60 ಪೂರೈಸಿದ ಚುಟುಕು ಕವಿ ಡುಂಡಿರಾಜ್‌ಗೆ ಅಕ್ಷರಾಭಿನಂದನೆ
Team Udayavani, May 8, 2017, 12:12 PM IST
ಬೆಂಗಳೂರು: ಚುಟುಕು ಕವಿ ಡುಂಡಿರಾಜ್ ಅವರಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಾನುವಾರ ಅಭಿಮಾನಿಗಳು ಅಕ್ಷರ ಹಾಗೂ ಗೀತ ನಮನ ಮೂಲಕ ಹೃದಯಸ್ಪರ್ಶಿ ಅಭಿನಂದನೆ ಸಲ್ಲಿಸಿದರು.
“ಉಪಾಸನಾ ಟ್ರಸ್ಟ್’ ಮತ್ತು “ಎಚ್. ಡುಂಡಿ ರಾಜ್ ಅಭಿನಂದನಾ ಸಮಿತಿ’ಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಡುಂಡಿ-60 ಅಭಿನಂದನೆ’ ಪುಸ್ತಕ ಬಿಡುಗಡೆ ಮಾಡಲಾಯಿತು. ಡುಂಡಿರಾಜ್ ಸೇರಿದಂತೆ ಗಣ್ಯರು ವೇದಿಕೆಯ ಮೇಲೇರುತ್ತಿದ್ದಂತೆ ಡುಂಡಿರಾಜ್ ಅವರ ಮೊಮ್ಮಗಳು ಅಜ್ಜ ಎಂದು ಕರೆಯುವ ಮೂಲಕ 60 ಸಂಭ್ರಮಕ್ಕೆ ಚಾಲನೆ ದೊರೆತಿದ್ದು ವಿಶೇಷ.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡುಂಡಿರಾಜ್, ಬ್ಯಾಂಕ್ ಉದ್ಯೋಗಿಯಾಗಿದ್ದಾಗ ಭಾಗವಹಿಸುತ್ತಿದ್ದ ಕಾರ್ಯಕ್ರಮಗಳಲ್ಲಿ, ಬಹುತೇಕರು ನೀವು ನಿವೃತ್ತಿ ಹೊಂದಿಲ್ಲವೇ ಎಂದು ಕೇಳುತ್ತಿದ್ದದ್ದು, ಯುವತಿಯೊಬ್ಬಳು ನಿವೃತ್ತಿಗೆ ಐದು ವರ್ಷ ಇರುವಾಗ ಈ ರೀತಿ ಕೇಳಿದ್ದು, ಅದಕ್ಕೆ ತಾವು ಇನ್ನೂ ಐದು ವರ್ಷ ಇದೆ ಎಂದು ಹೇಳಿದ್ದು, ಆಗ ಯುವತಿ, ಐವತ್ತೈದಕ್ಕೆ ನಿವೃತ್ತಿ ಇರಬಹುದು ಎಂದು ಅಂದುಕೊಂಡ ಪ್ರಸಂಗವನ್ನೂ ಕಾವ್ಯಾತ್ಮಕವಾಗಿ ವಿವರಿಸಿದರು.
“ಅರವತ್ತು ವರ್ಷ ಕಳೆದಿರುವ ನಾನು, ದೊಡ್ಡ ಸಾಧನೆ ಮಾಡಿದ್ದೇನೆ ಎಂದು ಬೀಗುವುದಿಲ್ಲ ,’ ಎಂದ ಅವರು, ಅಭಿನಂದನಾ ಸಮಾ ರಂಭಕ್ಕಾಗಿಯೇ ಸಿದ್ಧಪಡಿಸಿದ ಕವನ ವಾಚಿಸಿ, “ಬರೆದ ಕವನಗಳೆಲ್ಲ ಉತ್ತಮ ಎನ್ನುವ ಹೆಮ್ಮೆ, ಜನರಿಗೆ ಕೆಲವಾದರೂ ಇಷ್ಟವಾದರೆ ಅದು ಕನ್ನಡ ಭಾಷೆಯ ಮಹಿಮೆ,’ ಎಂದು ಹೇಳಿದರು.
ಅಭಿನಂದನಾ ಭಾಷಣ ಮಾಡಿದ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, “ಸಮಾಜದಲ್ಲಿ ಕೆಲವು ಶಕ್ತಿಗಳು ಕಣ್ಮರೆಯಾಗುತ್ತಿದೆ. ಪ್ರೀತಿಸುವ ಶಕ್ತಿಯನ್ನು ಮರೆಯುತ್ತಿದ್ದೇವೆ. ದ್ವೇಷ, ಅಸೂಯೆ, ಅಸಹನೆ, ಸಿಟ್ಟು, ಹಿಂಸೆ ಹೆಚ್ಚಾಗುತಿದ್ದು, ಇಡೀ ಸಮಾಜವೇ ಪ್ರೀತಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಹಾಗೆಯೇ ನಗುವಿನ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಕೊಂಕು, ವಿಕಟ ಹಾಗೂ ಅಟ್ಟಹಾಸದ ನಗು ಮಾತ್ರ ಉಳಿದುಕೊಂಡಿದೆ. ಅಪನಂಬಿಕೆ ಹೆಚ್ಚಾಗುತ್ತಿದ್ದು, ಮುಕ್ತ ವಾತಾವರಣ ಮಾಯವಾಗುತ್ತಿದೆ,’ ಎಂದು ತಿಳಿಸಿದರು.
“ಸಾಮಾಜಿಕ ಅನಾರೋಗ್ಯಕ್ಕೆ ಡುಂಡಿರಾಜ್ ಅವರು ಹನಿಗವನದ ಮೂಲಕ ಮದ್ದು ನೀಡುತ್ತಿದ್ದಾರೆ. ಕವಿಗಳು ನಗುವಿನ ಶಕ್ತಿ ತುಂಬುವ ಮೂಲಕ ಆರೋಗ್ಯಕರ ಸಮಾಜದ ನಿರ್ಮಾಣದ ಪ್ರಯತ್ನ ಮಾಡುತ್ತಿದ್ದಾರೆ,’ ಎಂದು ವಿಶ್ಲೇಷಿಸಿದರು. ಡುಂಡಿರಾಜ್ ಅವರ “ಇಡಿಕಿಡಿ ಕವನಗಳು'(ಆಯ್ದ ಕವಿತೆ) ಹಾಗೂ “ಹನಿ ಖಜಾನೆ'(ಹನಿಗವನದ 7ನೇ ಮುದ್ರಣ) ಕೃತಿಯನ್ನು ಜ್ಞಾನಪೀಠ ಪುರಸ್ಕೃತ ಕವಿ ಡಾ. ಚಂದ್ರಶೇಖರ್ ಕಂಬಾರ ಅವರು ಲೋಕಾರ್ಪಣೆ ಮಾಡಿದರು. ನಂತರ ಡುಂಡಿರಾಜ್ ದಂಪತಿಯನ್ನು ಸನ್ಮಾನಿಸಲಾಯಿತು.
ಕವಿಗಳಾದ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ, ಬಿ.ಆರ್.ಲಕ್ಷ್ಮಣ್‌ರಾವ್, ಅಭಿನಂದನ ಸಮಿತಿಯ ಖಜಾಂಚಿ ಡಾ. ಆನಂದರಾವ್ ಉಪಾಧ್ಯ ಮೊದಲಾದವರು ಉಪಸ್ಥಿತರಿದ್ದರು. ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ, ನಾಗಚಂದ್ರಿಕಾ ಭಟ್, ಮೇಘನಾ ಭಟ್ ಮತ್ತು ಉಪಾಸನಾ ವಿದ್ಯಾರ್ಥಿಗಳಿಂದ ಗೀತೆ ಗಾಯನ ನಡೆಯಿತು.
ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಲು ಡುಂಡಿರಾಜ್ ಅಪಾರ ಕೊಡುಗೆ ಅಪಾರ. ಹನಿಗವನ ಕೂಡ ಕನ್ನಡದ ಸಾಹಿತ್ಯ ಪ್ರಕಾರ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾದ ಸ್ಥಿತಿ ನಿರ್ಮಾಣ ಮಾಡಿದ್ದಾರೆ.
-ಡಾ.ಚಂದ್ರಶೇಖರ ಕಂಬಾರ, ಜ್ಞಾನಪೀಠ ಪುರಸ್ಕೃತ ಕವಿ
ಇಂದಿನ ಕವಿಗಳ ಕವಿತೆಯಲ್ಲಿ ಲಯ ಹುಡುಕುವುದೇ ಕಷ್ಟ. ಆದರೆ, ಡುಂಡಿರಾಜ್ ಅವರ ಕವಿತೆಯಲ್ಲಿ ಲಯಗಾರಿಕೆ, ಗುಣಶಕ್ತಿ, ಶಬ್ಧ ಹಾಗೂ ಭಾಷೆಯ ಹಿಡಿತ ಚೆನ್ನಾಗಿದೆ. ಕನ್ನಡ ಸಾಹಿತ್ಯದಲ್ಲಿ ಹನಿಗವನ ಬರೆದು, ಹೆಸರು ಉಳಿಸಿಕೊಂಡವರು ಕೆಲವರು ಮಾತ್ರ. ಅದರಲ್ಲಿ ಡುಂಡಿರಾಜ್ ಒಬ್ಬರಾಗಿದ್ದಾರೆ.
-ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ, ಕವಿ
ಅರವತ್ತರ ಬಗ್ಗೆ ಡುಂಡಿ ಹೇಳಿದ್ದು
ಜನಪ್ರಿಯ ಗಾದೆಮಾತು ಅರವತ್ತಕ್ಕೆ ಅರಳು ಮರಳು,
ಬೇಂದ್ರೆಯವರು ಹೇಳಿದ್ದು ಅರವತ್ತಕ್ಕೆ ಮರಳಿ ಅರಳು
ಬ್ಯಾಂಕ್‌ನವರು ಹೇಳಿದ್ದು ಅರವತ್ತಕ್ಕೆ ಮನೆಗೆ ಮರಳು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.