ಬೆಳೆವಿಮೆ ಹಣ ಕೈ ಸೇರದ್ದಕ್ಕೆ ರೈತರ ಆಕ್ರೋಶ
Team Udayavani, Jul 21, 2018, 2:10 PM IST
ನೆಲಮಂಗಲ: ಈ ಹಿಂದೆ ಮಾಡಿಸಿದ ಬೆಳೆ ವಿಮೆ ಹಣ ಬೆಳೆ ನಷ್ಟವಾದರೂ ರೈತರ ಕೈ ಸೇರಿಲ್ಲ. ಇದರ ಬಗ್ಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ರೈತರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ನಡೆದ ಬೆಳೆ ವಿಮೆ ಪ್ರಚಾರ ಮತ್ತು ರೈತರೊಂದಿಗೆ ನಡೆದ ಸಂವಾದದಲ್ಲಿ ರೈತರು ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಬ್ಯಾಂಕ್‌ಗಳಿಗೆ ವಿಮಾ ಕಂತು ಪಾವತಿಸಲು ಹೋದರೆ ಇಲ್ಲಸಲ್ಲದ ಕಾರಣ ಹೇಳಿ ವಾಪಸು ಕಳುಹಿಸುತ್ತಿದ್ದಾರೆ. ಬೆಳೆ ವಿಮೆ ಬಗ್ಗೆ ತಾಲೂಕಿನ ರೈತರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಬೆಳೆವಿಮೆ ಯೋಜನೆಯಿಂದ ದೂರ ಸರಿಯುತ್ತಿದ್ದಾರೆ. ಇದಕ್ಕೆ ಕಾರಣ ಅಧಿಕಾರಿಗಳು ಎಂದರು.
ಅಧಿಕಾರಿಗಳಿಲ್ಲ: ತಾಲೂಕು ಕೃಷಿ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆಯಿದ್ದು ಇದರ ಮಧ್ಯೆ ಸಹಾಯಕ ಕೃಷಿ ನಿರ್ದೇಶಕಿ ಸುಶೀಲಮ್ಮ ರಜೆಯಲ್ಲಿದ್ದಾರೆ. ಇನ್ನು ಕಸಬಾ ಕೃಷಿ ಅಧಿಕಾರಿಗಳು ರಜೆಯಿಂದ ಪ್ರಭಾರ ನೀಡಿದ್ದರೂ ಸಹಾಯಕ ಕೃಷಿ ಅಧಿಕಾರಿಗಳಿಲ್ಲದೆ ರೈತರಿಗೆ ಸರಿಯಾಗಿ ಇಲಾಖೆಯಿಂದ ಸ್ಪಂದಿಸಲಾ ಗುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಇಲಾಖೆ ಎಡವಟ್ಟು: ತಾಲೂಕಿನ ಮೂಡಲಪಾಳ್ಯದ ರೈತ ರವಿಕುಮಾರ್ ಹಿಂದಿನ ಬಾರಿ ಬೆಳೆ ವಿಮಾ ಕಂತು ಪಾವತಿಸಿದ್ದರು. ನಂತರ ನಿಮ್ಮ ಬೆಳೆ ವಿಮಾ ಕಂತು ವಜಾಗೊಂಡಿದೆ ಎಂದರು, ವಿಮಾ ಕಂತಿನ ಹಣವನ್ನು ಇಲಾಖೆಯಿಂದ ಖಾತೆಗೆ ವಾಪಸ್ ಜಮಾ ಆಗಿತ್ತು. ಆದರೆ, 2018ರ ಏ.19ರಂದು ಹಣ ಕಡಿತಗೊಳಿ ಸಲಾಗಿದ್ದು ಇಲಾಖೆ ಸೂಚನೆ ಮೇರೆಗೆ ಹಣ ಪಡೆಯಲಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಕೃಷಿ ಅಧಿಕಾರಿಗಳು ನಮಗೆ ಗೊತ್ತಿಲ್ಲ ಎನ್ನುತ್ತಿದ್ದಾರೆಂದು ದೂರಿದರು.
ಬೆಂಗಳೂರು ಗ್ರಾಮಾಂತರ ಜಂಟಿ ಕೃಷಿ ನಿರ್ದೇಶಕ ಗಿರೀಶ್ ಮಾತನಾಡಿ, ತಾಲೂಕಿನಲ್ಲಿ 2017ರಲ್ಲಿ ಕೇವಲ 134 ರೈತರು ಬೆಳೆ ವಿಮೆ ಮಾಡಿಸಿರುವುದು ಬೇಸರದ ಸಂಗತಿ. ಈ ಕುರಿತು ರೈತರ ಯಾವುದೇ ಸಮಸ್ಯೆಗೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸ್ಪಂದಿಸುತ್ತೇವೆಂದರು.
ರೈತರಿಗೆ ತೊಂದರೆಯಾಗಲ್ಲ: ಕೃಷಿ ಇಲಾಖೆ ಉಪನಿರ್ದೇಶಕಿ ಗೀತಹಳ್ಳಿ ಮಾತನಾಡಿ, ಬೆಳೆವಿಮೆ ಬಗ್ಗೆ ರೈತರಿಗೆ ಅನೇಕ ಗೊಂದಲಗಳಿದ್ದು ಅವುಗಳನ್ನು ಪರಿಹರಿಸಲು ಇಲಾಖೆ ಸಮರ್ಪಕ ಕ್ರಮಗಳನ್ನು ಕೈಗೊಳ್ಳುತ್ತಿದೆ. 2016-17ರಲ್ಲಿ ಅನೇಕ ಸಮಸ್ಯೆ ಸಂಭವಿಸಿದೆ. ಆದರೆ ಈ ಬಾರಿ ನೇರ ಬ್ಯಾಂಕ್ ಮೂಲಕ ವಿಮಾ ಕಂತು ನೀಡುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದರು.
ರೈತ ಸಂಘಟನೆಗಳ ಒಪ್ಪಿಗೆ: ಭಾರತೀಯ ಕಿಸಾನ್ ಸಂಘ, ಕೃಷಿಕ ಸಮಾಜ, ರಾಷ್ಟ್ರೀಯ ಕಿಸಾನ್ ಸಂಘ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಬಗ್ಗೆ ರೈತರಲ್ಲಿ ಅರಿವು ಮೂಡಿಸಿ ವಿಮಾಕಂತನ್ನು ಕಟ್ಟಿಸಲಾಗುತ್ತದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ರಾಜ್ಯಪ್ರಧಾನ ಕಾರ್ಯದರ್ಶಿ ಕಾಸರಘಟ್ಟ ಗಂಗಾಧರ್, ಕೃಷಿಕ ಸಮಾಜದ ಅಧ್ಯಕ್ಷ ಸಿದ್ದಪ್ಪ, ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯಉಪಾಧ್ಯಕ್ಷ ಭೀಮಯ್ಯ, ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ವರದನಾಯಕನಹಳ್ಳಿ ನಾಗರಾಜ್, ರೈತ ಮುಖಂಡರಾದ ಜಯರಾಮ್, ನಾಗೇಶ್ ಬ್ಯಾಡರಹಳ್ಳಿ, ಅರುಣ್‌ಕುಮಾರ್, ಲಕ್ಷ್ಮೀಕಾಂತ್, ಕೃಷಿ ತಾಂತ್ರಿಕ ಅಧಿಕಾರಿ ಪ್ರತಿಮಾ, ಪ್ರಭಾರ ಕೃಷಿ ಅಧಿಕಾರಿ ಮೃತ್ಯುಂಜಯ, ಸಹಾಯಕ ಕೃಷಿ ಅಧಿಕಾರಿ ಪಾಟೀಲ್, ಆನಂದ್, ಶಿವಕುಮಾರ್ ಇದ್ದರು.
ಆ.14ರೊಳಗೆ ನೋಂದಾಯಿಸಿ ನೆಲಮಂಗಲ ತಾಲೂಕಿನಲ್ಲಿ ರಾಗಿ ಮತ್ತು ಮೆಕ್ಕೆ ಜೋಳ ಹೇರಳವಾಗಿದ್ದು ಮೂರು ಹೋಬಳಿ 24 ಗ್ರಾಪಂ ವ್ಯಾಪ್ತಿಯಲ್ಲಿ ಮಳೆ ಆಶ್ರಿತ ರಾಗಿ ಬೆಳೆಗೆ 1 ಎಕರೆಗೆ 304ರೂ.ಗಳ ವಿಮಾ ಕಂತು ನೀಡಿದರೆ 15200 ವಿಮಾ ಮೊತ್ತ ನೀಡಲಾಗುತ್ತದೆ. ರಾಗಿ ನೀರಾವರಿಗೆ 368 ನೀಡಿದರೆ 18400 ವಿಮಾ ಮೊತ್ತ ಪಡೆಯಬಹುದು, ಇದೇ ರೀತಿ ಒಂದು ಎಕರೆ ಭತ್ತ 88, ಮುಸುಕಿನ ಜೋಳ ನೀರಾವರಿ 475, ಮಳೆ ಆಧಾರಿತ 400, ಹುರುಳಿ 144, ನೆಲಗಡಲೆ 368 ರೂ., ವಿಮಾ ಕಂತನ್ನು ಪಾವತಿಸಬೇಕಾಗಿದೆ. ಈ ಪ್ರಯೋಜನವನ್ನುರಾಗಿ, ಜೋಳ, ಭತ್ತ ಬೆಳೆದ ಎಲ್ಲಾ ರೈತರು ಆ.14ರ ಒಳಗೆ ನೋಂದಾಯಿಸಿಕೊಳ್ಳಬೇಕು ಕೃಷಿ ಅಧಿಕಾರಿಗಳು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.