ಆಯೋಜಕರ ನಿರ್ಲಕ್ಷ್ಯದಿಂದ ಮಹಿಳೆಗೆ ಗಾಯ
Team Udayavani, Feb 4, 2018, 12:16 PM IST
ಬೆಂಗಳೂರು: ಸಾಹಸ ಶಿಬಿರದಲ್ಲಿ ಆಯೋಜಕರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರು ಬೆನ್ನು ಮೂಳೆ ಮುರಿದುಕೊಂಡಿದ್ದು, “ಅಡ್ವೆಂಚರ್ ಕ್ಯಾಂಪ್’ ಎಂದರೆ ಬೆಚ್ಚಿ ಬೀಳುವಂತಾಗಿದೆ. ಸಾಹಸ ಶಿಬಿರದಲ್ಲಿ ಆಯೋಜಕರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣ,
ಸುಮಾರು 10 ಅಡಿಗೂ ಹೆಚ್ಚು ಎತ್ತರದ ಬಂಡೆಯಿಂದ ಬಿದ್ದ 26 ವರ್ಷದ ಮಹಿಳೆಯ ಬೆನ್ನು ಮೂಳೆ ಮುರಿದಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಶಸ್ತ್ರಚಿಕಿತ್ಸೆ ಕೈಡ ನಡೆಸಲಾಗಿದೆ. ಈ ಸಂಬಂಧ ಬೇಜವಾಬ್ದಾರಿ ತೋರಿದ ಅಡ್ವೆಂಚರ್ ಕಾಂಪ್ ಆಯೋಜಕರ ವಿರುದ್ಧ ಗಾಯಾಳು ಮಹಿಳೆಯ ಪತಿ ನೀಡಿದ ದೂರಿನನ್ವಯ ಕನಕಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕನಕಪುರ ರಸ್ತೆಯ ಹನುಮನಹಳ್ಳಿಯಲ್ಲಿರುವ ಲೈಫ್ ಟ್ರೀ ಕ್ಯಾಂಪ್‌ನಲ್ಲಿ ಜ.28ರಂದು ಡ್ವೆಂಚರ್ ಕ್ಯಾಂಪ್ ಆಯೋಜಿಸಲಾಗಿತ್ತು. ನಗರದ ದಿವ್ಯಾಂಶ್ ಗುಪ್ತಾ ಎಂಬುವವರು ಪತ್ನಿ ಸೌಜನ್ಯ ಜೈನ್ ಗುಪ್ತಾ ಅವರೊಂದಿಗೆ ಕ್ಯಾಂಪ್‌ಗೆ ತೆರಳಿದ್ದರು. ಸಾಹಸ ಶಿಬಿರ ಆರಂಭವಾದ ನಂತರ ಸೌಜನ್ಯ ಅವರು ಬೆಳಗ್ಗೆ 11.45ರ ಹೊತ್ತಿಗೆ ರಾಕ್ ಕ್ಲೈಂಬಿಂಗ್ ಆರಂಭಿಸಿದ್ದಾರೆ. ಅವರು ಬಂಡೆಯನ್ನು ಸುಮಾರು ಹತ್ತು ಅಡಿ ಎತ್ತರ ಹತ್ತಿದ್ದಾಗ ಅಕಸ್ಮಾತಾಗಿ ಕೈ ಜಾರಿದೆ.
ಈ ವೇಳೆ ಸೌಜನ್ಯ ಅವರು ಸುಮಾರು ಹೊತ್ತು ಹಗ್ಗದ ಆಸರೆಯಲ್ಲೇ ನೇತಾಡಿದ್ದಾರೆ. ಆದರೆ ಅವರು ಹಗ್ಗದಲ್ಲಿ ನೇತಾಡುತ್ತಾ ಹತ್ತಾರು ನಿಮಿಷ ಕಳೆದರೂ ಕ್ಯಾಂಪ್‌ನ ಸಿಬ್ಬಂದಿ ರಕ್ಷಣೆಗೆ ಬಂದಿಲ್ಲ. ಪರಿಣಾಮ ಹಗ್ಗ ತುಂಡಾಗಿ ಸೌಜನ್ಯ ಸುಮಾರು ಹತ್ತು ಅಡಿ ಎತ್ತರದಿಂದ ನೆಲಕ್ಕೆ ಬಿದ್ದಿದ್ದಾರೆ.
ನೆಲಕ್ಕೆ ಬಿದ್ದ ರಭಸಕ್ಕೆ ಸೌಜನ್ಯ ಅವರ ಬೆನ್ನು ಮೂಳೆಗೆ ಪೆಟ್ಟಾಗಿದೆ. ಆದರೆ, ಕ್ಯಾಂಪ್ ಆಯೋಜಕರು ಸ್ಥಳದಲ್ಲಿ ಪ್ರಥಮ ಚಿಕಿತ್ಸೆಯ ವ್ಯವಸ್ಥೆಯನ್ನೂ ಮಾಡದ ಕಾರಣ ಸುಮಾರು ಹೊತ್ತು ನೋವಿನಿಂದ ಪರದಾಡಿದ್ದಾರೆ. ಘಟನೆ ನಡೆದ ತಕ್ಷಣ ಕ್ಯಾಂಪ್ ಮ್ಯಾನೇಜರ್‌ಗೆ ಕರೆ ಮಾಡಿದ್ದು, ಅರ್ಧ ಗಂಟೆ ನಂತರ ಆತ ಸ್ಥಳಕ್ಕೆ ಬಂದಿದ್ದಾರೆ. ತರುವಾರ ಸ್ಥಳಕ್ಕೆ ಆ್ಯಂಬುಲೆನ್ಸ್ ಕರೆಸಿಕೊಂಡು ಸೌಜನ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಈ ಸಂಬಂಧ ಗಾಯಾಳು ಸೌಜನ್ಯ ಅವರ ಪತಿ ವದಿವ್ಯಾಂಶ್ ಅವರು ನೀಡಿದ ದೂರಿನ ಮೇರೆಗೆ ಕನಕಪುರ ಠಾಣೆ ಪೊಲೀಸರು, ಸುರಕ್ಷಿತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲರಾದ ಶಿಬಿರದ ವ್ಯವಸ್ಥಾಪಕ ಬಾಬು ಹಾಗೂ ಮತ್ತಿತರರ ವಿರುದ್ಧ ಐಪಿಸಿ ಕಲಂ 337ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಆಕ್ರೋಶ: ಘಟನೆ ನಡೆದ ನಂತರ ಅಡ್ವೆಂಚರ್ ಕ್ಯಾಂಪ್ ಆಯೋಜಕರ ಬೇಜವಾಬ್ದಾರಿತನದ ಬಗ್ಗೆ ಕೆಂಡಾಮಂಡಲರಾಗಿರುವ ಸೌಜನ್ಯ ಅವರ ಪತಿ ದಿವ್ಯಾಂಶ್, ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆಯುವ ಮೂಲಕ, ಕ್ಯಾಂಪ್ ಆಯೋಜಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಾವು ಸಾವಿರಾರು ರೂಪಾಯಿ ನೀಡಿ ಕ್ಯಾಂಪ್‌ಗೆ ಹೋಗುತ್ತೇವೆ.
ಆದರೆ, ಕ್ಯಾಂಪ್ ವೇಳೆ ನಮಗೆ ಏನಾದರೂ ಅಪಾಯವಾದರೆ ಯಾರು ಹೊಣೆ? ಆಯೋಜಕರು ಕನಿಷ್ಠ ಪಕ್ಷ ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಆ್ಯಂಬುಲೆನ್ಸ್, ರಕ್ಷಾ ಕವಚ ಸೇರಿದಂತೆ ಇನ್ನಿತರೆ ಮೂಲ ಸುರಕ್ಷತಾ ಕ್ರಮಗಳನ್ನಾದರೂ ಕೈಗೊಳ್ಳಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಫೇಸ್‌ಬುಕ್‌ನಲ್ಲಿ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಜತೆಗೆ ಕ್ಯಾಂಪ್ ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಡ್ವೆಂಚರ್ ಕ್ಯಾಂಪ್‌ಗ್ಳಲ್ಲಿ ಪಾಲ್ಗೊಳ್ಳುವುದು ನಮ್ಮ ಹವ್ಯಾಸ. ಸಾವಿರಾರು ರೂ. ಶುಲ್ಕ ನೀಡಿ ಹೋಗಿದ್ದ ಕ್ಯಾಂಪ್ ನಮಗೆ ಮುಳುವಾಗುತ್ತದೆ ಅಂದುಕೊಂಡಿರಲಿಲ್ಲ. ಲೈಫ್ ಟ್ರೀ ಕ್ಯಾಂಪ್‌ನ ನಿರ್ಲಕ್ಷ್ಯದಿಂದ ನನ್ನ ಪತ್ನಿಯ ಬೆನ್ನು ಮೂಳೆಗೆ ಪೆಟ್ಟಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ. ನಾನು ಆಕೆಯ ಆರೈಕೆಯಲ್ಲಿದ್ದೇನೆ. ಸೌಜನ್ಯ ಪೂರ್ಣ ಗುಣಮುಖವಾಗಲು ಕನಿಷ್ಠ ಆರು ತಿಂಗಳು ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ನನ್ನ ಪತ್ನಿಗೆ ಆದ ಹಾಗೆ ಬೇರೆ ಯಾರಿಗೂ ಆಗಬಾರದು. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆ.
-ದಿವ್ಯಾಂಶ್ ಗುಪ್ತಾ, ಗಾಯಾಳುವಿನ ಪತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.