ಅಕ್ರಮ ವಲಸಿಗರಿಗೆ ಬಂಧನ: ಕೇಂದ್ರ ಸ್ಥಾಪನೆ
Team Udayavani, Oct 21, 2019, 3:00 AM IST
ನೆಲಮಂಗಲ: ಅಕ್ರಮ ವಲಸಿಗರ ಉಪಟಳಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸದ್ದಿಲ್ಲದೆ ರಾಜ್ಯದಲ್ಲಿ ಅಕ್ರಮ ವಲಸಿಗರ ಬಂಧನ ಕೇಂದ್ರವನ್ನು ಸ್ಥಾಪನೆ ಮಾಡಿದ್ದು, ಅಸ್ಸಾಂ ನಂತರ ರಾಜ್ಯ ಸರಕಾರ ದಿಟ್ಟ ಹೆಜ್ಜೆಗೆ ಮುಂದಾಗಿದೆ ಎಂದು ತಿಳಿದು ಬಂದಿದೆ.
ದಕ್ಷಿಣ ಭಾರತದ ಮೊದಲ ಅಕ್ರಮ ವಲಸಿಗರ ಬಂಧನ ಕೇಂದ್ರವನ್ನು ಬೆಂಗಳೂರು ಉತ್ತರ ತಾಲೂಕಿನ ಸೊಂಡೆಕೊಪ್ಪ ಗ್ರಾಮದ ಸಮೀಪ ಸ್ಥಾಪನೆ ಮಾಡಲಾಗಿದ್ದು, ರಾಷ್ಟ್ರೀಯ ಪೌರತ್ವ ನೊಂದಣಿ (ಎನ್‌ಆರ್‌ಸಿ) ಹೊಂದಿಲ್ಲದ ವಲಸಿಗರನ್ನು ಗುರುತಿಸಿ ಬಂಧಿಸಲು ಸುಸಜ್ಜಿತ ಕೇಂದ್ರವನ್ನು ನಿರ್ಮಾಣ ಮಾಡುವ ಮೂಲಕ ಅಕ್ರಮ ವಲಸಿಗರಿಗೆ ಕಡಿವಾಡ ಹಾಕಲು ಸಿದ್ಧತೆ ನಡೆಸಲಾಗಿದೆ.
ಬಾಂಗ್ಲಾ ದೇಶದ ನಿವಾಸಿಗಳ ಅಕ್ರಮ ನುಸುಳುವಿಕೆಯಿಂದ ವಿಪರೀತ ಸಮಸ್ಯೆ ಎದುರಿಸಿದ್ದ ಅಸ್ಸಾಂ ರಾಜ್ಯದಲ್ಲಿ ಈಗ ರಾಷ್ಟ್ರೀಯ ಪೌರತ್ವ ನೋಂದಾಣಿ ಜಾರಿಗೆ ತರಲಾಗಿದೆ.ಈಶಾನ್ಯ ರಾಜ್ಯಗಳು, ಕರ್ನಾಟಕ, ಮಹಾರಾಷ್ಟ್ರ, ಬಿಹಾರ, ಉತ್ತರಪ್ರದೇಶ, ಜಮ್ಮು ಮತ್ತು ಕಾಶ್ಮೀರದಲ್ಲೂ ಅಕ್ರಮ ವಲಸಿಗರ ಉಪಟಳ ಹೆಚ್ಚಾಗಿದ್ದು, ರಾಜ್ಯದಲ್ಲಿ ಎನ್‌ಆರ್‌ಸಿ ಜಾರಿಗೆ ತರುವ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದರು. ಈಗ ಅಕ್ರಮ ವಲಸಿಗರಿಗೆ ಬ್ರೇಕ್‌ಹಾಕಲು ರಾಜ್ಯ ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಕೆಲವೇ ದಿನಗಳಲ್ಲಿ ದಿಟ್ಟ ನಿರ್ಧಾರ ಘೋಷಣೆಯಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ.
ಬಂಧನ ಕೇಂದ್ರ ಸಿದ್ದ: ಸೊಂಡೆಕೊಪ್ಪ ಗ್ರಾಪಂ ವ್ಯಾಪ್ತಿಯ 204ನೇ ಸರ್ವೆ ನಂ.ನಲ್ಲಿ ನಿರ್ಮಾಣವಾಗಿರುವ ಕಟ್ಟಡ ಉದ್ಘಾಟನೆ ಸಿದ್ದವಾಗಿದ್ದು, ತಾಲೂಕಿನ ಗಡಿ ಗ್ರಾಮ ಸೊಂಡೆಕೊಪ್ಪದಲ್ಲಿ ಸಮಾಜ ಕಲ್ಯಾಣ ಇಲಾಖೆಯ 1992ರಲ್ಲಿ ಸ್ಥಾಪಿಸಿದ್ದ ವಿದ್ಯಾರ್ಥಿಗಳ ವಸತಿ ನಿಲಯವನ್ನು 2008ರಲ್ಲಿ ಮುಚ್ಚಲಾಗಿತ್ತು, ಅದನ್ನು ಈಗ ಇಲಾಖೆಯ ಅನುಮತಿ ಪಡೆದು ಗೃಹ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಬಿಗಿ ಭದ್ರತೆ: 8 ಕೊಠಡಿಯುಳ್ಳ ಕಟ್ಟಡವನ್ನು ನವೀಕರಣ ಗೊಳಿಸಲಾಗಿದ್ದು, ಕಟ್ಟಡದ ಸುತ್ತಲು 15 ಅಡಿ ಕಾಂಪೌಂಡ್ ಹಾಗೂ ಸುತ್ತ ತಂತಿ ಬೇಲಿ ಹಾಕಲಾಗಿದೆ. ನಾಲ್ಕು ಕಡೆ ಸಿಸಿ ಕ್ಯಾಮರಾ, ಭದ್ರತೆಗಾಗಿ ವಾಚ್ ಟವರ್‌ಗಳು ಸೇರಿದಂತೆ ಅನೇಕ ಭದ್ರತೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸೆರೆ ಕೇಂದ್ರವೇಕೆ: ರಾಜ್ಯದಲ್ಲಿರುವ ಅಕ್ರಮ ವಲಸಿಗರನ್ನು ಸೆರೆ ಹಿಡಿದು ಜೈಲಿಗೆ ಕಳುಹಿಸಲು ಸಾಧ್ಯವಾಗದ ಕಾರಣ ಬಂಧಿತ ಅಕ್ರಮ ವಲಸಿಗರು ಅವರ ದೇಶಗಳಿಗೆ ವಾಪಸ್ ಕಳಿಸುವತನಕ ಊಟ, ವಸತಿ ನೀಡಲು ಈ ಕೇಂದ್ರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ಮಿಸಿದ್ದು, ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ.
ಮೊದಲ ಕೇಂದ್ರ: ದೇಶದ ಪ್ರತಿ ಅಡಿ ಶೋಧಿಸಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಕ್ರಮ ವಲಸಿಗರಿಗೆ ಶಾಕ್ ನೀಡಿದ್ದರು. ಆದರೆ ದಕ್ಷಿಣ ಭಾರತದಲ್ಲಿ ಎನ್‌ಆರ್‌ಸಿ ಜಾರಿಗೆ ತರುವ ಬಗ್ಗೆ ರಾಜ್ಯ ಸರ್ಕಾರಗಳು ಒಲವು ತೋರಿರಲಿಲ್ಲ. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ದಕ್ಷಿಣ ಭಾರತದ ಮೊದಲ ಕೇಂದ್ರ ಸದ್ದಿಲ್ಲದೆ ಸಿದ್ದವಾಗಿದ್ದು ಕೇಂದ್ರ ಸರ್ಕಾರದ ನಡೆ ಅಚ್ಚರಿ ಮೂಡಿಸಿದೆ.
ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯವನ್ನು ಅಕ್ರಮ ವಲಸಿಗರ ಬಂಧನ ಕೇಂದ್ರವಾಗಿ ನಿರ್ಮಾಣ ಮಾಡಲಾಗಿದೆ ಎಂಬ ಮಾಹಿತಿಯಿದೆ. ಈ ಬಗ್ಗೆ ಗ್ರಾಮ ಸಭೆಯಲ್ಲಿ ಗಲಾಟೆ ಗದ್ದಲವಾಗಿತ್ತು. ಬಂಧನ ಕೇಂದ್ರದ ಕಾರ್ಯ ಚಟುವಟಿಕೆಯ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಯಿಲ್ಲ.
-ರಾಘವೇಂದ್ರ ಪಿ.ಎಸ್, ಸೊಂಡೆಕೊಪ್ಪ ಗ್ರಾ.ಪಂ ಪಿಡಿಓ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.