![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, May 31, 2022, 4:08 PM IST
ದೊಡ್ಡಬಳ್ಳಾಪುರ: ನಗರದ ಬಾಶೆಟ್ಟಿಹಳ್ಳಿ ಬಳಿಯಲ್ಲಿನ ಮೇಲ್ಸೇತುವೆಯ ಗೋಡೆ ಕುಸಿದು 10 ದಿನ ಕಳೆದಿದ್ದು, ದುರಸ್ತಿ ಪೂರ್ಣಗೊಳ್ಳದೆ, ಒಂದು ಭಾಗದ ಮೇಲ್ಸೇತುವೆಯ ಮೇಲೆ ಎರಡೂ ದಿಕ್ಕಿನ ವಾಹನಗಳನ್ನು ಸಂಚಾರಕ್ಕೆಬಿಟ್ಟಿರುವುದರಿಂದ, ವಾಹನ ದಟ್ಟಣೆ ಹೆಚ್ಚಾಗಿ ಮತ್ತೂಂದು ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರು – ಹಿಂದೂಪುರ ರಾಜ್ಯ ಹೆದ್ದಾರಿ ರಸ್ತೆಯಲ್ಲಿರುವ ಮೇಲ್ಸೇತುವೆ ಇದಾಗಿದ್ದು, ಮೇ 20ರಂದು ಬಾಶೆಟ್ಟಿಹಳ್ಳಿ ಸಮೀಪದ ಟಫೆ ಕಾರ್ಖಾನೆಯ ರಸ್ತೆ ಕಾವೇರಿ ಗೋಡೌನ್ ಬಳಿ ಸಾಗುವ ರೈಲ್ ಕಂಬಿಗಳ ಸಮೀಪವೇ ಗೋಡೆಗೆ ಹೊದಿಸಲಾಗಿದ್ದ, 10ಕ್ಕೂ ಹೆಚ್ಚು ಸಿಮೆಂಟ್ ತಡೆಗಳು ಕಿತ್ತು ಬಂದಿದ್ದು, ಮಣ್ಣು ಕುಸಿದಿತ್ತು. ರೈಲು ಹಳಿಗಳ ಸಮೀಪವೇ ಗೋಡೆ ಕುಸಿದಿರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿತ್ತು.
ಈ ಕುರಿತಂತೆ ವಿಷಯ ತಿಳಿದ ಶಾಸಕ ಟಿ.ವೆಂಕಟರಮಣಯ್ಯ, ಡೀಸಿ ಕೆ.ಶ್ರೀನಿವಾಸ್, ತಹಶೀಲ್ದಾರ್ ಮೋಹನಕುಮಾರಿ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ, ಡೀಸಿ ಕಚೇರಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ಕರೆದು ರಸ್ತೆ ದುರಸ್ತಿ ಕಾಮಗಾರಿ ತ್ವರಿತವಾಗಿ ನಡೆಸುವಂತೆ ಸೂಚನೆ ನೀಡಿದ್ದರು.
ಸೇತುವೆ ಕಾಮಗಾರಿ ದುರಸ್ತಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಮುಂಗಾರು ಮಳೆಯ ಆರಂಭದ ಸೂಚನೆ, ಒಂದೇ ಸೇತುವೆಯಲ್ಲಿ ಎರಡು ಬದಿ ವಾಹನಗಳ ಸಂಚಾರದಿಂದ ಉಂಟಾಗುತ್ತಿರುವ ವಾಹನ ದಟ್ಟಣೆ, ಗುಂಡಿ ಬಿದ್ದಿರುವ ಮೇಲ್ಸೇತುವೆಯಲ್ಲಿ ರಾತ್ರಿ ವೇಳೆ ಬೆಳಗದ ದೀಪಗಳಿಂದ ವಾಹನ ಸವಾರರು, ಪ್ರಯಾಣಿಕರು ಆತಂಕದಿಂದ ಪ್ರಯಾಣ ಮಾಡಬೇಕಾದ ಅನಿವಾರ್ಯವಿದೆ. ಈ ಸೇತುವೆಯೂ ಸಹ ಹಿಂದೆ ದುರಸ್ತಿಗೊಳಗಾಗಿತ್ತು. ಈಕುರಿತಂತೆ ಡೀಸಿ, ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಮತ್ತೂಮ್ಮೆ ಪರಿಶೀಲನೆ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.