ಯೋಗಮಯ… ಈ ಲೋಕವೆಲ್ಲಾ
ಸುದ್ದಿ ಸುತ್ತಾಟ
Team Udayavani, Jun 17, 2019, 3:10 AM IST
ಬೆಂಗಳೂರಿನಲ್ಲಿ ಯೋಗ ಕೇವಲ ಆರೋಗ್ಯ ಸಾಧನವಾಗಿ ಉಳಿಯದೇ ಸಾವಿರಾರು ಜನರಿಗೆ ಉದ್ಯೋಗಕ್ಕೂ ದಾರಿ ಮಾಡಿಕೊಟ್ಟಿದೆ. ಯೋಗ ತರಬೇತಿ ಸಂಸ್ಥೆಗಳ ಮೂಲಕ ಸ್ವಉದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವೆಯೇ ಯೋಗ ಉದ್ಯಮವೂ ಆಗುತ್ತಿದ್ದು, ಯೋಗ ಸಂಸ್ಥೆಗಳ ನೋಂದಣಿ ಕೂಗು ಕೇಳಿಬರುತ್ತಿದೆ. ಇದೇ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನವಿದ್ದು, ಯೋಗದ ಹಬ್ಬ ಆಚರಣೆಗೆ ಬೆಂಗಳೂರು ಸಜ್ಜಾಗುತ್ತಿದೆ. ನಗರದ ಎಲ್ಲಾ ಮೈದಾನ, ಉದ್ಯಾನ, ಶಾಲೆ, ಸಭಾಂಗಣಗಳು ಈಗಾಗಲೇ ಯೋಗ ದಿನಾಚರಣೆಗೆ ಬುಕ್ ಆಗಿವೆ. ಇವೆಲ್ಲದರ ನಡುವೆ ಬೆಂಗಳೂರಿನಲ್ಲಿ ಯೋಗದ ಪಕ್ಷಿನೋಟ ಈ ವಾರದ ಸುದ್ದಿಸುತ್ತಾಟದಲ್ಲಿ…
ಒತ್ತಡದ ಬದುಕಿನಲ್ಲಿ ಆರೋಗ್ಯದ ಕಡೆ ಕಾಳಜಿ ಹೆಚ್ಚಾಗುತ್ತಿದೆ. ಜನರು ಈಗ ಒಂದು ಕಡೆ ಸಿರಿಧಾನ್ಯದಂತಹ ಆರೋಗ್ಯಪೂರ್ಣ ಆಹಾರದ ಕಡೆ ಹೆಜ್ಜೆ ಇಡುತ್ತಿದ್ದಾರೆ. ಮತ್ತೊಂದೆಡೆ ಜಿಮ್, ಯೋಗ, ಏರೋಬಿಕ್ಸ್ ರೀತಿಯ ದೈಹಿಕ ಕಸರತ್ತು ಜಾಸ್ತಿಯಾಗುತ್ತಿದೆ. ಇದೇ ಸಂದರ್ಭದಲ್ಲಿ ಯೋಗಕ್ಕೆ ಜಾಗತಿಕ ಮಾನ್ಯತೆ ದೊರೆತಿದೆ. ಪರಿಣಾಮ ಇಡೀ ಜಗತ್ತು ಈಗ ಯೋಗ ಮಯವಾಗಿದೆ. ಬೆಂಗಳೂರು ಕೂಡ ಯೋಗಮಯವಾಗುತ್ತಿದೆ.
ಸಾವಿರಾರು ಉದ್ಯೋಗ: ಭಾರತ ಸೇರಿದಂತೆ ಜಗತ್ತಿನ ಎಲ್ಲೆಡೆ ಯೋಗದಂತೆ, ಯೋಗ ಕಲಿಸುವವರಿಗೂ ಬೇಡಿಕೆ ಹೆಚ್ಚಿದೆ. ಅಂತೆಯೇ ಬೆಂಗಳೂರಿನಂತಹ ಮಹಾನಗರದಲ್ಲೂ ಆರೋಗ್ಯಕ್ಕಾಗಿ ಯೋಗದ ಮೊರೆಹೋಗುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿಯೇ, ನಗರಲ್ಲಿ 5000ಕ್ಕೂ ಹೆಚ್ಚು ಪ್ರಕೃತಿ ಚಿಕಿತ್ಸೆ ಹಾಗೂ ಥೆರಪಿ ಕೇಂದ್ರಗಳಿವೆ. ಇಲ್ಲಿ ಕೆಲಸ ಮಾಡಲು ಯೋಗ ಶಿಕ್ಷಣ ಕಲಿತವರಿಗೆ ಮೊದಲ ಆದ್ಯತೆ. ಇದರ ಹೊರತಾಗಿಯೂ ಬಡಾವಣೆಗೆ ಒಂದರಂತೆ ಯೋಗ ತರಬೇತಿ ಕೇಂದ್ರಗಳಿದ್ದು, ಸಾಕಷ್ಟು ಮಂದಿ ಯೋಗ ಶಿಕ್ಷಣ/ತರಬೇತಿ ನೀಡುತ್ತಾ ಅದನ್ನೇ ತಮ್ಮ ವೃತ್ತಿ ಜೀವನವನ್ನಾಗಿಸಿಕೊಂಡಿದ್ದಾರೆ.
ಯೋಗ ಕೇಂದ್ರಗಳಲ್ಲಿ ಕನಿಷ್ಠ 3-4 ಮಂದಿ ಯೋಗ ತರಬೇತುದಾರರು ಇರುತ್ತಾರೆ. ಇನ್ನು ಕೆಲವರು ಶಾಲಾ ಕಾಲೇಜುಗಳಲ್ಲಿ ಯೋಗ ಕಲಿಸುತ್ತಿದ್ದಾರೆ. ಒಟ್ಟಾರೆ ಬೆಂಗಳೂರಿನಲ್ಲಿ ಯೋಗವನ್ನು ವೃತ್ತಿಯನ್ನಾಗಿಸಿಕೊಂಡು ಅಥವಾ ಸ್ವಉದ್ಯೋಗ ಮಾಡಿಕೊಂಡವರ ಸಂಖ್ಯೆ 10 ಸಾವಿರಕ್ಕೂ ಹೆಚ್ಚಿದೆ ಎನ್ನುತ್ತಾರೆ ಆಯುಷ್ ಇಲಾಖೆ ಅಧಿಕಾರಿಗಳು. ಇನ್ನು ಯೋಗ ತರಗತಿ ನಡೆಸಲು ಹೆಚ್ಚು ಹೂಡಿಕೆ ಬೇಕಿಲ್ಲ.
ಸ್ವಂತ ಕಲಿಕಾ ಕೇಂದ್ರಗಳನ್ನು ತೆರೆಯಲು ಸಾಧ್ಯವಾಗದವರು ರೆಸಾರ್ಟ್, ಐಷಾರಾಮಿ ಹೋಟೆಲ್, ಜಿಮ್, ಶಾಲೆ, ಆರೋಗ್ಯ ಕೇಂದ್ರದಲ್ಲಿ ಯೋಗ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ವಿವಿಧ ಸೆಲೆಬ್ರೆಟಿಗಳು, ರಾಜಕಾರಣಿಗಳು, ವಿವಿಐಪಿಗಳು ವೈಯಕ್ತಿಯವಾಗಿ ಯೋಗ ತರಬೇತುದಾರರನ್ನು ನೇಮಿಸಿಕೊಂಡಿದ್ದಾರೆ. ಇನ್ನು ಯೋಗ ತರಬೇತಿ ನೀಡುವವರಿಗೆ ಮಾಸಿಕ ಕನಿಷ್ಠ 15 ಸಾವಿರ ರೂ. ವೇತನವಿದೆ. ಸ್ವಂತ ಯೋಗ ತರಗತಿ ಆರಂಭಿಸಿದವರು ಕೆಲವೆಡೆ ಲಕ್ಷ ರೂ. ಸಂಪಾದಿಸುತ್ತಿದ್ದಾರೆ.
ಯೋಗ ಕೇಂದ್ರಗಳ ನೋಂದಣಿ ಅಗತ್ಯ: ನಗರದಲ್ಲಿ ಸುಮಾರು 5,000ಕ್ಕೂ ಹೆಚ್ಚು ಪ್ರಕೃತಿ ಚಿಕಿತ್ಸೆ ಹಾಗೂ ಥೆರಪಿ ಕೇಂದ್ರಗಳಿದ್ದು, 10,000ಕ್ಕೂ ಅಧಿಕ ಯೋಗ ತರಬೇತಿ ಕೇಂದ್ರಗಳಿವೆ. ಆದರೆ, ಅವುಗಳಿಗೆ ಸೂಕ್ತ ನೋಂದಣಿ ಅಗತ್ಯವಿದೆ. ಕೆಲ ಭಾಗಗಳಲ್ಲಿ ಹೆಚ್ಚಿನ ಹಣ ವಸೂಲಿ, ಕಿರುಕುಳದಂತಹ ದೂರುಗಳು ಕೇಳಿಬರುತ್ತಿವೆ.
ಖಾಸಗಿಯವರು ಯೋಗವನ್ನು ಉದ್ಯಮವಾಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಆಯುಷ್ ಇಲಾಖೆ ವ್ಯಾಪ್ತಿಯಲ್ಲಿ ನೋಂದಣಿ ಕಾರ್ಯಕ್ಕೆ ಮುಂದಾಗಬೇಕಿದೆ. ಈ ಮೂಲಕ ನಗರದಲ್ಲಿ ಯೋಗ ಶಿಕ್ಷಣ ಸಮಂಜಸವಾಗಿ, ಸುರಕ್ಷಿತವಾಗಿ ನಡೆಯಲು ಸಹಕಾರಿಯಾಗುತ್ತದೆ. ಮುಖ್ಯವಾಗಿ ಪ್ರಕೃತಿ ಚಿಕಿತ್ಸಾ ಕೇಂದ್ರಗಳನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆ (ಕೆಪಿಎಂಇ) ಕಾಯ್ದೆಯಡಿ ತರಬೇಕು ಎನ್ನುತ್ತಾರೆ ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿಗಳು.
ಬೆಂಗಳೂರಿನ ಜೀವನಕ್ಕೆ ಯೋಗ ಸಹಕಾರಿ: ರಾಜಧಾನಿ ಬೆಂಗಳೂರಲ್ಲಿ ವಾಯು ಮಾಲಿನ್ಯ, ಟ್ರಾಫಿಕ್ ಹೆಚ್ಚಳವಾಗಿ ವಾತಾವರಣ ಕಲುಷಿತವಾಗುತ್ತಿದೆ. ನಿಮ್ಹಾನ್ಸ್ ಸಂಸ್ಥೆಯ ಅಧ್ಯಯನದ ಪ್ರಕಾರ ಐ.ಟಿ ವಲಯದಲ್ಲಿ ಕೆಲಸ ಮಾಡುವವರಲ್ಲಿ ಶೇ.35-40 ರಷ್ಟು ಹಾಗೂ ಇತರೆ ವಲಯದ ಶೇ.20 ಮಂದಿ ಅಧಿಕ ಒತ್ತಡದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಅಧಿಕ ಒತ್ತಡವೇ ಮಧುಮೇಹ. ಹೃದಯ ಸಂಬಂಧಿ ಕಾಯಿಲೆಗಳಿಗೆ ಮೂಲ ಕಾರಣವಾಗಿದ್ದು, ಖಿನ್ನತೆ ಹಾಗೂ ಮಾನಸಿಕ ಅಸ್ವಸ್ಥತೆ ಉಂಟು ಮಾಡಬಲ್ಲದು.
ಅಧಿಕ ಒತ್ತಡ ಸಮಸ್ಯೆಗೆ ಇಂಗ್ಲಿಷ್ ಮದ್ದು ತಾತ್ಕಾಲಿಕವಾಗಿ ಪರಿಹಾರ ನೀಡಬಹುದು. ಆದರೆ, ಶಾಶ್ವತ ಪರಿಹಾರ ಯೋಗದಿಂದ ಮಾತ್ರ ಸಾಧ್ಯ. ಯೋಗದಿಂದ ದೇಹವನ್ನು ನಿಯಂತ್ರಣಕ್ಕೆ ತಗೆದುಕೊಳ್ಳಬಹುದಾಗಿದ್ದು, ಅದು ದೈಹಿಕ ಹಾಗೂ ಮಾನಸಿಕ ಆರೋಗ್ಯ, ಲವಲವಿಕೆ ಹೆಚ್ಚಿಸುತ್ತದೆ ಎಂದು ನಿಮಾನ್ಸ್ ಪ್ರೊಫೆಸರ್ ಡಾ.ಶಿವರಾಮ ವಾರಂಬಳ್ಳಿ ತಿಳಿಸಿದರು.
ನಿಮ್ಹಾನ್ಸ್‌ನಿಂದ ಯೋಗ ಸಂಶೋಧನೆ: ಈ ಹಿಂದೆ ನಿಮ್ಹಾನ್ಸ್‌ನಿಂದ ಯೋಗದ ಕುರಿತು ಸಾಕಷ್ಟು ರೋಗಿಗಳ ಮೇಲೆ ಸಂಶೋಧನೆ ನಡೆಸಿ ಖಿನ್ನತೆ, ನೆನಪಿನ ಶಕ್ತಿ ವೃದ್ಧಿ, ಮೆದುಳಿನ ಆರೋಗ್ಯ ವೃದ್ಧಿ ಹಾಗೂ ಒತ್ತಡ ನಿವಾರಣೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಒಂದು ತಿಂಗಳ ಕಾಲ 15 ಮಕ್ಕಳಿಗೆ ಯೋಗ ಶಿಕ್ಷಣ ನೀಡಿದಾಗ ಅವರಲ್ಲಿನ ಶೇ.50ರಷ್ಟು ಖಿನ್ನತೆ ಕಡಿಮೆಯಾಗಿದೆ.
120 ಮಂದಿಯನ್ನು ಎರಡು ತಂಡ ಮಾಡಿ ಒಂದು ತಂಡಕ್ಕೆ ಚಿಕಿತ್ಸೆ, ಮತ್ತೊಂಡು ತಂಡಕ್ಕೆ ಯೋಗ ಮಾಡಿಸಿದ್ದು, ಯೋಗ ಮಾಡಿದ ತಂಡದ ಸದಸ್ಯರಲ್ಲಿ ಸಾಕಷ್ಟು ಮಾನಸಿಕ ಆರೋಗ್ಯ ವೃದ್ಧಿಯಾಗಿ, ಒತ್ತಡ ಕಡಿಮೆಯಾಗಿದೆ. ಇನ್ನೊಂದು ಸಂಶೋಧನೆಯಲ್ಲಿ 8-14 ವರ್ಷದ ಮಕ್ಕಳು ಒಂದು ತಿಂಗಳ ಕಾಲ ಯೋಗಾಭ್ಯಾಸ ಮಾಡಿದ್ದರಿಂದ ಏಕಾಗ್ರತೆಯಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದರು.
ಯೋಗ ಸಂಶೋಧನೆಗಳ ವಸ್ತು ಪ್ರದರ್ಶನ: ನಿಮ್ಹಾನ್ಸ್ ಹಾಗೂ ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತು ಸಂಗ್ರಹಾಲಯದ ಸಂಯುಕ್ತಾಶ್ರಯದಲ್ಲಿ ಎರಡೂ ಕಡೆಗಳಲ್ಲಿ ಯೋಗ ಕುರಿತು ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ವಸ್ತು ಪ್ರದರ್ಶನಕ್ಕಾಗಿ ಯೋಗದ ಕುರಿತು ಸಾಕಷ್ಟು ಮಾಹಿತಿ ಕಲೆಯಾಕಿದ್ದು, ಯೋಗ ಆರಂಭ, ಭಾರತದಲ್ಲಿ ಯೋಗದ ಇತಿಹಾಸ, ಯೋಗ ಮಾದರಿಗಳು, ಪ್ರಾಣಾಯಾಮ ವಿಧಗಳು, ದೇಶಾದ್ಯಂತ ಯೋಗದ ಕುರಿತು ನಡೆದಿರುವ ವೈಜ್ಞಾನಿಕ ಸಂಶೋಧನೆಗಳು,
ಮಾನವನ ದೇಹದ ಮೇಲೆ ಯೋಗದ ಪರಿಣಾಮ ಕುರಿತ ಸಂಶೋಧನಾ ವರದಿಗಳ ಪ್ರದರ್ಶನವಿರುತ್ತದೆ. ನಿಮ್ಹಾನ್ಸ್‌ನ ಹೊರರೋಗಿಗಳ ಘಟಕದಲ್ಲಿ ಜೂ.19ರಂದು ಹಾಗೂ ವಿಶ್ವೇಶ್ವರ ವಸ್ತುಸಂಗ್ರಹಾಲಯದಲ್ಲಿ ಜೂ.21ರಂದು ಪ್ರದರ್ಶನಕ್ಕೆ ಚಾಲನೆ ದೊರೆಯಲಿದೆ. ಅಂದು ಯೋಗಾಸನ, ಯೋಗ ಸ್ಫರ್ಧೆಗಳು ನಡೆಯುತ್ತವೆ ಎಂದು ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತು ಸಂಗ್ರಹಾಲಯದ ನಿರ್ದೇಶಕ ಮದನ್ ಗೋಪಾಲ್ ತಿಳಿಸಿದರು.
ಯೋಗ ದಿನಕ್ಕೆ ಸಿಲಿಕಾನ್ ಸಿಟಿ ಸಜ್ಜು: ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಬೆಂಗಳೂರು ಸಜ್ಜಾಗುತ್ತಿದೆ. ನಗರದ ವಿವಿಧೆಡೆ ವಿವಿಧ ಯೋಗ ಸಂಸ್ಥೆಗಳು ಈಗಾಗಲೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಹಬ್ಬದ ರೀತಿ ಆಚರಿಸಲು ಸಜ್ಜಾಗಿದ್ದು, ವಿಶೇಷ ಯೋಗ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ.
ಮುಖ್ಯವಾಗಿ ಪತಂಜಲಿ ಯೋಗ ಸಂಸ್ಥೆ, ಶ್ವಾಸ ಯೋಗ ಸಂಸ್ಥೆ, ಯೋಗ ಗಂಗೋತ್ರಿ, ಆರ್ಟ್ ಆಫ್ ಲಿವಿಂಗ್ ಸೇರಿ ಹಲವು ಸಂಸ್ಥೆಗಳು ಒಂದು ವಾರ ಕಾಲ ಯೋಗ ಹಬ್ಬ ಆಚರಿಸುತ್ತಿವೆ. ಈ ಎಲ್ಲಾ ಸಂಸ್ಥೆಗಳ ಸಾವಿರಾರು ಯೋಗ ತರಬೇತಿ ಕೇಂದ್ರಗಳು, ಉಪ ಕೇಂದ್ರಗಳು ನಗರದಲ್ಲಿದ್ದು, ಅಲ್ಲಿ ವಿಶೇಷ ಅತಿಥಿಗಳನ್ನು ಕರೆಸುವುದು, ರೋಗಿಗಳಿಗೆ, ವೃದ್ಧರಿಗೆ ಯೋಗ ಕಲಿಸಿಕೊಡುವುದು, ಯುವ ಜನತೆಗೆ ಯೋಗ ಶಿಕ್ಷಣ ಮಹತ್ವ ತಿಳಿಸುವುದು, ಹೊಸಬರನ್ನು ಯೋಗ ತರಬೇತಿಗೆ ನೋಂದಣಿ ಮಾಡಿಕೊಳ್ಳುವ ಕಾರ್ಯವನ್ನು ಮಾಡುತ್ತಿವೆ.
ಕಂಠೀರವದಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿಯಿಂದ ಯೋಗ: ಪ್ರತಿ ವರ್ಷದಂತೆ ಈ ಬಾರಿಯೂ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರದ ಆಯುಷ್ ಇಲಾಖೆ ವಿವಿಧ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಆಯೋಜಿಸಿದೆ. ಈ ಬಾರಿ 15 ಸಾವಿರ ಮಂದಿ ಒಟ್ಟಾಗಿ ಯೋಗ ಪ್ರದರ್ಶನ ನೀಡಲಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಕಾರ್ಯಕ್ರಮ ನಡೆಯಲಿದ್ದು, ಮೊದಲು ಯೋಗ ಸಂಸ್ಥೆಗಳು ತಮ್ಮ ವಿಶೇಷ ಯೋಗ ಪ್ರದರ್ಶನ ನೀಡಲಿದ್ದು, 7 ಗಂಟೆಯಿಂದ 36 ನಿಮಿಷ ಅಂತಾರಾಷ್ಟ್ರೀಯ ಯೋಗ ಶಿಷ್ಟಾಚಾರದಂತೆ ಯೋಗ ಕಾರ್ಯಕ್ರಮ ನಡೆಯಲಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿ ಸಚಿವರುಗಳು, ಜಗತ್ತಿನ ಹಿರಿಯ ಯೋಗಪಟು 123 ವಯಸ್ಸಿನ ಸ್ವಾಮಿ ಶಿವಾನಂದ, ಶ್ವಾಸ ಯೋಗ ಸಂಸ್ಥೆ ವಚನಾನಂದ ಸ್ವಾಮೀಜಿ, ಪತಂಜಲಿ ಯೋಗ ಸಂಸ್ಥೆ ಎ.ಆರ್.ರಾಮಸ್ವಾಮಿ ಅಣ್ಣ ಸೇರಿದಂತೆ ವಿವಿಧ ಯೋಗ ಸಂಸ್ಥೆಗಳ ಮುಖ್ಯ ಗುರುಗಳು ಭಾಗವಹಿಸುತ್ತಿದ್ದಾರೆ.
ಐದು ಮಂದಿಗೆ ಯೋಗ ರತ್ನ ಪ್ರಶಸ್ತಿ: ಶ್ವಾಸ ಯೋಗ ಸಂಸ್ಥೆ ಯೋಗದಲ್ಲಿ ವಿಶಿಷ್ಟ ಸಾಧನೆ ಮಾಡಿ ವಿಶ್ವಕ್ಕೆ ತಮ್ಮದೇಯಾದ ಕೊಡುಗೆಯನ್ನು ನೀಡಿ ಎಲೆಮರೆಯಕಾಯಿಯಂತಿರುವ ಐದು ಮಹಾನ್ ಸಾಧಕರಿಗೆ ಯೋಗ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಇದು ಯೋಗ ಕ್ಷೇತ್ರದಲ್ಲಿ ಅತ್ಯುನ್ನತ ಗೌರವವಾಗಿದ್ದು ಈ ಬಾರಿ 5 ಮಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಗತ್ತಿನ ಹಿರಿಯ ಮಹಾನ್ ಯೋಗ ಸಾಧಕರಾಗಿರುವ 123 ವಯಸ್ಸಿನ ಸ್ವಾಮಿ ಶಿವಾನಂದ, ಅರ್ಜೆಂಟೀನಾ ಮೂಲದ ಅಂತಾರಾಷ್ಟ್ರೀಯ ಯೋಗ ಸಾಧಕಿ ಪಾವೊಲಾ ಅಲೆಜಾಂದ್ರ ರಿಯೋಸ್(ಏಕಾರಾ ದೇವಿ ನಾಥ), ಉತ್ತರ ಕರ್ನಾಟಕದಲ್ಲಿ ಹಳ್ಳಿ ಹಳ್ಳಿಗೆ ಪಾದಯಾತ್ರೆ ಮಾಡಿ ಯೋಗ ಮತ್ತು ನಿಸರ್ಗ ಚಿಕಿತ್ಸಾ ಪ್ರಚಾರ ಕಾಯಕದಲ್ಲಿ ಎಲೆಮರೆಕಾಯಿಯಂತೆ ಶ್ರಮಿಸುತ್ತಿರುವ ಬಾಗಲಕೋಟೆ ಜಿಲ್ಲೆಯ ಶಿರೂರಿನ ವಿಜಯ ಮಹಾಂತ ತೀರ್ಥದಲ್ಲಿ ಯೋಗ ಮತ್ತು
-ನಿಸರ್ಗ ಚಿಕಿತ್ಸಾ ಕೇಂದ್ರ ಡಾ.ಬಸವಲಿಂಗ ಸ್ವಾಮೀಜಿ ಸ್ಥಾಪಿಸಿರುವ ಸ್ವಾಮೀಜಿ ಸೇರಿದಂತೆ ಸ್ವಾಮಿ ಪ್ರಣವಾನಂದ ಬ್ರಹ್ಮೇಂದ್ರ ಅವಧೂತ ಹಾಗೂ ಬಿ.ಎನ್.ಎಸ್ ಅಯ್ಯಂಗಾರ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜು.20ರಂದು ನಗರದ ಬಿಜಿಎಸ್ ಹೆಲ್ತ್ ಅಂಡ್ ಎಜುಕೇಷನ್ ಸಿಟಿಯಲ್ಲಿ ಯೋಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇನ್ನು ಈ ಎಲ್ಲಾ ಸಾಧಕರು ಕಂಠೀರವ ಕ್ರೀಡಾಂಗಣದಲ್ಲಿ ಜೂ.21ರಂದು ನಡೆಯುವ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಿದ್ದಾರೆ.
ಸಸಿ ನೀಡಲು ನಿರ್ಧಾರ: ಅಂತಾರಾಷ್ಟ್ರೀಯ ಯೋಗ ದಿನವನ್ನು ಕೇವಲ ಆರೋಗ್ಯ ದೃಷ್ಟಿಯಿದಿಂದ ಮಾತ್ರ ಆಚರಿಸದೆ, ಈ ಬಾರಿ ಉತ್ತಮ ಪರಿಸರ ನಿರ್ಮಿಸುವ ಉದ್ದೇಶ ಹೊಂದಿದ್ದೇವೆ ಎಂದು ಶ್ವಾಸ ಗುರು ವಚನಾನಂದಾ ಸ್ವಾಮೀಜಿ ತಿಳಿಸಿದರು. ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಭವಿಷ್ಯದಲ್ಲಿ ಉತ್ತಮ ವಾತಾವರಣಕ್ಕೆ ಹಸಿರು ಸಂಪತ್ತು ಅಗತ್ಯವಿದೆ. ಹೀಗಾಗಿ, ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಒಂದು ಸಸಿ ನೆಡುವಂತೆ ಪ್ರೇರೆಪಿಸಲಾಗುತ್ತಿದೆ. ತಲಾ ಒಂದು ಸಸಿ ನೆಡುವ ಕುರಿತು ಪ್ರತಿಜ್ಞೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಶಾಲೆ, ಕಾಲೇಜುಗಳಲ್ಲಿ ಯೋಗ ದಿನ: ವಿಶ್ವಯೋಗ ದಿನಾಚರಣೆಗೆ ನಗರದ ಶಾಲಾ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ಸಜ್ಜಾಗಿವೆ. ಯೋಗ ದಿನ ಆಚರಿಸುವ ಜತೆಗೆ, ಯೋಗ ಕಾರ್ಯಾಗಾರಗಳನ್ನು ಹಮ್ಮಿಕೊಂಡಿವೆ. ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳಲ್ಲೂ ಯೋಗದ ಅಭ್ಯಾಸ ಈಗಾಗಲೇ ಆರಂಭವಾಗಿದೆ. ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲೂ ಯೋಗ ದಿನಾಚರಣೆ ನಡೆಸಲಾಗುತ್ತದೆ.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಯೋಗ ದಿನಾಚರಣೆ ಹಮ್ಮಿಕೊಂಡಿದ್ದು, ನಗರದ ಖಾಸಗಿ, ಸ್ವಯತ್ತ ವಿವಿಗಳು, ಖಾಸಗಿ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳಲ್ಲೂ ಯೋಗ ದಿನಾಚರಣೆಗೆ ವೇದಿಕೆ ಸಜ್ಜಾಗುತ್ತಿದೆ. ಮೆಜೆಸ್ಟಿಕ್ ಸಮೀಪದ ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜು ಆವರಣದಲ್ಲೂ ಯೋಗ ದಿನಾಚರಣೆ ನಡೆಯಲಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಯಾವ ಮಾದರಿಯಲ್ಲಿ ಯೋಗದಿನಾಚರಣೆ ಆಚರಿಸಬೇಕು ಮತ್ತು ಕಾರ್ಯಕ್ರಮದ ರೂಪುರೇಷೆ ಹೇಗಿರಬೇಕು ಎಂಬ ಬಗ್ಗೆ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಕಳುಹಿಸಲಾಗುತ್ತದೆ. ವಿಶ್ವವಿದ್ಯಾಲಯಗಳಲ್ಲಿ ಯೋಗ ಕೇಂದ್ರದಿಂದಲೇ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಯೋಗ ವಾಕಥಾನ್, ಯೋಗ ಜಾಗೃತಿ, ಆರೋಗ್ಯ ತಪಾಸಣೆ ಶಿಬಿರಗಳು ಈ ಸಂದರ್ಭದಲ್ಲಿ ನಡೆಯಲಿವೆ.
ಒತ್ತಡದ ಜೀವನ, ಮಾಲಿನ್ಯದಿಂದ ಜನ ಎದುರಿಸುತ್ತಿರುವ ನಾನಾ ಆರೋಗ್ಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಯೋಗದಲ್ಲಿದೆ. ಹೀಗಾಗಿ, ದಿನದಲ್ಲಿ ಕೇವಲ ಒಂದು ಗಂಟೆ ಯೋಗ ಅಥವಾ ಯಾವುದೇ ದೈಹಿಕ ಕಸರತ್ತು ಮಾಡಬೇಕಿದೆ. ಇಲ್ಲವಾದರೆ ಭವಿಷ್ಯದಲ್ಲಿ ಅನಾರೋಗ್ಯಕ್ಕೆ ತುತ್ತಾಗುವುದು ನಿಶ್ಚಿತ. ಮುಂದಿನ ದಿನಗಳಲ್ಲಿ ಯೋಗಾಭ್ಯಾಸ ಅನಿವಾರ್ಯವಾಗಲಿದೆ.
-ವಚನಾನಂದ ಸ್ವಾಮೀಜಿ, ಶ್ವಾಸ ಗುರು
ರೋಗ ನಿರೋಧಕ ಶಕ್ತಿ ವೃದ್ಧಿಸುವ ಮೂಲಕ ಯಾವುದೇ ಕಾಯಿಲೆಯನ್ನಾದರು ಗುಣಪಡಿಸುವ ಶಕ್ತಿ ಯೋಗಕ್ಕಿದೆ. ದೈಹಿಕ ಸಾಮರ್ಥ್ಯ ಹೆಚ್ಚಿಸಲು, ಅಂಗಾಂಗಗದ ಆರೋಗ್ಯ ಕಾಪಾಡಲು ಯೋಗಾಭ್ಯಾಸ ಮುಖ್ಯವಾಗಿದೆ. ಅಂಗಗಳನ್ನು ತಿರುಗಿಸುವ, ಹಿಗ್ಗಿಸುವ, ಕುಗ್ಗಿಸುವ ಕಾರ್ಯ ಯೋಗದಲ್ಲಾಗುತ್ತದೆ. ಯೋಗವನ್ನು ಉತ್ತಮ ಆರೋಗ್ಯಕ್ಕೆ ಸಾಧನ ಮಾಡಿಕೊಳ್ಳಬೇಕು.
-ಶಿವಕುಮಾರ್, ಪತಂಜಲಿ ಯೋಗ ಸಂಸ್ಥೆ
ಬೆಂಗಳೂರಿನ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರಿಗೂ ಯೋಗ ಅಗತ್ಯವಾಗಿದೆ. ಇಲ್ಲಿನ ಆಹಾರ ಆಹಾರ ಪದ್ಧತಿ, ಉಸಿರಾಡುವ ಗಾಳಿ ಎಲ್ಲವೂ ಕಲುಷಿತಗೊಂಡಿದ್ದು, ಪ್ರತಿಯೊಬ್ಬರೂ ರೋಗ ರುಜಿನಗಳಿಂದ ಬಳಲುವಂತಾಗಿದೆ. ಇದರಿಂದ ವಿಮುಕ್ತರಾಗಿ ಆರೋಗ್ಯವಂತರಾಗಿ, ದೀರ್ಘಾಯುಷಿಗಳಾಗಿ ಬಾಳಲು ಯೋಗಾಭ್ಯಾಸ, ಪ್ರಾಕೃತಿ ಚಿಕಿತ್ಸೆ ಅಗತ್ಯ.
-ಅಜಿತ್, ಯೋಗ ಮಾರ್ಗದರ್ಶಕ
ಯೋಗ ಮಾರ್ಗದರ್ಶಕ ವೃತ್ತಿ ಮನಸ್ಸಿನ ಆರೋಗ್ಯ ಉತ್ತಮವಾಗಿಸುವ ಜತೆಗೆ, ಹಣವನ್ನೂ ತಂದುಕೊಡುತ್ತದೆ. ಸ್ವಉದ್ಯೋಗಕ್ಕೆ ಯೋಗ ಉತ್ತಮ ವೇದಿಕೆಯಾಗಿದ್ದು, ವಿಶ್ವವಿದ್ಯಾಲಯಗಳಿಗೆ ನೋಂದಣಿಯಾದ ಯೋಗ ಶಿಕ್ಷಕ ತರಬೇತಿ ಕೇಂದ್ರಗಳಲ್ಲಿ ಶಿಕ್ಷಣ ಪಡೆದು ಯೋಗ ತರಗತಿ ನಡೆಸಬಹುದು. ಯೋಗ ಮಾರ್ಗದರ್ಶಕರಿಗೆ ಬೇಡಿಕೆ ಹೆಚ್ಚಿದೆ.
-ನಿಶಾ, ಯೋಗ ಮಾರ್ಗದರ್ಶಕರು
* ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.