದ ವಿವಿಧೆಡೆ ಶನಿವಾರ ರಾತ್ರಿ ಕೊಳಗೇರಿ ವಾಸ್ತವ್ಯ ಮಾಡಿದ್ದ ಪಕ್ಷದ ಮುಖಂಡರು ಭಾನುವಾರ ಬೆಳಗ್ಗೆ ಈ ಕುರಿತ ವರದಿ ಬಿಡುಗಡೆ ಮಾಡಿದ್ದಾರೆ.
2016-17ರಲ್ಲಿ ಬಿಜೆಪಿ ಸ್ಲಂ ಮೋರ್ಚಾ ಕಾರ್ಯಕರ್ತರು 30 ದಿನಗಳ ಕಾಲ ರಾಜ್ಯದ 2804 ಕೊಳಗೇರಿಗಳ ಪೈಕಿ 976 ಕೊಳಗೇರಿಗಳಲ್ಲಿ ಅಧ್ಯಯನ ನಡೆಸಿದ್ದು, ಅದರಂತೆ ರಾಜ್ಯದ ಜನಸಂಖ್ಯೆಯ 100ರಲ್ಲಿ 5 ಜನ ಕೊಳೆಗೇರಿಯಲ್ಲಿ ವಾಸ ಮಾಡುತ್ತಿದ್ದರೆ, ಬೆಂಗಳೂರಿನಲ್ಲಿ 100ರಲ್ಲಿ 14 ಜನ ಕೊಳಗೇರಿಗಳಲ್ಲಿದ್ದಾರೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಒಟ್ಟು 2804 ಕೊಳಗೇರಿಗಳಿದ್ದು, 40.50 ಲಕ್ಷ$ಮಂದಿ ವಾಸಿಸುತ್ತಿದ್ದಾರೆ. ಈ ಪೈಕಿ ಸಮೀಕ್ಷೆ ನಡೆಸಿದ 976 ಕೊಳಗೇರಿಗಳಲ್ಲಿ 4.07 ಲಕ್ಷ ಕುಟುಂಬಗಳ 16.71 ಲಕ್ಷ$ಜನರ ಕುರಿತು ಸಮೀಕ್ಷೆ ನಡೆಸಲಾಗಿದೆ. ನೀರಿನ ವ್ಯವಸ್ಥೆ, ಶೌಚಾಲಯ, ರಸ್ತೆ, ಶಾಲೆ, ಆಸ್ಪತ್ರೆ ಇಲ್ಲದೇ ಇರುವುದು, ಮನೆಗಳ ಮುಂದೆ ಕೊಳೆತು ನಾರುವ ಚರಂಡಿ, ಒಂದು ಚದರಡಿ ವಿಸ್ತೀರ್ಣದ ಮನೆಯಲ್ಲಿ 10ಜನರ ವಾಸ, ಹಸಿವಿನಿಂದ ರೋಗಗ್ರಸ್ತರಾಗಿರುವ ಹಿರಿಯ ನಾಗರಿಕರು ಇಲ್ಲಿ ಕಂಡುಬಂದಿರುವ ಪ್ರಮುಖ ಸಮಸ್ಯೆಗಳು ಎಂದು ವರದಿಯಲ್ಲಿ ಹೇಳಲಾಗಿದೆ. ಅಲ್ಲದೆ, ಸ್ವತ್ಛ ಭಾರತ ಅಭಿಯಾನದಿಂದಾಗಿ ದೇಶದ ಎಲ್ಲಾ ಕಡೆ ಕೊಳಗೇರಿಗಳು ಸುಧಾರಣೆ ಕಂಡಿದ್ದರೂ ಕರ್ನಾಟಕದಲ್ಲಿ ಈ ಯೋಜನೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ರಾಜ್ಯದ ಒಟ್ಟು ಕೊಳಗೇರಿಗಳ ಪೈಕಿ ಶೇ. 20ರಷ್ಟು ಬೆಂಗಳೂರಿನಲ್ಲಿವೆ. ಮೈಸೂರು ಮತ್ತು ಬಳ್ಳಾರಿಯಲ್ಲೂ ಅತಿ ಹೆಚ್ಚು ಕೊಳಗೇರಿಗಳಿವೆ.
100ಕ್ಕಿಂತ ಕಡಿಮೆ ಜನರು ವಾಸವಿರುವ 73. 10,000ಕ್ಕಿಂತ ಹೆಚ್ಚು ಮಂದಿ ಇರುವ 16 ಕೊಳಗೇರಿಗಳಿದ್ದು, ಬೆಂಗಳೂರಿನ ದೇವರ ಜೀವನಹಳ್ಳಿ ಕೊಳಗೇರಿಯಲ್ಲಿ 50,000 ಜನ ವಾಸಿಸುತ್ತಿದ್ದಾರೆ ಎಂದೂ ಹೇಳಲಾಗಿದೆ.
ವರದಿಯ ಮುಖ್ಯಾಂಶಗಳು
ವಾಸಿಸುವ ಮನೆಗಳು
ಆರ್‌ಸಿಸಿ- ಶೇ. 14.7, ಹೆಂಚಿನ ಮನೆ- ಶೇ. 19.1, ಗುಡಿಸಲು- ಶೇ. 12.6, ಆರ್‌ಸಿಸಿ/ಹೆಂಚಿನಮನೆ- ಶೇ. 11.5, ಆರ್‌ಸಿಸಿ/ಗುಡಿಸಲು- ಶೇ. 1.1 ಹೆಂಚಿನಮನೆ/ಗುಡಿಸಲು- ಶೇ. 5.8, ಮಾಹಿತಿ ಇಲ್ಲ- ಶೇ. 23.2, ಎತರೆ ಎಲ್ಲಾ- ಶೇ. 12.1.
ಸಾಮಾಜಿಕ ಸ್ಥಿತಿಗತಿ
ಶೇ. 41ರಷ್ಟು ಜನರಿಗೆ ಸಮುದಾಯದ ಮಾಹಿತಿ ಇಲ್ಲ. ಶೇ. 20.5ರಷ್ಟು ಪರಿಶಿಷ್ಟ ಜಾತಿ, ಶೇ. 5.2ರಷ್ಟು ಪರಿಶಿಷ್ಟ ಪಂಗಡ, ಶೇ. 7.6 ಇತರೆ ಹಿಂದುಳಿದ ವರ್ಗದವರಿದ್ದಾರೆ.
ಸೌಲಭ್ಯ ಕೊರತೆ
ಶೇ. 40.26ರಲ್ಲಿ ಅಂಗನವಾಡಿ ಇಲ್ಲ. ಶೇ. 84.84ರಲ್ಲಿ ಪ್ರೌಢಶಾಲೆ ಇಲ್ಲ, ಶೇ. 62.50ರಲ್ಲಿ ಪ್ರಾಥಮಿಕ ಶಾಲೆಗಳಿಲ್ಲ.
ಶೇ. 96.96ರರಲ್ಲಿ ಚರಂಡಿ ಸೌಲಭ್ಯವಿಲ್ಲ. ಶೇ. 88.70ರಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ. ಶೇ. 28ರಲ್ಲಿ ಬಯಲು ಬಹಿರ್ದೆಸೆಗೂ ಜಾಗವಿಲ್ಲ.
ಶೇ. 61.07ರಲ್ಲಿ ನೀರಿನ ಸೌಲಭ್ಯವಿಲ್ಲ, ಶೇ. 82.17ರಷ್ಟು ಸ್ಲಂಗಳಲ್ಲಿ ಆರೋಗ್ಯ ತಪಾಸಣಾ ಕೇಂದ್ರಗಳಿಲ್ಲ, ಶೇ, 28.68 ಸ್ಲಂಗಳಲ್ಲಿ ಬೀದಿದೀಪ ಇಲ್ಲ,ಶೇ. 11.27ರಷ್ಟು ಜನರಿಗೆ ಮತದಾರ ಗುರುತಿನ ಇಲ್ಲ, ಶೇ. 11.47ರಷ್ಟು ಜನರಿಗೆ ಆಧಾರ್ ಕಾರ್ಡ್ ಇಲ್ಲ.
ಉದ್ಯೋಗಾವಕಾಶ
ಶೇ 19.46 ರಷ್ಟು ಮಾಹಿತಿ ನೀಡಿಲ್ಲ. ಶೇ 0.92ರಷ್ಟು ಜನರಿಗೆ ಸರ್ಕಾರಿ ನೌಕರಿ, ಶೇ 8.40ರಷ್ಟು ಖಾಸಗಿ, ಶೇ 48.66ರಷ್ಟು ದಿನಗೂಲಿ, ಶೇ 0.30ರಷ್ಟು ಸರ್ಕಾರಿ/ ಖಾಸಗಿ, ಶೇ 2.15ರಷ್ಟು ಸರ್ಕಾರಿ ದಿನಗೂಲಿ, ಶೇ 11.98 ಖಾಸಗಿ ದಿನಗೂಲಿ, ಶೇ 8.09 ರಷ್ಟು ಇತರೆ ಕೆಲಸ.
ಸ್ಲಂ ಮಾಲೀಕತ್ವ
ಶೇ.11.8ರಷ್ಟು ಮಾಹಿತಿ ಇಲ್ಲ, ಶೇ. 17.5ರಷ್ಟು ಖಾಸಗಿ, ಶೇ. 59.7 ಸರ್ಕಾರಿ, ಶೇ 4.2 ಕೇಂದ್ರ ಸರ್ಕಾರ, ಶೇ 5.3 ಖಾಸಗಿ/ರಾಜ್ಯ, ಶೇ 0.2 ಖಾಸಗಿ/ಕೇಂದ್ರ, ಶೇ 1.0 ರಾಜ್ಯ/ಕೇಂದ್ರ, ಇತರೆ ಎಲ್ಲ ಶೇ 0.2.
ರಾಜ್ಯದ ಕೊಳಗೇರಿಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿರುವ ಬಿಜೆಪಿ, ಅಲ್ಲಿನ ಸಮಸ್ಯೆಗಳ ಕುರಿತಾದ ವಿಸ್ತೃತ ವರದಿ ಸಿದ್ಧಪಡಿಸಿದೆ. ಶೇ.76ರಷ್ಟು ಎಸ್‌ಸಿ, ಎಸ್‌ಟಿಯವರೇ ಇಲ್ಲಿ ವಾಸವಾಗಿದ್ದಾರೆ. 30 ಲಕ್ಷಕ್ಕೂ ಅಧಿಕ ಜನರು ಸ್ಲಂನಲ್ಲಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸ್ಲಂ ನಿವಾಸಿಗಳ ಏಳ್ಗೆಗೆ ಶ್ರಮಿಸಲಿದೆ.
– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
CT Ravi case:ಬೆಳಗಾವಿ ಕೋರ್ಟ್ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.