ಹಣಕ್ಕಿಂತ ಮನುಷ್ಯನಿಗೆ ಆರೋಗ್ಯವೇ ಮುಖ್ಯ; ಮಾಜಿ ಶಾಸಕ ಚಂದ್ರಣ್ಣ
ರೋಗ ಜಾಸ್ತಿಯಾದಾಗ ಡಾಕ್ಟರ್ ಬಳಿ ಹೋಗುತ್ತಾರೆ, ಆಗ ಚಿಕಿತ್ಸೆ ಮಾಡಿದರೂ ವಾಸಿ ಆಗುವುದಿಲ್ಲ
Team Udayavani, Sep 22, 2022, 6:12 PM IST
ದೇವನಹಳ್ಳಿ: ಮನುಷ್ಯ ಎಷ್ಟೇ ಸಂಪಾದನೆ ಮಾಡಿದರೂ, ಆರೋಗ್ಯ ಇಲ್ಲದಿದ್ದರೆ ಏನೂ ಸಾಧಿಸಲು ಆಗುವುದಿಲ್ಲ. ಆರೋಗ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಮಾಜಿ ಶಾಸಕ ಜಿ.ಚಂದ್ರಣ್ಣ ತಿಳಿಸಿದರು.
ಪಟ್ಟಣದ ಆಂಜನೇಯ ದೇವಾಲಯದ ಬಳಿ ಇರುವ ಸಮುದಾಯ ಭವನದಲ್ಲಿ ಖಾಸಗಿ ಆಸ್ಪತ್ರೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಏನೆಲ್ಲಾ ಆಸ್ತಿಯನ್ನು ಮಾಡದಿದ್ದರೂ, ಆರೋಗ್ಯ ಎಂಬ ಆಸ್ತಿಯನ್ನು ಉಳಿಸಿಕೊಳ್ಳುವುದು ಅವಶ್ಯಕ. ಪಟ್ಟಣದ ಹಾಗೂ ತಾಲೂಕಿನ ಎಲ್ಲಾ ಬಿಜೆಪಿ ಮುಖಂಡರ ಸಹಕಾರದೊಂದಿಗೆ ಶಿಬಿರ ಆಯೋಜಿಸಲಾಗಿದ್ದು, ಖಾಸಗಿ ಆಸ್ಪತ್ರೆ ಸಿಬ್ಬಂದಿ ಆಗಮಿಸಿ ತಪಾಸಣೆ ಮಾಡಿದ್ದಾರೆ ಎಂದರು.
ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದರಿಂದ ಅನೇಕ ರೋಗಗಳಿಗೆ ತುತ್ತಾಗುವಂತಾಗಿದೆ. ಕಾರಣ ಪ್ರತಿಯೊಬ್ಬರೂ ಮೊದಲು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಾವು ಆರೋಗ್ಯವಾಗಿದ್ದರೆ ಮಾತ್ರ ಏನ್ನನಾದರೂ ಸಾಧಿಸಲು ಸಾಧ್ಯವಿದೆ. ಇಂತಹ ತಪಾಸಣಾ ಶಿಬಿರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಿಬಿರಗಳಿಂದ ಜನರಿಗೆ ಅನುಕೂಲ: ಹೆಚ್ಚಿನ ವೆಚ್ಚ ಭರಿಸಿ ತಪಾಸಣೆ ಮಾಡಿಸಿಕೊಳ್ಳಲು ಬಡವರಿಗೆ ಕಷ್ಟ. ಇಂಥ ಶಿಬಿರಗಳಿಂದ ಅನುಕೂಲವಾಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂಥ ಶಿಬಿರಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು. ತಾಪಂ ಮಾಜಿ ಅಧ್ಯಕ್ಷ ಓಬದೇನಹಳ್ಳಿ ಮುನಿಯಪ್ಪ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಸ್ಥಿರವಾಗಿಟ್ಟುಕೊಳ್ಳಲು ನಗುತ್ತಾ ನಗಿಸುತ್ತಾ ಮಾತನಾಡುವುದನ್ನು ಕಲಿಯಬೇಕು.
ರೋಗ ಲಕ್ಷಣ ಕಂಡು ಬಂದ ತಕ್ಷಣ ತಪಾಸಣೆ ಮಾಡಿ, ರೋಗ ಜಾಸ್ತಿಯಾದಾಗ ಡಾಕ್ಟರ್ ಬಳಿ ಹೋಗುತ್ತಾರೆ, ಆಗ ಚಿಕಿತ್ಸೆ ಮಾಡಿದರೂ ವಾಸಿ ಆಗುವುದಿಲ್ಲ. ಆದ್ದರಿಂದ, ಪ್ರಥಮ ಹಂತದಲ್ಲೆ ತಪಾಸಣೆ ಮಾಡಿಸಬೇಕು ಎಂದು ಹೇಳಿದರು.
ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಿ: ತಾಲೂಕು ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪುನೀತಾ ಮಾತನಾಡಿ, ಹೆಣ್ಣು ಯಾವುದರಲ್ಲೂ ಕಮ್ಮಿ ಇಲ್ಲ. ಎಲ್ಲದರಲ್ಲೂ ಸಮಾನಳು. ರಾಜಕೀಯ, ಸಾಮಾಜಿಕವಾಗಿ ಅನೇಕ ಮಹಿಳೆಯರು ಸಾಧನೆ ಮಾಡಿದ್ದಾರೆ. ಆದ್ದರಿಂದ, ಮಹಿಳೆಯರು ಯಾವುದೇ ರೋಗ ಬರದಂತೆ ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಿ. ಕೆಲವು ಬಾರಿ ಪ್ರಾಣ ಹಾನಿಯನ್ನು ಮಾಡಬಹುದು. ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ,
ದೀನದಯಾಳ್ ಉಪಾಧ್ಯಾಯ ಹಾಗೂ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಸೇವಾ ಪಾಕ್ಷಿಕ ಆಚರಿಸಲಾಗುತ್ತಿದೆ ಎಂದರು.
ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ, ತಾಲೂಕು ಅಧ್ಯಕ್ಷ ಸುಂದರೇಶ್, ಜಿಲ್ಲಾ ರೈತ ಮೋರ್ಚಾ ಎಚ್. ಎಂ. ರವಿಕುಮಾರ್, ಮಂಜುನಾಥ್, ಕನಕರಾಜು, ಎಸ್‌ಸಿ ಮೋರ್ಚಾದ ಚಂದ್ರಸಾಗರ್, ಕಾರ್ಯದರ್ಶಿ ನಾಗಮಣಿ, ತಾಲೂಕು ಅಧ್ಯಕ್ಷೆ ವಿಮಲಾ, ಕಾರ್ಯದರ್ಶಿ ದಾಕ್ಷಾಯಿಣಿ, ದೇವನಹಳ್ಳಿ ಟೌನ್ ಬಿಜೆಪಿ ಅಧ್ಯಕ್ಷ ಸಂದೀಪ್ ಪಟೇಲ್, ಪುರಸಭಾ ಸದಸ್ಯ ಬಾಂಬೆ ನಾರಾಯಣಸ್ವಾಮಿ ಹಾಗೂ ಮತ್ತಿತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.