ಗುಣಮಟ್ಟದ ಹಾಲಿನಿಂದ ಡೇರಿ ಪ್ರಗತಿ
Team Udayavani, Sep 9, 2019, 3:00 AM IST
ದೇವನಹಳ್ಳಿ: ಹಾಲು ಉತ್ಪಾದಕರು ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ಸಹಕಾರ ಸಂಘಗಳು ಹೆಚ್ಚು ಅಭಿವೃದ್ಧಿ ಹೊಂದುತ್ತವೆ ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ಹೇಳಿದರು. ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ನಾಗೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿ ಗ್ರಾಮದಲ್ಲೂ ರೈತರು ಆರ್ಥಿಕವಾಗಿ ಸದೃಢಗೊಳ್ಳಲು ಸಾಧ್ಯವಾಗಿದೆ. ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮೂಲಕ ಸಂಘವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕ ಆರೋಗ್ಯಕ್ಕಾಗಿ ಈಗಾಗಲೇ ಬೆಂಗಳೂರು ಹಾಲು ಒಕ್ಕೂಟ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಸರ್ಕಾರದಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ರಾಸುಗಳಿಗೆ ಹೆಚ್ಚು ಪೌಷ್ಠಿಕ ಆಹಾರ ನೀಡಿದರೆ ಹಸು ಆರೋಗ್ಯವಾಗಿರುತ್ತದೆ ಹೀಗಾಗಿ ರಾಸುಗಳ ಆರೋಗ್ಯದ ಬಗ್ಗೆ ರೈತರು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ತಾಲೂಕಿನಲ್ಲಿ ಈಗಾಗಲೇ ಪ್ರತಿಯೊಂದು ಗ್ರಾಮಕ್ಕೂ ಕಾಂಕ್ರೀಟ್ ರಸ್ತೆಗೆ 50ಲಕ್ಷ ರೂ. ನೀಡಲಾಗಿದೆ. ಪ್ರತಿ ಗ್ರಾಮವೂ ಸರ್ವತೋಮುಖ ಅಭಿವೃದ್ಧಿ ಹೊಂದಬೇಕು. ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸ ಮಾಡಲಾಗುತ್ತಿದೆ. ತಾಲೂಕಿನ ಅಭಿವೃದ್ಧಿಯೇ ನನ್ನ ಅಜೆಂಡಾವಾಗಿದೆ. ರೈತರ ಸರ್ವತೋಮುಖ ಅಭಿವೃದ್ಧಿಗೆ ಹೈನುಗಾರಿಕೆ ರೈತರ ಸಂಜೀವಿನಿಯಾಗಿದೆ ಎಂದು ತಿಳಿಸಿದರು.
ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಮಂಜುನಾಥ್ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘಗಳು ಕ್ರೀಯಾಶೀಲರಾಗಿ ಕೆಲಸಮಾಡುತ್ತಿವೆ. ಗುಣಮಟ್ಟದ ಹಾಲನ್ನು ರೈತರು ಪೂರೈಸುತ್ತಿದ್ದು, ಇದೇ ರೀತಿ ಮುಂದೆಯೂ ಸಹ ಗುಣಮಟ್ಟದ ಹಾಲನ್ನು ಪೂರೈಸಬೇಕು. ಬೆಂಗಳೂರು ಹಾಲು ಒಕ್ಕೂಟದಿಂದ ರೈತರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾಗೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿಶಾಮೇಗೌಡ ಅಧ್ಯಕ್ಷತೆ ವಹಿಸಿದ್ದು, ಪುರಸಭಾ ಸದಸ್ಯ ಜಿ.ಎ.ರವೀಂದ್ರ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಂಜುನಾಥ್, ಸದಸ್ಯ ಮಹೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ರಾಜಣ್ಣ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಮುನೇಗೌಡ, ಸಂಪಗಪ್ಪ, ಕೃಷಿಕ ಸಮಾಜದ ನಿರ್ದೆಶಕ ಕೃಷ್ಣಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ಜಯರಾಮೇಗೌಡ, ಸಿ.ಎಸ್.ರಾಜಣ್ಣ, ದೇವನಹಳ್ಳಿ ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಡಾ.ಗಂಗಯ್ಯ, ಹಾಲು ಉತ್ಪಾದಕರ ಸಹಕರ ಸಂಘದ ಕಾರ್ಯದರ್ಶಿ ಚಂದ್ರಪ್ಪ ಹಾಗೂ ನಿರ್ದೇಶಕರಿದ್ದರು.
ಬೆಂಗಳೂರು ಹಾಲು ಒಕ್ಕೂಟದ 12 ತಾಲೂಕುಗಳ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಕಂಪ್ಯೂಟರೀಕರಣದಿಂದ ರೈತರ ಖಾತೆಗೆ ನೇರವಾಗಿ ಹಣ ಸಂದಾಯವಾದ ಕೀರ್ತಿ ದೇವನಹಳ್ಳಿ ತಾಲೂಕಿಗೆ ಸಲ್ಲುತ್ತದೆ.
-ಬಿ.ಶ್ರೀನಿವಾಸ್, ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.