ಜಿಲ್ಲಾ ಕೆಂದ್ರಕ್ಕಾಗಿ ಒತ್ತಾಯಿಸಿ ಪ್ರತಿಭಟನೆ
Team Udayavani, Aug 20, 2022, 1:53 PM IST
ದೊಡ್ಡಬಳ್ಳಾಪುರ: ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಅವರು ದೇವನಹಳ್ಳಿಯನ್ನು ಶೀಘ್ರವಾಗಿ ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡುವ ಭರವಸೆ ಕುರಿತ ಹೇಳಿಕೆ ಖಂಡಿಸಿ, ದೊಡ್ಡಬಳ್ಳಾಪುರವನ್ನೇ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂದು ಒತ್ತಾಯಿಸಿ, ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ರಾಜಕೀಯ ಪಕ್ಷ ಹಾಗೂ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ನಗರದ ನೆಲದಾಂಜನೇಯ ಸ್ವಾಮಿ ದೇವಾಲಯದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು, ಎಲ್ಲಾ ಆಯಾಮಗಳಿಂದ ದೊಡ್ಡಬಳ್ಳಾಪುರವೇ ಜಿಲ್ಲಾ ಕೇಂದ್ರವಾಗಲು ಅರ್ಹವಾಗಿದ್ದು, ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದರು. ನಂತರ ಉಪವಿಭಾಗಾಧಿಕಾರಿ ತೇಜಸ್‌ಕುಮಾರ್, ತಹಶೀಲ್ದಾರ್ ಮೋಹನಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಚಿವರ ಹೇಳಿಕೆ ಸಲ್ಲ: ತಾಲೂಕು ಕಚೇರಿ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆ ಇರುವುದನ್ನು ನಾನು 2013ರಲ್ಲಿ ನಡೆದ ಸಭೆಗಳಲ್ಲಿಯೂ ಹೇಳಿದ್ದೇನೆ. ಎರಡೂ ತಾಲೂಕಿಗೆ ಅನುಕೂಲವಾಗುವ ದೃಷ್ಟಿಯಿಂದ ಬೀರಸಂದ್ರದ ಬಳಿ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಒಪ್ಪಿಗೆ ನೀಡಬೇಕಾಗಿ ಬಂತು. ಆದರೆ, ಜಿಲ್ಲಾಸ್ಪತ್ರೆ, ಜಿಲ್ಲಾ ಕ್ರೀಡಾಂಗಣ ದೊಡ್ಡಬಳ್ಳಾಪುರದಲ್ಲಿ ಆಗಬೇಕಿವೆ. ಅಷ್ಟರಲ್ಲಿ ಸಚಿವರು ಈ ರೀತಿ ಹೇಳಿರುವುದು ಸರಿಯಲ್ಲ. ಈ ವಿಚಾರವನ್ನು ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು.
ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿದ್ದರೆ ಪ್ರತಿಭಟನೆ: ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಅವಿಭಜಿತ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ವಿಭಾಗಿಸಿ, ಜಿಲ್ಲೆಗಳನ್ನು ಬೇರೆ ಮಾಡುವ ವೇಳೆಯೇ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿದ್ದರೆ ಇಂದು ಈ ಪ್ರತಿಭಟನಾ ಜಾಥಾ ನಡೆಸಬೇಕಾದ ಅನಿವಾರ್ಯತೆ ಎದುರಾಗುತ್ತಿರಲಿಲ್ಲ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು ಉಪವಿಭಾಗಾಧಿಕಾರಿ ಕಚೇರಿ ಇರುವ ನಗರವನ್ನೆ ಮಾಡಲಾಗಿದೆ. ಆದರೆ, ದೊಡ್ಡಬಳ್ಳಾಪುರ ತಾಲೂಕಿಗೆ ಮಾತ್ರ ಏಕೆ ಈ ನಿಯಮ ಅನ್ವಯ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
ಸಚಿವರ ಹೇಳಿಕೆಗೆ ದೊಡ್ಡಬಳ್ಳಾಪುರ ವಿರೋಧ: ಜನಾಗ್ರಹ, ವಸ್ತುಸ್ಥಿತಿಗಳನ್ನು ಪ್ರಜ್ಞಾಪೂರ್ವಕವಾಗಿ ಅವಲೋಕಿಸದೆ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸುವ ಬಗ್ಗೆ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ನೀಡಿರುವ ಹೇಳಿಕೆ ಇದೀಗ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಸಚಿವರ ಹೇಳಿಕೆಗೆ ಇಡೀ ದೊಡ್ಡಬಳ್ಳಾಪುರದ ವಿರೋಧವಿದ್ದು, ಇತರ ತಾಲೂಕುಗಳ ಅಪಸ್ವರ ಕೇಳಿಬಂದಿದೆ. ಇಂತಹ ಸೂಕ್ಷ್ಮವಿಚಾರಗಳಲ್ಲಿ ಅಪ್ರಜ್ಞಾಪೂರ್ವಕ ನಡೆ ಸಲ್ಲದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಹೋರಾಟ ಸಮಿತಿ ಮುಖಂಡ ರಾಜಘಟ್ಟ ರವಿ, ಡಿ.ಪಿ.ಆಂಜನೇಯ, ಕೆ.ವೆಂಕಟೇಶ್, ಕೃಷ್ಣಮೂರ್ತಿ, ಕೆ.ಆರ್. ರವಿಕಿರಣ್, ಪಿ.ಎ. ವೆಂಕಟೇಶ್ ಸೇರಿದಂತೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಕನ್ನಡ ಪಕ್ಷ, ಸಿಪಿಐ(ಎಂ)ಹಾಗೂ ವಿವಿಧ ಪಕ್ಷಗಳ ಮುಖಂಡರು, ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡರು, ರೈತ ಸಂಘ, ದಲಿತ ಸಂಘಟನೆಗಳ ಮುಖಂಡರು ಇದ್ದರು.
ಜಿಲ್ಲೆಯ ಎಲ್ಲಾ ಶಾಸಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಯಾವುದೇ ಚರ್ಚೆ ನಡೆಸದೇ, ಸರ್ವಾ ಧಿಕಾರಿಗಳಂತೆ ಜಿಲ್ಲಾ ಕೇಂದ್ರ ಘೋಷಣೆ ಬಗ್ಗೆ ಸಚಿವರು ಹೇಳಿಕೆ ನೀಡಿರುವುದು ಸರಿಯಿಲ್ಲ. ಸಚಿವರು ಈ ರೀತಿ ಹೇಳಿರುವುದು ಸರಿಯಲ್ಲ. ಈ ವಿಚಾರವನ್ನು ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರುತ್ತೇನೆ. – ಟಿ.ವೆಂಕಟರಮಣಯ್ಯ, ಶಾಸಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.