ಪದವಿ ಕಾಲೇಜುಗಳಲ್ಲಿ ಯೋಗ ಕಡ್ಡಾಯ
Team Udayavani, Aug 3, 2018, 11:51 AM IST
ಬೆಂಗಳೂರು: ರಾಜ್ಯದ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣದಲ್ಲಿ ಪ್ರಸಕ್ತ ವರ್ಷದಿಂದ ಯೋಗ ಕೋರ್ಸ್, ತರಗತಿಗಳನ್ನು ಕಡ್ಡಾಯವಾಗಿ ಆರಂಭಿಸಬೇಕೆಂದು ಸೂಚನೆ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ರಾಜ್ಯದ ಎಲ್ಲ ವಿವಿಗಳ ಕುಲಪತಿಗಳು, ಕುಲಸಚಿವರು ಹಾಗೂ ಹಣಕಾಸು ವಿಭಾಗದ ಅಧಿಕಾರಿಗಳೊಂದಿಗೆ ಬುಧವಾರ ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಸಿಸಿ ಮಾದರಿಯಲ್ಲಿ ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಕಾಲೇಜು ಹಾಗೂ ವಿವಿಗಳ ವ್ಯಾಪ್ತಿಯ ಪದವಿ, ಸ್ನಾತಕೋತ್ತರ ಕಾಲೇಜುಗಳಲ್ಲಿ ಯೋಗ ತರಗತಿ, ಕೋರ್ಸ್‌ಗಳನ್ನು ಆರಂಭಿಸಬೇಕೆಂದು ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.
ಕೆಲ ಕಾಲೇಜುಗಳಲ್ಲಿ ಈಗಾಗಲೇ ಯೋಗ ಕೋರ್ಸ್‌ಗಳು ನಡೆಯುತ್ತಿವೆ. ಕೆಲವೆಡೆ ಡಿಪ್ಲೊಮಾ ಕೋರ್ಸ್ ಕೂಡ ಶುರುವಾಗಿವೆ. ಹೊಸ ಕೋರ್ಸ್‌ನಂತೆ ಯೋಗ ಕೋರ್ಸ್, ತರಗತಿಯನ್ನೂ ಈ ವರ್ಷ ಕಾಲೇಜುಗಳಲ್ಲಿ ಆರಂಭಿಸುವಂತೆ ಸೂಚಿಸಲಾಗಿದೆ. ಕೋರ್ಸ್, ತರಗತಿಗಳು ಯಾವ ರೀತಿ ನಡೆಯಬೇಕು ಎಂಬುದನ್ನು ನಿರ್ಧರಿಸಲು ಸಮಿತಿ ರಚಿಸಲಾಗಿದೆ ಎಂದರು.
ಈ ವರ್ಷ ರಾಜ್ಯದ ಪ್ರತಿ ವಿಶ್ವವಿದ್ಯಾಲಯವು 5 ಹಳ್ಳಿಗಳನ್ನು ದತ್ತು ಪಡೆದು ಪರಿಸರ, ಸ್ವತ್ಛತೆ, ಶಿಕ್ಷಣದ ಜತೆಗೆ ಮಹಿಳೆಯರು, ಯುವಕರು, ವಿದ್ಯಾವಂತರು, ಹಿರಿಯರನ್ನು ಒಟ್ಟುಗೂಡಿಸಿ ಅವರು ನಿರ್ವಹಿಸುತ್ತಿರುವ ಉದ್ಯೋಗಳನ್ನು ಪ್ರೋತ್ಸಾಹಿಸುವಂತೆ ಸೂಚಿಸಲಾಗಿದೆ. ಸಂಬಂಧಪಟ್ಟ ಸರ್ಕಾರಿ ಇಲಾಖೆಗಳನ್ನು ಇದರೊಂದಿಗೆ ಜೋಡಣೆ ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಮಂಗಳೂರು ವಿವಿಯಲ್ಲಿ ಸಂಶೋಧನಾ ಅಭ್ಯರ್ಥಿಗಳ ಸಂಖ್ಯೆ 330ರಿಂದ 1,115ಕ್ಕೆ ಏರಿಕೆಯಾಗಿದೆ. ವಿವಿಯ ಸಂಶೋಧನಾ ಕೇಂದ್ರಗಳಲ್ಲಿ ಈವರೆಗಿನ ಸಂಶೋಧನಾ ಪ್ರಬಂಧಗಳ ದೊಡ್ಡ ಸಂಗ್ರಹವಿದೆ ಎಂದು ಹೇಳಿದರು. ರಾಜ್ಯದ ಎಲ್ಲ ವಿವಿ ಕುಲಪತಿಗಳು, ಕುಲಸಚಿವರು ಹಾಗೂ ಹಣಕಾಸು ವಿಭಾಗದ ಅಧಿಕಾರಿಗಳೊಂದಿಗೆ ಎರಡು ದಿನ ಸಭೆ ನಡೆಸಲಾಗಿದ್ದು, ಅಗತ್ಯವಿರುವ ಸೇವೆಗಳ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ ಎಂದರು.
15 ದಿನದಲ್ಲಿ ಮಾಹಿತಿ ನೀಡಲು ಸೂಚನೆ: ರಾಜ್ಯದ ಎಲ್ಲ ವಿವಿಗಳಲ್ಲಿನ ಸಮಸ್ಯೆಗಳು, ಅಗತ್ಯವಾಗಿ ಬೇಕಿರುವ ಸೌಲಭ್ಯ, ಅನುದಾನದ ಬಗ್ಗೆ ಆ. 15ರೊಳಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ವಿವಿಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯಿದೆಯೇ, ಪ್ರಯೋಗಾಲಯ, ಅಗತ್ಯ ಕೊಠಡಿ, ಕಟ್ಟಡಗಳಿವೆಯೇ ಎಂಬ ಬಗ್ಗೆ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ಹೇಳಿದರು.
5,000 ಪ್ರಾಧ್ಯಾಪಕರ ನೇಮಕ: ಸುಮಾರು 5,000 ಪ್ರಾಧ್ಯಾಪಕರ ನೇಮಕಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು, ಹಣಕಾಸು ಇಲಾಖೆಯೂ ಅನುಮೋದನೆ ನೀಡಿದೆ. ನೇಮಕ ಪ್ರಕ್ರಿಯೆ ಮುಗಿದ ಕೂಡಲೇ ಸೂಕ್ತ ತರಬೇತಿ ಕೊಡಿಸಿ ಸೇವೆಗೆ ಬಳಸಿಕೊಳ್ಳಲಾಗುವುದು.
ಕನ್ನಡ ವಿಷಯ ತಜ್ಞರು ಕೆಲವೆಡೆ ವಿಜ್ಞಾನ ಕಲಿಸುತ್ತಿದ್ದಾರೆ. ವಿಜ್ಞಾನ ವಿಷಯ ತಜ್ಞರು ಕೆಲ ಕಾಲೇಜುಗಳಲ್ಲಿ ಭಾಷಾ ವಿಷಯ ಬೋಧಿಸುತ್ತಿದ್ದಾರೆ. ಇದು ನಿಲ್ಲಬೇಕು. ಸಂಬಂಧಪಟ್ಟ ವಿಷಯ ತಜ್ಞರು ಆಯಾ ವಿಷಯದ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವಂತೆ ಸೂಚಿಸಲಾಗಿದೆ ಎಂದು ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.