2 ಲಕ್ಷ ಕ್ವಿಂಟಲ್ ರಾಗಿ ಖರೀದಿ ನೋಂದಣಿ
Team Udayavani, Jan 8, 2023, 4:05 PM IST
ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಮುಂಗಾರು ಹಂಗಾಮು ಮುಗಿದಿದ್ದು, ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದೆ. ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಕೆರೆ-ಕುಂಟೆಗಳು ತುಂಬಿರು ವುದು ಜನರಿಗೆ ಸಂತಸ ತಂದಿದ್ದು, ಈ ಬಾರಿಯೂ ಹೆಚ್ಚಿನ ಪ್ರದೇಶಗಳಲ್ಲಿ ರಾಗಿ ಬೆಳೆಯಲಾಗಿದೆ. ತಾಲೂಕಿನ ಹೋಬಳಿಗಳಲ್ಲಿ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯ ಬೆಳೆ ಪ್ರಗತಿಯನ್ವಯ ಏಕದಳ ಧಾನ್ಯಗಳ ಬಿತ್ತನೆಯಲ್ಲಿ ಶೇ. 102ರಷ್ಟು ತನ್ನ ಗುರಿಯನ್ನು ಮುಟ್ಟಿದೆ.
ರಾಗಿ, ಮುಸುಕಿನ ಜೋಳ, ಭತ್ತ, ತೃಣಧಾನ್ಯ, ಮೇವಿನ ಜೋಳ, ಪಾಪ್‌ಕಾರ್ನ್(ಏಕದಳ) ತೊಗರಿ, ಅಲ ಸಂದೆ, ಅವರೆ, ಉದ್ದು, ಹೆಸರು, ಹುರುಳಿ (ದ್ವಿದಳ), ನೆಲೆಗಡಲೆ, ಹರಳು, ಸಾಸುವೆ, ಹುಚ್ಚೆಳ್ಳು (ಎಣ್ಣೆಕಾಳು), ಸೇರಿದಂತೆ ಎಲ್ಲಾ ಬೆಳೆಗಳ 25,163 ಹೆಕ್ಟೇರ್‌ಗಳ ಗುರಿಗೆ 26,399 ಹೆಕ್ಟೇರ್‌ಗಳ ಗುರಿ ತಲುಪಿದೆ. 16,122 ಹೆಕ್ಟೇರ್‌ಗಳ ಗುರಿಯನ್ನು ಹೊಂದಿದ್ದ ರಾಗಿ ಬೆಳೆ 18,050 ಹೆಕ್ಟೇರ್ ಗಳಲ್ಲಿ ಬೆಳೆದಿದ್ದು, ಕಳೆದ ಸಾಲಿಗಿಂತ 1340 ಹೆಕ್ಟೇರ್ ಹೆಚ್ಚಾಗಿದೆ. 7,350 ಹೆಕ್ಟೇರ್ ಗಳ ಗುರಿಯನ್ನು ಹೊಂದಿದ್ದ ಮುಸುಕಿನ ಜೋಳದ ಬೆಳೆ 6,400 ಹೆಕ್ಟೇರ್ ಬೆಳೆಯಲಾಗಿದ್ದು, ಕಳೆದ ಸಾಲಿಗಿಂತ 950 ಹೆಕ್ಟೇರ್ ಕಡಿಮೆ ಬೆಳೆಯಲಾಗಿದೆ.
ವಾಡಿಕೆಗಿಂತ ಹೆಚ್ಚು ಮಳೆ: ಕೃಷಿ ಇಲಾಖೆ ಅಂಕಿ-ಅಂಶಗಳ ಪ್ರಕಾರ ತಾಲೂಕಿನಲ್ಲಿ ಒಟ್ಟಾರೆ ಡಿಸೆಂಬರ್ ಅಂತ್ಯದ ವೇಳೆಗೆ 757 ಮಿ.ಮೀ. ಮಳೆ ಆಗಬೇಕಿದ್ದು, 1,581 ಮಿ.ಮೀ. ಮಳೆಯಾಗಿದೆ. ತಾಲೂಕಿನಲ್ಲಿ ಕಸಬಾ ಹೋಬಳಿಯಲ್ಲಿ 1,490 ಮಿ. ಮೀ., ದೊಡ್ಡಬೆಳವಂಗಲ ಹೋಬಳಿಯಲ್ಲಿ 1,650 ಮಿ.ಮೀ., ಸಾಸಲು ಹೋಬಳಿಯಲ್ಲಿ 1,537ಮಿ. ಮೀ., ತೂಬಗೆರೆ ಹೋಬಳಿಯಲ್ಲಿ 1559ಮಿ.ಮೀ., ಮಧುರೆ ಹೋಬಳಿಯಲ್ಲಿ 1,684 ಮಿ.ಮೀ. ಸೇರಿ ತಾಲೂಕಿನಲ್ಲಿ ಸರಾಸರಿ 1,581 ಮಿ.ಮೀ. ಮಳೆಯಾಗಿದ್ದು, ವಾಡಿಕೆ ಮಳೆಗಿಂತ 824 ಮಿ.ಮೀ. ಹೆಚ್ಚಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ವಾಡಿಕೆ ಮಳೆ 13 ಮಿ.ಮೀ. ಇದ್ದು, 78 ಮಿ.ಮೀ ಮಳೆಯಾಗಿದೆ.
ಹಿಂಗಾರು ಹಂಗಾಮಿನ ಗುರಿ ಶೇ.52ರಷ್ಟು ಪ್ರಗತಿ: ತಾಲೂಕಿನ ಐದು ಹೋಬಳಿಗಳಲ್ಲಿ 2022-23ನೇ ಸಾಲಿನ ಹಿಂಗಾರು ಹಂಗಾಮಿನ ಕೃಷಿ ಇಲಾಖೆಯ ಬೆಳೆ ಪ್ರಗತಿಯನ್ವಯ ರಾಗಿ, ಮುಸುಕಿನ ಜೋಳ, ಗೋಧಿ, ಹುರುಳಿ, ಕಡಲೆ, ಸೂರ್ಯಕಾಂತಿ ಸೇರಿದಂತೆ ಎಲ್ಲಾ ಬೆಳೆಗಳ ಗುರಿ 675 ಹೆಕ್ಟೇರ್‌ಗಳಾಗಿದ್ದು, 348 ಹೆಕ್ಟರ್‌ಗಳ ಗುರಿಯನ್ನು ಮುಟ್ಟಿದೆ.
ಹೆಚ್ಚಿನ ರಾಗಿ ನಿರೀಕ್ಷೆ: ಈ ಬಾರಿ ರಾಗಿ ಹೆಚ್ಚಾಗಿ ಬೆಳೆ ಯಲಾಗಿದೆ. ಆದರೆ, ನವೆಂಬರ್ ತಿಂಗಳಲ್ಲಿ ಬಿದ್ದ ಮಳೆಯಿಂದ ಬೆಳೆದು ನಿಂತಿದ್ದ ರಾಗಿ ತೆನೆ ಬಲಿಯುವ ಹಂತದಲ್ಲಿರುವ ರಾಗಿ ನೆಲಕಚ್ಚುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಚೇತರಿಸಿಕೊಂಡು ಒಟ್ಟಾರೆ ರಾಗಿ ಬೆಳೆ ಸಮಾಧಾನಕರವಾಗಿದೆ. ತಾಲೂಕಿನಲ್ಲಿ ನೀಲಗಿರಿ ಮರಗಳ ತೆರವಿನಿಂದ ರಾಗಿ ಬೆಳೆಯುವ ಪ್ರದೇಶ ಹೆಚ್ಚಾಗಿದೆ. ರಾಗಿ ಕೊಯ್ಲು ಹಾಗೂ ಒಕ್ಕಣೆಯಲ್ಲಿ ಯಂತ್ರಗಳ ಬಳಕೆ ಹೆಚ್ಚಾಗಿರುವುದರಿಂದ ಕಾರ್ಮಿಕರ ಕೊರತೆ ನೀಗಿದೆ.
ತಾಲೂಕಿನಿಂದಲೇ 2 ಲಕ್ಷ ಕ್ವಿಂಟಲ್!: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈವರೆಗೆ 24,891 ರೈತರು 3,57,024 ಕ್ವಿಂಟಲ್ ರಾಗಿ ಖರೀದಿಗೆ ನೋಂದಣಿ ಮಾಡಿಕೊಂಡಿದ್ದು, ಕಳೆದ ಸಾಲಿಗಿಂತ ಹೆಚ್ಚು ರಾಗಿ ಖರೀದಿ ನಿರೀಕ್ಷಿಸಲಾಗುತ್ತಿದೆ. ರಾಜ್ಯದ 50 ಲಕ್ಷ ಕ್ವಿಂಟಲ್ ಗುರಿಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನಿಂದಲೇ 2 ಲಕ್ಷ ಕ್ವಿಂಟಲ್ ರಾಗಿ ಖರೀದಿ ಮಾಡಲಾಗುತ್ತಿದೆ.
ರಾಗಿ ಖರೀದಿಗೆ ತಾತ್ಕಾಲಿಕ ಪಟ್ಟಿ ಪ್ರಕಟ : ನಗರದ ಎಪಿಎಂಸಿ ಆವರಣದಲ್ಲಿ ಹಾಗೂ ತಾಲೂಕಿನ ಸಾಸಲು ಹೋಬಳಿಯಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ನೋಂದಣಿ ಪ್ರಕ್ರಿಯೆಯಲ್ಲಿದೆ. ಈಗಾಗಲೇ ದೊಡ್ಡಬಳ್ಳಾಪುರ ಕೇಂದ್ರದಲ್ಲಿ 10,385 ರೈತರಿಂದ 1.55 ಲಕ್ಷ ಕ್ವಿಂಟಲ್ ಖರೀದಿಗೆ ನೋಂದಣಿ ಮಾಡಿಕೊಳ್ಳಲಾಗಿದ್ದು, ಜ.5ರಂದು ದಾಸ್ತಾನು ತರಲು ರಾಗಿ ಖರೀದಿಗೆ ನೋಂದಣಿ ಮಾಡಿಸಿರುವ ರೈತರು, ಜ.12ರಂದು ತಾಲೂಕಿನ ಗುಂಡುಗೆರೆ ಕ್ರಾಸ್ ಬಳಿಯಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಗೋದಾಮಿಗೆ ತರುವಂತೆ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿದೆ. ಮಾ.3ರವರೆಗೆ ರಾಗಿ ಖರೀದಿ ಮಾಡಲಾಗುತ್ತದೆ ಎಂದು ರಾಗಿ ಖರೀದಿ ಕೇಂದ್ರದ ಅಧಿಕಾರಿ ಮಹೇಶ್ ತಿಳಿಸಿದ್ದಾರೆ.
ಕ್ವಿಂಟಲ್ ರಾಗಿಗೆ 3,578 ರೂ.ಬೆಲೆ: ರಾಜ್ಯದಲ್ಲಿ 2022-23ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 50 ಲಕ್ಷ ಕ್ವಿಂಟಲ್ ರಾಗಿ ಖರೀದಿ ಗುರಿ ಹೊಂದಲಾಗಿದ್ದು, ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತರವರನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ. ಈ ಬಾರಿ ರಾಗಿ ಪ್ರತಿ ಕ್ವಿಂಟಲ್‌ಗೆ 3,578 ರೂ. ಗಳಿಗೆ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಎಕರೆಗೆ 10 ಕ್ವಿಂಟಲ್‌ನಂತೆ ಗರಿಷ್ಠ 20 ಕ್ವಿಂಟಲ್ ರಾಗಿಯನ್ನು ಮಾತ್ರ ಖರೀದಿಸಲು ಆದೇಶಿಸಲಾಗಿದೆ. ಸಾಸಲು ರಾಗಿ ಖರೀದಿ ಕೇಂದ್ರದಲ್ಲಿ 3,450 ರೈತರಿಂದ 55,262 ಕ್ವಿಂಟಲ್ ರಾಗಿ ಖರೀದಿಗೆ ನೋಂದಣಿ ಮಾಡಿಕೊಳ್ಳಲಾಗಿದೆ. – ಮುನಿರಾಜು, ರಾಗಿ ಖರೀದಿ ಕೇಂದ್ರದ ಅಧಿಕಾರಿ
– ಡಿ.ಶ್ರೀಕಾಂತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.