ಶಿವಗಂಗೆ ಬೆಟ್ಟಕ್ಕೂ ಕೋವಿಡ್ ಕಂಟಕ
ಪ್ರವಾಸಿಗರಿಗೆ ಸಂಪೂರ್ಣ ನಿಷೇಧ; ಹಸಿವಿನಿಂದ ನಿತ್ಯ ಕೋತಿಗಳ ನರಳಾಟ
Team Udayavani, Apr 28, 2020, 6:21 PM IST
ಸಾಂದರ್ಭಿಕ ಚಿತ್ರ
ನೆಲಮಂಗಲ: ಅತ್ಯಂತ ನೆಚ್ಚಿನ ಪ್ರವಾಸಿ ತಾಣವಾದ ಶಿವಗಂಗೆ ಬೆಟ್ಟಕ್ಕೂ ಕೋವಿಡ್ ಕಂಟಕವಾಗಿ ಪರಿಣಮಿಸಿದೆ. ಅಲ್ಲದೇ, ಪ್ರಾಣಿಗಳಿಗೂ ಸಂಕಷ್ಟ ಎದುರಾಗಿದ್ದು, ಬೆಟ್ಟದಲ್ಲಿನ
ಕೋತಿಗಳು ಹಸಿವಿನಿಂದ ನರಳಬೇಕಾಗಿದೆ. ತಾಲೂಕಿನ ಸೊಂಪುರದ ಶಿವಗಂಗೆ ಬೆಟ್ಟಕ್ಕೆ ಲಾಕ್‌ಡೌನ್‌ನಿಂದಾಗಿ ಪ್ರವಾಸಿಗರ ಪ್ರವೇಶ ನಿಷೇಧ ಹೇರಲಾಗಿದೆ. ಸರಕಾರದ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ತಿಂಗಳಿಗೆ 1 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು, ಭಕ್ತರು ಭೇಟಿ ನೀಡುತ್ತಿದ್ದರು. ಗಂಗಾಧರೇಶ್ವರ ಸ್ವಾಮಿ ಹೊನ್ನಾದೇವಿ ದೇವಾಲಯ, ದಾಸೋಹ ಭವನ ಹಾಗೂ ತಾಲೂಕಿನ ಎಲ್ಲ ದೇವಾಲಯಗಳ ಬಾಗಿಲು ಬಂದ್ ಮಾಡಲಾಗಿದೆ.
ಪ್ರಾಣಿಗಳ ನರಳಾಟ: ದೇವಾಲಯದ ಪ್ರಸಾದ ಹಾಗೂ ಪ್ರವಾಸಿಗರ ಸಹಕಾರದಿಂದ ಹಸಿವು ನೀಗಿಸಿಕೊಳ್ಳುತ್ತಿದ್ದ ಸಾವಿರಾರು ಕೋತಿಗಳು, ಪಕ್ಷಿಗಳು ಸೇರಿದಂತೆ ಅನೇಕ
ಪ್ರಾಣಿಗಳು ಆಹಾರವಿಲ್ಲದೆ ಪರದಾಡುತ್ತಿವೆ. ಕೆಲವು ಕೋತಿಗಳು ಬೆಟ್ಟದ ತಪ್ಪಲಿಗೆ ಬಂದು ಅಂಗಡಿಗಳ ಮುಂದೆ ಬೀಡುಬಿಟ್ಟಿವೆ.
ಅಧಿಕಾರಿಗಳ ನಿರ್ಲಕ್ಷ್ಯ: ಬೆಟ್ಟದ ಪ್ರಾಣಿಗಳಿಗೆ ಆಹಾರ ನೀಡುತಿದ್ದ ಸ್ಥಳೀಯ ಸ್ವಯಂ ಸೇವಕರಿಗೆ ಅಧಿಕಾರಿಗಳು ನಿಲ್ಲಿಸುವಂತೆ ಸೂಚನೆ ನೀಡಿದ ಬೆನ್ನಲ್ಲೆ ಪ್ರಾಣಿಗಳಿಗೆ ನೆರವು
ನೀಡುವುದನ್ನು ನಿಲ್ಲಿಸಿದ್ದಾರೆ. ನಂತರ ಯಾವ ಅಧಿಕಾರಿಗಳು ಕೂಡ ಪ್ರಾಣಿಗಳಿಗೆ ಆಹಾರ ನೀಡಲು ಮುಂದಾಗಿಲ್ಲ.
ಮಾನವೀಯತೆ ಮರೆತ ಅಧಿಕಾರಿಗಳು
ಲಾಕ್‌ಡೌನ್ ಆದೇಶದ ಬೆನ್ನಲ್ಲೆ ಎಲ್ಲ ದೇವಾಲಯಗಳು, ಪ್ರವಾಸಿ ಸ್ಥಳಗಳು ಬಾಗಿಲು ಮುಚ್ಚಿದ್ದು, ಈ ಪ್ರದೇಶದಲ್ಲಿ ವಾಸಿಸುವ ಅನೇಕ ಕಾಡುಪ್ರಾಣಿಗಳು ಆಹಾರದ ಸಮಸ್ಯೆ ಎದುರಿಸುತ್ತಿವೆ. ಆದರೆ ತಮಗೆ ಕೆಲಸವಿಲ್ಲ ಎಂಬಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸುಮ್ಮನಾಗಿದ್ದಾರೆ. ಮುಜಾರಾಯಿ ಇಲಾಖೆ ಅಧಿಕಾರಿಗಳು ಕೂಡ ಮಾನವೀಯತೆ ಮರೆತಿದ್ದಾರೆ.
ಅಧಿಕಾರಿಗಳು ಬೆಟ್ಟದಲ್ಲಿರುವ ಕೋತಿಗಳಿಗೆ ಆಹಾರ ನೀಡುವುದನ್ನು ತಡೆದರು. ಆದರೆ ಯಾರೊಬ್ಬರೂ ಪ್ರಾಣಿಗಳಿಗೆ ಆಹಾರ ನೀಡುತ್ತಿಲ್ಲ. ಹೀಗಾಗಿ ಪ್ರಾಣಿಗಳು ಆಹಾರವಿಲ್ಲದೆ ಪರದಾಡುತ್ತಿದ್ದು, ಇನ್ನಾದರೂ ಅಧಿಕಾರಿಗಳು ಕೋತಿಗಳಿಗೆ ಆಹಾರದ ವ್ಯವಸ್ಥೆ ಮಾಡಬೇಕು.
– ಎಸ್.ಟಿ ಸಿದ್ದರಾಜು, ಶಿವಗಂಗೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.